ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರ ಹತ್ಯೆ

ರಾಜ್ಯಪಾಲರ ಆಡಳಿತ ಜಾರಿಯಾದ ನಂತರ ಮೊದಲ ಕಾರ್ಯಾಚರಣೆ
Last Updated 22 ಜೂನ್ 2018, 20:17 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಗೆ ಸೇರಿದ ನಾಲ್ವರನ್ನು ಕೊಂದು ಹಾಕಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದ ನಂತರ ಉಗ್ರರ ವಿರುದ್ಧ ಪೊಲೀಸರು ನಡೆಸಿದ ಮೊದಲ ಎನ್‌ಕೌಂಟರ್‌ ಇದಾಗಿದೆ.

ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಜೆಕೆ) ಸದಸ್ಯರು ಎಂದು ಗುರುತಿಸಲಾಗಿದೆ ಎಂದು ಡಿಜಿಪಿ ಎಸ್‌.ಪಿ. ವೇದ್‌ ಹೇಳಿದ್ದಾರೆ.

ಹತ್ಯೆಯಾದ ಉಗ್ರರಲ್ಲಿ ಐಎಸ್‌ಜೆಕೆ ಮುಖ್ಯಸ್ಥ ದಾವೂದ್‌ ಅಹಮ್ಮದ್‌ ಸಲಾಫಿ ಅಲಿಯಾಸ್‌ ಬುಹ್ರಾನ್‌ ಸೇರಿದ್ದಾನೆ. ಆತನ ಜತೆಗೆ ಮಜೀದ್‌ ಮಂಜೂರ್‌ ದರ್‌, ಆದಿಲ್‌ ರೆಹಮಾನ್‌ ಬಟ್‌ ಮತ್ತು ಮೊಹಮ್ಮದ್‌ ಅಶ್ರಫ್‌ ಇಟೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.

ಕಲ್ಲು ತೂರಾಟ: ನೌಶೇರಾ ಬಳಿಯಮನೆಯಲ್ಲಿ ಉಗ್ರರು ಅಡಗಿದಮಾಹಿತಿ ಆಧರಿಸಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಬೆಳಗಿನ ಜಾವ ಶ್ರೀಗುಫ್ವಾರಾ ಗ್ರಾಮವನ್ನು ಪ್ರವೇಶಿಸಿದ್ದರು.

ಒಂದು ಕಡೆ ಉಗ್ರರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದರೆ, ಮತ್ತೊಂದೆಡೆ ಕಾರ್ಯಾಚರಣೆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮತ್ತು ಶ್ರೀನಗರ ಹೊರವಲಯದಲ್ಲಿ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದರು.

ಆಗ ನಡೆದ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಉಗ್ರರು ಅಡಗಿಕೊಂಡಿದ್ದ ಮನೆಯ ಮಾಲೀಕ ಸಹ ಗುಂಡಿಗೆ ಬಲಿಯಾಗಿದ್ದಾನೆ.

ಮುಷರಫ್‌ ಹೇಳಿಕೆ ಸಮರ್ಥಿಸಿದ ಸೋಜ್‌

‘ಕಾಶ್ಮೀರಿಗಳ ಮೊದಲ ಆಯ್ಕೆ ಸ್ವಾತಂತ್ರ್ಯ’ ಎಂಬ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ಸೈಫುದ್ದೀನ್‌ ಸೋಜ್‌ ಬೆಂಬಲಿಸಿದ್ದಾರೆ.

‘ಕಣಿವೆ ರಾಜ್ಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರಿಗಿಂತ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

‘ಕಾಂಗ್ರೆಸ್‌ ಮತ್ತು ಭಯೋತ್ಪಾದಕರ ನೀತಿಗಳಲ್ಲಿ ಸಾಮ್ಯತೆ ಇದೆ. ಒಂದು ಪಾಕಿಸ್ತಾನವು ಭಾರತದ ಹೊರಗಿದ್ದರೆ, ಮತ್ತೊಂದು ಕಾಂಗ್ರೆಸ್‌ ಒಳಗಿದೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.

‘ಪುಸ್ತಕ ಮಾರಾಟ ಮಾಡುವ ಗಿಮಿಕ್‌ ಇದಾಗಿದೆ. ಸೋಜ್‌ ನಿಲುವನ್ನು ಒಪ್ಪಲು ಖಂಡಿತ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

* ಸೋಜ್‌ ಪಾಕಿಸ್ತಾನಕ್ಕೆ ಹೋಗಿ ಮುಷರಫ್‌ ಸೇವೆ ಮಾಡಿಕೊಂಡಿರಲಿ. ನಾವು ಪ್ರಯಾಣದ ಟಿಕೆಟ್‌ ನೀಡುತ್ತೇವೆ

–ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿಯ ರಾಜ್ಯಸಭಾ ಸದಸ್ಯ

ಕಾರ್ಯಾಚರಣೆ ಸುತ್ತಮುತ್ತ

* ಅಮರನಾಥ್‌ ಯಾತ್ರೆ ಮಾರ್ಗದ ಬಳಿ ಅಡಗಿ ಕುಳಿತಿದ್ದ ಉಗ್ರರು

* ಕಾರ್ಯಾಚರಣೆ ವೇಳೆ ಶ್ರೀನಗರ ಮತ್ತು ಅನಂತ್‌ನಾಗ್‌ ಜಿಲ್ಲೆಯಲ್ಲಿ ಅಂತರ್ಜಾಲ ಸಂಪರ್ಕ ಕಡಿತ

* ಕಣಿವೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌ಜೆಕೆ) 8–10 ಯುವಕರು ಸಕ್ರಿಯ

* ಜಮ್ಮು ಮತ್ತು ಕಾಶ್ಮೀರ ಪೊಲೀಸ್‌, ಸಿಆರ್‌ಪಿಎಫ್‌ ಮತ್ತು ಸೇನಾ ಸಿಬ್ಬಂದಿ ಸಹಭಾಗಿತ್ವದಲ್ಲಿ ಜಂಟಿ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT