ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸಮುದ್ರ: ಆನೆ ಬದುಕಿಸಲು ಹರಸಾಹಸ

ದುಬಾರೆಯ ಕಂಜನ್‌, ಅಯ್ಯಪ್ಪ, ಇಂದ್ರ ಆನೆಗಳ ಮೂಲಕ ಎದ್ದು ನಿಲ್ಲುವಂತೆ ಮಾಡಲು ಯತ್ನ
Last Updated 17 ಮಾರ್ಚ್ 2018, 7:19 IST
ಅಕ್ಷರ ಗಾತ್ರ

ಕುಶಾಲನಗರ: ಸಮೀಪದ ರಂಗಸಮುದ್ರ ಗ್ರಾಮದ ಕಾಫಿ ತೋಟದ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾಡಾನೆಯನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದರೂ, ಅದು ಚೇತರಿಸಿಕೊಂಡಿಲ್ಲ. ಎರಡು ದಿನಗಳಿಂದ ಅರಣ್ಯ ಸಿಬ್ಬಂದಿ ಆನೆಯ ಪ್ರಾಣ ಉಳಿಸಲು ನಿರಂತರ ಯತ್ನ ನಡೆಸುತ್ತಿದ್ದಾರೆ.

ಬುಧವಾರ ಸಂಜೆ ಗ್ರಾಮದ ಪರ್ಲಕೋಟಿ ಜಯಪ್ರಕಾಶ್ ಎಂಬವರ ತೋಟದ ಕೆರೆಯಲ್ಲಿ ಸಿಲುಕಿಕೊಂಡಿದ್ದ 35 ವರ್ಷದ ಹೆಣ್ಣಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ದುಬಾರೆ ಸಾಕಾನೆಗಳ ಸಹಾಯದಿಂದ ರಕ್ಷಿಸಿದ್ದರು.

ಆದರೆ ಅರ್ಧ ದಿನ ಕೆರೆಯಲ್ಲಿ ಇದ್ದು ಪ್ರಾಣ ಉಳಿಸಿಕೊಳ್ಳಲು ಅದು ಹೋರಾಟ ನಡೆಸಿದ್ದರಿಂದ ಸಂಪೂರ್ಣ ಬಳಲಿದೆ. ಎದ್ದು ನಿಲ್ಲಲೂ ಸಾಧ್ಯವಾಗುತ್ತಿಲ್ಲ.

ಗುರುವಾರ ಸಂಜೆ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಅವರು ಆನೆಗೆ ಚಿಕಿತ್ಸೆ ನೀಡಿ ನಾಲ್ಕು ಬಾಟಲ್ ಗ್ಲುಕೋಸ್ ನೀಡಿದರು.

ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ 12ರವರೆಗೂ ಆರೈಕೆ ಮಾಡಿದರು. ಶುಕ್ರವಾರ ಬೆಳಿಗ್ಗೆ ಕೂಡ ವೈದ್ಯರು ಗ್ಲುಕೋಸ್ ನೀಡಿದರು. ಆಗ ಸ್ಪಲ್ಪ ಚೇತರಿಕೆ ಕಂಡು ಬಂತು. ಆದರೆ ಮೇಲೆ ಎಳಲು ಸಾಧ್ಯವಾಗದೇ ಕಿರುಚುತ್ತ ಹೊರಳಾಡಿತು. ಆನೆಯ ಹಿಂದಿನ ಎಡಗಾಲಿಗೆ ಪೆಟ್ಟು ಬಿದ್ದಿರುವ ಸಾಧ್ಯತೆ ಇದೆ. ಎಡಗಾಲನ್ನು ಎತ್ತಿಡಲು ಸಾಧ್ಯವಾಗುತ್ತಿಲ್ಲ.

ದುಬಾರೆಯ ಕಂಜನ್, ಅಯ್ಯಪ್ಪ ಹಾಗೂ ಇಂದ್ರ ಆನೆಗಳ ಮೂಲಕ ಕಾಡಾನೆಯನ್ನು ಎತ್ತಿ ನಿಲ್ಲಿಸಲು ಒಂದು ತಾಸಿಗೂ ಹೆಚ್ಚು ಕಾಲ ಯತ್ನ ನಡೆಸಲಾಯಿತು.

ಮಾವುತರಾದ ಗೋಪಾಲ್, ಭಾಸ್ಕರ್‌, ರಾಜಪ್ಪ ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ.

ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ , ಡಿಆರ್ಎಫ್ಒ ರಂಜನ್, ದೇವಿಪ್ರಸಾದ್ ಇದ್ದರು.

ನಿರಂತರ ಚಿಕಿತ್ಸೆ
‘ಆನೆಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಅದರ ಉಳಿವಿಗೆ ಎಲ್ಲ ರೀತಿ ಯತ್ನ ನಡೆಸಲಾಗುವುದು. ವೈದ್ಯರಿಂದ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ತೋಟಕ್ಕೂ ಹಾನಿಯಾಗಿದ್ದು, ಮಾಲೀಕರಿಗೂ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT