ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತರೆ ಭಾಷೆಗಳ ಅಡಿಯಾಳಾಗಲು ಬಿಡಬೇಡಿ: ಎಚ್.ಎಸ್.ಶಿವಪ್ರಕಾಶ್‌

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕನ್ನಡ ಭಾಷೆಗೆ ಅಪಾಯ ಕಾದಿದೆ. ಇಂಗ್ಲೆಂಡ್‌ನಲ್ಲಿ ಮಾತ್ರ ಇರಬೇಕಿದ್ದ ಇಂಗ್ಲಿಷ್ ಜಗತ್ತನ್ನೇ ಆವರಿಸಿದೆ. ಮುಂದಿನ ತಲೆಮಾರು ಪಂಪ, ರನ್ನ, ಬಸವಣ್ಣ, ಕುಮಾರವ್ಯಾಸರ ಹೆಸರನ್ನೇ ಮರೆಯುವ ಅಪಾಯವಿದೆ. ಆದ್ದರಿಂದ ಕನ್ನಡವು ಇತರೆ ಭಾಷೆಗಳ ಅಡಿಯಾಳಾಗಲು ನಾವು ಬಿಡಬಾರದು’ ಎಂದು ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಹೇಳಿದರು.

ಸೇಡಂ ತಾಲ್ಲೂಕು ಮಳಖೇಡದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರಕೂಟ ಉತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಅಪಾಯಕಾರಿಯಾಗಿ ತಲೆ ಎತ್ತುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಡೆಗಟ್ಟಲು ಇಂತಹ ಉತ್ಸವ ಪೂರಕ’ ಎಂದರು.

‘ಮಳಖೇಡ ಪಟ್ಟಣವನ್ನು ಈ ಹಿಂದೆ ಮಾನ್ಯಖೇಟ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಪ್ರಥಮ ಅನ್ವೇಷಣೆ ಇಲ್ಲಿಯೇ ಆಗಿದೆ. ಕವಿರಾಜ ಮಾರ್ಗ ಇಲ್ಲಿ ರಚನೆಯಾಗಿದೆ. ರಾಷ್ಟ್ರಕೂಟರ ಗಡಿ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದರೆ, ಕನ್ನಡದ ಕಂಪು ವಿಶ್ವದೆಲ್ಲೆಡೆ ಹರಡಿದೆ. ಕನ್ನಡಿಗರು ಎಲ್ಲ ಕಡೆ ಬದುಕುತ್ತಿದ್ದಾರೆ. ಕನ್ನಡಿಗರಿಗೆ ಇಡೀ ವಿಶ್ವವೇ ನೆಲೆಯಾಗಿದೆ. ಇದಕ್ಕೆ ಕಾರಣ ರಾಷ್ಟ್ರಕೂಟ ಸಾಮ್ರಾಜ್ಯ. ಆದ್ದರಿಂದ ಮುಂದಿನ ಪೀಳಿಗೆಗೆ ರಾಷ್ಟ್ರಕೂಟ ಗತವೈಭವ ಪರಿಚಯಿಸಬೇಕಿದೆ’ ಎಂದು ಅವರು ಹೇಳಿದರು.

‘ರಾಷ್ಟ್ರಕೂಟ ವೈಭವದ ನಂತರ ಶರಣರು, ಸೂಫಿಸಂತರು ಈ ನಾಡಿಗೆ ಕೊಡುಗೆ ನೀಡಿದರು. ಎಲ್ಲ ಧರ್ಮಗಳನ್ನು ಒಟ್ಟು ಸೇರಿಸಿದ ತತ್ವಪದಕಾರರು ತತ್ವ ಪದಗಳನ್ನು ರಚಿಸಿದರು. ಇವರೆಲ್ಲರ ಕೊಡುಗೆಯನ್ನು ಯುವಪೀಳಿಗೆಗೆ ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು. 

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ವಾಗ್ಮಿ ಇಬ್ರಾಹಿಂ ಸುತಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT