ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕ ಉಮಾಪತಿಗೆ ‘ವಿದ್ಯಾಶಂಕರ’ ಗೌರವ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಚನ ಸಾಹಿತ್ಯ ಅಭ್ಯಾಸ ಮಾಡುವವರಿಗೆ ಪ್ರೊ.ಎಸ್. ಉಮಾಪತಿ ಹೆಸರು ಚಿರಪರಿಚಿತ. ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉಮಾಪತಿ ಅವರು ರಚಿಸಿದ ಗ್ರಂಥಗಳು ಮತ್ತು ತಳಸ್ಪರ್ಶಿ ಸಂಶೋಧನೆ ಕನ್ನಡ ಸಾರಸ್ವತ ಲೋಕದಲ್ಲಿ ಅವರಿಗೆ ಮನ್ನಣೆ ತಂದುಕೊಟ್ಟವು.

ಶಾಮನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಉಮಾಪತಿ ಅವರು ದಾವಣಗೆರೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದ ನಂತರ ಕಂದಾಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಸಾಹಿತ್ಯ ಸಂಶೋಧನೆ ಮತ್ತು ಗ್ರಂಥಸಂಪಾದನೆ ಅವರ ಆಸಕ್ತಿಯ ಕ್ಷೇತ್ರಗಳು. ಇದೇ ಕಾರಣಕ್ಕೆ ಅವರು ನಂತರದ ದಿನಗಳಲ್ಲಿ ಅಧ್ಯಾಪಕ ವೃತ್ತಿಗೆ ಹೊರಳಿಕೊಂಡರು.

ಸಕಲೇಶ ಮಾದರಸನ ವಚನಗಳು, ಕಲಿಗಣನಾಥ ಸಾಂಗತ್ಯ, ಅಭವಕಂದ ಮತ್ತು ಇಷ್ಟಲಿಂಗ ಚಾರಿತ್ರ, ಬಸವಪುರಾಣದ ಕಥಾಸಾಗರ, ಮಡಿವಾಳ ಮಾಚಯ್ಯನ ವಚನಗಳು, ಷಟ್‌ಸ್ಥಲಜ್ಞಾನ ಸಾರಾಯ ಸಿದ್ಧಲಿಂಗೇಶ್ವರ ಸ್ತ್ರೋತ್ರದ ವೃತ್ತ, ಶ್ರೀ ಪರ್ವತ ಮಹಾತ್ಮೆ, ಶಿವಶರಣ ಸಂಪದ, ಕಾಲಜ್ಞಾನದ ವಚನಗಳು, ವೀರಸೇನನ ಚಾರಿತ್ರ್ಯ, ಘೋರಾಸುರ ಯುದ್ಧ, ರೇವಣಸಿದ್ದೇಶ್ವರ ಚರಿತ್ರೆ, ಪ್ರಭು ಚರಿತ್ರೆ, ಮುರುಗೇಂದ್ರ ವಿಜಯ, ಜೇಡರ ದಾಸಿಮಯ್ಯನ ವಚನಗಳು, ಸಿರಿಯಾಳ ಸಾಂಗತ್ಯ, ಕುಮಾರರಾಮ ಸಾಂಗತ್ಯ, ಏಕೋತ್ತರ ಶತಸ್ಥಲ, ಭೈರವೇಶ್ವರ ಕಾವ್ಯ (3 ಸಂಪುಟಗಳು), ಸರ್ವಜ್ಞನ ಆಚರಣೆಯ ಸಂಬಂಧ ತ್ರಿವಿಧಿ ವಚನಗಳು ಅವರ ಸಂಪಾದನೆಯಲ್ಲಿ ಪ್ರಕಟವಾದ ಜನಪ್ರಿಯ ಕೃತಿಗಳು. ಒಟ್ಟು 31 ಕೃತಿಗಳನ್ನು ಅವರು ಸಂಪಾದಿಸಿದ್ದಾರೆ.

ಶಿವಯೋಗಿ ಸಿದ್ಧರಾಮ, ಶರಣ ಸಂಪದ ಸಾಹಿತ್ಯ ಸಿರಿ, ಶಿವಯೋಗಿ ಸಿದ್ಧರಾಮೇಶ್ವರರು, ಶರಣರ ವಿಚಾರ ಕ್ರಾಂತಿ, ಚನ್ನಬಸವಣ್ಣ, ಅಲ್ಲಪ್ರಭು, ಅಕ್ಕಮಹಾದೇವಿ, ಬಸವಣ್ಣ ಕೆಲವು ವಚನಕಾರರು, ದ್ವಿತೀಯ ಘಟ್ಟದ ವಚನ ಸಾಹಿತ್ಯ, ಎರಡು ನಾಟಕಗಳು, ಕರ್ನಾಟಕದ ವೀರ ಮಹಿಳೆಯರು, ಶಿವಶರಣೆಯರು ಸೇರಿದಂತೆ ಒಟ್ಟು 14 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.

‘ಸಂಶೋಧನಾ ಕ್ಷೇತ್ರವು ಪ್ರತಿಭೆ, ಪರಿಶ್ರಮ, ತಾಳ್ಮೆಯನ್ನು ಬಯಸುವ ಕ್ಷೇತ್ರ. ಉಮಾಪತಿ ಅವರಲ್ಲಿ ಅಂಥ ವಿಶೇಷ ಗುಣಗಳು ಇರುವ ಕಾರಣದಿಂದಲೇ ಅವರಿಗೆ ಈ ಕ್ಷೇತ್ರದಲ್ಲಿ ಮೌಲಿಕ ಕೊಡುಗೆ ನೀಡಲು ಸಾಧ್ಯವಾಯಿತು’ ಎಂದು ‘ವಿದ್ಯಾಶಂಕರ ಪ್ರಶಸ್ತಿ’ ಘೋಷಿಸಿರುವ ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ಪದಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT