ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದ ಬಾಲಕಿಯ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ವಾಣಿಜ್ಯ ತೆರಿಗೆ ಆಯುಕ್ತರ ಲವ್ ಜೆಹಾದಿ ಕುಮ್ಮಕ್ಕು: ಖಂಡನೆ
Last Updated 4 ಜುಲೈ 2018, 16:40 IST
ಅಕ್ಷರ ಗಾತ್ರ

ಪುತ್ತೂರು: ಮಧ್ಯಪ್ರದೇಶದಲ್ಲಿ ಬಾಲಕಿ ಅತ್ಯಾಚಾರ , ಕೊಲೆ ಮಾಡಿದ ಆರೋಪಿ ಇರ್ಫಾನ್‌ನನ್ನು ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿ ಮತ್ತು ಕಲಬುರ್ಗಿಯ ವಾಣಿಜ್ಯ ತೆರಿಗೆ ಆಯುಕ್ತ ಇರ್ಷಾದ್‌ ಉಲ್‌ ಖಾನ್ ಲವ್ ಜಿಹಾದ್‌ಗೆ ಕುಮ್ಮಕ್ಕು ನೀಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ವತಿಯಿಂದ ಬುಧವಾರ ಸಂಜೆ ನಗರದಲ್ಲಿ ಪ್ರತಿಭಟನೆ ನಡೆಯಿತು.‌

ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತ್ತಡ್ಕ ಮಾತನಾಡಿ, ‘ಮಧ್ಯಪ್ರದೇಶದಲ್ಲಿ 7 ವರ್ಷದ ಮುಗ್ಧ ಬಾಲೆಯನ್ನು ಮತಾಂಧ ಇರ್ಫಾನ್ ಎಂಬಾತ ಅತ್ಯಾಚಾರ ಮಾಡಿ ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದಾನೆ. ಆದರೂ ಈ ಬಗ್ಗೆ ಮಾಧ್ಯಮಗಳು, ಬುದ್ಧಿಜೀವಿಗಳು, ಎಡಪಂಥೀಯರು ಮಾತನಾಡುತ್ತಿಲ್ಲ. 3 ತಿಂಗಳ ಹಿಂದೆ ಕಾಶ್ಮೀರದಲ್ಲಿ ಬಾಲಕಿ ಅತ್ಯಾಚಾರ ಮಾಡಿರುವ ವಿಚಾರವಾಗಿ ಹಿಂದೂ ಸಮಾಜದ ಮೇಲೆ ಹಣೆಪಟ್ಟಿ ಕಟ್ಟಲು ಎಲ್ಲರೂ ಪ್ರಯತ್ನಿಸಿದ್ದರು. ಆದರೆ ಈಗ ಎಲ್ಲರೂ ಮೌನ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಲವ್ ಜಿಹಾದ್ ಇಡೀ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕಲಬುರ್ಗಿಯ ವಾಣಿಜ್ಯ ತೆರಿಗೆಯ ಆಯುಕ್ತ ಕೂಡಾ ಕುಮ್ಮಕ್ಕು ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೇರಳದಲ್ಲಿ ಲವ್ ಜಿಹಾದ್ ಎಗ್ಗಿಲ್ಲದೆ ನಡೆಯುತ್ತಿತ್ತು. ಇದೀಗ ರಾಜ್ಯದಲ್ಲೂ ಇದರ ಕಬಂಧಬಾಹು ವ್ಯಾಪಿಸಿದೆ. ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲದಿದ್ದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕ್ರಮ ಕೈಗೊಳ್ಳಲು ಸಿದ್ಧರಿದ್ದಾರೆ.

ಮಾತೆಯರ ಮತ್ತು ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗುವ ಹಿಂದೂ ಕಾರ್ಯಕರ್ತರ ಮೇಲೆ ನೈತಿಕ ಪೊಲೀಸ್ ಗಿರಿ ಎಂಬ ಹೆಸರಿನಲ್ಲಿ ದೌರ್ಜನ್ಯವೆಸಲಾಗುತ್ತಿದೆ. ಆದರೆ ಇದೆಲ್ಲವನ್ನೂ ಮೀರಿ ನಿಂತು ಹಿಂದೂ ಸಮಾಜಕ್ಕಾಗುವ ಅನ್ಯಾಯದ ವಿರುದ್ಧ ಸದಾ ಹೋರಾಟ ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಸಂಸ್ಕಾರ ಭಾರತಿಯ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಅವರು ಮಾತನಾಡಿ,ರಾಹುಲ್ ಗಾಂಧಿ ಮತ್ತು ಕ್ಯಾಂಡಲ್ ಮೆರವಣಿಗೆ ಮಾಡಿರುವ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರಿಗೆ ಬಾಲಕಿ ಅತ್ಯಾಚಾರ ವಿಚಾರ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ತಾಯಿ ಮತ್ತು ಹೆಂಡತಿ ಎಂಬ ವ್ಯತ್ಯಾಸ ಗೊತ್ತಿರದ ಕಾಮಾಂಧರನ್ನು ನೇಣಿಗೇರಿಸಬೇಕು. ಅಲ್ಲದೆ ಲವ್ ಜಿಹಾದ್ಗೆ ಪ್ರೇರಣೆ ನೀಡಿರುವ ಕಲ್ಬುರ್ಗಿಯ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಇರ್ಷಾದ್ ಖಾನ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಅವರು ಹಿಂದೂ ಸಮಾಜದ ಮೇಲೆ ದೌರ್ಜನ್ಯಗಳು ನಿತ್ಯ ನಿರಂತರವಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾರ್ಯೋಖರಾಗಬೇಕಾದ ಅನಿವಾರ್ಯತೆ ಇದೆ ಎಂದರು.

ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ, ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ, ಪುತ್ತೂರು ಪ್ರಖಂಡ ಸಂಚಾಲಕ ನಿತಿನ್ ನಿಡ್ಪಳ್ಳಿ, ಹಿಂದೂ ಜಾರಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಬಜರಂಗದಳ ನಗರ ಸತ್ಸಂಗ ಪ್ರಮುಖ್ಸ ವಿಶಾಖ್ ರೈ ,ಮಾತೃಮಂಡಳಿಯ ಪ್ರಮುಖರಾದ ಪ್ರೇಮಲತಾ ರಾವ್, ಮೋಹಿನಿ ದಿವಾಕರ್, ಜಯಂತಿ ನಾಯಕ್, ಜ್ಯೋತಿ ನಾಯಕ್, ಅರ್ಪಣಾ ಶಿವಾನಂದ, ಸಂಘಟನೆಗಳ ಪ್ರಮುಖರಾದ ಹರೀಶ್ ದೋಳ್ಪಾಡಿ, ಸುರೇಶ್ ಆಳ್ವ ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT