ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಸಂಗ್ರಹ ಟ್ಯಾಂಕ್‌

ಶಾಲಾ ಹಂತದಲ್ಲಿ ಜಲಜಾಗೃತಿ ಮೂಡಿಸುತ್ತಿರುವ ಸರ್ಕಾರೇತರ ಸಂಸ್ಥೆ
Last Updated 22 ಮಾರ್ಚ್ 2018, 12:39 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಕೊಯ್ಲು ಮಾಡಿ, ಶುದ್ಧೀಕರಿಸಿ ಬಳಸುವ ವಿಧಾನದ ಬಗ್ಗೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ (ಎಸ್‌ವಿವೈಎಂ) ಸರ್ಕಾರೇತರ ಸಂಸ್ಥೆಯು ಜಲಜಾಗೃತಿ ಮೂಡಿಸುತ್ತಿದೆ.

ಇದೇ ವೇಳೆ, ಮಳೆ ನೀರು ಕೊಯ್ಲಿನ ಟ್ಯಾಂಕ್‌ ನಿರ್ಮಿಸಿಕೊಳ್ಳಲು ಆಸಕ್ತಿ ತೋರಿಸಿದ 14 ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಕಾಮಗಾರಿ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಿ, ಅನುಷ್ಠಾನ ಮಾಡುತ್ತಿದೆ. ಹೀರಾಪುರ, ಪುಚ್ಚಲದಿನ್ನಿ, ದುಗನೂರ, ರಾಯಚೂರು ನಗರದ ಹಾಷ್ಮಿಯಾ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಚಿತ್ತಾಕರ್ಷಕ ಮಳೆ ಕೊಯ್ಲು ನೀರಿನ ಟ್ಯಾಂಕ್‌ ನಿರ್ಮಾಣವಾಗಿವೆ. ಶಾಲೆಗೆ ಬರುವವರ ಗಮನ ಸೆಳೆಯುವ ರೀತಿಯಲ್ಲಿ ನೀರಿನ ಟ್ಯಾಂಕ್‌ ಮೇಲೆ ಚಿತ್ರಗಳನ್ನು ಬಿಡಿಸಿ, ಮಕ್ಕಳ ಮೇಲೆ ಪ್ರಭಾವ ಬೀರುವಂತೆ ಮಾಡಲಾಗಿದೆ.

ಪ್ರತಿಯೊಂದು ಟ್ಯಾಂಕ್‌ ಮೇಲೆ ವೆಚ್ಚದ ವಿವರ ಫಲಕ ಅಳವಡಿಸಿದ್ದು, ತುಂಬಾ ಕಡಿಮೆ ಹಣ ಬಳಸಿ ಸುಸಜ್ಜಿತವಾದ ಟ್ಯಾಂಕ್‌ ಕಟ್ಟಿರುವುದು ಅಚ್ಚರಿ ಮೂಡಿಸುತ್ತದೆ. ತಾರಸಿ ಮೇಲೆ ಬೀಳುವ ಮಳೆ ನೀರು ಶುದ್ಧೀಕರಣ ಘಟಕದಲ್ಲಿ ಸಂಗ್ರಹವಾಗುವುದಕ್ಕೆ ಕೊಳವೆಗಳನ್ನು ಹಾಕಲಾಗಿದೆ. ಶುದ್ಧ ನೀರಿನ ಟ್ಯಾಂಕ್‌ಗಳ ಮೇಲೆ ಕಚ್ಚಾ ನೀರು ಶುದ್ಧೀಕರಣದ ವ್ಯವಸ್ಥೆ ಮಾಡಲಾಗಿದೆ. ಜಲ್ಲಿಕಲ್ಲು, ಮರಳಿನ ಮೂಲಕ ನೀರು ಶುದ್ಧೀಕರಣವಾಗುವಂತೆ ಮಾಡಲಾಗಿದೆ.

ಹೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ಸಾವಿರ ಲೀಟರ್‌ ಸಾಮರ್ಥ್ಯದ ಮಳೆ ನೀರು ಕೊಯ್ಲು ಟ್ಯಾಂಕ್‌ನ್ನು ₹38,810 ವೆಚ್ಚದಲ್ಲಿ ಸಂಸ್ಥೆಯು ನಿರ್ಮಿಸಿದೆ. ಇನ್ನೊಂದು ಪ್ರಮುಖ ಅಂಶವೆಂದರೆ, ಮಳೆ ನೀರಿನ ಕೊಯ್ಲು ಮಾಡುವ ಯೋಜನೆ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಮುದಾಯಗಳನ್ನು ಸೇರಿಸಿಕೊಳ್ಳುವುದು. ಎಸ್‌ವಿವೈಎಂ ಸಂಸ್ಥೆಯು ₹31,800 ಆರ್ಥಿಕ ನೆರವು ಒದಗಿಸಿದೆ. ಜಂಬಲದಿನ್ನಿ ಗ್ರಾಮ ಪಂಚಾಯಿತಿ ಸದಸ್ಯರು ಒಟ್ಟಾಗಿ ₹10,750 ದೇಣಿಗೆ ನೀಡಿದ್ದಾರೆ. ಎಸ್‌ಡಿಎಂಸಿ ಸಮಿತಿಯು ₹2 ಸಾವಿರ ನೀಡಿದೆ.

ಜಂಬಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಚ್ಚಲದಿನ್ನಿ ಸರ್ಕಾರಿ ಶಾಲೆಯಲ್ಲಿ ನಿರ್ಮಿಸಿರುವ ಐದು ಸಾವಿರ ಲೀಟರ್‌ ಸಾಮರ್ಥ್ಯದ ಮಳೆನೀರು ಕೊಯ್ಲಿನ ಟ್ಯಾಂಕ್‌ ₹58,617 ವೆಚ್ಚದಲ್ಲಿ ನಿರ್ಮಾಣವಾಗಿದೆ. ಅದರಲ್ಲಿ ₹10,750 ಮೊತ್ತವನ್ನು ಗ್ರಾಮ ಪಂಚಾಯಿತಿ ನೀಡಿದ್ದರೆ, ಏಳು ಸಾವಿರ ಮೊತ್ತವನ್ನು ಶಾಲಾ ಅನುದಾನದಿಂದ ಪಡೆದುಕೊಳ್ಳಲಾಗಿದೆ. ಇನ್ನುಳಿದ ಮೊತ್ತವನ್ನು ಸಂಸ್ಥೆಯು ಭರಿಸಿ ಟ್ಯಾಂಕ್‌ ನಿರ್ಮಿಸಿದೆ.

ಬಿಸಿಯೂಟದ ಸಮಯದಲ್ಲಿ ಮಕ್ಕಳು ಕೈ ತೊಳೆಯುವುದಕ್ಕೆ ಹಾಗೂ ಶುದ್ಧ ನೀರು ಕುಡಿಯುವುದಕ್ಕೆ ಈ ಟ್ಯಾಂಕ್‌ಗಳು ಅನುಕೂಲವಾಗಿವೆ. ಮಳೆಗಾಲದಲ್ಲಿ ಮಳೆ ನೀರನ್ನು ಶುದ್ಧೀಕರಿಸಿ ಬಳಸಿದರೆ, ಇನ್ನುಳಿದ ದಿನಗಳಲ್ಲಿ ಶಾಲೆಗೆ ಪೂರೈಕೆಯಾಗುವ ಕಚ್ಚಾ ನೀರನ್ನು ಶುದ್ಧ ಮಾಡುವುದಕ್ಕೆ ಟ್ಯಾಂಕ್‌ಗಳು ಬಳಕೆಯಾಗುತ್ತಿವೆ.

‘ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಎಸ್‌ವಿವೈಎಂ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇಂಗ್ಲೆಂಡಿನ್‌ ‘ವಾಟರ್‌ ಏಡ್‌’ ಸರ್ಕಾರೇತರ ಸಂಸ್ಥೆಯು ಯೋಜನೆಗೆ ಅನುದಾನ ಒದಗಿಸುತ್ತಿದ್ದು, ಸಮಾಜದ ಜನರ ಸಹಕಾರದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು, ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಎಲ್ಲ ಶಾಲೆಗಳಲ್ಲಿ ಶುಚಿತ್ವ ಹಾಗೂ ನೀರು ಉಳಿಸಿ, ಬಳಸುವ ವಿಧಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮಾಡಿಸುತ್ತೇವೆ. ಮಕ್ಕಳ ಮೂಲಕ ಸಮಾಜದಲ್ಲಿ ಪರಿವರ್ತನೆ ತರಬಹುದು ಎನ್ನುವುದು ನಮ್ಮ ನಂಬಿಕೆ’ ಎಂದು ಎಸ್‌ವಿವೈಎಂ ಯೋಜನಾ ಸಹ–ಸಂಚಾಲಕ ರದೀಶಕುಮಾರ ಎಂ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
**
ಎಲ್ಲೆಲ್ಲಿ ಮಳೆನೀರು ಸಂಗ್ರಹ

ರಾಯಚೂರು ತಾಲ್ಲೂಕಿನ ಹೀರಾಪುರ, ಪುಚ್ಚಲದಿನ್ನಿ, ದುಗನೂರ, ಬುಡದಿನ್ನಿ ಹಾಗೂ ರಾಯಚೂರು ನಗರದ ಹಾಸ್ಮಿಯಾ ಶಾಲೆಯಲ್ಲಿ ಮಳೆ ಕೊಯ್ಲು ಟ್ಯಾಂಕ್‌ ಸಿದ್ಧಗೊಂಡಿವೆ. ಇಡಪನೂರ, ಗಂಜಳ್ಳಿ, ಹೆಂಬೆರಾಳ, ಗೌಸನಗರ, ಜೆ.ವೆಂಕಟಾಪುರ, ಮಿಡಗಲದಿನ್ನಿ, ಗಾಣದಾಳ, ಸುಲ್ತಾನಗಪುರ ಹಾಗೂ ಸಗಮಕುಂಟಾದಲ್ಲಿ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT