ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಇಲ್ಲಿ ಯಾರೂ ಪ್ರಬಲರಲ್ಲ!

Last Updated 5 ಏಪ್ರಿಲ್ 2018, 6:28 IST
ಅಕ್ಷರ ಗಾತ್ರ

ಬಳ್ಳಾರಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದ ಇದುವರೆಗಿನ ಚುನಾವಣೆ ಫಲಿತಾಂಶಗಳನ್ನು ಗಮನಿಸಿದರೆ, ನಿರಂತರವಾಗಿ ಇಲ್ಲಿ ಯಾರೂ ಪ್ರಬಲರಾಗಿರಲಿಲ್ಲ ಎಂಬ ಸಂಗತಿ ಎದ್ದುಕಾಣುತ್ತದೆ.ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಲವು ಹಳ್ಳಿಗಳನ್ನೂ ಒಳಗೊಂಡಿದ್ದ ಕ್ಷೇತ್ರದ ಚುನಾವಣಾ ಹಗರಿಬೊಮ್ಮನಹಳ್ಳಿಯಲ್ಲೇ  ನಡೆಯುತ್ತಿದ್ದುದು ವಿಶೇಷ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ, ಕೂಡ್ಲಿಗಿಯೇ ಕೇಂದ್ರವಾಯಿತು. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 1967ರಿಂದ 2004ರವರೆಗೂ ಸಾಮಾನ್ಯ ಕ್ಷೇತ್ರವಾಗಿತ್ತು.

ಇಬ್ಬರ ಸತತ ಗೆಲುವು: ಇಲ್ಲಿ ನಡೆದಿರುವ 12 ಚುನಾವಣೆಗಳಲ್ಲಿ ಇಬ್ಬರು ಮಾತ್ರ ಎರಡು ಬಾರಿ ಸತತ ಗೆಲುವು ಪಡೆಯಲು ಸಾಧ್ಯವಾಗಿತ್ತು. 1985 ಮತ್ತು 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎನ್‌.ಟಿ.ಬೊಮ್ಮಣ್ಣ, 2008 ಮತ್ತು 2013ರ ಚುನಾವಣೆಯಲ್ಲಿ ಬಿ.ನಾಗೇಂದ್ರ– ಒಮ್ಮೆ ಬಿಜೆಪಿಯಿಂದ ಮತ್ತೊಮ್ಮೆ ಪಕ್ಷೇತರರಾಗಿ ಗೆದ್ದಿದ್ದರು. ಇಲ್ಲಿನ ಚುನಾವಣೆ ಇತಿಹಾಸದಲ್ಲಿ ಎರಡು ಬಾರಿ ಗೆದ್ದವರು ಇವರಿಬ್ಬರೇ. ಐದು ಬಾರಿ ಕಾಂಗ್ರೆಸ್‌, ಎರಡು ಬಾರಿ ಬಿಜೆಪಿ, ಒಮ್ಮೆ ಜನತಾಪಕ್ಷ, ಮಗುದೊಮ್ಮೆ ಜನತಾ ದಳ ಗೆದ್ದಿತ್ತು. ಇಬ್ಬರು ಪಕ್ಷೇತರರೂ ಆಯ್ಕೆಯಾಗಿದ್ದರು.ಇಲ್ಲಿನವರು ಅಲ್ಲಿ... ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಅನ್ನು ಸೋಲಿಸಿ ಆಯ್ಕೆಯಾಗಿದ್ದ ನಾಗಪ್ಪ, 1967ರ ಚುನಾವಣೆಯಲ್ಲಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದರಿಂದ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.ಪ್ರಸ್ತುತ ನಗರ ಕ್ಷೇತ್ರದ ಶಾಸಕರಾಗಿರುವ ಅನಿಲ್‌ಲಾಡ್‌ 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಸತತ ಮೂರು ಸೋಲು: ಈ ಹಿಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ ಸೋತಿದೆ. 2008ರಿಂದಲೂ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿರುವ ಬಿ.ನಾಗೇಂದ್ರ ಈ ಬಾರಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಖಚಿವಾಗಿಲ್ಲ.ಈ ನಡುವೆ ಬೊಮ್ಮಣ್ಣ ಅವರನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾಗಿದೆ. ರಾಜಕೀಯವಾಗಿ ಸಕ್ರಿಯರಾಗಿರುವ ಸದ್ಯೋಜಾತ ಕುಟುಂಬ ಮತ್ತು ನಬಿ ಅವರ ನಡೆಯೂ ಕುತೂಹಲಕಾರಿಯಾಗಿದೆ.

ಕೊಟ್ಟೂರು ಕೂಡ್ಲಿಗಿಗೇ ಸೇರಿತ್ತು...

ಬಳ್ಳಾರಿ: 1978ರಲ್ಲಿ ಕೊಟ್ಟೂರು ಕ್ಷೇತ್ರವಾಗಿ ರೂಪುಗೊಳ್ಳುವ ಮುನ್ನ ಕೂಡ್ಲಿಗಿಗೇ ಸೇರಿತ್ತು. ಈಗ ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿದೆ.1967ರಲ್ಲಿ ಕೂಡ್ಲಿಗಿಯಿಂದ ಆಯ್ಕೆಯಾಗಿದ್ದ ಎಂ.ಎಂ.ಜೆ ಸದ್ಯೋಜಾತ 1978ರಲ್ಲಿ ಕೊಟ್ಟೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1972ರಲ್ಲಿ ಕೂಡ್ಲಿಗಿಯಿಂದ ಗೆದ್ದಿದ್ದ ಬಿ.ಎಸ್‌.ವೀರಭದ್ರಪ್ಪ 1983ರಲ್ಲಿ ಕೊಟ್ಟೂರಿನಿಂದ ಆಯ್ಕೆಯಾಗಿದ್ದರು.1985ರಿಂದ 2004ರವರೆಗೂ, ಐದು ಚುನಾವಣೆಗಳಲ್ಲಿ ಕೊಟ್ಟೂರು ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿತ್ತು. ಎರಡು ಬಾರಿ ಕೆ.ವಿ.ರವೀಂದ್ರನಾಥ ಬಾಬು, ನಂತರ ಟಿ.ಮರುಳಸಿದ್ದನಗೌಡ, ಅವರ ಬಳಿಕ ಟಿ.ಭಾಗೀರಥಿ ಆಯ್ಕೆಯಾಗಿದ್ದರು. ಇವರೆಲ್ಲರ ಎದುರು ಕ್ರಮವಾಗಿ ಒಮ್ಮೆ ಜನತಾಪಕ್ಷ, ಎರಡು ಬಾರಿ ಜನತಾದಳ, ಒಮ್ಮೆ ಜೆಡಿಯು, ಮತ್ತೊಮ್ಮೆ ಜೆಡಿಎಸ್‌ ಸೋಲುಂಡಿತ್ತು.

ಸಚಿವರಾಗಿದ್ದವರು...

ಬಳ್ಳಾರಿ: ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್‌.ಎಂ.ನಬಿ ಅವರು ಎಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು.ಕೊಟ್ಟೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಎಂ.ಜೆ.ಸದ್ಯೋಜಾತ ಗುಂಡೂರಾವ್‌ ಸಂಪುಟದಲ್ಲಿ ಸಾರಿಗೆ ಮತ್ತು ಸಣ್ಣ ನೀರಾವರಿ ಸಚಿವರಾಗಿದ್ದರು. ಟಿ.ಭಾಗೀರಥಿ ಮರುಳಸಿದ್ದನಗೌಡ ಅವರು ಎನ್‌.ಧರ್ಮಸಿಂಗ್‌ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT