ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

Last Updated 1 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಬನ್ನಂಜೆ ಗೋವಿಂದಾಚಾರ‍್ಯ, ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ. ಎಚ್.ಜೆ. ಲಕ್ಕಪ್ಪಗೌಡ, ಪ್ರೊ. ಎನ್‌.ಎಸ್. ಲಕ್ಷ್ಮೀನಾರಾಯಣ ಭಟ್ಟ, ಕಸ್ತೂರಿ ಬಾಯರಿ ಭಾಜನರಾಗಿದ್ದಾರೆ.

ತಲಾ ₹50,000 ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ. 60 ವರ್ಷ ದಾಟಿದವರಿಗೆ ಮಾತ್ರ ಈ ಪ್ರಶಸ್ತಿ ನೀಡಬೇಕೆಂಬ ನಿಯಮವನ್ನು ಇದೇ ಮೊದಲ ಬಾರಿಗೆ ರೂಪಿಸಿ ಜಾರಿಗೆ ತರಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅದನ್ನು ಅಕಾಡೆಮಿಯ ಸಭೆಯಲ್ಲಿ ಮಂಡಿಸಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ’ ಎಂದರು.

ಪ್ರಶಸ್ತಿಯೊಂದಿಗೆ ಏಳು ಇಂಚು ಉದ್ದದ ಸರಸ್ವತಿ ಪುತ್ಥಳಿ ನೀಡಲಾಗುತ್ತಿತ್ತು. ಈ ಬಾರಿ ಸರಸ್ವತಿಯ ಬೇರೆ ವಿನ್ಯಾಸದ ಪುತ್ಥಳಿಯನ್ನು ನೀಡಲಾಗುತ್ತಿದ್ದು, ಎತ್ತರವನ್ನು ಒಂದು ಅಡಿಗೆ ಹೆಚ್ಚಿಸಲಾಗಿದೆ ಎಂದೂ ಅವರು ಹೇಳಿದರು.

2016ರಲ್ಲಿ ಪ್ರಕಟವಾದ 18 ಪ್ರಕಾರದ ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ತಲಾ ₹25,000 ನಗದು ಒಳಗೊಂಡಿದೆ. ಏಳು ದತ್ತಿನಿಧಿ ಬಹುಮಾನಕ್ಕೂ ಲೇಖಕರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

2016ರ ದತ್ತಿ ಪ್ರಶಸ್ತಿಗಳು: ಚೈತ್ರಿಕಾ ಶ್ರೀಧರ್ ಹೆಗಡೆ– ಎರಡು ನಂಬರಿನ ಟಿಕಲಿ–ಕಾವ್ಯ ಹಸ್ತಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ), ಮುಹಮ್ಮದ್ ಕುಳಾಯಿ– ಕಾಡಂಕಲ್ಲ್ ಮನೆ–ಕಾದಂಬರಿ (ಚದುರಂಗ ದತ್ತಿನಿಧಿ), ಗುರುಪಾದ ಕೆ. ಹೆಗಡೆ– ಜೀವಾತ್ಮ ಜೈತ್ರಯಾತ್ರೆ–ಆತ್ಮಕತೆ (ಸಿಂಪಿ ಲಿಂಗಣ್ಣ ದತ್ತಿನಿಧಿ‌), ಎಸ್. ಶಿವಾನಂದ– ಸಾಹಿತ್ಯ ಮತ್ತು ಸಾಹಿತ್ಯೇತರ– ಸಾಹಿತ್ಯ ವಿಮರ್ಶೆ (ಪಿ.ಶ್ರೀನಿವಾಸರಾವ್‌ ದತ್ತಿನಿಧಿ), ಸ. ರಘುನಾಥ– ಒಂಟಿ ಸೇತುವೆ– ಅನುವಾದ ಸೃಜನಶೀಲ (ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ), ಕೆ.ಬಿ. ಶ್ರೀಧರ– ಪಂಚಮುಖ–ಕಾದಂಬರಿ (ಮಧುರಚೆನ್ನ ದತ್ತಿನಿಧಿ), ರಶ್ಮಿ ತೇರದಾಳ–ಮೋಹನ್‌ಸ್ವಾಮಿ–ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ).

‘ಕನ್ನಡ ಮತ್ತು ಸಂಸ್ಕೃತಿ ಸಚಿವರ ದಿನಾಂಕ ಪಡೆದು ಇದೇ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು’ ಎಂದು ಮಾಲಗತ್ತಿ ವಿವರಿಸಿದರು.

‘ಸಾಹಿತ್ಯ ಶ್ರೀ’ ಪ್ರಶಸ್ತಿ

ಇದೇ ಮೊದಲ ಬಾರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಅಕಾಡೆಮಿಯಿಂದ ನೀಡಲು ತೀರ್ಮಾನಿಸಲಾಗಿದೆ ಎಂದು ಅರವಿಂದ ಮಾಲಗತ್ತಿ ತಿಳಿಸಿದರು.

ಈ ಪ್ರಶಸ್ತಿಗೆ ಪ್ರೊ. ಧರಣೇಂದ್ರ ಕುರಕುರಿ, ಫಕೀರ್ ಅಹಮ್ಮದ್ ಕಟ್ಪಾಡಿ, ವಿಜಯಶ್ರೀ ಸಬರದ, ವಿ. ಮುನಿವೆಂಕಟಪ್ಪ, ನಟರಾಜ ಹುಳಿಯಾರ್, ಕೆ. ಕೇಶವಶರ್ಮ, ಕರೀಗೌಡ ಬೀಚನಹಳ್ಳಿ, ಪ್ರೊ. ತೇಜಸ್ವಿ ಕಟ್ಟೀಮನಿ, ಕಮಲಾ ಹೆಮ್ಮಿಗೆ, ಕಂಚ್ಯಾಣಿ ಶರಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು  ವಿವರಿಸಿದರು.

ಪ್ರಶಸ್ತಿ ₹ 25,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಳಿಯ ಜಲಸಾಂಗ್ವಿ ಎಂಬ ಹಳ್ಳಿಯಲ್ಲಿರುವ ಚಾಲುಕ್ಯರ ಕಾಲದ ಕಮಲೀಶ್ವರ(ಕಲ್ಲೇಶ್ವರ) ದೇವಾಲಯದಲ್ಲಿನ ಕನ್ನಡದಲ್ಲಿ ಶಿಲಾ ಶಾಸನ ಬರೆಯುತ್ತಿರುವ ಮಹಿಳೆಯ ಶಿಲ್ಪವನ್ನು ಈ ಪ್ರಶಸ್ತಿಯ ಫಲಕಕ್ಕೆ ಲಾಂಛನವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT