ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಾಟರ್ ಪೋರ್ಟಲ್!

Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನೀರು ಪ್ರಕೃತಿಯ ಅವಿಭಾಜ್ಯ ಅಂಗ. ಮನುಷ್ಯ, ಪ್ರಾಣಿ–ಪಕ್ಷಿ, ಗಿಡ, ಮರಗಳಿಗೆ ಅಗತ್ಯವಾಗಿ ಬೇಕಾದ ಅಂಶ ನೀರು. ಭೂಮಿ ಮೇಲಿರುವ ಸಕಲ ಜೀವ ರಾಶಿಗೆ ನೀರು ಸಂಜೀವಿನಿ ಇದ್ದಂತೆ. ಇದು, ಎಲ್ಲರಿಗೂ ಅಗತ್ಯವಾಗಿ ಬೇಕಾದ ಅಮೃತವಾಗಿದ್ದರೂ, ಅನೇಕರಿಗೆ ಅದರ ಬೆಲೆ, ಮಹತ್ವ ಗೊತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಾದ ನೀರಿನ ಬಳಕೆ, ಮಿತಿಮೀರಿದ ಜನಸಂಖ್ಯೆ, ನಗರೀಕರಣ, ಖಾಸಗೀಕರಣ ಮುಂತಾದವುಗಳಿಂದಾಗಿ ನೀರಿನ ಲಭ್ಯತೆ ಬರುಬರುತ್ತ ಕಡಿಮೆಯಾಗುತ್ತಿದೆ. ಪ್ರಕೃತಿಯ ಮೇಲಣ ನಿರಂತರ ಅತ್ಯಾಚಾರ ಮತ್ತು ದೌರ್ಜನ್ಯಗಳಿಂದಾಗಿ ನೀರಿನ ಸಹಜ, ಸ್ವಾಭಾವಿಕ ಮೂಲಗಳೆಲ್ಲ ಬತ್ತಿಹೋಗುತ್ತಿವೆ.

ಒಟ್ಟು ಭೂಮಿಯ ಮೇಲಿರುವ ನೀರಿನಲ್ಲಿ ಶೇ 97 ರಷ್ಟು ಉಪ್ಪು ನೀರಾಗಿದ್ದು, ಮನುಷ್ಯನ ಉಪಯೋಗಕ್ಕೆ ಬಾರದಿರುವುದು. ಉಳಿದ ಶೇ 3ರಲ್ಲಿ, ಶೇ 2 ರಷ್ಟು ಮಂಜುಗಡ್ಡೆಗಳ ರೂಪದಲ್ಲಿರುವುದು. ಇನ್ನು ಮನುಷ್ಯನ ಉಪಯೋಗಕ್ಕೆ ಬರುವುದು, ಬಳಕೆಗಾಗಿ ಉಳಿದಿರುವುದು ಬರೀ ಶೇ 1ರಷ್ಟು ಮಾತ್ರ.

ಅಂತರ್ಜಾಲ ಯುಗದಲ್ಲಿ ಮಾಹಿತಿಯ ವಿನಿಮಯಕ್ಕಾಗಿ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಜನರು ಹಾಗೂ ಸಮುದಾಯಗಳು ಇದರಿಂದ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಅರ್ಘ್ಯಂ ಸಂಸ್ಥೆ 2007ರಲ್ಲಿ ನೀರು ಮತ್ತು ನೈರ್ಮಲ್ಯದ ಬಗೆಗಿನ ಆಗು ಹೋಗುಗಳ ಕುರಿತಾದ ವಿಚಾರಗಳು, ದೇಶೀಯ ಮತ್ತು ಅಂತರರಾಷ್ಟೀಯ ಮಟ್ಟದ ಚರ್ಚೆಗಳು, ಜನಸಮುದಾಯದ ಸಮಸ್ಯೆ ಮತ್ತು ಯಶೋಗಾಥೆಗಳನ್ನು ಮುಖ್ಯವಾಹಿನಿಗೆ ತಂದು ಜನರ ಮುಂದಿಡಲು ‘ಇಂಡಿಯಾ ವಾಟರ್ ಪೋರ್ಟಲ್’ ಅನ್ನು ಸ್ಥಾಪಿಸಿತು. ಇದರದೇ ಕನ್ನಡ ಅವತರಣಿಕೆಯನ್ನು 2008 ರಲ್ಲಿ ಪ್ರಾರಂಭಿಸಿತು. ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದವರು ಅರ್ಘ್ಯಂ ಸಂಸ್ಥೆಯ ರೋಹಿಣಿ ನಿಲೇಕಣಿಯವರು.

ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ಅನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಅರ್ಘ್ಯಂ ಸಂಸ್ಥೆಯು ಬೆಂಗಳೂರು ಮೂಲದ ‘ಕಮ್ಯುನಿಕೇಷನ್ ಫಾರ್ ಡೆವಲಪ್‌ಮೆಂಟ್ ಅಂಡ್ ಲರ್ನಿಂಗ್’ (ಸಿಡಿಎಲ್) ಸಂಸ್ಥೆಗೆ ನವೆಂಬರ್ 2014 ರಿಂದ ವಹಿಸಿದೆ.

ನೀರಿಗೆ ಸಂಬಂಧಿಸಿದ ಎಲ್ಲ ಅನುಭವಗಳನ್ನು ಜನರೊಂದಿಗೆ ಹಂಚಿಕೊಳ್ಳಲು, ನೀರಿನ ಸಂರಕ್ಷಣೆಯ ಬಗ್ಗೆ ನಡೆಯುತ್ತಿರುವ ವಿವಿಧ ಪ್ರಯತ್ನಗಳ ಬಗ್ಗೆ ಮಾಹಿತಿಯ ಜೊತೆಗೆ ನೀರಿನ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕನ್ನಡ ವಾಟರ್ ಪೋರ್ಟಲ್ ಒಂದು ಉತ್ತಮ ವೇದಿಕೆಯಾಗಿ ಪರಿಣಮಿಸಿದೆ.

ಸಿಡಿಎಲ್ ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗಣಪತಿ ಹೆಗಡೆ, ಹೇಮಾ ಪ್ರಸನ್ನ ಮತ್ತು ಅಪರ್ಣಾ ಚಿಂತಾಮಣಿಯವರು ನಮ್ಮ ರಾಜ್ಯದುದ್ದಕ್ಕೂ ಸಂಚರಿಸಿ ಜನರಿಗೆ ನೀರಿನ ಬಗ್ಗೆ ಅಗತ್ಯ ಮಾಹಿತಿ, ಅದರ ಮಿತಬಳಕೆ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ, ಅವರ ಅಭಿಪ್ರಾಯ ಎಲ್ಲವನ್ನೂ ಜನರ ಮುಂದಿಟ್ಟು, ಭವಿಷ್ಯದಲ್ಲಿ ನೀರಿನ ಅಗಾಧವಾದ ಬೇಡಿಕೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮುಂದಿನ ಪೀಳಿಗೆಯವರಿಗೂ ಅದನ್ನು ಉಳಿಸಿ ಕೊಡುವ ಮಹತ್ತರ ಅಭಿಲಾಷೆ ಹೊಂದಿದವರು.

2014 ರಲ್ಲಿ ಕನ್ನಡ ವಾಟರ್ ಪೋರ್ಟಲ್ ನಿರ್ವಹಣೆಯ ಹೊಣೆ ಹೊತ್ತ ನಂತರ, ರಾಜ್ಯದ ಸುಮಾರು ಹದಿನೈದು ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿರುವ ಸಾಮಾನ್ಯ ಜನ, ವಿದ್ಯಾರ್ಥಿ ವೃಂದ, ಜಲ ಸಂರಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ತೆರಳಿ ಅಲ್ಲಿರುವ ಜನರೊಂದಿಗೆ ಮುಕ್ತವಾದ ಚರ್ಚೆಗಿಳಿದು, ಅವರ ಅನುಭವಗಳನ್ನು ದಾಖಲಿಸಿ, ಅವರಿಗೆ ಸಲಹೆ, ಸೂಚನೆಗಳನ್ನು ಕೊಡುವುದಷ್ಟೇ ಅಲ್ಲದೇ ಅವರಿಗಾಗಿಯೇ ಸಿದ್ಧಪಡಿಸಿರುವ ಕನ್ನಡ ವಾಟರ್ ಪೋರ್ಟಲ್ ಬಗ್ಗೆ ಮಾಹಿತಿ ರವಾನಿಸಿ ಅವರನ್ನು ಸಂಕಷ್ಟದಿಂದ ಪಾರು ಮಾಡುವ ಅಭಿಲಾಷೆ ಇವರದು.

ತಮ್ಮ ಪ್ರಯಾಣದ ಭಾಗವಾಗಿ, ಉತ್ತರ ಕರ್ನಾಟಕದ ಹುಬ್ಬಳ್ಳಿ–ಧಾರವಾಡ, ವಿಜಯಪುರ, ಬಾಗಲಕೋಟೆ, ಹಾಗೂ ಹೈದ್ರಾಬಾದ್– ಕರ್ನಾಟಕದ ಕಲಬುರ್ಗಿ, ರಾಯಚೂರು ಜಿಲ್ಲೆಗಳಿಗೆ ಭೇಟಿ ಮಾಡಿ, ಜನರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ವಿಶೇಷ.

ಈ ವೇದಿಕೆಯಲ್ಲಿ ಜನ ತಮ್ಮ ಅನುಭವಗಳನ್ನು ಮುಕ್ತವಾಗಿ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದು. ರೈತರು, ಜನಪರ ಕಾಳಜಿ ಹೊಂದಿದವರು, ನೀರಿನ ಮಿತ ಬಳಕೆ, ಸದ್ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸ ಬಯಸುವವರು, ಹಿರಿಯರು–ಕಿರಿಯರು ಎನ್ನುವ ಭೇದ–ಭಾವ ಮರೆತು ನೀರು ಸಂರಕ್ಷಣೆ, ಸಂರಕ್ಷಣಾ ವಿಧಾನಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.

ಈ ವೇದಿಕೆಯನ್ನು, ಇಲ್ಲಿಗೆ ತಲುಪುವ ಲೇಖನ, ಕವನ, ಕವಿತೆಗಳನ್ನು ನಿರ್ವಾಹಕರು ವಾರಕ್ಕೆ ಎರಡು ಬಾರಿ ಅಪ್ ಡೇಟ್ ಮಾಡುತ್ತಾರೆ. ಒಮ್ಮೆ ಈ ವೇದಿಕೆಗೆ ತೆರೆದುಕೊಂಡರೆ ಸಾಕು, ನಿಮಗೆ ಬೇಕಾದ ಮಾಹಿತಿಯ ಜೊತೆಗೆ, ಸಂಪನ್ಮೂಲ ವ್ಯಕ್ತಿಗಳ ವಿವರಗಳು, ಅವರು ಬರೆದಿರುವ ಲೇಖನಗಳು, ಪತ್ರಿಕೆಗಳನ್ನು ಪ್ರಕಟವಾಗಿರುವ ಲೇಖನಗಳನ್ನು ಸುಲಭವಾಗಿ ಓದಬಹುದು.

ಈ ವೇದಿಕೆಯಲ್ಲಿ ನೀರಿನ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವವರ ಸಾಲಿನಲ್ಲಿ ದಾಪುಗಾಲು ಇಡುತ್ತಿರುವವರು ಪ್ರಗತಿಪರ ರೈತರು ಎಂದರೆ ಹೆಮ್ಮೆಯ ವಿಷಯವೇ ಸರಿ. ಅವರಿಗಿಂತ ಚೆನ್ನಾಗಿ ನೀರಿನ ಮಹತ್ವವನ್ನು ಅರಿತವರಾರು? ರೈತ ಈ ದೇಶದ ನಾಡಿ ಮಿಡಿತ. ಭೂಮಿಯ ಮೇಲಿರುವ ಸಹಜ, ಸುಂದರ, ಸ್ವಾಭಾವಿಕ ಸಂಪನ್ಮೂಲಗಳ ನಿಜವಾದ ಮಹತ್ವವನ್ನು ತಿಳಿದುಕೊಂಡಿರುವುದು ಅವನು ಮಾತ್ರ. ಆದರೆ, ಇಂದು, ಅವನ ಪರಿಸ್ಥಿತಿ ಹದಗೆಡುತ್ತಿದೆ. ನೀರಿನ ಕೊರತೆಯಿಂದ ಅವನಷ್ಟೇ ಅಲ್ಲದೇ, ಪ್ರತಿಯೊಬ್ಬರೂ ಬೇಸಿಗೆಯ ಆರಂಭದಲ್ಲೇ ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯೇ ಹೀಗಾದರೆ, ಕಡು ಬೇಸಿಗೆಯಲ್ಲಿ ಏನಾದೀತು?

ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಪ್ರಗತಿಪರ ರೈತ ತಮ್ಮಣ್ಣ ಬೆಣ್ಣೂರ ಅವರ ಒಂದು ಕವನ ಎಂಥವರನ್ನೂ ಮೋಡಿ ಮಾಡುತ್ತದೆ. ಬರದಿಂದ ಬಳಲಿ ಬೆಂಡಾದ ಹೊಲಕ್ಕೆ ತಂಪಾದ ಮಳೆ ಹನಿ ಥಟ್ ಎಂದು ಬಿದ್ದರೆ, ರೈತನಿಗಾಗುವ ಸಂತಸ ಹೇಳತೀರದು. ‘ಬರಕ್ಕೆ ಬುತ್ತಿ ಕಟ್ಟೇನ’ ಎನ್ನುವ ಕವನವನ್ನು ಅವರು ಹೀಗೂ ಬರೆದದ್ದುಂಟು...

‘ಮಳೆ ನೀರ ತಡೆದೇನ ಬರಗಾಲ ಅಳಿಸೇನ,
ಬರಡು ಭೂಮ್ಯಾಗ ಬರಕ್ಕೆ ಬುತ್ತಿ ಕಟ್ಟೇನ...’

ಈ ಪದಗಳನ್ನು ಓದುತ್ತಿದ್ದರೆ, ಆ ರೈತನಿಗೆ ಭೂಮಿ, ಪರಿಸರ, ಮಣ್ಣು, ಮಳೆ, ನೀರು ಇವೆಲ್ಲವುಗಳ ಮೇಲಿರುವ ಅತಿಯಾದ ಕಾಳಜಿ ಎದ್ದು ಕಾಣುತ್ತದೆ. ಅವರು ತಮ್ಮ ಅನುಭವಗಳ ಜೊತೆ, ಜನರಿಗೆ ಸ್ಫೂರ್ತಿದಾಯಕವಾಗಿ ಹೇಳುತ್ತಾರೆ. ಇಂತಹ ಅನೇಕ ರೈತರು, ಇಂಡಿಯಾ ವಾಟರ್ ಪೋರ್ಟಲ್ ನಲ್ಲಿ ನಮಗೆ ಕಾಣಸಿಗುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT