ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಗಳ್ಳಿಗೆ ಜಿಎಸ್ಸೆಸ್‌ ಪ್ರಶಸ್ತಿ ಪ್ರದಾನ

Last Updated 7 ಫೆಬ್ರುವರಿ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್‌ ಅವರಿಗೆ ಡಾ.ಜಿಎಸ್ಸೆಸ್‌ ವಿಶ್ವಸ್ಥ ಮಂಡಲಿಯಿಂದ ಡಾ.ಜಿಎಸ್ಸೆಸ್‌ ಪ್ರಶಸ್ತಿಯನ್ನು ಬುಧವಾರ ಇಲ್ಲಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ‘ಮತೀಯವಾದ, ಮೂಲಭೂತವಾದ ಇಂದು ನಮಗೆ ಪ್ರಬಲ ಶತ್ರುಗಳು. ಧರ್ಮ ಮತ್ತು ಜಾತಿ ಬಹಳ ಸೂಕ್ಷ್ಮ ಸಂಗತಿಗಳು. ಧರ್ಮ ಎನ್ನುವುದು ಶುದ್ಧ ತಾತ್ವಿಕ ಶರೀರವಿದ್ದಂತೆ. ಇದರಲ್ಲಿ ಜಾತಿ ಅರ್ಬುದದಂತೆ ಬೆಳೆದಿದೆ. ಇದನ್ನು ಧರ್ಮದಿಂದ ಬೇರ್ಪಡಿಸದಿದ್ದರೆ ದೇಶದಲ್ಲಿ ಧರ್ಮಕ್ಕೆ ಉಳಿಗಾಲವಿಲ್ಲ’ ಎಂದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ಸಾಮಾಜಿಕ ರೂಢಿಯಲ್ಲಿರುವ ಮಾತುಗಳನ್ನು ಸಾಹಿತ್ಯಿಕ ಒಳನೋಟಕ್ಕೆ ಒಗ್ಗಿಸುವ ಸಾಮರ್ಥ್ಯ ಮೊಗಳ್ಳಿಯವರಿಗೆ ಸಿದ್ಧಿಸಿದೆ. ಶಂಭಾ ಜೋಶಿಯಂತಹ ವಿದ್ವಾಂಸರನ್ನು ತಾತ್ವಿಕವಾಗಿ ಪ್ರಶ್ನಿಸುವ ಎದೆಗಾರಿಕೆ ಅವರದ್ದು. ನಿರ್ಭಿಡೆ ಮತ್ತು ನಿಷ್ಠುರ ಬರವಣಿಗೆಯಿಂದ ವಿಮರ್ಶೆಗೆ ಹೊಸ ಆಯಾಮ ಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು.

ಡಾ.ಮೊಗಳ್ಳಿ ಗಣೇಶ್‌, ‘ಇಂದು ರಾಜಕೀಯ ಅಕ್ರಮ, ಧಾರ್ಮಿಕ ಅಕ್ರಮಗಳು ಏನೇ ಇದ್ದರೂ ನಮ್ಮ ನಾಡಿನಲ್ಲಿ ಮಾನವೀಯತೆಯ ಅಂತಃಕರಣದ ಕೂಡುಕುಟುಂಬ ವ್ಯವಸ್ಥೆ ಜೀವಂತವಿದೆ. ಇದೇ ನನ್ನಂತಹವರನ್ನು ಬೆಳೆಸಿ, ಪೋಷಿಸುತ್ತಿದೆ. ವಿಮರ್ಶೆಯ ಆರಂಭದ ದಿನಗಳಲ್ಲಿ ಅನೇಕ ಲೇಖಕರಿಗೆ ನೋವುಂಟು ಮಾಡಿದ್ದೇನೆ. ಲಂಕೇಶ್‌ ಪತ್ರಿಕೆಯಲ್ಲಿ ಪುಸ್ತಕ ವಿಮರ್ಶೆಯನ್ನು ಸ್ವಲ್ಪಮಟ್ಟಿಗೆ ಸ್ವೇಚ್ಛೆಯಾಗಿ ಬಳಸಿದ್ದೂ ಉಂಟು’ ಎಂದರು.

ಮೊಗಳ್ಳಿಯವರ ‘ದೇವರ ದಾರಿ’ ಕಥಾ ಸಂಕಲನವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡಿದರು.

₹15,000 -ಪ್ರಶಸ್ತಿ ಮೊತ್ತ

ಶೀರ್ಷಿಕೆ: ದೇವರ ದಾರಿ

ಲೇಖಕ: ಡಾ.ಮೊಗಳ್ಳಿ ಗಣೇಶ್‌

ಬೆಲೆ: ₹ 240

ಪ್ರಕಾಶನ: ಅಹರ್ನಿಶಿ

ಸಂಪರ್ಕ: ಕೆ.ಅಕ್ಷತಾ, ಅಹರ್ನಿಶಿ ಪ್ರಕಾಶನ, ಜ್ಞಾನ ವಿಹಾರ ಬಡಾವಣೆ, ಕಂಟ್ರಿಕ್ಲಬ್‌ ಎದುರು, ವಿದ್ಯಾನಗರ, ಶಿವಮೊಗ್ಗ–577203

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT