ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಕ್ಕಿದೆ ಆಕ್ರಮಣ ತಡೆವ ಶಕ್ತಿ’

ಅರೆಲಕ್ಮಾಪುರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ
Last Updated 17 ಮಾರ್ಚ್ 2018, 10:37 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ನಮ್ಮ ಕುಟುಂಬಗಳು ಎಲ್ಲಿಯವರೆಗೆ ಆರೋಗ್ಯಪೂರ್ಣವಾಗಿರುತ್ತವೆಯೋ ಅಲ್ಲಿಯವರೆಗೂ ಭಾರತ ಸದೃಢವಾಗಿರುತ್ತದೆ. ಹೀಗಾಗಿಯೇ ಭಾರತ ಎಲ್ಲ ಆಕ್ರಮಣಗಳನ್ನೂ ಎದುರಿಸಿ ಶಕ್ತಿಶಾಲಿಯಾಗಿದೆ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ನುಡಿದರು.

ಸಮೀಪದ ಅರೆಲಕ್ಮಾಪುರ ಗ್ರಾಮದಲ್ಲಿ ಕ್ಷತ್ರೀಯ ಮರಾಠ ಯುವ ಸಮಿತಿ ನಿರ್ಮಿಸಿದ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎಲ್ಲರಿಗೂ ನೆಮ್ಮದಿಯ ನೆಲೆ ನೀಡುವ ಶಕ್ತಿ ಗೃಹಸ್ಥಾಶ್ರಮಕ್ಕಿದೆ. ಗೃಹಸ್ಥಾಶ್ರಮವನ್ನು ಧನ್ಯತೆಯ ಕಡೆಗೆ ಕೊಂಡೊಯ್ಯುವ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿನ ವೈಫಲ್ಯದಿಂದಾಗಿ ಕೌಟುಂಬಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಜೀವನದಲ್ಲಿ ನಮಗಿಂದು ಧನ್ಯತೆಯ ಅಗತ್ಯವಿದೆಯೇ ಹೊರತು ಮಾನ್ಯತೆ ಅಲ್ಲ. ಮಾನ್ಯತೆ ಹೊರಗಿನಿಂದ ಬಂದರೆ, ಧನ್ಯತೆ ಒಳಗಿನಿಂದ ಅನುಭವಿಸುವಂಥದ್ದು. ನಮ್ಮ ಕುಟುಂಬದ ದಿನಚರಿ, ರೀತಿ ರಿವಾಜುಗಳು, ಪರಂಪರೆ ಹಾಳಾಗಬಾರದು. ಈ ಎಚ್ಚರಿಕೆಯಿಂದ ನಡೆಯುವಂತಾದರೆ ಕುಟುಂಬಗಳು ಆರೋಗ್ಯ ಪೂರ್ಣವಾಗಿರಲಿವೆ’ ಎಂದರು.

ಹೋತನಹಳ್ಳಿಯ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ‘ಪ್ರತಿಯೊಬ್ಬರೂ ತಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಧರ್ಮ ಕಾರ್ಯಗಳಿಗೆ ಮೀಸಲಿಡಬೇಕು. ಇದೇ ನಿಜವಾದ ಅರ್ಥದಲ್ಲಿ ಭಗವಂತನ ಸೇವೆ ಎನಿಸಲಿದೆ. ಹಸಿದು ಬಂದವರಿಗೆ ತಮ್ಮ ಬಳಿ ಇರುವುದನ್ನು ಕೊಟ್ಟು ಸಂತೃಪ್ತಿ ಪಡಿಸುವುದೇ ನಿಜವಾದ ಧರ್ಮ ಎನಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಮನಸ್ಸುಗಳು ಕಲ್ಮಶಗೊಳ್ಳುತ್ತಿದ್ದು, ದುಷ್ಟ ಆಲೋಚನೆ ಪ್ರೇರೇಪಿಸುತ್ತಿವೆ. ಪಾಶ್ಚಿಮಾತ್ಯ ಸಂಸ್ಕೃತಿಯೂ ನಮ್ಮ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ’ ಎಂದು ನುಡಿದರು.

ಹೆಬ್ಬಳ್ಳಿಯ ಬ್ರಹ್ಮಾನಂದ ಸ್ವಾಮೀಜಿ, ಬ್ಯಾತನಾಳದ ಹನುಮಾನಂದ ಸ್ವಾಮೀಜಿ, ಸಾಲಗಾಂವದ ವಿರೂಪಾಕ್ಷೇಶ್ವರ ಸ್ವಾಮೀಜಿ, ಪ್ರಮುಖರಾದ ಬಸವರಾಜ ಹಾದಿಮನಿ, ವೆಂಕನಗೌಡ ಪಾಟೀಲ, ವಿಷ್ಣುಕಾಂತ ಜಾಧವ, ಶಾಮಸುಂದರ ಗಾಯಕವಾಡ, ಮಹೇಶ ಘೋರ್ಪಡೆ, ಶ್ರೀನಿವಾಸ್‌ರಾವ್ ಶಿಂಧೆ, ಉಮೇಶ ವಾಘ, ಯಲ್ಲಪ್ಪ ಕಿತ್ತೂರ, ಮಲ್ಲಪ್ಪ ನಾಗರವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT