ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವನಿ ಎತ್ತದಿದ್ದಲ್ಲಿ ಭಾಷೆ ಸತ್ತೀತು, ಗುಂಡು ಸಿಡಿದೀತು

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಧಾರವಾಡ: ಬಂದೂಕಿನಿಂದ ಗುಂಡುಗಳು ಸಿಡಿಯುವ ಸಂದರ್ಭದಲ್ಲಿ ಅಥವಾ ಕಾನೂನಿನ ದಬ್ಬಾಳಿಕೆಯ ಸಂದರ್ಭದಲ್ಲಿ ಅದನ್ನು ಪ್ರತಿಭಟಿಸುವುದು ಲೇಖಕನ ಹಾಗೂ ಆಯಾ ನೆಲದ ಭಾಷೆಯನ್ನು ಮಾತನಾಡುವ ವ್ಯಕ್ತಿಯ ಕರ್ತವ್ಯ ಎಂದು ಭಾಷಾತಜ್ಞ ಡಾ. ಗಣೇಶ ಎನ್‌. ದೇವಿ ಅಭಿಪ್ರಾಯಪಟ್ಟರು.

’ಸಾಹಿತ್ಯ ಸಂಭ್ರಮ’ದ ಮೂರನೇ ದಿನ ವಿಶೇಷ ಉಪನ್ಯಾಸ ನೀಡಿದ ಅವರು, ’ಸೂಕ್ತ ಸಮಯದಲ್ಲಿ ನಾವು ಧ್ವನಿಯೆತ್ತದಿದ್ದಲ್ಲಿ ನಮ್ಮ ಭಾಷೆ ಮಾತ್ರ ನಶಿಸುವುದಿಲ್ಲ. ನಮ್ಮ ಮೌನದಿಂದ ಧಾರವಾಡದಲ್ಲಿ ಗುಂಡುಗಳು ಹಾರಿದಂತೆ ಬೇರೆಡೆಯೂ ಹಾರಬಹುದು. ಟಿ.ವಿ.ಗಳಲ್ಲಿನ ಚರ್ಚೆಯಲ್ಲಿ ಬೈಗುಳಗಳ ಮಳೆ ಸುರಿಯಬಹುದು. ಇತರ ರಾಜ್ಯಗಳಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಂತೆ ನಮ್ಮಲ್ಲೂ ಆಗಬಹುದು. ಚಲನಚಿತ್ರಗಳಿಗೆ ನಿರ್ಬಂಧ ವಿಧಿಸಬಹುದು’ ಎಂದು ಎಚ್ಚರಿಸಿದರು.

ವಾಚಾಹೀನತೆ (Aphasia) ವಿರುದ್ಧ ನಮ್ಮ ಬರಹಗಾರರು ದನಿ ಎತ್ತಬೇಕಿದೆ. ಧ್ವನಿಯನ್ನು ದಮನಗೊಳಿಸುವವರ ವಿರುದ್ಧ ನಮ್ಮೆಲ್ಲ ಶಕ್ತಿ  ಬಳಸಿ ಪ್ರತಿಭಟಿಸಬೇಕಾಗಿದೆ. ಹೀಗಾದಲ್ಲಿ ಮಾತ್ರ ಭಾಷೆ ಉಳಿಯಲಿದೆ ಹಾಗೂ ವಾಚಾಹೀನತೆಯಿಂದ ಜಗತ್ತನ್ನು ಮುಕ್ತಗೊಳಿಸಬಹುದು. ಅಗತ್ಯವಿದ್ದಾಗ ಮಾತನಾಡದೆ ಹೋದರೆ ಆ ಭಾಷೆ ಪತನದ ಕಡೆಗೆ ಸಾಗುತ್ತದೆ. ಈ ವಾಚಾಹೀನತೆಯಿಂದಲೇ ಕೋಟ್ಯಂತರ ಜನರು ಮಾತನಾಡುತ್ತಿದ್ದ ಅಂಡಮಾನ್‌ನ ‘ಬೋವಾ’ ಭಾಷೆ ಸಂಪೂರ್ಣವಾಗಿ ನಶಿಸಿ ಹೋಯಿತು ಎಂದು ಹೇಳಿದರು.

ಭಯಗ್ರಸ್ತ ಶಬ್ದಗಳು

‘ಶಬ್ದಗಳು ಭಯಗ್ರಸ್ತಗೊಂಡಿವೆ’ ಎನ್ನುವ ಶೇಕ್ಸ್‌ಪಿಯರ್‌ನ ಮಾತನ್ನು ಉದ್ಗರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೂ ಭಾಷೆಯ ಸುರಕ್ಷತೆಗೂ ಇರುವ ಸಂಬಂಧವನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಭಾರತ ಮಾತ್ರವಲ್ಲದೆ ವಿಶ್ವದ ವಿವಿಧ ಭಾಗಗಳಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ. ಪ್ರಜಾಪ್ರಭುತ್ವ ಎಂಬುದು ಒಂದು ವಾಕ್ಯ ಎಂದುಕೊಂಡರೆ, ಅದರೊಳಗಿನ ಶಬ್ದಗಳಾದ ನ್ಯಾಯಾಂಗ, ಚುನಾವಣಾ ಆಯೋಗ, ಯುಜಿಸಿ, ಪಠ್ಯ, ವಿಶ್ವವಿದ್ಯಾಲಯ – ಹೀಗೆ ಪ್ರಮುಖ ಸಂಸ್ಥೆಗಳೇ ನೈತಿಕವಾಗಿ ಅಧಃಪತನಗೊಂಡಿವೆ. ಇದೆಲ್ಲದರ ಪರಿಣಾಮ ಭಾಷೆಗಳ ಮೇಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಚಾಹೀನತೆ ಪ್ರಜಾಪ್ರಭುತ್ವ ಕಟ್ಟಿದ ಜನರ ಧ್ವನಿಯನ್ನೇ ಕಸಿದುಕೊಂಡಿದೆ. ಜಗತ್ತಿನ ಎಲ್ಲ ದೇಶಗಳಿಗೆ ಆದೇಶ ಮಾಡುವ ಸಾಮರ್ಥ್ಯವಿದ್ದ ವಿಶ್ವಸಂಸ್ಥೆ, ಬಂಡವಾಳಶಾಹಿಗಳ ಪ್ರಭಾವಕ್ಕೆ ಮಂಕಾಗಿ ತನ್ನ ದನಿ ಕಳೆದುಕೊಂಡಿದೆ. ರಾಜಕೀಯ ಮಾತ್ರವಲ್ಲ, ತಂತ್ರಜ್ಞಾನ–ಭಾಷೆ ಸೇರಿದಂತೆ ಎಲ್ಲೆಡೆ ವಾಚಾಹೀನತೆಯನ್ನು ಹೇರಲಾಗುತ್ತಿದೆ. ಹೀಗೆ ಧ್ವನಿ ಅಡಗಿಸಿದರೆ ಭಾಷೆ ನಶಿಸುತ್ತದೆ. ಭಾಷೆಯೇ ಇಲ್ಲದಿದ್ದರೆ ಮನುಷ್ಯನ ಸ್ಥಿತಿ ಊಹೆಗೂ ನಿಲುಕದು ಎಂದು ಆತಂಕ ವ್ಯಕ್ತಪಡಿಸಿದರು.

‘ಶಬ್ದದೊಳಗಿನ ನಿಶ್ಶಬ್ದದಿಂದ ಶಬ್ದ ಹುಟ್ಟಿಕೊಳ್ಳುತ್ತದೆ. ನಮಗೆ ಶಬ್ದವೂ ಬೇಕು, ನಿಶ್ಶಬ್ದವೂ ಬೇಕು. ಇಡೀ ಜಗತ್ತಿನ ಜನರನ್ನು ಗ್ರಾಹಕರು ಎಂದು ಪರಿಗಣಿಸುವ ಬಂಡವಾಳಶಾಹಿ ಸಂಸ್ಥೆಗಳು ಏಕರೂಪದ ಸಂಸ್ಕೃತಿಯನ್ನು ಬಯಸುತ್ತವೆ. ಅವುಗಳ ಕಪಿಮುಷ್ಠಿಗೆ ಸಿಲುಕಿರುವ ಪ್ರಭುತ್ವಗಳು ಕೂಡ ನಮ್ಮ ಧ್ವನಿ ಅಡಗಿಸುವ ಪ್ರಯತ್ನದಲ್ಲಿ ಸಾಗಿವೆ. ಇದರಿಂದಾಗಿ ಭಾಷಾ ಬಹುತ್ವಕ್ಕೆ ಧಕ್ಕೆಯುಂಟಾಗುತ್ತಿದೆ’ ಎಂದರು.

ನಾಯಿಗಳಿಗೂ ಶಬ್ದಗಳ ಬರ

’ಯಾವುದೋ ರಸ್ತೆಯಲ್ಲಿರುವ ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವ ಜನ ನಾವಲ್ಲ’ ಎನ್ನುವ ಕೇಂದ್ರಸಚಿವ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಪರೋಕ್ಷವಾಗಿ ಟೀಕಿಸಿದ ಅವರು, ’ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಾಯಕರೊಬ್ಬರು ಹೇಳುತ್ತಾರೆ. ದುರಂತವೆಂದರೆ 600 ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ ನಾಯಿಗಳು ಪ್ರಸ್ತುತ 180 ಪದಗಳನ್ನಷ್ಟೇ ಅರ್ಥ ಮಾಡಿಕೊಳ್ಳುತ್ತಿವೆ. ನಾಯಿಯ ಹೋಲಿಕೆ ಕೂಡ ಧ್ವನಿ ಅಗಡಿಸುವ ಪ್ರಯತ್ನದ ಭಾಗವೇ ಆಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಾಂಸ್ಕೃತಿಕ ನೆನಪುಗಳನ್ನು ಸ್ಮೃತಿಯಲ್ಲಿ ಉಳಿಸಿಕೊಳ್ಳಲು ಆರಂಭಿಸಿ 30 ಸಾವಿರ ವರ್ಷಗಳಾಗಿವೆ. ಸ್ಮೃತಿಯಲ್ಲಿ ನೆನಪುಗಳು ಉಳಿಯುವುದನ್ನೂ ಬೇಡವೆನ್ನುವ ಇಂದಿನ ಜನಾಂಗ, ಸ್ಮೃತಿಕೋಶವನ್ನೇ ಒಂದು ವಸ್ತುವನ್ನಾಗಿಸಿ ಅದನ್ನು ಆಗಾಗ ತೊಳೆಯ ಬಯಸುತ್ತಿರುವುದು ಅಪಾಯದ ಸಂಕೇತ’ ಎಂದರು.

ಡಿಜಿಟಲ್ ಸಂಬಂಧಗಳು

‘ಸಂಪರ್ಕ ಜಾಲ ಬಂದ ನಂತರ ಮನುಷ್ಯರ ನಡುವಿನ ಸಂವಹನವೇ ನಿಂತುಹೋಗಿದೆ. ಆಧುನಿಕತೆಗೆ ಹೊರಳುತ್ತಿದ್ದಂತೆ ಮನುಷ್ಯ ಡಿಜಿಟಲ್ ಸ್ವರೂಪಿಯಾಗುತ್ತಿದ್ದಾನೆ. ಆತನ ಸಂವಹನ ಅವನಂತೆಯೇ ಇರುವ ಮತ್ತೊಬ್ಬ ಡಿಜಿಟಲ್ ವ್ಯಕ್ತಿಯೊಂದಿಗೆ ಮಾತ್ರ ಸಾಧ್ಯವಾಗುತ್ತಿದೆಯೇ ಹೊರತು, ಭೌತಿಕ ವ್ಯಕ್ತಿಯೊಂದಿಗೆ ಸಾಧ್ಯವಾಗುತ್ತಿಲ್ಲ. ಮಹಾನಗರಗಳಲ್ಲಿ ಅಕ್ಕಪಕ್ಕ ನಿಂತ ಇಬ್ಬರು ಸ್ನೇಹಿತರು ಪರಸ್ಪರ ಸಂವಹನ ನಡೆಸಲು ತಮ್ಮ ಮೊಬೈಲ್‌ಗಳನ್ನು ಬಳಸುತ್ತಿರುವುದು ಇಂದಿನ ವಿಪರ್ಯಾಸ’ ಎಂದರು.

ರೈಲು ಪ್ರಯಣದಲ್ಲಿ ಈ ಮುನ್ನ ಪ್ರಯಾಣಿಕರ ನಡುವೆ ಸಾಧ್ಯವಾಗುತ್ತಿದ್ದ ಮಾತುಕತೆ, ಸ್ನೇಹಸಂಬಂಧ ಈಗ ಕಾಣಿಸುತ್ತಿಲ್ಲ ಎಂದ ದೇವಿ, ತಂತ್ರಜ್ಞಾನದ ಅತಿಯಾದ ಅವಲಂಬನೆ ಕೂಡ ಭಾಷೆಯ ಬೆಳವಣಿಗೆಗೆ ಅಪಾಯ ಎನ್ನುವ ಇಂಗಿತ ವ್ಯಕ್ತಪಡಿಸಿದರು.

ವಿಮರ್ಶಕ ರಾಜೇಂದ್ರ ಚೆನ್ನಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.

ಕನ್ನಡ ನುಡಿಗೆ ಸಾವಿಲ್ಲ, ಇಂಗ್ಲಿಷ್‌ಗೆ ಉಳಿವಿಲ್ಲ

ಧಾರವಾಡ: ಜಾಗತೀಕರಣ ಸಂದರ್ಭಗಳಲ್ಲಿ ಕನ್ನಡದಂಥ ಪ್ರಾದೇಶಿಕ ಭಾಷೆಗಳ ಉಳಿವಿನ ಬಗ್ಗೆ ಆಗಾಗ ಆತಂಕ ವ್ಯಕ್ತಗೊಳ್ಳುತ್ತಲೇ ಇರುತ್ತದೆ. ’ಸಾಹಿತ್ಯ ಸಂಭ್ರಮ’ದಲ್ಲೂ ವ್ಯಕ್ತವಾದ ಈ ಆತಂಕವನ್ನು ಗಣೇಶ ಜಿ. ದೇವಿ ಸ್ಪಷ್ಟವಾಗಿ ತಳ್ಳಿಹಾಕಿದರು.

‘ಆಕ್ರಮಣಶೀಲ ಭಾಷೆಗಳು ಪತನದತ್ತ ವೇಗವಾಗಿ ಸಾಗುತ್ತವೆ. ಆದರೆ, ಸಂವೇದನಾಶೀಲ ಭಾಷೆಗಳಿಗೆ ನಾಶವಾಗುವ ಅಪಾಯ ತೀರಾ ಕಡಿಮೆ. ಹೀಗಾಗಿ ಕನ್ನಡ ಎಂದಿಗೂ ಸಾಯುವುದಿಲ್ಲ’ ಎಂದು ಕನ್ನಡ ನುಡಿಯ ಉಳಿವಿನ ಕುರಿತು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

‘ವಿಶ್ವದ 6000 ಭಾಷೆಗಳಲ್ಲಿ ತಾಳಿಕೆಯ ದೃಷ್ಟಿಯಿಂದ ಕನ್ನಡಕ್ಕೆ 19ನೇ ಸ್ಥಾನವಿದೆ. ಒಂದು ಸಾವಿರ ವರ್ಷಗಳ ಹಿಂದಿನ ಭಾಷೆಗಳಲ್ಲಿ ಇಂದಿಗೂ ಉಳಿದಿರುವ ಮೊದಲ 12 ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಜಗತ್ತಿನ ಅತಿ ಶ್ರೇಷ್ಠ ತಾತ್ವಿಕ ಭಾಷೆಗಳಲ್ಲಿ ಮೊದಲ 7 ಸ್ಥಾನಗಳಲ್ಲಿ ಕನ್ನಡ ಸ್ಥಾನ ಪಡೆದಿದೆ. ಕನ್ನಡ ಆಕ್ರಮಣಶೀಲ ಭಾಷೆ ಅಲ್ಲ. ಇದು ಜನರನ್ನು ವಿಭಜಿಸುವ ಭಾಷೆ ಅಲ್ಲ. ಎಲ್ಲರನ್ನೂ ಒಳಗೊಳ್ಳುವ, ಮನಸ್ಸುಗಳನ್ನು ಬೆಸೆಯುವ ಭಾಷೆಯಾದ ಕನ್ನಡಕ್ಕೆ ನಾಶವಾಗುವ ಆತಂಕವಿಲ್ಲ’ ಎಂದರು.

ಶಿಕ್ಷಣ ಪದ್ಧತಿ ಇಂಗ್ಲಿಷ್‌ ಆಗಿರುವಾಗ ’ಕನ್ನಡದ ಉಳಿವು ಹೇಗೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ.ದೇವಿ, ಆಕ್ರಮಣಶೀಲ ಭಾಷೆಗಳಾಗಿದ್ದ ಲ್ಯಾಟಿನ್ ಹಾಗೂ ಸಂಸ್ಕೃತ ನಶಿಸುವ ಹಂತಕ್ಕೆ ಬಂದಿವೆ. ಸ್ವಂತ ಲಿಪಿಯೇ ಇಲ್ಲದ ಇಂಗ್ಲಿಷ್ ಕೂಡ ಆಕ್ರಮಣಶೀಲ ಭಾಷೆ. ಈಗ ಎಲ್ಲೆಡೆ ಇಂಗ್ಲಿಷ್‌ ಸದ್ದು ಮಾಡುತ್ತಿದೆ. ನಮ್ಮನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಇಂಗ್ಲಿಷ್‌ ಶಾಲೆಗಳಿಗೆ ಹೋಗುತ್ತಿದ್ದಾರೆ. ಹೋಗಲಿ ಬಿಡಿ. ಮುಂದೊಂದು ದಿನ ಇಂಗ್ಲಿಷ್ ಭಾಷೆಯೂ ನಶಿಸಲಿದೆ. ಇದು ನನ್ನ ಸವಾಲು, ಬೇಕಿದ್ದರೆ ಬರೆದಿಟ್ಟುಕೊಳ್ಳಿ. ಕನ್ನಡ ಮತ್ತೆ ಪ್ರವರ್ಧಮಾನಕ್ಕೆ ಬರಲಿದೆ’ ಎಂದು ಖಚಿತ ಧ್ವನಿಯಲ್ಲಿ ಹೇಳಿದರು.

ಸಾಂಸ್ಕೃತಿಕ ಕ್ಷೇತ್ರದ ಹಿರಿಯಗೊಂದಿಗಿನ ಒಡನಾಟದ ಪ್ರಸಂಗಗಳಿಗೆ ಸಭಿಕರ ಸಂಭ್ರಮದ ಸ್ಪಂದನ ಚಿತ್ರ: ಬಿ.ಎಸ್‌. ಕೇದಾರನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT