ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾಪಕ ಚಿತ್ರಶಾಲೆ ಸಮಾಜ ಅಧ್ಯಯನಕ್ಕೆ ಆಕರ ಗ್ರಂಥ

ಡಿವಿಜಿ ನೆನಪಿನ ಉಪನ್ಯಾಸದಲ್ಲಿ ಸಾಹಿತಿ ಎಸ್.ಆರ್.ರಾಮಸ್ವಾಮಿ ಅಭಿಪ್ರಾಯ
Last Updated 17 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಿವಿಜಿಯವರ ಜ್ಞಾಪಕ ಚಿತ್ರಶಾಲೆ ಸಂಪುಟ ಅಮೂಲ್ಯ ಮಾಹಿತಿ ಒಳಗೊಂಡ ವಿಶಿಷ್ಟ ಗ್ರಂಥ. ಸಾಮಾಜಿಕ ಇತಿಹಾಸ ಅಧ್ಯಯನ ಮತ್ತು ರಚನೆಗೂ ಅಮೂಲ್ಯ ಆಕರವಾಗಿದೆ’ ಎಂದು ಸಾಹಿತಿ ಎಸ್.ಆರ್.ರಾಮಸ್ವಾಮಿ ಅಭಿಪ್ರಾಯಪಟ್ಟರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಡಿವಿಜಿ ಅವರ ಜ್ಞಾಪಕ ಚಿತ್ರಶಾಲೆ 8 ಸಂಪುಟ ಮತ್ತು ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಜೀವನ ಲೇಖನ ಪರಿಚಯ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಮಂಕುತಿಮ್ಮನ ಕಗ್ಗ ಮತ್ತು ಜ್ಞಾಪಕ ಚಿತ್ರಶಾಲೆ ಸಂಪುಟ ಹೋಲುವಂತಹ ಬರಹಗಳು ಕನ್ನಡದಲ್ಲಿ ಮತ್ತೆ ಬರಲಿಲ್ಲ ಎಂದರೆ ಅದು ಉತ್ಪ್ರೇಕ್ಷೆಯಲ್ಲ ಎಂದರು.

ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ‘ಕೆಲವು ವಿಶಿಷ್ಟ ವ್ಯಕ್ತಿಗಳು ವಿಶಿಷ್ಟ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದನ್ನು ಡಿವಿಜಿ ಜ್ಞಾಪಕ ಚಿತ್ರಶಾಲೆಯಲ್ಲಿ ಸೊಗಸಾಗಿ ದಾಖಲಿಸಿದ್ದಾರೆ. ಅವರು ಇದನ್ನು ಬರೆಯದಿದ್ದರೆ ಆ ಕಾಲದ ವ್ಯಕ್ತಿಗಳು ಮತ್ತು ಸನ್ನಿವೇಶಗಳ ಪರಿಚಯವೇ ಸಿಗುತ್ತಿರಲಿಲ್ಲ’ ಎಂದರು.

‘ಹರಕಲು ಪಂಚೆ ಧರಿಸುವಷ್ಟು ಕಡುಬಡತನ ವೈದಿಕ ಬ್ರಾಹ್ಮಣರಿಗೆ ಇದ್ದಾಗಲೂ ಅವರ ಬದುಕು ನೆಮ್ಮದಿಯಿಂದ ಕೂಡಿರುತ್ತಿತ್ತು. ಇದು ಅಚ್ಚರಿ
ಪಡುವ ಸಂಗತಿಯೇ ಸರಿ. ವೈದಿಕ ಧರ್ಮ ಸಂಪ್ರದಾಯಸ್ಥರು ಸಂಪುಟದಲ್ಲಿ ವೆಂಕಟರಾಮಭಟ್ಟ, ವಿರೂಪಾಕ್ಷ ಶಾಸ್ತ್ರಿ ಅವರ ಬದುಕನ್ನು ಚಿತ್ರಿಸುವ ಮೂಲಕ ಡಿವಿಜಿ ಅಳಿವಿನಂಚಿನಲ್ಲಿದ್ದ ವೈದಿಕರ ಬದುಕನ್ನು ಚಿತ್ರಿಸಿದ್ದಾರೆ’ ಎಂದರು.

ವೇಶ್ಯೆ ನಾಗರತ್ನಳ ಬದುಕು, ಬೆಂಗಳೂರಿಗೆ ಹೋಟೆಲ್ ಪರಿಚಯಿಸಿದ ನಾರಾಯಣಪ್ಪ ಅವರ ಶಿಸ್ತು....ಹೀಗೆ ಪ್ರತಿಯೊಂದು ಬರಹಗಳು ಸ್ವಾರಸ್ಯಕರವಾಗಿವೆ. ಜ್ಞಾಪಕ ಚಿತ್ರಶಾಲೆಯಲ್ಲಿರುವ ಒಂದೊಂದು ಬರಹಗಳು ಅಂತರಂಗದಲ್ಲಿ ಉಳಿಯುತ್ತವೆ. ಮನಸಿಗೂ ಮುದಕೊಡುತ್ತವೆ
ಎಂದರು.

ಡಿವಿಜಿ ಜೀವನ ಧರ್ಮ ಯೋಗದ ವೈಶಿಷ್ಟ್ಯ ಕುರಿತು ಉಪನ್ಯಾಸ ನೀಡಿದ ಎಸ್.ರಂಗನಾಥ್, ‘ಡಿವಿಜಿಯವರ ಜೀವನ ದೃಷ್ಟಿ ಸಾಮರಸ್ಯ, ಸಮನ್ವಯ ಪ್ರತಿಪಾದಿಸುತ್ತದೆ’ ಎಂದರು.
**
ಶೀರ್ಷಿಕೆ: ಡಿವಿಜಿ ಜ್ಞಾಪಕ ಚಿತ್ರಶಾಲೆ (8 ಸಂಪುಟ) ಮರು ಮುದ್ರಿತ ಸಂಪುಟ
ಲೇಖಕರು: ಡಿವಿಜಿ
ಬೆಲೆ: ₹1,500 (ರಿಯಾಯಿತಿ ಬೆಲೆ ₹1,400)
ಪುಟ: 1,500
ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ, 580020

ಶೀರ್ಷಿಕೆ: ಸರ್ವತಂತ್ರ ಸ್ವತಂತ್ರರು (ಪ್ರೊ.ಸಾ.ಕೃ.ರಾಮಚಂದ್ರರಾವ್ ಅವರ ಜೀವನ ಲೇಖನ ಪರಿಚಯ ಕೃತಿ)
ಲೇಖಕರು: ಶತಾವಧಾನಿ ಡಾ.ಆರ್.ಗಣೇಶ್
ಬೆಲೆ: 120
ಪುಟ: 124
ಪ್ರಕಾಶನ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಬಸವನಗುಡಿ ರಸ್ತೆ, ನರಸಿಂಹ ರಾಜ ಕಾಲೊನಿ, ಬೆಂಗಳೂರು, 560019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT