ಶನಿವಾರ, 11 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜರಥ’ ನೋಡದೋನು ಕಚಡಾ ನನ್ಮಗ..’

Last Updated 3 ಏಪ್ರಿಲ್ 2018, 8:01 IST
ಅಕ್ಷರ ಗಾತ್ರ

ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡ ‘ನಮ್ಮ ಚಿತ್ರವನ್ನು ನೋಡಿ, ಆಶೀರ್ವದಿಸಿ’ ಎಂದು ಪ್ರೇಕ್ಷಕರನ್ನು ವಿನಂತಿಸಿಕೊಳ್ಳುವುದು ನೋಡಿರುತ್ತೇವೆ. ರಾಜಕುಮಾರ್‌ ಅವರು ಪ್ರೇಕ್ಷಕರನ್ನು ‘ಅಭಿಮಾನಿ ದೇವರು’ ಎಂದೇ ಕರೆದರು. ಆದರೆ ‘ರಾಜರಥ’ ಸಿನಿಮಾದ ಅನೂಪ್‌ ಮತ್ತು ನಿರೂಪ್‌ ಭಂಡಾರಿ ಸಹೋದರರು ಇನ್ನೊಂದು ಹೆಜ್ಜೆ, ಅಲ್ಲಲ್ಲ, ಇನ್ನೊಂದು ದಡಕ್ಕೆ ಹಾರಿ ಹೊಸ ಮಾದರಿಯೊಂದನ್ನು ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ‘ರಾಜರಥ’ ಕನ್ನಡದ ಸಿನಿಮಾರಂಗದ ಸಿದ್ಧ ಮಾದರಿಯನ್ನು ಮುರಿದ ಹೊಸ ರೀತಿಯ ಪ್ರಯತ್ನ ಎಂಬ ಭ್ರಮೆಯನ್ನು ಜನರಲ್ಲಿಯೂ ಹುಟ್ಟಿಸಲು ಚಿತ್ರತಂಡ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ಇಂಥದ್ದೊಂದು ಹೊಸ ಪ್ರಯೋಗವನ್ನು ನೋಡಬೇಕಾಗಿದ್ದು ಜನರ ಕರ್ತವ್ಯ ಅಲ್ಲವೇ?

ತಮ್ಮ ಮಾತನ್ನು ನೋಡಿ ಸಿನಿಮಾ ನೋಡಿದರೆ ಸರಿ, ಇಷ್ಟೊಂದು ಕಷ್ಟಪಟ್ಟು ಮಾಡಿರುವ ಸಿನಿಮಾವನ್ನು ನೋಡದೇ ಇರುವವರಿಗೆ ಏನೆನ್ನ ಬೇಕು?

ರ್‍ಯಾಪಿಡ್‌ ರಶ್ಮಿ ಜತೆ ನಡೆಸಿದ ಸಂದರ್ಶನವೊಂದರಲ್ಲಿ ನಿರೂಪ್‌ ಮತ್ತು ಅನೂಪ್‌ ಭಂಡಾರಿಯವರು ಜನರನ್ನು ಸಿನಿಮಾ ನೋಡುವಂತೆ ಆಮಂತ್ರಿಸಿರುವ ಪರಿಯನ್ನು ಅವರ ಮಾತಿನಲ್ಲಿಯೇ ಕೇಳಬೇಕು. ಭಂಡಾರಿ ಸಹೋದರರ ಈ ಹೊಸ ಮಾದರಿಯ ಆವಿಷ್ಕಾರದಲ್ಲಿ ಮನಃಪೂರ್ತಿ ನಕ್ಕು, ಅವರ ಮಾತನ್ನು ಪುನರುಚ್ಛರಿಸಿದ ಆವಂತಿಕಾ ಶೆಟ್ಟಿ ಮತ್ತು ಮತ್ತಷ್ಟು ಇನ್ನಷ್ಟು ಹೊಸ ಶಬ್ದಗಳನ್ನು ಹುಡುಕಿಕೊಳ್ಳಲು ಅವಕಾಶ ಕೊಟ್ಟ ರ್‍ಯಾಪಿಡ್‌ ರಶ್ಮಿ ಅವರ ಸಹಕಾರವನ್ನೂ ಇಲ್ಲಿ ಕಡೆಗಣಿಸುವಂತಿಲ್ಲ!

ಏನಿದೆ ವಿಡಿಯೊದಲ್ಲಿ?: ರಾಜರಥ ಸಿನಿಮಾ ಕುರಿತ ಸಂದರ್ಶನವೊಂದರ ವಿಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೊದಲ್ಲಿ ರಶ್ಮಿ ‘ರಾಜರಥ ಸಿನಿಮಾ ನೋಡಿಲ್ಲದೇ ಇರೋರು.....?’ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಅದಕ್ಕೆ ಅನೂಪ್‌ ಭಂಡಾರಿ ‘ಕಚಡಾ ನನ್ಮಗ’ ಎಂದು ಉತ್ತರಿಸಿದ್ದಾರೆ.

ಉತ್ತರ ಬರುತ್ತಿದ್ದಂತೆಯೇ ಪಕ್ಕ ಕೂತಿದ್ದ ಆವಂತಿಕಾ, ನಿರೂಪ್‌ ಜತೆಗೆ ರ್‍ಯಾಪಿಡ್‌ ರಶ್ಮಿ ಎಲ್ಲರೂ ಭಾರತ ತಂಡ ವಿಶ್ವಕಪ್‌ ಗೆದ್ದ ಸುದ್ದಿ ಕೇಳಿದವರಂತೆ ಸಂತೋಷದಿಂದ ನಕ್ಕು, ಚಪ್ಪಾಳೆ ತಟ್ಟುತ್ತಾರೆ. ಹಿನ್ನೆಲೆಯಲ್ಲಿ ಕೇಕೆ, ಶಿಳ್ಳೆಗಳ ಶಬ್ದವೂ ಕೇಳಿಬರುತ್ತದೆ. ಇದೇ ಪ್ರಶ್ನೆಯನ್ನು ಆವಂತಿಕಾ ಅವರಿಗೆ ಕೇಳಿದಾಗಲೂ ಅದೇ ಉತ್ತರ.

ಕೊನೆಯಲ್ಲಿ ನಾಯಕನಟ ನಿರೂಪ್‌ ಅವರಿಗೆ ಇದೇ ಪ್ರಶ್ನೆಯನ್ನು ಕೇಳುವ ಮೊದಲು ‘ನೀವು ಈ ಉತ್ತರವನ್ನು ಕೊಡಬೇಡಿ?’ ಎಂದೂ ಸೇರಿಸಿದ್ದಾರೆ. ಅದಕ್ಕೆ ನಿರೂಪ್‌ ‘ಇಲ್ಲ, ನಾನು ಅವರ ಮಾತಿಗೆ ಇನ್ನೊಂದು ಮಾತು ಸೇರಿಸಿ ಹೇಳುತ್ತೇನೆ. ಕಚಡಾ ಲೋಫರ್‌ ನನ್ಮಗ’ ಎಂದು ಹೇಳಿದ್ದಾರೆ.

‘ಅನೂಪ್‌ ಮತ್ತು ನಿರೂಪ್‌ ಭಂಡಾರಿ ಸಹೋದರರು ಚಿತ್ರರಂಗಕ್ಕೆ ಪರಿಚಿತರಾಗಿದ್ದು 2015ರಲ್ಲಿ ತೆರೆಕಂಡ ‘ರಂಗಿತರಂಗ’ ಚಿತ್ರದ ಮೂಲಕ. ಬಾಹುಬಲಿ ಬಿಡುಗಡೆಯ ಸಂದರ್ಭದಲ್ಲಿ ‘ರಂಗಿತರಂಗ’ ಬಿಡುಗಡೆಯಾದಾಗ ಇದೇ ನಿರೂಪ್‌ ಮತ್ತು ಅನೂಪ್‌ ‘ಕನ್ನಡ ಅಭಿಮಾನ’ದ ಫಲಕವನ್ನು ಮುಂದಿಟ್ಟುಕೊಂಡು ಸಿನಿಮಾ ನೋಡುವಂತೆ ಪ್ರೇಕ್ಷಕರನ್ನು ಕೇಳಿಕೊಂಡಿದ್ದರು. ಆ ಚಿತ್ರ ತಕ್ಕಮಟ್ಟಿಗೆ ಯಶಸ್ಸನ್ನೂ ಕಂಡಿತು. ಆದರೆ ಎರಡನೇ ಚಿತ್ರ ಮಾಡುವಷ್ಟರಲ್ಲಿ ‘ವಿನಂತಿ’ಯ ಜಾಗವನ್ನು ‘ಅಪ್ಪಣೆ’ ಆವರಿಸಿಕೊಂಡಿದೆ. ನಮ್ಮ ಸಿನಿಮಾ ನೋಡದವರು ಕಚಡಾ ಲೋಫರ್‌ ನನ್ಮಕ್ಳು ಎಂದು ಆಶ್ಲೀಲವಾಗಿ ಬೈಯುವ ಮಟ್ಟಕ್ಕೂ ‘ಗೆಲುವಿನ ನಶೆ’ ಏರಿದೆ.

ತಪ್ಪೊಪ್ಪಿಗೆಯ ಮುಖವಾಡ: ಯಾವಾಗ ತಮ್ಮ ಸುಸಂಸ್ಕೃತ ಪದಶ್ರೀಮಂತಿಕೆಯ ಪರಿಚಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಗಿ, ಸಾಕಷ್ಟು ಆಕ್ರೋಶ ವ್ಯಕ್ತವಾಯಿತೋ ಅನೂಪ್‌ ಭಂಡಾರಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಕೋರಿ ಕೈತೊಳೆದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. ತಮ್ಮ ‘ತಪ್ಪು’ ಒಪ್ಪಿಕೊಂಡಿರುವುದೇನೋ ಸರಿ. ಆ ಕ್ಷಮಾಪಣೆಯಲ್ಲಿ ‘ತಮ್ಮ ಸಿನಿಮಾ’ಕ್ಕೆ ಸೀಮಿತವಾಗಿದ್ದ ಮಾತನ್ನು ಇಡೀ ಚಿತ್ರರಂಗಕ್ಕೆ ಅನ್ವಯಿಸಿ ಪಾರಾಗುವ ಪ್ರಯತ್ನವನ್ನೂ ಮಾಡಿದ್ದಾರೆ.

‘ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು’ ಎಂದು ಅವರು ಹೇಳಿಕೊಂಡಿರುವುದು ‘.... ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದನಂತೆ’ ಎಂಬ ಗಾದೆಯನ್ನು ನೆನಪಿಸುವ ಹಾಗಿದೆ. ಯಾಕೆಂದರೆ ವಿಡಿಯೊದಲ್ಲಿ ರಶ್ಮಿ ಕೇಳಿರುವ ಪ್ರಶ್ನೆ ಕೇವಲ ರಾಜರಥ ಸಿನಿಮಾಕ್ಕೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗಿದೆ. ಕಣ್ಣೆದುರು ಕಾಣುವ ಸತ್ಯಕ್ಕೂ ‘ಕನ್ನಡಾಭಿಮಾನ’ದ ವೇಷತೊಡಿಸಿ, ಮಂಕುಬೂದಿ ಎರೆಚುವ ಪ್ರಯತ್ನಕ್ಕೆ ಏನೆನ್ನಬೇಕು?

ಭಂಡಾರಿ ಸಹೋದರರ ಈ ಹೊಸ ಬಗೆಯ ಆಮಂತ್ರಣದ ಪರಿಣಾವೋ ಏನೋ ಪ್ರೇಕ್ಷಕರು ಆ ಸಿನಿಮಾಗೆ ಸ್ಪಂದಿಸಿರುವುದು ಅಷ್ಟಕ್ಕಷ್ಟೆ. ಅಷ್ಟೆ ಅಲ್ಲ, ಸಿನಿಮಾ ನೋಡಿರುವವರು ‘ಭಂಡಾರಿ ಸಹೋದರರ’ ಭಾಷಾ ಶ್ರೀಮಂತಿಕೆಗೆ ಇನ್ನಷ್ಟು ಪದಸಂಪತ್ತು ಸೇರಿಸಿ ಅವರಿಗೇ ಮರಳಿಸುತ್ತಿರುವುದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು. ಇಡೀ ಪ್ರಸಂಗವನ್ನು ಗಮನಿಸಿದ ಗಾಂಧಿನಗರದ ಅನುಭವಿ ಮಂದಿ ‘..... ಮಧ್ಯರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡನಂತೆ’ ಎಂಬ ಗಾದೆಯನ್ನು ‘ಅಯೋಗ್ಯರ ಸಿನಿಮಾ ಗೆಲ್ಲಿಸಿಕೊಟ್ರೆ, ಪ್ರೇಕ್ಷಕನಿಗೆ ಬಾಯಿಗೆ ಬಂದಂಗೆ ಬೈದ್ರಂತೆ’ ಎಂಬ ಬದಲಾಯಿಸಿಕೊಂಡು ಹೇಳಿ ನಗುತ್ತಿರುವುದು ಇನ್ನೂ ಭಂಡಾರಿ ಸಹೋದರರಿಗೆ ಕೇಳಿಸಿದಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT