ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಮುಚುಮು ಚಳಿಗೆ ಗಡಗಡ

ಸಂಜೆಯಿಂದ ಬೀಸುವ ತಂಗಾಳಿ, ಮಂಜು ಮುಸುಕಿದ ವಾತಾವರಣ
Last Updated 28 ಡಿಸೆಂಬರ್ 2017, 7:11 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಚಳಿಯ ಅನುಭವ ಭರ್ಜರಿಯಾಗಿದೆ. ಚಳಿಗಾಲದ ನಿರೀಕ್ಷೆಯಲ್ಲಿದ್ದ ಜನರಿಗೆ ಒಳ್ಳೆಯ ಅನುಭವವಾಗುತ್ತಿದೆ. ಕೆಲವು ದಿನಗಳಿಂದ ಬೆಳಿಗ್ಗೆ ಹಾಗೂ ಸಂಜೆ ಮಂಜು ಬೀಳುತ್ತಿದೆ. ಅದರ ಪರಿಣಾಮ ಚಳಿಯೂ ಹೆಚ್ಚಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ‘ಚುಮು ಚುಮು’ ಚಳಿಗೆ ಜನರು ‘ಗಡಗಡ’ ನಡುಗುವಂತಾಗಿದೆ.

ಡಿಸೆಂಬರ್‌ನಲ್ಲಿ ಚಳಿ ಸಹಜ. ಆದರೆ ಇತ್ತೀಚೆಗೆ ಚಂಡಮಾರುತ, ಅದಕ್ಕೂ ಮೊದಲು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ, ಅಧಿಕ ಮಳೆಯು ಚಳಿ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಆದರೆ ಇವೇ ಕಾರಣಗಳಿಂದ ಚಳಿ ವಾತಾವರಣಕ್ಕೆ ಎರಡು ವಾರ ವಿಳಂಬವಾಯಿತು.

ಇದಲ್ಲದೆ ಓಖಿ ಚಂಡ ಮಾರುತದಿಂದ ಕೆಲ ದಿನ ಮೋಡ ಕವಿದ ವಾತಾವರಣ ಇತ್ತು. ಮೋಡ ದಟ್ಟೈಸಿದರೆ ತಾಪಮಾನ ಕಡಿಮೆಯಾದರೂ ಚಳಿ ಇರಲ್ಲ. ಈಗಷ್ಟೇ ವಾತಾವರಣ ಶುಭ್ರವಾಗಿ ಚಳಿ ಹೆಚ್ಚುವಂತಾಗಿದೆ. ತಾಪಮಾನ ಮಧ್ಯಾಹ್ನ 27ರಿಂದ 28 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಮಧ್ಯರಾತ್ರಿಯಿಂದ ಒಮ್ಮೆಲೆ 12ರಿಂದ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತಿದೆ. ಈಗಷ್ಟೇ ಆರಂಭವಾಗಿದೆ. ಚಳಿ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸಿಬ್ಬಂದಿ ತಿಳಿಸುವರು.

‘ಅಬ್ಬಾ ಚಳಿ’ ಎಂದು ಉದ್ಗಾರ ತೆಗೆಯುವವರೆ ಕೆಲವರಾದರೆ, ‘ಚಳಿ ಚಳಿ ಓ ಚಳಿಯಾ’, ‘ಚಳಿ ಚಳಿ ತಾಳೆನು ಈ ಚಳಿಯ’.. ಎಂದು ಸಿನಿಮಾ ಹಾಡನ್ನು ಗುನುಗುತ್ತಾ ವಾಯುವಿಹಾರಕ್ಕೆ ಹೊರಡುವವರೂ ಇದ್ದಾರೆ. ಸ್ವೇಟರ್‌, ಟೋಪಿ, ಕೈಗವಸು, ಶಾಲು, ಜರ್ಕಿನ್‌ ಧರಿಸಿಯೇ ಮನೆಯಿಂದ ಹೊರ ಬೀಳುವುದು ಸಾಮಾನ್ಯವಾಗಿದೆ. ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣ, ಬೆಂಗಳೂರು ರಸ್ತೆ, ಕೋಲಾರ ರಸ್ತೆ ವಾಯು ವಿಹಾರಿಗಳಿಂದ ತುಂಬಿರುತ್ತಿತ್ತು. ಆದರೆ ಚಳಿಯಿಂದ ಇಲ್ಲಿ ಬೆಳಿಗ್ಗೆ ಓಡಾಡುವವರೂ ಕಡಿಮೆಯಾಗಿದ್ದಾರೆ.

ಬೀದಿ ದೀಪಗಳ ನಡುವೆಯೇ ಹಿಮಗವಿದಂತೆ ಕಾಣುತ್ತದೆ. ಈ ಮನಮೋಹಕ ದೃಶ್ಯ ನೋಡುವುದೇ ಒಂದು ರೀತಿಯ ಖುಷಿ. ಬೆಳಗಿನ ಜಾವ 3ರ ಹೊತ್ತಿಗೆ ಆರಂಭವಾಗುವ ಮಂಜು ಬೆಳಿಗ್ಗೆ 8.30ರ ವರೆಗೆ ಸೋನೆ ಮಳೆಯಂತೆ ಸುರಿಯುತ್ತಿರುತ್ತದೆ. ರಸ್ತೆಗಳಲ್ಲಿ ವಾಹನಗಳು, ಓಡಾಡುವ ಜನರು ಮಸಕು ಮಸುಕಾಗಿ ಕಾಣಿಸುವರು.

***

ನಿತ್ಯ ಬೆಳಿಗ್ಗೆ 5.30ಕ್ಕೆ ಪ್ರತಿನಿತ್ಯ ವಾಕಿಂಗ್‌ ಹೋಗುತ್ತೇನೆ. ಚಳಿಯಿಂದಾಗಿ ವಾರದಿಂದ ವಿಹಾರಕ್ಕೆ ಬರುವ ಜನ ಕಡಿಮೆಯಾಗಿದ್ದಾರೆ. ತಣ್ಣನೆಯ ಗಾಳಿ ಬೀಸುವುದು, ಮಂಜು ಬೀಳುವುದು ಇದಕ್ಕೆ ಕಾರಣ

-ಕೃಷ್ಣಾರೆಡ್ಡಿ, ವಾಯುವಿಹಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT