ಚರ್ಚೆ

ಇ.ವಿ.ಎಂ.ಗಳನ್ನು ನಂಬಬೇಕೆ– ಬೇಡವೇ?

ರಾಜಕಾರಣಿಗಳು ಗೆದ್ದಾಗ ಎಲೆಕ್ಟ್ರಾನಿಕ್ ಮತಯಂತ್ರದ ಮೇಲೆ ನಂಬಿಕೆ ಇಟ್ಟುಕೊಳ್ಳುತ್ತಾರೆ. ಸೋತಾಗ, ಅದರ ಮೇಲೆ ಅನುಮಾನ ಪಡತೊಡಗುತ್ತಾರೆ ಎಂಬುದು ನಿಜವೇ?

ನಾನೊಬ್ಬ ಸಾಮಾನ್ಯ. ನನ್ನಂತಹ ಕೋಟಿ ಕೋಟಿ ಸಾಮಾನ್ಯರು ಈ ದೇಶದ ಪ್ರಜೆಗಳು. ನಮ್ಮ ಸರ್ಕಾರವನ್ನು ಆಯ್ಕೆ ಮಾಡಲು ನಾವು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಬೇಕೇ– ಬೇಡವೇ ಎಂಬುದನ್ನು ಚುನಾವಣಾ ಆಯೋಗ ತೀರ್ಮಾನಿಸಿದರೂ ಈ ದೇಶದ ಸಾಮಾನ್ಯರಿಗೆ ಅದರ ಉತ್ತರದಾಯಿತ್ವವನ್ನು ನಿರ್ಲಕ್ಷಿಸಲಾಗದು. ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ನಡೆಯುವ ಮತದಾನದ ಫಲಿತಾಂಶಗಳನ್ನು ಅಸಲಿ ಎಂದು ನಂಬಬಹುದೇ ಎನ್ನುವುದು ಈಗ ಕೋಟ್ಯಂತರ ಭಾರತೀಯರ ಮುಂದೆ ಇರುವ ಪ್ರಶ್ನೆ.

‘ನಂಬಲು ಸಾಧ್ಯವಾಗುತ್ತಿಲ್ಲ ಎನ್ನುವವರು, ಅದನ್ನು ಸಾಬೀತು ಮಾಡಿ ತೋರಿಸಲಿ’ ಎಂದು ಚುನಾವಣಾ ಆಯೋಗ ಸವಾಲು ಹಾಕಿದೆ. ಇದಕ್ಕೆ ಇನ್ನೊಂದು ಮುಖವಿದೆ. ಈ ಮತಯಂತ್ರಗಳಿಂದ ದಕ್ಕುವ ಫಲಿತಾಂಶ ನಿಜ ಎನ್ನಲು ಏನು ಪ್ರಮಾಣ ಎಂದು ಈ ನೆಲದ ‘ಸಾಮಾನ್ಯ ವಿವೇಕ’ ಚುನಾವಣಾ ಆಯೋಗವನ್ನು ಕೇಳಿದರೆ, ‘ನಿಮಗೆ ಗೊತ್ತಿಲ್ಲದಿದ್ದರೆ ಸುಮ್ಮನಿರಿ, ಇಲ್ಲವೇ ನಿಮ್ಮ ಸಂಶಯವನ್ನು ಕಾರಣದೊಡನೆ ಸಮರ್ಥಿಸಿ’ ಎಂದು ಹೇಳಲಾಗದು. ಏಕೆಂದರೆ ಪ್ರಶ್ನಿಸುತ್ತಿರುವುದು ಈ ನೆಲದ ಸಾಮಾನ್ಯ ವಿವೇಕ. ಇದು ಅಜ್ಞಾನದ ಪ್ರಶ್ನೆಯಲ್ಲ, ಸಮಾನ ಜ್ಞಾನದ ಪ್ರಶ್ನೆ. ಈ ಸಾಮಾನ್ಯ ವಿವೇಕಕ್ಕೆ ಉತ್ತರವನ್ನು ಕೊಟ್ಟು ಒಪ್ಪಿಸಬೇಕಾದ ಜವಾಬ್ದಾರಿ ಆಯೋಗಕ್ಕಿದೆ; ಇರಲೇಬೇಕು.

ಈ ನೆಲದ ನ್ಯಾಯದ ನಿಯಮಗಳು ಇಲ್ಲಿನ ಕಾಲದೇಶಗಳ ವ್ಯಾಖ್ಯಾನಕ್ಕೊಳಪಟ್ಟ ವಿವೇಕಕ್ಕೆ ಅನುಗುಣವಾಗಿರಬೇಕಾಗುತ್ತದೆ. ಪುಸ್ತಕಗಳಲ್ಲಿರುವ ಕಾನೂನುಗಳೇ ನ್ಯಾಯ ಎಂದಿದ್ದರೆ, ನ್ಯಾಯಾಲಯಗಳೇ ಬೇಕಿರಲಿಲ್ಲ. ಕಂಪ್ಯೂಟರ್‌ಗಳೇ ತೀರ್ಪುಗಳನ್ನು ಕೊಡಬಹುದಿತ್ತು. ಇದಿರಿನ ಯಾವುದಾದರೊಂದು ಸಂಗತಿಯು ನಿಜವೇ? ಎಂದು ಪರಿಶೀಲಿಸಲು ಸಾಮಾನ್ಯವಾಗಿ ಮೂರು ಪ್ರಮಾಣಗಳನ್ನು ನಮ್ಮ ಪರಂಪರೆ ಬಳಸಿದೆ. ಅವುಗಳೆಂದರೆ: ಪ್ರತ್ಯಕ್ಷ, ಅನುಮಾನ ಅಥವಾ ತರ್ಕ ಮತ್ತು ಮೂರನೆಯದು, ಶಬ್ದ ಅಥವಾ ದಾಖಲೆಯ ಪ್ರಮಾಣ. ಕಣ್ಣಿಂದ ಕಂಡದ್ದು, ಕಿವಿಯಿಂದ ಕೇಳಿದ್ದು ಇತ್ಯಾದಿ ಇಂದ್ರಿಯಗಳ ಮೂಲಕ ಗೋಚರವಾದದ್ದನ್ನು ಪ್ರತ್ಯಕ್ಷ ಪ್ರಮಾಣವೆಂತಲೂ, ಅನುಮಾನಿಸಿ ಅಥವಾ ತರ್ಕದ ಮೂಲಕ ಸಾಬೀತಾಗುವುದನ್ನು ಅನುಮಾನ ಪ್ರಮಾಣವೆಂತಲೂ, ಇಂತಹ ಪುಸ್ತಕದಲ್ಲಿ ಇರುವುದರಿಂದ ಅದು ಸತ್ಯ ಎನ್ನುವುದನ್ನು ಶಬ್ದ ಪ್ರಮಾಣವೆಂತಲೂ ನಿಶ್ಚಯಿಸುತ್ತಾರೆ.

ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ನಾವು ವ್ಯಕ್ತಪಡಿಸುವ ಅಭಿಪ್ರಾಯವು ಅನುಮಾನ ಅಥವಾ ತರ್ಕ ಪ್ರಮಾಣಕ್ಕೆ ಸಂಬಂಧಿಸಿದ ಸತ್ಯ. ‘ಈ ಗುಂಡಿಯನ್ನು ಒತ್ತಿರುವುದರಿಂದ ನನ್ನ ಓಟು ಇಂತಹ ವ್ಯಕ್ತಿಗೆ ಸಂದಾಯವಾಗಿದೆ’ ಎಂಬುದನ್ನು ತರ್ಕದ ಮೂಲಕ ಸಾಬೀತುಪಡಿಸುವ ಕ್ರಮ. ನಮ್ಮ ಅಭಿಪ್ರಾಯ ಮೂರ್ತರೂಪಕ್ಕೆ ಬರದೆ ಅಮೂರ್ತ ರೂಪದಲ್ಲಿ ದಾಖಲಾಗಿ ತರ್ಕಪ್ರಮಾಣದ ಮೂಲಕ ಸಾಬೀತಾಗುವಂಥದ್ದು.

ಮೇಲಿನವುಗಳಲ್ಲಿ ಯಾವುದಾದರೂ ಒಂದರ ಮೂಲಕ ಸತ್ಯ ಸಾಬೀತಾದರೆ ಸಾಕಲ್ಲವೇ? ಎನ್ನುವುದು ಚುನಾವಣಾ ಆಯೋಗದ ಸಮರ್ಥನೆ. ನಮ್ಮ ಪರಂಪರೆಯಲ್ಲಿ ಕೆಲವು ದರ್ಶನಗಳು ಎಲ್ಲ ಪ್ರಮಾಣಗಳನ್ನೂ ಒಪ್ಪಿದರೆ ಇನ್ನು ಕೆಲವು ಮೂರೂ ಪ್ರಮಾಣಗಳ ಮೂಲಕ ಸಾಬೀತಾದರೂ ನಿಜವೆನ್ನಲಾಗದು ಎನ್ನುತ್ತವೆ. ಡಾಂಬರು ರಸ್ತೆಯ ಮೇಲೆ ಉರಿಬಿಸಿಲಲ್ಲಿ ನೀರನ್ನು ಕಂಡರೆ ನಿಜವೆಂದು ನಂಬಲಾದೀತೆ? ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುತ್ತದೆ ಈ ನೆಲದ ವಿವೇಕ. ಇನ್ನು ಪ್ರತ್ಯಕ್ಷ ಕಾಣದಿರುವುದರ ಬಗೆಗೆ ಏನೆಂದು ಹೇಳಲಿ?

ಅನ್ಯಾಯ ಮಾಡದಿರುವುದು ಮತ್ತು ಅನ್ಯಾಯ ಮಾಡುತ್ತಿಲ್ಲ ಎಂಬುದನ್ನು ವ್ಯಕ್ತ ರೂಪದಲ್ಲಿ ಪ್ರದರ್ಶಿಸುವುದು ಎರಡನ್ನೂ ನ್ಯಾಯ ಪಾಲನಾ ಸಂಸ್ಥೆಗಳು ನಿರ್ವಹಿಸಬೇಕಾಗಿದೆ. ಚುನಾವಣಾ ಆಯೋಗ ತಾನು ಅನ್ಯಾಯ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರೆ ಸಾಲದು. ಅದರ ವರ್ತನೆ ಈ ನಾಡಿನ ಸಾಮಾನ್ಯ ವಿವೇಕಕ್ಕೆ ನಿಜ ಎನ್ನಿಸುವಂತಿರಬೇಕು. ತಂತ್ರಜ್ಞಾನ ಕ್ಷಣ ಕ್ಷಣಕ್ಕೆ ಅತ್ಯಂತ ಸಂಕೀರ್ಣವಾಗುತ್ತಿರುವ ಈ ಸಂದರ್ಭದಲ್ಲಿ, ಅಂತಹ ತಂತ್ರಜ್ಞಾನ-ನೈಪುಣ್ಯದ ತುತ್ತ ತುದಿಯಲ್ಲಿರುವ ಸಂಸ್ಥೆಗಳ ಮಾಹಿತಿಯೇ ಹ್ಯಾಕರ್‌ಗಳ ಪಾಲಾಗುತ್ತಿರುವುದನ್ನು ನಾವು ‘ಪ್ರತ್ಯಕ್ಷವಾಗಿ’ ಕಾಣುತ್ತಿದ್ದೇವೆ. ಪ್ರತ್ಯಕ್ಷಪ್ರಮಾಣದ ಸ್ಥಿತಿಯೇ ಹೀಗಿರಬೇಕಾದರೆ ಇನ್ನು ತರ್ಕ ಅಥವಾ ಅನುಮಾನ ಪ್ರಮಾಣವನ್ನು ನಂಬಿ ಎಂದು ಒತ್ತಾಯಿಸುವುದು ಸರಿಯೆ?

ಈ ಬಿಕ್ಕಟ್ಟನ್ನು ನ್ಯಾಯಶಾಸ್ತ್ರವಿಶಾರದರೂ, ಈ ನೆಲದ ನ್ಯಾಯಾಲಯಗಳೂ ಪರಿಶೀಲಿಸಿ ತೀರ್ಮಾನಿಸಬೇಕೆ ಹೊರತು ಚುನಾವಣಾ ಆಯೋಗದ ಸವಾಲುಗಳ ಮೂಲಕ ಇದರ ನ್ಯಾಯಾನ್ಯಾಯವನ್ನು ತೀರ್ಮಾನಿಸಲಾಗದು.

ಎಸ್. ನಟರಾಜ ಬೂದಾಳು, ತುಮಕೂರು

***

ಗೆಲ್ಲಲಾಗದವನು...

‘ಕೈಲಾಗದವನು ಮೈ ಪರಚಿಕೊಂಡ, ಕುಣಿಯಲಾರದವಗೆ ನೆಲ ಡೊಂಕು...’ ಎಂಬ ಗಾದೆ ಮಾತುಗಳಿವೆ. ಅದಕ್ಕೆ ಈಗ ಹೊಸ ಚುನಾವಣಾ ಗಾದೆ ‘ಗೆಲ್ಲಲಾರದವ ಇ.ವಿ.ಎಂ. ದೂರಿದ’ ಎಂಬುದೂ ಸೇರುತ್ತಿದೆ.

‘ಜನಸೇವಕರು’ ಎಂದು ಹೇಳಿಕೊಳ್ಳುವ, ಸರ್ಕಾರದ ಭಾಗವಾಗಿರುವವರು ಒಂದು ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ. ಇವರು ಹೀಗೆ ದೂರುವುದರಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲವವರು ಅವರ ರಾಜಕೀಯ ವಿರೋಧಿಗಳಷ್ಟೇ ಅಲ್ಲ, ಚುನಾವಣಾ ಆಯೋಗ, ಚುನಾವಣೆಯನ್ನು ನಡೆಸುವ ಜವಾಬ್ದಾರಿ ಇರುವ ಜಿಲ್ಲಾಧಿಕಾರಿಗಳು, ತಾಲ್ಲೂಕಿನ ದಂಡಾಧಿಕಾರಿಗಳು, ಪೊಲೀಸ್‌ ವಿಭಾಗ, ಮತಗಟ್ಟೆ ಅಧಿಕಾರಿಗಳು ಹಾಗೂ ಆ ಸಿಬ್ಬಂದಿ, ಆ ಮತಗಟ್ಟೆಯಲ್ಲಿ ಕೂತಿರುವ ಆಯಾ ಪಕ್ಷದ ಚುನಾವಣಾ ಏಜೆಂಟ್... ಹೀಗೆ ಎಲ್ಲರೂ.

ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುವುದಕ್ಕೆ ಮುಂಚೆ ಹಲವು ಹಂತಗಳಲ್ಲಿ ಎಲ್ಲರೆದುರೇ ಮತಯಂತ್ರಗಳಲ್ಲಿ ಅಣಕು ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ.  ಚುನಾವಣೆ ಮುಗಿದ ಮೇಲೆ ಇ.ವಿ.ಎಂ. ಗಳನ್ನು ಭದ್ರತಾ ಕೊಠಡಿಗಳಲ್ಲಿ ಸೀಲ್‌ ಮಾಡಿ ಇಡಲಾಗುತ್ತದೆ. ಆಗಲೂ ಅವುಗಳನ್ನು ತಿರುಚಲು ಸಾಧ್ಯವಿರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅನುಭವ ಹೊಂದಿರುವ ಪ್ರತಿಯೊಬ್ಬರಿಗೂ ಈ ಸತ್ಯ ಗೊತ್ತಿರುತ್ತದೆ. ರಾಜಕಾರಣಿಗಳು ತಮ್ಮ ಸೋಲಿಗೆ ಇನ್ಯಾರನ್ನೋ ದೂಷಿಸುವುದನ್ನು ಬಿಟ್ಟು, ಸ್ವ–ವಿಮರ್ಶೆ ಮಾಡಿಕೊಳ್ಳುವುದು ಅಗತ್ಯ. ಸೋತವರು, ಗೆದ್ದವರನ್ನು ಟೀಕಿಸುತ್ತ, ‘ಹಣ ಬಲದಿಂದ ಚುನಾವಣೆ ಗೆದ್ದರು’ ಎಂದು ಆರೋಪಿಸುವುದೂ ಮತದಾರರಿಗೆ ಮಾಡುವ ಅವಮಾನ. ಇದು ಅಕ್ಷಮ್ಯ ಅಪರಾಧ. ಇಂಥ ಹೇಳಿಕೆಗಳಿಂದ ನಮ್ಮ ಇಡೀ ವ್ಯವಸ್ಥೆಯೇ ಅನುಮಾನಾಸ್ಪದವಾಗಿದೆ ಎಂಬ ಭಾವನೆ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಮಂಜುನಾಥ ಸು. ಮ., ಚಿಂತಾಮಣಿ

***

ಮತಪತ್ರ ಸುರಕ್ಷಿತವೇ?

ರಾಜಕಾರಣಿಗಳು ಗೆದ್ದಾಗ ಎಲೆಕ್ಟ್ರಾನಿಕ್ ಮತಯಂತ್ರದ ಮೇಲೆ ನಂಬಿಕೆ ಇಟ್ಟುಕೊಳ್ಳುತ್ತಾರೆ. ಸೋತಾಗ, ಅದರ ಮೇಲೆ ಅನುಮಾನ ಆರಂಭವಾಗುತ್ತದೆ.

ಇ.ವಿ.ಎಂ.ಗಳ ಮಾತಿರಲಿ, ಮತಪತ್ರ ಬಳಸುವುದು ನೂರಕ್ಕೆ ನೂರು ಪಾರದರ್ಶಕವೇ? ಹಾಗಿದ್ದರೆ ಹಿಂದೆ ಅನೇಕ ಕಡೆಗಳಲ್ಲಿ ನೂರಕ್ಕೆ ನೂರರಷ್ಟು ಮತಗಳು ಹೇಗೆ ಚಲಾವಣೆ ಆಗುತ್ತಿದ್ದವು? ಮುಖಂಡರು ಮತಗಟ್ಟೆ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಕೊನೆಯ ಗಳಿಗೆಯಲ್ಲಿ ಉಳಿದ ಮತ ಪತ್ರಗಳಿಗೆ ಮುದ್ರೆ ಒತ್ತಿ ಹಾಕುತ್ತಿದ್ದರು ಎಂಬ ಆರೋಪಗಳೂ ಇದ್ದವಲ್ಲವೇ? ಹೀಗಿರುವಾಗ ಮತಪತ್ರಗಳ ಬಳಕೆ ಹೇಗೆ ಸುರಕ್ಷಿತವೆನಿಸೀತು?

ಸಿ. ಸಿದ್ದರಾಜು ಆಲಕೆರೆ, ಮಂಡ್ಯ

Comments
ಈ ವಿಭಾಗದಿಂದ ಇನ್ನಷ್ಟು

ಸಂಗತ
ಸಿರಿಧಾನ್ಯದ ಮೋಡಿ ಮತ್ತು ‘ಕೊಯ್ಲು’

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ನಡೆಯುವ ‘ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳ’ ದಿಂದ ನಮ್ಮ ನಾಡಿನ ರೈತರಿಗೆ ಎಷ್ಟರಮಟ್ಟಿಗೆ ಪ್ರಯೋಜನ ಸಿಕ್ಕೀತು?

19 Jan, 2018

ಸಂಗತ
ನೆಲೆ ಕಳೆದುಕೊಳ್ಳುತ್ತಿರುವ ಕರಾವಳಿ

ನಾಡಿನ ಕರಾವಳಿಯ ಸಾಮಾಜಿಕ ಪರಿಸ್ಥಿತಿ ಇಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಪ್ರದೇಶದ ಭವಿಷ್ಯದ ಚಿಂತನೆಯು ಸಮಗ್ರವಾಗಬೇಕಾದರೆ, ಈ ಪರಿಸರಸೂಕ್ಷ್ಮ ಪ್ರದೇಶದ ನೆಲ-ಜಲ ಪರಿಸ್ಥಿಯನ್ನೂ ಗಂಭೀರವಾಗಿ...

18 Jan, 2018

ಸಂಗತ
ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

ಸಿನಿಮಾ ಎಂಬುದು ಇಪ್ಪತ್ತನೇ ಶತಮಾನದಲ್ಲಿ ತಂತ್ರಜ್ಞಾನ, ದೃಶ್ಯ-ಶಬ್ದ ಕಲೆಗಾರಿಕೆಯ ಹೆಣಿಗೆಯಲ್ಲಿ ಕಲಾಭಿವ್ಯಕ್ತಿಯಾಗಿಯೂ, ರಂಜನೆಯ ಮಾಧ್ಯಮವಾಗಿಯೂ ರೂಪ ಪಡೆಯಿತು. ಬೇರೆಲ್ಲಾ ಕಲಾಭಿವ್ಯಕ್ತಿ ಹಾಗೂ ರಂಜನೋದ್ಯಮಗಳಿಗಿಂತ ಹೆಚ್ಚು...

17 Jan, 2018
ತಿಳಿವಳಿಕೆ ಕೊರತೆ ಮತ್ತು ಪರಿಣಾಮ

ಚರ್ಚೆ
ತಿಳಿವಳಿಕೆ ಕೊರತೆ ಮತ್ತು ಪರಿಣಾಮ

16 Jan, 2018

ಚರ್ಚೆ
ನಾವು ಮತ್ತು ನಮ್ಮ ದೇಶ

ಹಿಂದೂ ಧರ್ಮ ಇತ್ತೀಚಿನದು ಎನ್ನುವುದಾದರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಇಲ್ಲಿ ಬದುಕಿದ ಜನರಿಗೆ ಯಾವ ಧರ್ಮವೂ ಇರಲೇ ಇಲ್ಲವೇ? ವೇದ ಕಾಲದಲ್ಲಿ ಯಾವ...

15 Jan, 2018