ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ ವಿಷಯದಲ್ಲಿ ತಾರತಮ್ಯ: ಆಕ್ರೋಶ

ನೀರಾವರಿ ಪ್ರದೇಶದಲ್ಲಿ ಇಸ್ರೇಲ್ ಮಾದರಿಗೆ ಮುಂದಾಗಿರುವ ಸರ್ಕಾರ
Last Updated 5 ಜುಲೈ 2018, 14:19 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸರ್ಕಾರ ರೈತರಿಗೆ ಸಾಲಗಾರವಾಗಿದೆಯೇ ಹೊರತು; ರೈತರು ಸರ್ಕಾರದ ದೃಷ್ಟಿಯಲ್ಲಿ ಸಾಲಗಾರರಲ್ಲ’ ಎಂದು ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ರೈತ ಸಂಘ ಕಚೇರಿಯಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತರೊಂದಿಗೆ ಚರ್ಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಎಲ್ಲಾ ರೀತಿಯ ಬೆಳೆ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸದಸ್ಯರ ಗಮನಕ್ಕೂ ತರಲಾಗಿತ್ತು. ಆದರೆ, ಬಜೆಟ್ ಮಂಡನೆಯಲ್ಲಿ ಕೇವಲ ₹2 ಲಕ್ಷ ರೈತರ ಸಾಲಮನ್ನಾಗೆ ಅವಕಾಶ ಮಾಡಿರುವುದು ಬೇಸರ ತರಿಸಿದೆ. ಐದು ಎಕರೆ ಒಳಪಡುವ ರೈತರಿಗೆ ಮಾತ್ರ ಅನ್ವಯ ಎಂದು ಹೇಳಿದ್ದಾರೆ. ಐದು ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಬೆಳೆಯುವವರು ರೈತರಲ್ಲವೇ ? ರೈತರ ಸಾಲಮನ್ನಾ ವಿಷಯದಲ್ಲಿಯೂ ತಾರತಮ್ಯ ಧೋರಣೆ ಸಲ್ಲದು ಎಂದರು.

ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಬೆಳೆಗಳಿಗೆ ₹150 ಕೋಟಿ ಮೀಸಲಿಡಲಾಗಿದೆ. ಇಸ್ರೇಲ್ ಮರಳುಗಾಡಿನ ದೇಶ. ಬಯಲುಸೀಮೆ ವ್ಯಾಪ್ತಿಯಲ್ಲಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿಗೆ ಒತ್ತು ನೀಡಬೇಕಿತ್ತು. ನೀರಾವರಿ ಪ್ರದೇಶ ಹೊಂದಿರುವ ಕಡೆ ಇಸ್ರೇಲ್ ಮಾದರಿ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ₹2 ಲಕ್ಷ ಸಾಲಮನ್ನಾ ತಾತ್ಕಾಲಿಕ ಹೊರತು ಶಾಶ್ವತ ಪರಿಹಾರವಲ್ಲ. ಬಜೆಟ್‌ನಲ್ಲಿ ಯಾವುದೇ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ರೈತರಿಗೆ ಬೇಕಾಗಿರುವುದು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ಎಂಬುದನ್ನು ಹತ್ತಾರು ಬಾರಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದೇವೆ ಎಂದು ದೂರಿದರು.

ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ್, ರೈತ ಸಂಘ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರಮೇಶ್, ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಹರೀಶ್, ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ಮುನಿಶಾಮಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಅಪ್ಪಯ್ಯಣ್ಣ, ಮುಖಂಡರಾದ ಚನ್ನರಾಯಪ್ಪ, ಮುನಿನಾರಾಯಣಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT