ಶಿವಮೊಗ್ಗ

ಓಲೈಕೆಯ ವೋಟು, ಸೀಟು ಎಂಜಲಿಗೆ ಸಮ

ಚುನಾವಣಾ ರಾಜಕೀಯಕ್ಕೆ ಧರ್ಮ ಬಳಸುವುದು ಹೇಗೆ ತಪ್ಪೋ, ಅಲ್ಪ ಸಂಖ್ಯಾತರನ್ನು ವೋಟ್‌ ಬ್ಯಾಂಕ್ ಮಾಡಿಕೊಳ್ಳುವುದೂ ಕೋಮು ರಾಜಕೀಯಕ್ಕೆ ಸಮಾನ

ಶಿವಮೊಗ್ಗದಲ್ಲಿ ಸೋಮವಾರ ನಡೆದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿದರು

ಶಿವಮೊಗ್ಗ: ಓಲೈಕೆಯಿಂದ ಪಡೆಯುವ ವೋಟು ಮತ್ತು ಸೀಟು ಎಂಜಲಿಗೆ ಸಮಾನ. ಅದು ಎಂದಿಗೂ ಮರ್ಯಾದಸ್ಥರ ಊಟವಲ್ಲ ಎಂದು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಶ್ರೀಕಂಠ ಕೂಡಿಗೆ ಪ್ರತಿಪಾದಿಸಿದರು. ಕುವೆಂಪು ರಂಗಮಂದಿರದಲ್ಲಿ ಸೋಮವಾರ ಆರಂಭವಾದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ರಾಜಕೀಯಕ್ಕೆ ಧರ್ಮ ಬಳಸುವುದು ಹೇಗೆ ತಪ್ಪೋ, ಅಲ್ಪ ಸಂಖ್ಯಾತರನ್ನು ವೋಟ್‌ ಬ್ಯಾಂಕ್ ಮಾಡಿಕೊಳ್ಳುವುದೂ ಕೋಮು ರಾಜಕೀಯಕ್ಕೆ ಸಮಾನ ಎಂದು ಕುಟುಕಿದರು.

ಪ್ರಸ್ತುತ ದಿನಗಳಲ್ಲಿ ಜಾತಿ, ಧರ್ಮ, ಊರು, ದೇಶಗಳ ನಡುವೆ ಅನವಶ್ಯಕ ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಸಮಕಾಲೀನ ಸಂದರ್ಭದ ಸಾಮಾಜಿಕ, ರಾಜಕೀಯ ಬೆಳವಣಿಗೆಗಳು ಪ್ರಜ್ಞಾವಂತರನ್ನು ತಲೆತಗ್ಗಿಸುವಂತೆ ಮಾಡಿವೆ. ಜನಪ್ರತಿನಿಧಿಗಳೇ ಸಂವಿಧಾನ ವಿರೋಧಿ, ಕಾನೂನು ಭಂಗ ಹಾಗೂ ಹಿಂಸೆ ಪ್ರಚೋದಿಸುವ ಕೃತ್ಯಗಳಿಗೆ ಕೈ ಹಾಕಿದ್ದಾರೆ. ಹುಬ್ಬಳ್ಳಿಯ ಒಂದು ಪೇಟೆ ಪಾಕಿಸ್ತಾನದಂತೆ ಕಾಣಿಸುತ್ತದೆ ಎನ್ನುವುದು, ನಿರ್ಬಂಧಿತ ಪ್ರದೇಶದ ಬ್ಯಾರಿಕೇಡ್ ಮುರಿದು ಕಾರು ನುಗ್ಗಿಸುವುದು ಹಿಂಸೆ ಪ್ರಚೋದಿಸುವ ಕಾನೂನು ಉಲ್ಲಂಘನೆ ಕೃತ್ಯಗಳೇ. ಇದಕ್ಕೆಲ್ಲಾ ಬಹುಸಂಖ್ಯಾತ ಸಜ್ಜನರ ನಿಷ್ಕ್ರಿಯತೆಯೇ ಕಾರಣ ಎಂದು ವಿಶ್ಲೇಷಿಸಿದರು.

ಇಂದು ಸಾಹಿತ್ಯ, ಕಲೆ, ಸಂಗೀತ ಸಮಾಜ ಬೆಸೆಯುವ ಸೌಹಾರ್ದ ವಿಸ್ತರಿಸುವ ಸಾಧನವಾಗಬೇಕು. ಸರ್ಕಾರ ಕೃಷಿಕರ ಸಂಕಷ್ಟಗಳಿಗೆ ಧಾವಿಸಬೇಕು. ಕನ್ನಡ ಶಾಲೆಗಳು ಮುಚ್ಚುವುದನ್ನು ತಪ್ಪಿಸಲು ಕೆಲವು ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಭಾಷಾ ನೀತಿ ರೂಪಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಬೇಕು. ಎಲ್ಲಾ ಘಟ್ಟಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸಭಾಧ್ಯಕ್ಷ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ‘ಪ್ರಸ್ತುತ ಕನ್ನಡದ ಮುಂದೆ ಸಾಕಷ್ಟು ಸವಾಲುಗಳಿವೆ. ಕನ್ನಡ ಭಾಷೆ ಮಾತನಾಡಿದರೆ ಬೆನ್ನಿನ ಮೇಲೆ ಚಾಟಿ ಏಟು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕನ್ನಡನಾಡಲ್ಲೇ ಕನ್ನಡವನ್ನು ಎಚ್ಚರದಿಂದ ಮಾತನಾಡಬೇಕಿದೆ. ಕನ್ನಡದ ಈ ಸ್ಥಿತಿಗೆ ಕಾರಣ ಹುಡುಕಬೇಕು. ಕನ್ನಡದ ಪ್ರಗತಿ ಕುರಿತ ಸಾಧ್ಯತೆಗಳ ಚರ್ಚೆ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಣ್ಣರಾಮ ಮಾತನಾಡಿ, ‘ಮಾನವೀಯತೆ ಮತ್ತು ಧರ್ಮದ ನೆಲೆಯಲ್ಲಿ ಕನ್ನಡ ಸಾಹಿತ್ಯ ಸೃಷ್ಟಿಯಾಗಿದೆ. ಆದರೆ, ಸಾಹಿತ್ಯ ಸಮೃದ್ಧಿಯಾಗಿರುವ ಈ ನಾಡಿನಲ್ಲಿ ಇಂದು ಮನುಷ್ಯತ್ವದ ಪ್ರಜ್ಞೆಯೇ ಇಲ್ಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಿಕ್ಷಣ ಎನ್ನುವುದು ಕೇವಲ ಪದವಿ ಪ್ರದಾನಕ್ಕಷ್ಟೇ ಸೀಮಿತವಾಗುತ್ತಿದೆ. ನಿರ್ದಿಷ್ಟ ಪಠ್ಯಗಳನ್ನು ಗಿಳಿಪಾಠದಂತೆ ಹೇಳಿಕೊಡುವ ಪರಿಪಾಠ ಬೆಳೆಯುತ್ತಿದೆ. ಆದರೆ, ಯಾವ ಶಿಕ್ಷಣ ನಮ್ಮಲ್ಲಿ ಜ್ಞಾನ, ವಿವೇಕ, ಪ್ರಶ್ನಿಸುವ ಗುಣ ಬೆಳೆಸುವುದಿಲ್ಲವೋ ಅದು ಶಿಕ್ಷಣ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಮಕ್ಕಳಲ್ಲಿ ಪ್ರಶ್ನೆ ಕೇಳದ ಗುಣಗಳು ಬೆಳೆಯದಿರುವ ಕಾರಣ ಮೌಢ್ಯ ವಿಜೃಂಭಿಸುತ್ತಿದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವ ದೊಡ್ಡ ಸವಾಲು ನಮ್ಮ ಮುಂದಿದೆ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮುಖಂಡರಾದ ಎಸ್‌.ಪಿ. ದಿನೇಶ್, ಸಿ.ಎಸ್‌. ಷಡಕ್ಷರಿ, ಇಸ್ಮಾಯಿಲ್ ಖಾನ್, ಮಂಗಲಾ ವೆಂ.ನಾಯಕ್, ಜಿ.ಪಿ. ಸಂಪತ್ ಉಪಸ್ಥಿತರಿದ್ದರು.

ಪತ್ರಕರ್ತ ಎಸ್.ಕೆ. ಗಜೇಂದ್ರ ಸ್ವಾಮಿಯವರ ‘ತೋಚಿದ್ದು ಗೀಚಿದ್ದು’ ಕವನ ಸಂಕಲನ, ಗೋಪಜ್ಜಿ ನಾಗಪ್ಪ ಅವರ ‘ಸಮಾನತೆಯ ಶಿಲ್ಪಿ’ ಮಮತಾ ಎಸ್. ಹೆಗಡೆಯವರ ಅರಿವಿನ ಚಿಂತನೆಗಳು, ಶಿವಾನಂದ ಮಾಸೂರು ಅವರ ‘ಅದೃಷ್ಟ’, ಡಾ.ಅಣ್ಣಪ್ಪ ಎನ್. ಮಳಿಮಠ ಅವರ ‘ಎರಡು ನೋಟ’, ಡಿ.ಬಿ. ಶಂಕರಪ್ಪ ಅವರ ಬಳ್ಳಿಗಾವಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

‘ಇಂಗ್ಲಿಷ್ ಪ್ರಾಬಲ್ಯದ ಚರ್ಚೆ ಅಗತ್ಯ’

ಕನ್ನಡ ಭಾಷೆ ಉತ್ತುಂಗ ತಲುಪಿದ್ದಾಗ ಇನ್ನೂ ಬಾಲ್ಯಾವಸ್ಥೆಯಲ್ಲೇ ಇದ್ದ ಆಂಗ್ಲ ಭಾಷೆ ಇಂದು ಸಶಕ್ತವಾಗಿ ಬೆಳೆಯಲು ಕಾರಣಗಳು ಏನು ಎನ್ನುವ ಕುರಿತು ಚಿಂತಿಸಬೇಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದರು.

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಮೃದ್ಧ ಸಾಹಿತ್ಯ, ಸಾಂಸ್ಕೃತಿಕ ಚರಿತ್ರೆ ಹೊಂದಿದೆ. 5ನೇ ಶತಮಾನದಲ್ಲಿಯೇ ಕನ್ನಡ ಸಾಹಿತ್ಯ ಶಿಲಾ ಲಿಪಿಗಳಲ್ಲಿ ಬರೆಯುವಷ್ಟು ಪ್ರಭಾವವಾಗಿ ಬೆಳೆದಿತ್ತು. 17–18ನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಆಂಗ್ಲ ಭಾಷೆಯ ಹೊಡೆತಕ್ಕೆ ಸಿಲುಕಿದ ಸಮೃದ್ಧ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನ ಶ್ರೀಮಂತಿಕೆ ಕಳೆದುಕೊಳ್ಳುತ್ತಿದೆ. ಇದು ಹೇಗೆ ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದರು.

‘ಕನ್ನಡ ಸಾಹಿತ್ಯದಲ್ಲಿ ಮಾನವೀಯತೆ, ಸಮಾನತೆಯ ನಿರಂತರತೆ ಇದೆ. ಕನ್ನಡಕ್ಕೆ ಯಾವುದೇ ಜಾತಿ, ಧರ್ಮ, ಪಕ್ಷವಿಲ್ಲ. ನಾವೆಲ್ಲರೂ ಕನ್ನಡಿಗರು. ಹಾಗಾಗಿ ಎಲ್ಲರೂ ಕೂಡಿ ಕಟ್ಟಿದ ಕನ್ನಡವನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ. ಎಲ್ಲಾ ಸರ್ಕಾರಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿವೆ. ನೆರವು ಸದುಪಯೋಗಪಡಿಸಿಕೊಂಡು ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಗತಿಗೆ ಕೈ ಜೋಡಿಸಬೇಕಿದೆ’ ಎಂದರು.

ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 5 ಲಕ್ಷದಿಂದ ₹ 10 ಲಕ್ಷಕ್ಕೆ ಹಾಗೂ ತಾಲ್ಲೂಕು ಸಮ್ಮೇಳನಗಳಿಗೆ ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಸರ್ಕಾರ ಅನುದಾನ ಹೆಚ್ಚಳ ಮಾಡಬೇಕು ಎಂದು ಕೋರಿದರು.

ಗಮನ ಸೆಳೆದ ಛಾಯಾಚಿತ್ರ ಪ್ರದರ್ಶನ

ಸಮ್ಮೇಳನದಲ್ಲಿ ‘ಪ್ರಜಾವಾಣಿ’ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರ ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನ ಗಮನ ಸೆಳೆಯಿತು. ಗ್ರಾಮೀಣ ಬದುಕು, ವನ್ಯಜೀವಿಗಳ ಚಿತ್ರಗಳು ಹೆಚ್ಚು ಆಕರ್ಷಿತವಾಗಿದ್ದವು. ಸಮ್ಮೇಳನಾಧ್ಯಕ್ಷ ಶ್ರೀಕಂಠ ಕೂಡಿಗೆ, ಪ್ರಮುಖರಾದ ಡಿ.ಎಚ್. ಶಂಕರಮೂರ್ತಿ, ಮನು ಬಳಿಗಾರ್, ಕುಮಾರಚಲ್ಯ ಪ್ರದರ್ಶನ ವೀಕ್ಷಿಸಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಸಮ್ಮೇಳನಾಧ್ಯಕ್ಷ ಶ್ರೀಕಂಠ ಕೂಡಿಗೆ ಅವರನ್ನು ಮೆರವಣಿಗೆ ಮೂಲಕ ಕುವೆಂಪು ರಂಗಮಂದಿರಕ್ಕೆ ಕರೆತರಲಾಯಿತು. ವಿವಿಧ ಜನಪದ ತಂಡಗಳು ಮೆರವಣಿಗೆಯ ಅಂದ ಹೆಚ್ಚಿಸಿದವು. ಮೆರವಣಿಗೆಯು  ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಹೊರಟು, ನೆಹರೂ ರಸ್ತೆ, ಬಾಲರಾಜ ಅರಸ್‌ ರಸ್ತೆ ಮೂಲಕ ರಂಗಮಂದಿರ ತಲುಪಿತು. ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

Comments
ಈ ವಿಭಾಗದಿಂದ ಇನ್ನಷ್ಟು

ಸಂಡೂರು
‘ಜೆಸಿಬಿ’ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣವಾಗಿ ಚರ್ಚಿಸಲು, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಜನರ ಬದುಕನ್ನು ಹಸನುಗೊಳಿಸಲು ಜನಾಂದೋಲನಗಳ ಮಹಾಮೈತ್ರಿ ಈ...

15 Apr, 2018
ಕಿರವತ್ತಿ ಬಳಿ ಗಾಯಾಳು ಆನೆ ಸಾವು

ಯಲ್ಲಾಪುರ
ಕಿರವತ್ತಿ ಬಳಿ ಗಾಯಾಳು ಆನೆ ಸಾವು

13 Apr, 2018

ದಾವಣಗೆರೆ
ಮತಯಂತ್ರ ವಿಶ್ವಾಸಾರ್ಹ, ಅನುಮಾನ ಬೇಡ

ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ವಿದ್ಯುನ್ಮಾನ ಮತ ಯಂತ್ರ ಮತ್ತು ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್‌) ಬಳಸಲಾಗುತ್ತಿದ್ದು, ಮತದಾರ ತಾನು ಚಲಾಯಿಸಿದ...

11 Apr, 2018

ಕುಶಾಲನಗರ
ಕಾವೇರಿ ನಿಸರ್ಗಧಾಮಕ್ಕೆ ಕಾಡಾನೆಗಳ ಲಗ್ಗೆ

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮಕ್ಕೆ ಕಾಡಾನೆಗಳು ನುಸುಳಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

29 Mar, 2018

ಕಾರವಾರ
ಮನೆಬಿಟ್ಟು ಬಂದ ಬಾಲಕಿಯರ ರಕ್ಷಣೆ

ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಅನುಮಾನಾಸ್ಪದವಾಗಿ ಪ್ರಯಾಣಿಸುತ್ತಿದ್ದ 10 ಮತ್ತು 12 ವರ್ಷದ ಇಬ್ಬರು ಬಾಲಕಿಯರನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆಯ...

29 Mar, 2018