ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಪ್ರಾರ್ಥನೆಯೇ ಈ ಭಗಿನಿಯರ ಬದುಕು

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಾನು ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ. ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಮತ್ತು ದೇವರಿಗೆ ಋಣಿಯಾಗಿರುವುದಷ್ಟೇ ನನ್ನ ಜೀವನದ ಉದ್ದೇಶ. ದಿನವಿಡೀ ದೇವರನ್ನೇ ನೆನೆಯುತ್ತ ಬಾಳುವ ಈ ಅವಕಾಶವನ್ನು ಯೇಸು ಕ್ರಿಸ್ತ ನನಗೆ ಕೊಟ್ಟಿದ್ದಾನೆ. ಆದ್ದರಿಂದ ನನ್ನದು ಅತ್ಯಂತ ತೃಪ್ತಜೀವನ...ಎಂದು ಸಿಸ್ಟರ್‌ ಮೇರಿ ಮದರ್ ಸ್ಟೆಲ್ಲಾ ಹೇಳುತ್ತಿದ್ದರು.

ಬಡ ಕ್ಲೇರರ ಆರಾಧನಾ ಚರ್ಚ್‌ನ ಮುಖ್ಯಸ್ಥರಾದ ಮೇರಿ ಮದರ್‌ ಸ್ಟೆಲ್ಲಾ ಅವರದು ಈಗ ಇಳಿ ವಯಸ್ಸು. 1954ರಲ್ಲಿ ತಮ್ಮ ಹದಿ ಹರೆಯದಲ್ಲಿ ಕ್ರಿಸ್ತನ ಕರೆಯನ್ನು ಕೇಳಿ ಅವರು ಮನೆ ಬಿಟ್ಟು ಎಡೋರೇಶನ್‌ ಮೊನಾಸ್ಟ್ರಿ ಸೇರಲು ನಿರ್ಧರಿಸಿದ್ದರು. ಇದೀಗ ಅವರು ಇಳಿವಯಸ್ಸಿನಲ್ಲಿ ತಮ್ಮ ಜೀವನದ ಸಂತೃಪ್ತಿಯ ಬಗ್ಗೆ ಹೇಳಿಕೊಳ್ಳುವುದು ಹೀಗೆ. ಬದ್ಧತೆ, ದೈವಿಕ ಭಾವನೆಗಳ ಬಗ್ಗೆ ಅವರು ತುಸು ಹೊತ್ತು ಮಾತನಾಡಿದರು.

ಕ್ರಿಶ್ಚಿಯನ್‌ ಸಮುದಾಯದಲ್ಲಿ ಚರ್ಚ್‌ಗಳ ಭಗಿನಿಯರ ವಿವಿಧ ತಂಡಗಳು ವಿವಿಧ ಧಾರ್ಮಿಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತವೆ. ಶಿಕ್ಷಣ, ಆರೋಗ್ಯ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಭಗಿನಿಯರಿಗೆ ಸೇವೆಯೇ ಜೀವನದ ಉದ್ದೇಶವಾಗಿರುತ್ತದೆ.

ಆದರೆ ಎಡೊರೇಶನ್‌ ಮೊನೆಸ್ಟರಿಯ ‘ಬಡ ಕ್ಲೇರರ ಕ್ಲಾಯಿಸ್ಟರ್‌’ಗೆ ಸೇರುವ ಸ್ತ್ರೀಯರು ಸಾಮಾಜಿಕ ಚಟುವಟಿಕೆಗಳಿಂದ ದೂರ ಇರುತ್ತಾರೆ. ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡು, ತೀರಾ ಜೀವನಾವಶ್ಯಕ ವಸ್ತುಗಳನ್ನು ಮಾತ್ರ ಬಳಸಿಕೊಂಡು, ದಿನದ 24 ಗಂಟೆಯೂ ನಿರಂತರ ಪ್ರಾರ್ಥನೆ ಸಲ್ಲಿಸುವುದಷ್ಟೇ ಅವರ ಜೀವನ ಉದ್ದೇಶ.

ಹೀಗೆ ಕ್ರಿಸ್ತನ ಕರೆಯನ್ನು ಕೇಳಿ ಮನೆಯಿಂದ ಹೊರಬರುವ ಯುವತಿಯರು ಕೆಲವು ವರ್ಷಗಳ ತರಬೇತಿಯ ಬಳಿಕ ಚರ್ಚ್‌ನ ಪ್ರಾರ್ಥನಾ ಗೃಹ ಸೇರಿಕೊಳ್ಳುತ್ತಾರೆ. ಆ ಬಳಿಕ ಹೊರಗಿನ ಸಮಾಜದ ಸಂಪೂರ್ಣ ಸಂಪರ್ಕ ಕಡಿದುಕೊಳ್ಳುತ್ತಾರೆ. ಅವರ ಪೂರ್ವಾಶ್ರಮದ ಹೆಸರನ್ನು ಬದಲಾಯಿಸಿ ಬೇರೆಯೇ ಹೆಸರಿಡಲಾಗುತ್ತದೆ. ಹೊಸದಾಗಿ ಇರಿಸುವ ಹೆಸರಿನಲ್ಲಿ ‘ಮೇರಿ’ ಎನ್ನುವ ಪದವೊಂದನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಅವರು ಮನೆಯ ಸಂಪರ್ಕವನ್ನು ಪೂರ್ಣ ಕಡಿದುಕೊಳ್ಳಬೇಕಾಗುತ್ತದೆ. ದಿನದ ಪ್ರತಿಕ್ಷಣವೂ ದೇವರ ಧ್ಯಾನವೊಂದೇ ಅವರ ಧ್ಯೇಯ. ಮನೆಯಲ್ಲಿ ಹೆತ್ತವರಾಗಲೀ, ಆಪ್ತರಾಗಿ ಅಗಲಿದರೂ ಸಾವಿನ ಸಂದರ್ಭದಲ್ಲೂ ಅತ್ತ ಸುಳಿಯುವಂತಿಲ್ಲ.

ಮಂಗಳೂರಿನಲ್ಲಿರುವ ಅಡೊರೇಶನ್‌ ಮೊನೆಸ್ಟರಿಯಲ್ಲಿ ಈಗ ಎಂಟು ಮಂದಿ ಭಗಿನಿಯರು ಇದ್ದಾರೆ. ಹಗಲು ಹೊತ್ತಿನಲ್ಲಿ ತಾಸಿಗೊಬ್ಬರಂತೆ ಸರಣಿಯಲ್ಲಿ ಈ ಭಗಿನಿಯರು ನಿರಂತರ ಪ್ರಾರ್ಥನೆ ಸಲ್ಲಿಸುತ್ತಾ ಇರುತ್ತಾರೆ. ರಾತ್ರಿ ಎರಡು ತಾಸಿಗೊಬ್ಬರಂತೆ ಎಚ್ಚರವಿದ್ದು ಪ್ರಾರ್ಥನೆ ಸಲ್ಲಿಸುತ್ತಾರೆ.

‘ದೇವರ ವೈಭವವನ್ನು ಕೊಂಡಾಡುವುದು, ದೇವರು ಕೊಟ್ಟ ಅವಕಾಶಗಳಿಗಾಗಿ ಆತನ ಸ್ತುತಿ ಮಾಡುವುದು ಹಾಗೂ ಬಡಜನರ, ಕಷ್ಟದಲ್ಲಿರುವವರ ಪರವಾಗಿ ಪ್ರಾರ್ಥನೆ ಸಲ್ಲಿಸುವುದು ನಮ್ಮ ಕೆಲಸ. ಈ ಕೆಲಸಕ್ಕಾಗಿ ದೇವರು ನಮ್ಮನ್ನು ಆಯ್ಕೆ ಮಾಡಿಕೊಂಡಿರುವುದೇ ನಮ್ಮ ಪುಣ್ಯ’ ಎನ್ನುವ ಸಿಸ್ಟರ್‌ ಮೇರಿ ಸ್ಟೆಲ್ಲ ಅವರು ಮೂಲತಃ ಮಂಗಳೂರಿನವರೇ.

ದೇವರ ಸೇವೆಗೆ ಅರ್ಪಿಸಿಕೊಂಡ ಬಳಿಕ ನಾನು ಬಹಳ ವರ್ಷ ಕೇರಳದ ಪ್ರಾರ್ಥನಾ ಗೃಹಗಳಲ್ಲೇ ಇದ್ದೆ. ಈ ಸಮರ್ಪಣೆಯ ಕಾರ್ಯದಲ್ಲಿ ಸಂಸಾರವನ್ನು ಮರೆಯುವುದು ಮುಖ್ಯ. ಆದ್ದರಿಂದ ಮತ್ತೆ ಮಂಗಳೂರಿಗೆ ಬರುವುದು ಇಷ್ಟವಿರಲಿಲ್ಲ. ಕನ್ನಡ ಬಲ್ಲವಳಾದ್ದರಿಂದ 1992ರಲ್ಲಿ ನನ್ನನ್ನು ಇಲ್ಲಿಗೆ ವರ್ಗಾಯಿಸಿದರು. ಇದೂ ಒಂದು ದೇವರ ಆಜ್ಞೆ ಎಂದು ಸ್ವೀಕರಿಸಿ ಇಲ್ಲಿ ಬಂದು ಮಾರ್ಗದರ್ಶನ ಮಾಡುತ್ತಿದ್ದೇನೆ. ಇದೀಗ ಮಂಗಳೂರಿನ ಕೇಂದ್ರಕ್ಕೆ 25 ವಸಂತಗಳು ತುಂಬಿದೆ. ಇಷ್ಟು ಕಾಲ ದೇವರು ನಮ್ಮ ನಡೆಸಿದ್ದು ಖುಷಿಯ ವಿಷಯ’ ಎನ್ನುತ್ತಾರೆ.

ದೇಶಾದ್ಯಂತ ಎಡೊರೇಶನ್‌ ಮೊನೆಸ್ಟರಿಯ ಬಡಕ್ಲೇರಾರ ಸೋದರಿಯರ 14 ಆರಾಧನಾ ಕೇಂದ್ರಗಳಿವೆ. ಒಟ್ಟು ಸುಮಾರು 250 ಮಂದಿ ಭಗಿನಿಯರಿದ್ದಾರೆ. ಆ ಪೈಕಿ ಸುಮಾರು 25 ಮಂದಿ ಮಂಗಳೂರಿನ ಮಹಿಳೆಯರೇ ಭಗಿನಿಯರಾಗಿ ಸೇರಿದ್ದಾರೆ.

ಇದೇ ರೀತಿ ನಿರಂತರ ಭಜನೆ ತಪಸ್ಸಿನಲ್ಲಿ ಇರುವ ಮತ್ತೊಂದು ಸಮುದಾಯ –ಸೇಕ್ರೆಡ್‌ ಹಾರ್ಟ್‌ ಮೊನೆಸ್ಟರಿಯ ಕ್ಲಾಯಿಸ್ಟರ್ಡ್‌ ಕಾರ್ಮೆಲೈಟ್‌ ಭಗಿನಿಯರು. ಮಂಗಳೂರಿನ ಪ್ರಾರ್ಥನಾಗೃಹದಲ್ಲಿ 14 ಮಂದಿ ಕಾರ್ಮೆಲೈಟ್ ಭಗಿನಿಯರು ಇದೇ ರೀತಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 52 ಮಂದಿ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಾ ಇದ್ದಾರೆ.

ಬಡಕ್ಲೇರರ ಕ್ಲಾಯಿಸ್ಟರ್‌ ಎಂಬ ಪರಿಕಲ್ಪನೆಗೆ ಇಟಲಿಯ ಅಸ್ಸಿಸ್ಸಿಯ ಸೇಂಟ್‌ ಫ್ರಾನ್ಸಿಸ್‌ ಎಂಬವರು  ಪ್ರೇರಣೆ. ಅವರ ಕರೆಯ ಮೇರೆಗೆ  1212ರಲ್ಲಿ ಸೇಂಟ್ ಕ್ಲೇರಾ ಅವರು ಈ ಭಗಿನಿಯರ ತಂಡ ಸ್ಥಾಪಿಸಿದರು.  ವಿಶ್ವದಲ್ಲಿ ಇಂದು ಸುಮಾರು 14,000 ಸನ್ಯಾಸಿನಿಯರು ಕಾಯಾ ವಾಚಾ ಮನಸಾ ದೇವರಿಗೆ ತಮ್ಮನ್ನು ಅರ್ಪಿಸಿಕೊಂಡು ಪ್ರಾರ್ಥಿಸುತ್ತಿದ್ದಾರೆ. ಇಡೀ ವಿಶ್ವದ ಪರವಾಗಿ ಪ್ರಾರ್ಥಿಸುವುದೇ ಅವರ ಉದ್ದೇಶ.

ಇಟಲಿಯ ಅಸ್ಸಿಸ್ಸಿಯಲ್ಲಿ ಶ್ರೀಮಂತ ಮನೆಯಲ್ಲಿ ಹುಟ್ಟಿದ ಸೇಂಟ್‌ ಕ್ಲೇರಾ ಎಂಬಾಕೆಗೆ ಸೇಂಟ್‌ ಫ್ರಾನ್ಸಿಸ್‌ ಅವರ ಕರೆಯನ್ನು ಕೇಳಿ ದೇವರಿಗೆ ಹೀಗೆ ಸಂಪೂರ್ಣವಾಗಿ ಶರಣಾಗುವ ಪರಿಕಲ್ಪನೆ ತುಂಬ ಇಷ್ಟವೆನಿಸಿತು. ಹಾಗಾಗಿ ಅವರು ತಮ್ಮನ್ನು ತಾವು ದೇವರಿಗೆ ಅರ್ಪಿಸಿಕೊಳ್ಳಲು ನಿರ್ಧರಿಸಿದರು. ‘ವಿಧೇಯತೆ, ಬಡತನ ಮತ್ತು ಬ್ರಹ್ಮಚರ್ಯೆ’ – ಈ ತಪೋ ನಿರತ ಮಹಿಳೆಯರ ಜೀವಾಳ.

ಕ್ಲೇರಾ ಅವರ ಸಮರ್ಪಣಾ ಜೀವನವನ್ನು ಕಂಡ ಅವರ ತಂಗಿ, ಆಗ್ನೆಸ್‌ ಅವರೂ ಪ್ರೇರಣೆ ಪಡೆದು ದೇವರ ಅರ್ಚನೆಗಾಗಿ ಮನೆತೊರೆದು ಬಂದರು. ಈ ಇಬ್ಬರು ಸೋದರಿಯರ ಕತೆ ಬಹಳ ಪ್ರಸಿದ್ಧವಾಯಿತು. ಅವರನ್ನು ಜನರು ಬಡಸ್ತ್ರೀಯರೆಂದು ಕರೆಯತೊಡಗಿದರು. ಕಠಿಣ ತಪಸ್ಸು, ಉಪವಾಸ ಆಚರಣೆಯೇ ಅವರ ಜೀವನ ಶೈಲಿ. ಮುಂದಕ್ಕೆ ಬಡಕ್ಲೇರಾರ ಸಮುದಾಯವಾಗಿಯೇ ಈ ತಪಃನಿರತ ಭಗಿನಿಯರು ಗುರುತಿಸಿಕೊಳ್ಳಲಾರಂಭಿಸಿದರು.

ಎಡೊರೇಶನ್‌ ಮೊನೆಸ್ಟರಿ ಬಡಕ್ಲೇರರ ಸಹೋದಯರಿಯರ ತಂಡ ಇರುವ ಪ್ರಾರ್ಥನಾ ಗೃಹಕ್ಕೆ ಹಲವರು ಬಂದು ತಮ್ಮ ಕೋರಿಕೆ ಸಲ್ಲಿಸುತ್ತಾರೆ. ತಮ್ಮ ಬಂಧು ಬಳಗಕ್ಕೆ ಹುಶಾರಿಲ್ಲವೆಂದೋ, ಮದುವೆ, ಮನೆ ಮುಂತಾದ ಅಪೇಕ್ಷೆಯನ್ನು ಬೇಡಿಯೊ ತಮ್ಮ ಪರವಾಗಿ ಪ್ರಾರ್ಥನೆ ಸಲ್ಲಿಸುವಂತೆ ಕೇಳಿಕೊಳ್ಳುತ್ತಾರೆ. ಫೋನ್‌ ಮೂಲಕ, ಚೀಟಿಯ ಮೂಲಕ ತಮ್ಮ ಕೋರಿಕೆಯನ್ನು ಭಗಿನಿಯರಿಗೆ ತಲುಪಿಸುತ್ತಾರೆ.
‘ದಿನಕ್ಕೆ ಏಳೆಂಟು ಕೋರಿಕೆಗಳು ಬರುತ್ತವೆ. ಕೆಲವರು ಕೃತಜ್ಞತೆ ಸೂಚಿಸಿ ಪ್ರಾರ್ಥನೆ ಮಾಡುವಂತೆಯೂ ಹೇಳುತ್ತಾರೆ. ಆಗ ನಮ್ಮ ಪ್ರಾರ್ಥನೆ ಫಲಿಸಿತಲ್ಲಾ ಎಂಬ ತೃಪ್ತಿಯೂ ನಮಲ್ಲಿ ಹರ್ಷವನ್ನು ಮೂಡಿಸುತ್ತದೆ’ ಎನ್ನುತ್ತಾರೆ, ಸಿಸ್ಟರ್‌ ಮೇರಿ ಮಾರ್ಗರೆಟ್‌.

ಮಂಗಳೂರಿಗೆ ಬಡಕ್ಲೇರಾರ ಸಹೋದರಿಯರು ಬಂದುದು 1992ರಲ್ಲಿ. ಮಿಲಾಗ್ರಿಸ್‌ ಧರ್ಮಕೇಂದ್ರದ ಪ್ರಧಾನಗುರುಗಳಾಗಿದ್ದ ಫಾ. ಡೆನಿಸ್ ಮೊರಾಸ್‌ ಪ್ರಭು ಅವರು ಭಗಿನಿಯರ ತಂಡಕ್ಕೆ ಅವಕಾಶ ಕಲ್ಪಿಸಿದರು.

ದೇವರ ಕರೆಯನ್ನು ಗಮನಿಸಿ ತಮ್ಮನ್ನು ತಾವು ದೇವರಿಗೆ ಸಮರ್ಪಿಸಿಕೊಳ್ಳಲು ನಿರ್ಧರಿಸಿದ ಬಳಿಕ ಈ ಸ್ತ್ರೀಯರಿಗೆ ತರಬೇತಿ ನೀಡಲಾಗುತ್ತದೆ. ಅವರ ಸಮರ್ಪಣೆಯ ಮನೋಭಾವ ಸದೃಢವಾಗಿದೆಯೇ, ಮನೋಸ್ಥೈರ್ಯ ಬಲವಾಗಿದೆಯೇ ಎಂದೂ ಅವರನ್ನು ಪರೀಕ್ಷೆ ಮಾಡಲಾಗುತ್ತದೆ. ಹಂತ ಹಂತವಾಗಿ ಅವರಿಗೆ ಭಗಿನಿಯರ ಪಟ್ಟ ನೀಡಲಾಗುತ್ತದೆ. ಸಿಸ್ಟರ್‌ ಮೇರಿ ಸ್ಟೆಲ್ಲಾ ಅವರ ತಂಡ ತರಬೇತಿ ಪಡೆದುದು ಊಟಿಯಲ್ಲಿ. ತರಬೇತಿ ಸಂದರ್ಭದಲ್ಲಿ ಯುರೋಪ್ ಮತ್ತು ಏಷ್ಯಾದ ವಿವಿಧೆಡೆಯ ಸ್ತ್ರೀಯರು ಅಲ್ಲಿರುತ್ತಾರೆ. ಮನೆ, ಅಂತಸ್ತು, ಕುಟುಂಬದ ಮಾತನ್ನೆಲ್ಲ ಮರೆತು ಕೇವಲ ದೇವರೆಡೆಗೆ ಮನಸ್ಸನ್ನು ಕೇಂದ್ರೀಕರಿಸುವುದೇ ಅಲ್ಲಿ ಸೇರಿದವರ ಉದ್ದೇಶವಾಗಿರುತ್ತದೆ. ಹಾಗಾಗಿ ಇಂಗ್ಲಿಷ್‌ ಭಾಷೆಯೊಂದೇ ಬಳಕೆಯಲ್ಲಿರುತ್ತದೆ.

‘ದೇವರನ್ನು ಮತ್ತು ದೇವರ ವೈಭವವನ್ನು ಬಿಟ್ಟು ಮತ್ತೇನನ್ನೂ ನಾವು ಯೋಚಿಸುವುದಿಲ್ಲ. ಅವನ ಕೃಪೆಯಿಂದಲೇ ಪ್ರತಿ ಉಸಿರೂ ಸಾಗುತ್ತದೆ ಎಂಬ ನಂಬಿಕೆಯಿಂದ ನಾವು ಶರಣಾಗಿ ಬದುಕುತ್ತೇವೆ’ ಎನ್ನುತ್ತಾರೆ ಸಿಸ್ಟರ್‌.

***

ತಪಃನಿರತರ ದಿನಚರಿ

ತಪಃನಿರತ ಭಗಿನಿಯರ ದಿನಚರಿ ಮುಂಜಾನೆ 4.30ಕ್ಕೇ ಆರಂಭವಾಗುತ್ತದೆ. 5 ಗಂಟೆಗೆ ಆ ದಿನದ ಬೆಳಗಿನ ಪ್ರಾರ್ಥನೆ, 6.30ಕ್ಕೆ ಸಾಮೂಹಿಕ ಪ್ರಾರ್ಥನೆ, 7.30ಕ್ಕೆ ಉಪಾಹಾರ ಮಾಡಿ 8 ಗಂಟೆಗೆ ಮನೆ ಸ್ವಚ್ಛಮಾಡುವ, ಅಡುಗೆ, ತೋಟಗಾರಿಕೆ ಮುಂತಾದ ಕೆಲಸಗಳನ್ನು ಮಾಡುವ ಸಮಯ. ಈ ಭಗಿನಿಯರ ಸಮುದಾಯಕ್ಕೆ ಸೇರಲು ಇಚ್ಛಿಸುವ ಉದ್ದೇಶದಿಂದ ಎಡೋರೇಶನ್‌ ಮೊನಾಸ್ಟ್ರಿ ಸೇರಿದವರಿಗೆ 9.30ಕ್ಕೆ ತರಗತಿಗಳನ್ನು ನಡೆಸಲಾಗುತ್ತದೆ.

10.30ಕ್ಕೆ ಮಧ್ಯಾಹ್ನದ ಪ್ರಾರ್ಥನೆ ಆರಂಭ, 12 ಗಂಟೆಗೆ ಊಟ ಮುಗಿಯುತ್ತದೆ. 1.5ಕ್ಕೆ ಕೊಂಚ ಬಿಡುವು. 2 ಗಂಟೆಗೆ ಪ್ರಾರ್ಥನೆ ಅಥವಾ ಸ್ವಾಧ್ಯಾಯ. 4 ಗಂಟೆಗೆ ಚಹಾ ವಿರಾಮ ಇರುತ್ತದೆ. 5.30ಕ್ಕೆ ಸಂಜೆಯ ಪ್ರಾರ್ಥನೆ ಬಳಿಕ 7 ಗಂಟೆಗೆ ರಾತ್ರಿ ಊಟ. 8 ಗಂಟೆಗೆ ದಿನದ ಒಂದು ಅವಲೋಕನ ಹಾಗೂ ಧನ್ಯವಾದ ಸಲ್ಲಿಸುವ ಪ್ರಾರ್ಥನೆ ಮತ್ತು 9 ಗಂಟೆಗೆ ರಾತ್ರಿಯ ಪ್ರಾರ್ಥನೆ. 10 ಗಂಟೆಗೆ ನಿದ್ದೆಯ ಸಮಯ. ಆದರೆ ಈ ಎಲ್ಲ ಕೆಲಸಗಳು ನಡೆಯುತ್ತಿರುವಾಗಲೇ ದೇವರ ಮುಂದೆ ಪಾಳಿಯ ಪ್ರಕಾರ ಒಬ್ಬರು ಭಗಿನಿಯರಾದರೂ ಪ್ರಾರ್ಥನೆಯನ್ನು ನಿರಂತರ ಸಲ್ಲಿಸುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT