ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಕ್ಕೆ ಸಿದ್ದರಾಮಯ್ಯ ಕುತಂತ್ರ

ವೀರಶೈವ ಲಿಂಗಾಯತ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ
Last Updated 22 ಮಾರ್ಚ್ 2018, 11:36 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ನ ದೌರ್ಬಲ್ಯ ಬಳಸಿ ಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವೇಕವಿಲ್ಲದೆ ವೀರಶೈವ– ಲಿಂಗಾಯತ ಸಮುದಾಯ ಒಡೆಯುವ ದುಸ್ಸಾಹಸ ಮಾಡಿದ್ದಾರೆ’ ಎಂದು ಮಾಲೂರಿನ ಬೆಳ್ಳಾವಿ ಸಂಸ್ಥಾನದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ನಡೆದ ವೀರಶೈವ ಲಿಂಗಾಯತ ವೇದಿಕೆಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ನೂರಾರು ವರ್ಷಗಳಿಂದ ಒಂದಾಗಿದ್ದ ಸಮಾಜದಲ್ಲಿ ಒಡಕು ಮೂಡಿಸುವ ಮೂಲಕ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗಿರುವ ಸಿದ್ದರಾಮಯ್ಯರ ಜನ ವಿರೋಧಿ ನೀತಿ ದುರಾದೃಷ್ಟಕರ’ ಎಂದು ಕಿಡಿಕಾರಿದರು.

‘ವೀರಶೈವ ಮತ್ತು ಲಿಂಗಾಯತ ಎಂಬ ಎರಡೂ ಪದಗಳ ಅರ್ಥ ಒಂದೇ. ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ವಿವೇಚನೆ ಇಲ್ಲದೆ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸಮಿತಿ ಹುಟ್ಟು ಹಾಕಿ ಅವರ ಪರವಾಗಿರುವವರನ್ನು ಆ ಸಮಿತಿಗೆ ನೇಮಿಸಿ ತರಾತುರಿಯಲ್ಲಿ ವರದಿ ಪಡೆದಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಈ ಕುತಂತ್ರ ಮಾಡಿದ್ದಾರೆ’ ಎಂದು ದೂರಿದರು.

ಅನಾಥರಾಗಿರುತ್ತಿದ್ದರು:‘ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ ಕುಲಕರ್ಣಿ ಏನೂ ತಿಳಿಯದ ಹುಡುಗರು. ಸಿದ್ದರಾಮಯ್ಯ ಅಧಿಕಾರದ ಅಹಂನಿಂದ ಇವರ ಬೆನ್ನಿಗೆ ನಿಂತು ವೀರಶೈವ– ಲಿಂಗಾಯತ ಸಮಾಜವನ್ನು ಛಿದ್ರಗೊಳಿಸಲು ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಅವರು 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಕಟ್ಟಿದ್ದರಿಂದ ಬಿಜೆಪಿಗೆ ಅಧಿಕಾರಕ್ಕೆ ಬರುವ ಅವಕಾಶ ಕೈತಪ್ಪಿತು. ಯಡಿಯೂರಪ್ಪ ಬಿಜೆಪಿಯಲ್ಲೇ ಇದ್ದಿದ್ದರೆ ಎಂ.ಬಿ.ಪಾಟೀಲ್ ಮತ್ತು ವಿನಯ ಕುಲಕರ್ಣಿ ಅನಾಥರಾಗಿರುತ್ತಿದ್ದರು’ ಎಂದು ಟೀಕಿಸಿದರು.

‘ಈ ಹಿಂದೆ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಮಹಾರಾಷ್ಟ್ರ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದಾಗ ಆ ಮನವಿಯನ್ನು ಒಪ್ಪಿರಲಿಲ್ಲ.
ಕೇಂದ್ರದಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದನ್ನು ಅರಿತು ಸಿದ್ದರಾಮಯ್ಯ ಅಧಿಕಾರ ಮದದಿಂದ ತಾನು ಏನು ಮಾಡಿದರೂ ನಡೆಯುತ್ತದೆ ಎಂದು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಸಂಘಟನೆಗೆ ಮುಂದಾಗಬೇಕು:‘ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮೈಚಳಿ ಬಿಟ್ಟು ಹೊರ ಬಂದು ಸಂಘಟನೆಗೆ ಮುಂದಾಗಬೇಕು’ ಎಂದು ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ
ನೀಡಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಗುರುಸಿದ್ಧ ಎಸ್.ಹುಗಾರ್, ಉಪಾಧ್ಯಕ್ಷ ಎನ್.ಜಿ.ಜಯಣ್ಣ, ಪ್ರಧಾನ ಕಾರ್ಯದರ್ಶಿ ನಟರಾಜ್, ಸಂಘಟನಾ ಕಾರ್ಯದರ್ಶಿ ಬಿ.ಎನ್.ಶಿವಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಬಸವರಾಜು, ಗೃಹರಕ್ಷಕ ದಳ ಮಾಜಿ ಕಮಾಂಡೆಂಟ್ ಬಿ.ಎನ್.ಮರಿಸ್ವಾಮಿ, ಸೂಲೂರು ಗ್ರಾ.ಪಂ ಅಧ್ಯಕ್ಷ ವಿ.ಚನ್ನಯ್ಯ ಒಡೆಯರ್ ಇದ್ದರು.
**
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಅನನುಕೂಲವಾಗಲೆಂಬ ದುರುದ್ದೇಶದಿಂದ ಪ್ರತ್ಯೇಕ ಧರ್ಮದ ಪ್ರಯೋಗಕ್ಕೆ ಮುಂದಾಗಿದ್ದಾರೆ
–ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT