ಕಾರವಾರ

ತಿಳಿಯಾದ ವೈಮನಸ್ಸು: ಬರ್ಗಲ್‌ ಜಾತ್ರೆ ಸುಸೂತ್ರ

‘ಈ ಬಾರಿ ಮಾತ್ರ ಅಶೋಕ ಸಾವಂತರ ನಿರ್ಣಯದಂತೆ ಜಾತ್ರೆ ನಡೆಯುತ್ತದೆ. ಮುಂದಿನ ವರ್ಷದಿಂದ ಈ ಹಿಂದಿನಂತೆ ಎಲ್ಲ ಸಮುದಾಯ ಸೇರಿ ನಡೆಸಬೇಕು’

ಕಾರವಾರ ತಾಲ್ಲೂಕಿನ ಬರ್ಗಲ್‌ನ ಮಹಾದೇವಸ್ಥಾನ.

ಕಾರವಾರ: ಇಲ್ಲಿನ ಬರ್ಗಲ್ ಮಹಾದೇವಸ್ಥಾನದ ಜಾತ್ರೆಯ ಸಂಬಂಧ ಉಂಟಾಗಿದ್ದ ವೈಮನಸ್ಸು ತಿಳಿಗೊಂಡು, ಜಾತ್ರೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ‘ವಂಶಪಾರಂಪರ್ಯವಾಗಿ ದೇವಸ್ಥಾನಕ್ಕೆ ಸಲ್ಲಿಸುವ ಸೇವೆಯನ್ನು ನಿರ್ವಹಿಸಲು ಅವಕಾಶ ನೀಡದೇ ಬಹಿಷ್ಕಾರ ಹಾಕಲಾಗಿದೆ’ ಎಂದು ಬರ್ಗಲ್‌ ಗ್ರಾಮದ ಕೆಲ ಕುಟುಂಬ ಮುಜರಾಯಿ ಇಲಾಖೆಗೆ ಬುಧವಾರ ದೂರು ನೀಡಿತ್ತು. ಆದರೆ ಈ ಸಂಬಂಧ ಶಾಸಕ ಸತೀಶ ಸೈಲ್, ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಜಿ.ಎನ್.ನಾಯ್ಕ ಅವರು ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆ ಫಲಪ್ರದಗೊಂಡು ಜಾತ್ರೆ ಸುಸೂತ್ರವಾಗಿ ನೆರವೇರಿದೆ.

ನಡೆದಿದ್ದೇನು?: ‘ಬರ್ಗಲ್ ಗ್ರಾಮದ ಮಹಾದೇವಸ್ಥಾನದಲ್ಲಿ ಮೂರು ಸಮುದಾಯದ ಮುಖಂಡರನ್ನು ಒಳಗೊಂಡ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದೆ. ಅಶೋಕ ಸಾವಂತ ಎಂಬುವವರು ಇಲ್ಲಿ ಮೊಕ್ತೇಸರರಾಗಿದ್ದು, ದೀಪು ಗುನಗಿ ಹಾಗೂ ಆನಂದು ಗಾಂವ್ಕರ್ ಕೂಡ ಸಮಿತಿಯಲ್ಲಿದ್ದಾರೆ. ಈ ದೇವಸ್ಥಾನದಲ್ಲಿ ಎಲ್ಲ ಸಮುದಾಯವರು ಒಟ್ಟಿಗೆ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದರು. ಆದರೆ ಕಳೆದ ಬಾರಿಯ ಜಾತ್ರೋತ್ಸವದ ವೇಳೆ ಆನಂದು ಗಾಂವ್ಕರ ಅವರ ಮನೆಯಲ್ಲಿ ಮಗು ಜನಿಸಿ ಸೂತಕ ಉಂಟಾಗಿತ್ತು. ಈ ವೇಳೆ ಜಾತ್ರೆಯನ್ನು ಮುಂದೂಡುವಂತೆ ಕೇಳಿಕೊಂಡಾಗ ಅಶೋಕ ಸಾವಂತ ಅವರು ಏಕಪಕ್ಷೀಯವಾಗಿ ಅದನ್ನು ಮುಂದುವರಿಸಿದರು’ ಎಂದು ಸ್ಥಳೀಯ ನಾಗಶ್ರೀ ಗಾಂವ್ಕರ ದೂರಿದ್ದರು.

‘ಪ್ರತಿ ವರ್ಷದ ಜಾತ್ರೆಯ ವೇಳೆ ಗ್ರಾಮದ ಸಮುದಾಯದವರು ಖುದ್ದು ಪೂಜೆ ಸಲ್ಲಿಸಬೇಕು. ಈ ಬಾರಿಯೂ ಗಾಂವ್ಕರ ಕುಟುಂಬದವರಿಂದ ಪೂಜೆ ನಡೆಯಬೇಕಿದೆ. ಆದರೆ ಉತ್ಸವದ ತಯಾರಿ ವೇಳೆ ಈ ಕುಟುಂಬಕ್ಕೆ ಈಡುಗಾಯಿಯನ್ನು ಇಡಲು ಕೂಡ ಆಹ್ವಾನಿಸಿಲ್ಲ. ಜಾತ್ರೆಗೆ ಅವರನ್ನು ಆಮಂತ್ರಿಸಿಲ್ಲ. ಪೂಜೆಗೆ ಹಾಗೂ ಜಾತ್ರೆಗೆ ಅವಕಾಶ ನೀಡಬೇಕು’ ಎಂದು ಗಾಂವ್ಕರ್ ಕುಟುಂಬದ ಹಲವರು ದೂರು ನೀಡಿದ್ದರು.

ಶಾಸಕ ಸೈಲ್ ಮಧ್ಯಸ್ಥಿಕೆ: ದೂರಿನ ಅನ್ವಯ ಬುಧವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಜಿ.ಎನ್.ನಾಯ್ಕ, ಎಲ್ಲ ಸಮುದಾಯದವರನ್ನು ಒಟ್ಟುಗೂಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಆದರೆ ಸಮಸ್ಯೆ ಬಗೆಹರಿಯದ ಕಾರಣ ಎಲ್ಲರನ್ನು ಉಪ ವಿಭಾಗಾಧಿಕಾರಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಶಾಸಕ ಸತೀಶ ಸೈಲ್ ಕೂಡ ಪಾಲ್ಗೊಂಡು ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆಯವರ ಜತೆಗೂಡಿ ರಾಜಿ ಸಂಧಾನ ನಡೆಸಿದ್ದರು.

‘ಈ ಬಾರಿ ಮಾತ್ರ ಅಶೋಕ ಸಾವಂತರ ನಿರ್ಣಯದಂತೆ ಜಾತ್ರೆ ನಡೆಯುತ್ತದೆ. ಮುಂದಿನ ವರ್ಷದಿಂದ ಈ ಹಿಂದಿನಂತೆ ಎಲ್ಲ ಸಮುದಾಯ ಸೇರಿ ನಡೆಸಬೇಕು’ ಎಂದು ಮನವೊಲಿಸಿದರು. ಇದು ಫಲಪ್ರದಗೊಂಡ ಬಳಿಕ ಜಾತ್ರೆಯನ್ನು ಆಚರಿಸಲು ತೀರ್ಮಾನಿಸಿದ್ದರು. ಅದರಂತೆ ಗುರುವಾರ ಜಾತ್ರೆ ನಿರ್ವಿಘ್ನವಾಗಿ ನೆರವೇರಿತು.

* * 

ಮುಂದಿನ ವರ್ಷದಿಂದ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ತಾಲ್ಲೂಕಿನ ಬರ್ಗಲ್ ಮಹಾದೇವಸ್ಥಾನದ ಜಾತ್ರೆ ಆಚರಿಸುವುದಾಗಿ ಗ್ರಾಮದ ಸಮಾಜದ ಪ್ರಮುಖರು ಸಹಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.
ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
ಮತದಾನದ ಅರಿವು: ಕಿರುಚಿತ್ರದ ನೆರವು

ಶಿರಸಿ
ಮತದಾನದ ಅರಿವು: ಕಿರುಚಿತ್ರದ ನೆರವು

19 Mar, 2018
ಕರಾವಳಿಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ

ಭಟ್ಕಳ
ಕರಾವಳಿಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ

19 Mar, 2018
‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿ ಸರ್ಕಾರ’

ಕುಮಟಾ
‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿ ಸರ್ಕಾರ’

17 Mar, 2018
ನಕಲಿ ಪಾಸ್ ಬಳಸಿ ಮರಳು ಸಾಗಣೆ: ಐವರ ಬಂಧನ

ಉತ್ತರ ಕನ್ನಡ
ನಕಲಿ ಪಾಸ್ ಬಳಸಿ ಮರಳು ಸಾಗಣೆ: ಐವರ ಬಂಧನ

17 Mar, 2018

ಯಲ್ಲಾಪುರ
₹ 4 ಕೋಟಿ ವೆಚ್ಚದಲ್ಲಿ ಗಣೇಶಪಾಲ್ ಸೇತುವೆ

ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನೆರವೇರಲು ಶಾಸಕಾಂಗವೊಂದರಿಂದಲೇ ಸಾಧ್ಯವಾಗದು. ಇದಕ್ಕೆ ಕಾರ್ಯಾಂಗದ ಸಂಪೂರ್ಣ ಸಹಕಾರವಿದ್ದರೆ ಮಾತ್ರ, ಯೋಜಿತ ಕಾರ್ಯಗಳನ್ನು ಸಾಧಿಸಬಹುದು. ಜನಪ್ರತಿನಿಧಿಗಳಾದವರು ತಮ್ಮ ಕೈಗೆ ಅಧಿಕಾರ...

17 Mar, 2018