ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.1ಕ್ಕೆ ಶುರುವಾಗುವುದೇ ತಾಲ್ಲೂಕು ಆಡಳಿತ?

Last Updated 17 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಕಾಳಗಿ: ಕಾಳಗಿ ತಾಲ್ಲೂಕು ರಚನೆಗೆ ನಾಲ್ಕು ದಶಕಗಳ ನಿರಂತರ ಹೋರಾಟಕ್ಕೆ ಕೊನೆಗೂ ಜಯಸಿಕ್ಕಿದೆ ಅನ್ನುವಷ್ಟರಲ್ಲಿ ಸದ್ಯದ ಕೆಲ ವಾತಾವರಣ ಅನುಮಾನ ಸೃಷ್ಟಿಸಿದೆ. ಈ ಪರಿಣಾಮ, ಕಾಳಗಿ 2018ರ ಜನವರಿ 1ರಿಂದ ಚಿತ್ತಾಪುರ ತಾಲ್ಲೂಕಿನಿಂದ ಬೇರ್ಪಟ್ಟು ತನ್ನದೇಯಾದ ‘ತಾಲ್ಲೂಕು ಆಡಳಿತ’ ಕಾರ್ಯಾರಂಭಿಸುವುದೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಚಿತ್ತಾಪುರ ತಾಲ್ಲೂಕಿನ ವಿಸ್ತೀರ್ಣ 1,773.34 ಚ.ಕಿ.ಮೀ ಮತ್ತು ಜನಸಂಖ್ಯೆ 3,66,802 ಇದೆ. ರಾಜ್ಯದ ಸರಾಸರಿಗಿಂತ ಶೇ 162 ಹಾಗೂ 122ರಷ್ಟು ಹೆಚ್ಚಿನ ವಿಸ್ತೀರ್ಣ ಹಾಗೂ ಜನಸಂಖ್ಯೆಯುಳ್ಳ ತಾಲ್ಲೂಕು ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಶೇ 30ರಷ್ಟಿದ್ದು, ‘ಅತ್ಯಂತ ಹಿಂದುಳಿದ’ ತಾಲ್ಲೂಕು ಆಗಿದೆ. ಇಂತಹ ದೊಡ್ಡ ತಾಲ್ಲೂಕಿಗೆ ಉಪ ಶಮನವನ್ನು ಬಯಸಿ ಸಾರ್ವಜನಿಕರಿಂದ ಹಾಗೂ ಜಿಲ್ಲಾಧಿಕಾರಿಗಳಿಂದ ‘ಕಾಳಗಿ’ ಮತ್ತು ‘ಶಹಾಬಾದ’ ಎರಡು ಹೊಸ ತಾಲ್ಲೂಕು ಗಳನ್ನು ರಚಿಸಲು ಈ ಹಿಂದೆ ಸರ್ಕಾರಕ್ಕೆ ಬೇಡಿಕೆಗಳು ಸಲ್ಲಿಕೆಯಾಗಿದ್ದವು.

ಅಷ್ಟೇ ಅಲ್ಲದೆ, ಕಾಳಗಿ ತಾಲ್ಲೂಕು ರಚನೆ ಹೋರಾಟ ಸಮಿತಿಯು ಎಂ.ವಾಸುದೇವರಾವ ಆಯೋಗ, ಟಿ.ಎಂ.ಹುಂಡೇಕರ್, ಪಿ.ಸಿ.ಗದ್ದೀಗೌಡರ್ ಮತ್ತು ಎಂ.ಬಿ.ಪ್ರಕಾಶ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿಗಳ ವರದಿಗಳಂತೆ ‘ಕಾಳಗಿ ತಾಲ್ಲೂಕು’ನ್ನು ರಚಿಸಲು ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ.

ಚಿತ್ತಾಪುರ ತಾಲ್ಲೂಕಿನ ತೆಂಗಳಿ, ಅರಣಕಲ್, ಕಾಳಗಿ, ಕೊಡದೂರ, ಕೋರವಾರ, ಮಾಡಬೂಳ, ಪೇಠ ಶಿರೂರ, ಗೋಟೂರ,ರಾಜಾಪುರ, ಕಂದಗೂಳ ಹಾಗೂ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ, ಹೊಡೆಬೀರನ ಹಳ್ಳಿ, ಕೋಡ್ಲಿ, ರಟಕಲ್, ರುಮ್ಮನ ಗೂಡ, ಹಲಚೇರಾ ಗ್ರಾಮ ಪಂಚಾಯಿತಿ ಗಳು ಬೆಂಬಲ ಸೂಚಿಸುತ್ತಾ ನಡವಳಿಕೆ ಗಳ ಪ್ರತಿಗಳೊಂದಿಗೆ ಮನವಿ ಸಲ್ಲಿಸಿವೆ.

2004ರ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಪುನರ್ ವಿಂಗಡಣೆಯಂತೆ ಚಿತ್ತಾಪುರ ತಾಲ್ಲೂಕಿನ ಕಾಳಗಿ ಹೋಬಳಿಯ 26, ಗುಂಡಗುರ್ತಿ ಹೋಬಳಿಯ 20, ಚಿತ್ತಾಪುರ ಹೋಬಳಿಯ 1 ಮತ್ತು ಚಿಂಚೋಳಿ ತಾಲ್ಲೂಕಿನ ಐನಾಪುರ ಹೋಬಳಿಯ 4, ಕೋಡ್ಲಿ ಹೋಬಳಿಯ 28 ಹಾಗೂ ಸುಲೇಪೇಟ ಹೋಬಳಿಯ 18 ಹೀಗೆ ಒಟ್ಟು 23 ಗ್ರಾಮ ಪಂಚಾಯಿತಿಗಳ 97 ಹಳ್ಳಿಗಳನ್ನು ಒಟ್ಟಿಗೆ ಸೇರಿಸಿ ‘ಕಾಳಗಿ ತಾಲ್ಲೂಕು’ ರಚಿಸಲು ಅಂದಿನ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾಪಿಸಿದ್ದರು.

2008ರ ಜುಲೈ 16ರಂದು ಎಂ.ಬಿ.ಪ್ರಕಾಶ ನೇತೃತ್ವದ ಸಮಿತಿಯು ಕಾಳಗಿಗೆ ಭೇಟಿ ನೀಡಿದ್ದಾಗ ದಂಡೋತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮನವಿಯನ್ನು ಸಲ್ಲಿಸಿ, ದಂಡೋತಿ ಮತ್ತು ಮರಗೋಳ ಗ್ರಾಮಗಳು ಕಾಳಗಿಗಿಂತಲೂ ಚಿತ್ತಾಪುರ ಪಟ್ಟಣಕ್ಕೆ ಹತ್ತಿರ ಇವೆ. ಹೀಗಾಗಿ ದಂಡೋತಿ ಗ್ರಾಮ ಪಂಚಾಯಿತಿಯನ್ನು ಚಿತ್ತಾಪುರ ತಾಲ್ಲೂಕಿನಲ್ಲೇ ಮುಂದುವರಿಸಬೇಕು ಎಂದು ವಿನಂತಿಸಿದ್ದರು.

ಆ ಪ್ರಸ್ತಾವ ಹಾಗೂ ಸಾರ್ವಜನಿಕರ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಎಂ.ಬಿ.ಪ್ರಕಾಶ ನೇತೃತ್ವದ ಸಮಿತಿಯು ಚಿತ್ತಾಪುರ ತಾಲ್ಲೂಕಿನ 29 ಗ್ರಾಮಗಳು ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ 40ರಿಂದ 70 ಕಿ.ಮೀ ದೂರದಲ್ಲಿದ್ದು, ಇವು ಕಾಳಗಿಯಿಂದ ಕೇವಲ 5ರಿಂದ 28ಕಿ.ಮೀ ಅಂತರದಲ್ಲಿವೆ. ಅದರಂತೆ ಚಿಂಚೋಳಿ ತಾಲ್ಲೂಕಿನ ಪಶ್ಚಿಮ ಗಡಿಯಲ್ಲಿರುವ ರಟಕಲ್, ಕೋಡ್ಲಿ, ಹಲಚೇರಾ, ಗಡಿಕೇಶ್ವರ, ರುಮ್ಮನಗೂಡ, ಮೊಘಾ, ಪಸ್ತಾಪುರ, ಹೊಡೆಬೀರನಹಳ್ಳಿ ಗ್ರಾಮ ಪಂಚಾಯಿತಿಗಳು ಚಿಂಚೋಳಿ ತಾಲ್ಲೂಕು ಕೇಂದ್ರದಿಂದ 35ರಿಂದ 55 ಕಿ.ಮೀ ದೂರದಲ್ಲಿದ್ದು, ಅವುಗಳು ಕಾಳಗಿ ಗ್ರಾಮಕ್ಕೆ ಕೇವಲ 5ರಿಂದ 20ಕಿ.ಮೀ ದೂರವಾಗುತ್ತವೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.

ಕಾಳಗಿಯು ಗ್ರಾಮ ಪಂಚಾಯಿತಿ ಕೇಂದ್ರಸ್ಥಾನ ಅಷ್ಟೇ ಅಲ್ಲ, ಹೋಬಳಿ ಕೇಂದ್ರವೂ ಆಗಿದೆ. ಈಗಾಗಲೇ ತಾಲ್ಲೂಕು ಮಟ್ಟದ ಕೆಲ ಸರ್ಕಾರಿ ಕಚೇರಿಗಳಿಗೆ ನೆಲೆ ನೀಡಿದೆ ಎಂದಿರುವ ಎಂ.ಬಿ.ಪ್ರಕಾಶ ನೇತೃತ್ವದ ಸಮಿತಿಯು ಪ್ರಸ್ತಾವನೆಯನ್ನು ಪರಿಶೀಲಿಸಿ (ಪಟ್ಟಿಯಲ್ಲಿರುವಂತೆ) ‘ಕಾಳಗಿ ತಾಲ್ಲೂಕು’ನ್ನು ರಚಿಸಿದಲ್ಲಿ ಚಿತ್ತಾಪುರ ತಾಲ್ಲೂಕಿಗೆ ಉಪಶಮನ ಸಿಗುತ್ತದೆಂದು ಅಭಿಪ್ರಾಯಪಟ್ಟಿದೆ.

‘ಒಟ್ಟಾರೆ ಚಿತ್ತಾಪುರ ತಾಲ್ಲೂಕಿನ 13, ಚಿಂಚೋಳಿ ತಾಲ್ಲೂಕಿನ 8 ಗ್ರಾಮ ಪಂಚಾಯಿತಿಗಳು ಕಾಳಗಿ ಹೊಸ ತಾಲ್ಲೂಕಿಗೆ ಒಳಪಡುವುದನ್ನು ತಾಲ್ಲೂಕು ಪುನರ್ ರಚನಾ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿದೆ. ಆ ನಾಲ್ಕು ಸಮಿತಿಗಳ ವರದಿ ಆಧರಿಸಿಯೇ ಕಾಳಗಿ ತಾಲ್ಲೂಕು ರಚಿಸಬೇಕೆ ವಿನಾ ಯಾವುದೇ ಕಾರಣದಿಂದ ಗ್ರಾಮ ಸೇರ್ಪಡೆಯ ಗೊಂದಲ ಸೃಷ್ಟಿಸಬಾರದು. ಕೂಡಲೇ ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಕಾಳಗಿ ತಾಲ್ಲೂಕು ಆಡಳಿತದ ಆರಂಭಕ್ಕೆ ಹಸಿರು ನಿಶಾನೆ ತೋರಿ ಜ.1ರಂದು ಅಸ್ತಿತ್ವಕ್ಕೆ ತರಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

* *

ಕಾಳಗಿ ಹೊಸ ತಾಲ್ಲೂಕು 2018ರ ಜನವರಿ 1ರಿಂದ ಕಾರ್ಯಾರಂಭವಾಗುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
 ಶಾಂತಗೌಡ ಬಿರಾದಾರ
ವಿಶೇಷ ತಹಶೀಲ್ದಾರ್, ಕಾಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT