ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮಾತು ‘ಸುಬ್ರಾಯನಕಟ್ಟೆ ಭಾಷಣ’

Last Updated 24 ಫೆಬ್ರುವರಿ 2018, 7:35 IST
ಅಕ್ಷರ ಗಾತ್ರ

ಮೂಡಿಗೆರೆ (ಚಿಕ್ಕಮಗಳೂರು): ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಸಮಸ್ಯೆಗಳು, ಬಜೆಟ್‌ ಬಗ್ಗೆ ಚರ್ಚೆ ಮಾಡಿಲ್ಲ, ‘ಸುಬ್ರಾಯನಕಟ್ಟೆ ಭಾಷಣ’ ಮಾಡಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಭಾಷಣ ಗಮನಿಸಿದರೆ, ಮುಖ್ಯಮಂತ್ರಿ ಮಾತನಾಡಿದ್ದು ರಾಜ್ಯ ವಿಧಾನಸಭೆಯಲ್ಲೋ ಅಥವಾ ವಿದೇಶದಲ್ಲೋ ಎಂಬುದು ತಿಳಿಯುತ್ತಿಲ್ಲ. ಕ್ಷುಲ್ಲಕ ವಿಷಯಗಳಿಗೆ ಪ್ರಾಮುಖ್ಯ ನೀಡಿದ್ದಾರೆ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈಚೆಗೆ ರಾಜ್ಯಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ‘ಪರ್ಸೆಂಟೇಜ್‌’ ಬಗ್ಗೆ ಚರ್ಚೆ ಮಾಡಿದ್ದರು. ರಾಜ್ಯ ಸರ್ಕಾರದವರು ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ‘ಪರ್ಸೆಂಟೇಜ್‌’ ಬಗ್ಗೆ ಚರ್ಚೆ ಮಾಡಿದ್ದಾರೆ.

ಕೇಂದ್ರವನ್ನು 90 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಮುಖ್ಯಮಂತ್ರಿ ದೂಷಿಸಿದ್ದಾರೆ. ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಬೊಟ್ಟು ಮಾಡಿದ್ದಾರೆ. ಅವ್ಯವಹಾರದ ಮಾಹಿತಿ ಇದ್ದರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಮಾಡಬೇಕಿತ್ತು. ಅದನ್ನು ಬಿಟ್ಟು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಮಾತು ಸುಬ್ರಾಯನಕಟ್ಟೆ ಭಾಷಣ ಅಲ್ಲದೆ ಮತ್ತಿನ್ನೇನು’ ಎಂದು ವ್ಯಂಗ್ಯವಾಡಿದರು.

‘ಬಜೆಟ್‌ ಅಧಿವೇಶನ, ಜಂಟಿ ಅಧಿವೇಶನದಲ್ಲಿ ನಾನು ಭಾಗವಹಿಸಿಲ್ಲ. ಈ ಬಜೆಟ್‌ ಕಿಮ್ಮತ್ತು ಏನು ಎಂಬುದು ಗೊತ್ತಿದೆ. ಅಧಿವೇಶನದಲ್ಲಿ ಪ್ರತಿದಿನ ನಡೆದ ಕಲಾಪಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅರ್ಕಾವತಿ ಬಡಾವಣೆ ಡಿನೋಟಿಫೈ ಬಗ್ಗೆ ವಿಚಾರಣೆ ನಡೆಸಲು ರಚಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಕ್ಲೀನ್‌ಚಿಟ್‌ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹಾವಭಾವ, ವೀರಾವೇಷದ ಭಾಷಣ ಎಲ್ಲವನ್ನೂ ಗಮನಿಸಿದ್ದೇನೆ. ಕೆಂಪಣ್ಣ ಆಯೋಗ ರಚಿಸಿ ಎಷ್ಟು ವರ್ಷ ಆಯಿತು, ಆಯೋಗ ನೀಡಿದ ಕ್ಲೀನ್‌ಚಿಟ್‌ ಅನ್ನು ಈವರಗೆ ಏಕೆ ‘ಕೋಲ್ಡ್‌ ಸ್ಟೋರೇಜ್‌’ನಲ್ಲಿ ಇಟ್ಟುಕೊಂಡಿದ್ದರು’ ಎಂದು ಪ್ರಶ್ನಿಸಿದರು.

‘ಸಚಿವ ಟಿ.ಬಿ.ಜಯಚಂದ್ರ ಅವರು ‘ನೈಸ್’ ಕಂಪನಿ ಬಗ್ಗೆ ನೀಡಿದ ವರದಿಯನ್ನು ಏಕೆ ‘ಕೋಲ್ಡ್‌ ಸ್ಟೋರೇಜ್‌’ನಲ್ಲಿ ಇಟ್ಟುಕೊಂಡಿದ್ದಾರೆ. ನೈಸ್‌ ಕಂಪನಿ ಮಾಲೀಕರೊಂದಿಗೆ ನಿಮಗೇನು ಸಂಬಂಧ? ಮುಂದಿನ ದಿನಗಳಲ್ಲಿ ನಿಮ್ಮ ನಿಜಬಣ್ಣ ಬಯಲಾಗಲಿದೆ’ ಎಂದರು.

‘ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಂಧಿತರಾಗಿರುವ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ನಲಪಾಡ್‌ಗೆ ಜೈಲಿನಲ್ಲಿ ರಾಯಲ್‌ ಉಪಚಾರ ಸಿಗುತ್ತಿದೆ ಎನ್ನುವುದು ಆಶ್ಚರ್ಯಪಡಬೇಕಾದ ವಿಚಾರವೇನಲ್ಲ. ಪೆಟ್ಟು ತಿಂದವ ಬಲಾಢ್ಯನಾಗಿದ್ದರಿಂದ ನಲಪಾಡ್‌ನನ್ನು ಬಂಧಿಸಿದ್ದಾರೆ. ಸಾಮಾನ್ಯ ಪ್ರಜೆಯಾಗಿದ್ದರೆ ಈತನನ್ನು ಬಂಧಿಸುತ್ತಿರಲಿಲ್ಲ. ಇಂಥವರನ್ನು ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT