ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸಂಚು ರೂಪಿಸಿದ ಆರೋಪಿ ರವಿ ಬೆಳಗೆರೆ, ಸುಪಾರಿ ಕಿಲ್ಲರ್‌ಗಳ ಬಂಧನ: ಸಿಸಿಬಿ ಪೊಲೀಸ್‌

Last Updated 8 ಡಿಸೆಂಬರ್ 2017, 14:41 IST
ಅಕ್ಷರ ಗಾತ್ರ

ಬೆಂಗಳೂರು: ಸಹೋದ್ಯೋಗಿ ಸುನಿಲ್‌ ಹೆಗ್ಗರವಳ್ಳಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ‘ಹಾಯ್‌ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಹಾಗೂ ಸುಪಾರಿ ಕಿಲ್ಲರ್‌ಗನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಪ್ರಮುಖ ಆರೋಪಿ ರವಿ ಬೆಳಗೆರೆ ಅವರನ್ನು ಪತ್ತೆ ಮಾಡಲು ನ್ಯಾಯಾಲಯದಿಂದ ಸರ್ಚ್‌ ವಾರಂಟ್ ಪಡೆದು, ಇಂದು ಮಧ್ಯಾಹ್ನ 1.30ಕ್ಕೆ ‘ಹಾಯ್‌ ಬೆಂಗಳೂರು’ ಪತ್ರಿಕೆಯ ಕಚೇರಿಯಲ್ಲಿ ರವಿ ಬೆಳಗೆರೆ ಅವರನ್ನು ಬಂಧನ ಮಾಡಲಾಗಿದೆ. ಈ ವೇಳೆ ಅವರ ವಶದಲ್ಲಿದ್ದ ರಿವಾಲ್ವಾರ್‌, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿ ಬೆಳಗೆರೆ ಬಳಿಯಿಂದ ವಶಕ್ಕೆ ಪಡೆದ ವಸ್ತುಗಳು
1) ಒಂದು ರಿವಾಲ್ವಾರ್‌, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು
2) ಜಿಂಕೆ ಚರ್ಮ
3) ಒಂದು ಡಬ್ಬಲ್‌ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು
4) 1.5 ಅಡಿX 1.5 ಅಡಿ ಉದ್ದಗಲದ ಒಂದು ದೊಡ್ಡ ಆಮೆ ಚಿಪ್ಪು
ಈ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ವಿವರ

2017ರ ಡಿ. 3ರಂದು ಬೆಂಗಳೂರು ನಗರ ಸಿಸಿಬಿ ಪೊಲೀಸ್‌ ಅಧಿಕಾರಿಗಳು, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಹೀರ್‌ ಹುಸೇನ್‌ ಅಲಿಯಾಸ್‌ ಅನೂಪ್‌ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ತಾಹೀರ್‌ ಹುಸೇನ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ವಿಜಯಪುರ ಜಿಲ್ಲೆಯ ಶಶಿಧರ್‌ ರಾಮಚಂದ್ರ ಮುಂಡೇವಾಡಿ ಎಂಬಾತ ಮತ್ತೊಂದು ನಾಡ ಪಿಸ್ತೂಲ್‌ ಮತ್ತು 2 ಜೀವಂತ ಗುಂಡುಗಳನ್ನು ಪಡೆದುಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.

ಬಳಿಕ, ಅಕ್ರಮ ಪಿಸ್ತೂಲ್‌ ಹೊಂದಿದ್ದ ಜಾಲವನ್ನು ಬೆನ್ನಟ್ಟಿದ ಸಿಸಿಬಿ ಅಧಿಕಾರಿಗಳು ಡಿ.7ರಂದು ರಾತ್ರಿ 11.15ಕ್ಕೆ ಶಶಿಧರ್‌ ರಾಮಚಂದ್ರ ಮುಂಡೇವಾಡಿಯನ್ನು ಬಂಧಿಸಿದ್ದಾರೆ.

ಶಶಿಧರ್‌ ರಾಮಚಂದ್ರ ಮುಂಡೇವಾಡಿಯನ್ನು ಕೂಲಂಕಶವಾಗಿ ವಿಚಾರಣೆ ನಡೆಸಲಾಗಿದ್ದು, ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಸ್ಥಾಪಕ ರವಿ ಬೆಳಗೆರೆ ನೀಡಿದ ಸುಪಾರಿ ಮೇರೆಗೆ ಇವನು 2017ರ ಆಗಸ್ಟ್‌ 28ರಂದು ತನ್ನ ಸಹಚರ ವಿಜು ಬಡಿಗೇರ್‌ ಜತೆಯಲ್ಲಿ ರವಿ ಬೆಳಗೆರೆ ಕಚೇರಿಗೆ ಬಂದಿದ್ದಾನೆ. ಅದೇ ದಿನ ರವಿ ಬೆಳಗೆರೆ ಶಶಿಧರ್‌ಗೆ ಒಂದು ಗನ್‌ ಮತ್ತು ನಾಲ್ಕು ಜೀವಂತ ಗುಂಡುಗಳನ್ನು ಹಾಗೂ ಒಂದು ಚಾಕುವನ್ನು ನೀಡಿ, ವೈಯಕ್ತಿಕ ವೈಷಮ್ಯದಿಂದಾಗಿ ತನಗೆ ದ್ರೋಹ ಬಗೆದಿರುವ ಈ ಹಿಂದೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್‌ ಹೆಗ್ಗರವಳ್ಳಿಯನ್ನು ಕೊಲೆ ಮಾಡು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆಂದು ಹೇಳಿ ಸುಪಾರಿ ನೀಡಿ ಮುಂಗಡವಾಗಿ ₹15 ಸಾವಿರ ನೀಡಿರುತ್ತಾರೆ. ರವಿ ಬೆಳಗೆರೆ ಕಚೇರಿಯ ಒಬ್ಬ ಹುಡುಗನು ಶಶಿಧರ್ ಮತ್ತು ವಿಜು ಬಡಿಗೇರ್‌ ಅವರಿಗೆ ಉತ್ತರಹಳ್ಳಿಯಲ್ಲಿರುವ ಸುನೀಲ್‌ ಹೆಗ್ಗರವಳ್ಳಿಯ ಮನೆಯನ್ನು ತೋರಿಸಿಕೊಟ್ಟಿರುತ್ತಾನೆ.

ನಂತರ ಶಶಿಧರ್‌ ಮತ್ತು ವಿಜು ಬಡಿಗೇರ್‌ ಸುನೀಲ್‌ ಹೆಗ್ಗರವಳ್ಳಿಯನ್ನು ಗನ್‌ನಿಂದ ಶೂಟ್‌ ಮಾಡಿ ಕೊಲೆ ಮಾಡಲು ಅವನ ಮನೆಯ ಬಳಿ ಕಾಯುತ್ತಿದ್ದರು. ಮನೆಯಿಂದ ಹೊರಬಂದ ಸುನೀಲ್‌ ಹೆಗ್ಗರವಳ್ಳಿಯನ್ನು ಶೂಟ್ ಮಾಡಲು ಶಶಿಧರ್‌ ರಾಮಚಂದ್ರ ಮುಂಡೆವಾಡಿ ಗುರಿ ಇಟ್ಟಿದ್ದ, ಆಗ ಸುನೀಲ್ ಮರೆಯಾಗಿ ಸರಿಯಾದ ಸಮಯ ದೊರೆಯದಿದ್ದ ಕಾರಣ ಆರೋಪಿ ಶಶಿಧರನು ರವಿ ಬೆಳಗೆರೆಗೆ ಗನ್ ಹಾಗೂ ಗುಂಡುಗಳನ್ನು ವಾಪಸ್ ನೀಡಿ ಒಂದು ತಿಂಗಳು ಬಿಟ್ಟು ಬಂದು ಕೆಲಸ ಮುಗಿಸಿಕೊಡುವುದಾಗಿ ತಿಳಿಸಿ ಊರಿಗೆ ಹಿಂದಿರುಗಿ ಹೋಗಿದ್ದಾನೆ.

ಈ ಸಂಚಿನ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಮೊ.ಸಂ–525/2017 ಕಲಂ: 120(ಬಿ), 307 ಸಹಿತ 34 ಐಪಿಸಿ ಜತೆಗೆ 1958ರ ಶಸ್ತ್ರಾಸ್ತ್ರ ಕಾಯ್ದೆ 3, 25ರ ಅಡಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ಪ್ರಮುಖ ಆರೋಪಿ ರವಿ ಬೆಳಗೆರೆ ಅವರನ್ನು ಪತ್ತೆ ಮಾಡಲು ನ್ಯಾಯಾಲಯದಿಂದ ಸರ್ಚ್‌ ವಾರಂಟ್ ಪಡೆದು, ಇಂದು ಮಧ್ಯಾಹ್ನ 1.30ಕ್ಕೆ ‘ಹಾಯ್‌ ಬೆಂಗಳೂರು’ ಪತ್ರಿಕೆಯ ಕಚೇರಿಯಲ್ಲಿ ರವಿ ಬೆಳಗೆರೆ ಅವರನ್ನು ಬಂಧನ ಮಾಡಲಾಗಿದೆ. ಈ ವೇಳೆ ಅವರ ವಶದಲ್ಲಿದ್ದ ರಿವಾಲ್ವಾರ್‌, ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಶಶಿಧರ್‌ ಮುಂಡೇವಾಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳು
1) 2006ರಲ್ಲಿ ಮುತ್ತು ಮಾಸ್ತರ್‌ ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
2) 2013ರಲ್ಲಿ ಬಸಪ್ಪ ಹರಿಜನ್‌ ಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲು.
3) 2014ರಲ್ಲಿ ತನ್ನ ಸ್ನೇಹಿತ ಸುರೇಶ್‌ ಲಾಳಂಗಿ ಎಂಬಾತನ ಕೊಲೆ ಮಾಡಿದ ಬಗ್ಗೆ ಪ್ರಕರಣ ದಾಖಲು.
4) 2016ನೇ ಸಾಲಿನಲ್ಲಿ ಇಂಡಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ.
5) 2017ರಲ್ಲಿ ಮಹಾರಾಷ್ಟ್ರ ರಾಜ್ಯ ಮೀರಜ್‌ನ ಗಾಂಧಿಚೌಕ್‌ ಪೊಲೀಸ್‌ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಪೂರ್ಣ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT