ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರು ನೀಡಿದ ಹಸಿರು ಮೆಣಸಿನಕಾಯಿ

ಕೃಷಿ ಕಾಯಕದಲ್ಲೆ ಕೈಲಾಸ ಕಾಣುತ್ತಿರುವ ದಂಪತಿ
Last Updated 20 ಏಪ್ರಿಲ್ 2018, 8:39 IST
ಅಕ್ಷರ ಗಾತ್ರ

ಶನಿವಾರಸಂತೆ: ಕೃಷಿಯೇ ಬದುಕು, ಬದುಕೇ ಕೃಷಿ ಎಂದು ಕಾಯಕದಲ್ಲೇ ಕೈಲಾಸ ಕಾಣುತ್ತಾ ದುಡಿಯುತ್ತಿರುವ ದಂಪತಿ, ಸೂರ್ಯೋದಯಕ್ಕೆ ಮೊದಲೇ ಎದ್ದು ತೋಟ–ಗದ್ದೆಗೆ ಬಂದು ರಾತ್ರಿ 8ರವರೆಗೆ ದುಡಿಮೆಯಲ್ಲಿ ತೊಡಗಿಕೊಳ್ಳುತ್ತಾರೆ.

ಪಟ್ಟಣದಿಂದ 1 ಕಿ.ಮೀ ದೂರದ ಕಾಜೂರು ಸೇತುವೆ ಮೇಲೆ ಹಾದು ಹೋಗುವಾಗ ಎಡಭಾಗದತ್ತ ದೃಷ್ಟಿ ಹಾಯಿಸಿದರೆ ಗದ್ದೆಯೊಂದನ್ನು ಕಾಣಬಹುದು. ಅದರ ಮಾಲೀಕರೇ ಕಾಜೂರು ಗ್ರಾಮದ ಕೆ.ಎಂ.ಚಂದ್ರಶೇಖರ್–ನಾಗಮ್ಮ ದಂಪತಿ.

ರೈತ ಚಂದ್ರಶೇಖರ್ 50 ವರ್ಷಗಳಿಂದ ಕೃಷಿಕ ಜೀವನ ನಡೆಸುತ್ತಿದ್ದಾರೆ. 3ನೇ ತರಗತಿಯಲ್ಲಿ ಓದುತ್ತಿರುವಾಗಲೇ ತಂದೆ ಕೆ.ಬಿ. ಮಲ್ಲಪ್ಪ ಅವರ ಅನಾರೋಗ್ಯ ಅವರನ್ನು ಕೃಷಿ ಕ್ಷೇತ್ರಕ್ಕೆ ಕರೆತಂದಿತು. ತಂದೆಗೆ ನೆರವಾಗುತ್ತಾ ಕೃಷಿಯನ್ನೇ ಬದುಕಾಗಿಸಿಕೊಂಡರು. 30ನೇ ವಯಸ್ಸಿನಲ್ಲಿ ಅವರ ಬಾಳ ಸಂಗಾತಿಯಾಗಿ ಬಂದ ನಾಗಮ್ಮ ವ್ಯವಸಾಯದಲ್ಲಿ ಪತಿಗೆ ನೆರಳಾದರು.

ಪಿತ್ರಾರ್ಜಿತವಾಗಿ ಬಂದ 7 ಎಕರೆ ಗದ್ದೆ, 4 ಎಕರೆ ಕಾಫಿತೋಟದಲ್ಲಿ ಬದುಕು ಕಟ್ಟಿಕೊಂಡ ಚಂದ್ರಶೇಖರ್ ಕೃಷಿಯಲ್ಲೇ ಭವಿಷ್ಯ ರೂಪಿಸಿಕೊಂಡರು. ಜತೆಗೆ ಪಶುಪಾಲನೆ. ಭತ್ತದ ವ್ಯವಸಾಯದ ಬಳಿಕ ಶುಂಠಿ, ನೆಲಗಡಲೆ, ಜೋಳ, ಹಸಿರು ಮೆಣಸಿನಕಾಯಿ... ಹೀಗೆ ಒಂದಾದ ಮೇಲೊಂದರಂತೆ ಬೆಳೆ ಬೆಳೆಯುತ್ತಾ ಅನ್ನದ ಬಟ್ಟಲು ತುಂಬಿಸಿಕೊಂಡರು.

ಕಾಫಿತೋಟದಲ್ಲಿ ಕಾಳುಮೆಣಸು, ಕಿತ್ತಳೆ ಬೆಳೆದಿದ್ದಾರೆ. ದನದ ಗೊಬ್ಬರ ಬಳಸಿ ಸಾವಯವ ಕೃಷಿಯನ್ನೂ ಕೈಗೊಂಡಿದ್ದಾರೆ. ಗದ್ದೆ ಉಳುಮೆಗೆ ಎತ್ತುಗಳ ಜತೆ ಟ್ರ್ಯಾಕ್ಟರ್ ಬಳಸುತ್ತಾರೆ. ಪಕ್ಕದ ಹೊಳೆಯಿಂದ ಪೈಪ್ ಮೂಲಕ ವ್ಯವಸಾಯಕ್ಕೆ ನೀರು ಹಾಯಿಸುತ್ತಾರೆ. ಕೆಲ ವರ್ಷಗಳ ಹಿಂದೆ ಶನಿವಾರಸಂತೆ ಹೋಬಳಿಯಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಹಸಿರು ಮೆಣಸಿನಕಾಯಿ ಬೆಳೆದ ಮೊದಲ ರೈತ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಪ್ರಶಸ್ತಿಯ ಬೆನ್ನು ಹತ್ತಿ ಹೋಗದಿದ್ದರೂ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಪ್ರಿಯಾಂಕ, ಜಿ4, ಉಲ್ಕಾ ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈಗಲೂ ಪ್ರತಿವರ್ಷ ಒಂದೂವರೆ ಸಾವಿರ ಚೀಲದಷ್ಟು ಹಸಿರುಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಐಟಿ, ತುಂಗಾ, ಇಂಟಾನ್, ರಾಜಮುಡಿ, ಚುಪ್ಕಾ, ಸೋನಾಮಸುರಿ ಭತ್ತ ಬೆಳೆಯುತ್ತಾರೆ. ‘ಕೃಷಿಯಿಂದ ವರ್ಷಕ್ಕೆ ₹ 2 ಲಕ್ಷ ಆದಾಯವಿದೆ. ಅಸಲು ಕಳೆದು ₹ 20 ಸಾವಿರ ಲಾಭ ದೊರೆಯುತ್ತದೆ. ಹಾಲು, ಬೆಣ್ಣೆ ಮಾರುತ್ತೇವೆ. ದುಡಿಮೆಯೇ ಬದುಕು ಎಂಬ ಧನ್ಯತಾ ಭಾವನೆಯಿಂದ ದುಡಿದರೇ ಜೀವನ ಹಸನಾಗುತ್ತದೆ. ಒಂದು ದಿನ ದುಡಿಯದಿದ್ದರೇ ಏನನ್ನೋ ಕಳೆದುಕೊಂಡ ಭಾವನೆ’ ಎನ್ನುತ್ತಾರೆ ದಂಪತಿ.

**

ಕಾಜೂರಿನ ಚಂದ್ರಶೇಖರ್ ಅಪ್ಪಟ ರೈತ. ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತಿಗೆ ಅನ್ವರ್ಥವಾಗಿ ಭೂಮಿಯನ್ನೇ ನಂಬಿ, ಬೇಸಾಯದಲ್ಲಿ ಬದುಕು ಕಟ್ಟಿಕೊಂಡ ಶ್ರಮಜೀವಿ  – ಡಿ.ಪಿ. ಭೋಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ.

**

ವ್ಯವಸಾಯ ಬಿಟ್ಟರೇ ಮನುಷ್ಯ ಜೀವನವೇ ವ್ಯರ್ಥ. ಕೃಷಿ ಕೆಲಸದಿಂದ, ಮಣ್ಣಿನೊಡನಾಟದಿಂದ ಉತ್ತಮ ಆರೋಗ್ಯ ಪಡೆಯಬಹುದು. ಆಸ್ಪತ್ರೆ, ವೈದ್ಯರಿಂದ ದೂರವಿರಬಹುದು – ಕೆ.ಎಂ. ಚಂದ್ರಶೇಖರ್,ರೈತ.

**

ಶ.ಗ.ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT