ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಭೂತದಿಂದ ಹಿಂದೆ ಸರಿದರೆ ಸಾಮರಸ್ಯ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಕರ್ನಾಟಕ ಪರಂಪರೆಯ ಜಾತ್ಯತೀತ ನೆಲೆಗಳು
Last Updated 23 ಆಗಸ್ಟ್ 2018, 12:53 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ನಮ್ಮ ಮಿತಿಯಲ್ಲಿ ಎಷ್ಟು ಸಾಧ್ಯವೋ ಜಾತಿಯ ಭೂತದಿಂದ ಹಿಂದೆ ಸರಿದರೆ ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ ಮೂಡಿಸುವಂತಹ ಕೆಲಸ ಮಾಡಲು ಸಾಧ್ಯ. ನಾವು ಹುಟ್ಟಿದ್ದು ಯಾವುದೇ ಜಾತಿಯಲ್ಲಾದರೂ ಜಾತಿ ಕಟ್ಟಳೆ ಮೀರಿ ವಿಶ್ವಮಾನವರಾಗಿ ಬದುಕಬೇಕು’ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ಪರಂಪರೆಯ ಜಾತ್ಯತೀತ ನೆಲೆಗಳು’ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತ್ಯತೀತ ನಿಲುವಿಗೆ ತನ್ನದೇ ಆದ ಪರಂಪರೆ ಇದೆ. ಆದರೆ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ತುಂಬಾ ವಿರಳ. ಜಾತಿ ವಿರಸನ ಆಗಬೇಕು ಎನ್ನುತ್ತಲೇ ನಾವೆಲ್ಲ ಮತ್ತೆ ಜಾತಿಯ ಗೋಡೆ ಕಟ್ಟಿಕೊಳ್ಳುತ್ತಿದ್ದೇವೆ. ಸ್ವಾಮಿಗಳು ಒಂದು ರೀತಿಯ ಜಾತಿ ಗೋಡೆ ಕಟ್ಟಿದರೆ, ಸಾಹಿತಿಗಳು ಹಾಗೂ ರಾಜಕಾರಣಿಗಳು ಬೇರೊಂದು ರೀತಿಯಲ್ಲಿ ಗೋಡೆ ಕಟ್ಟುತ್ತಿದ್ದಾರೆ. ಈ ಗೋಡೆಯನ್ನು ಕೆಡವುವವರು ಯಾರು ಮತ್ತು ಹೇಗೆ ಎಂಬ ಚಿಂತನೆ ಮಾಡಿದರೆ ಸಾಲದು, ಅದನ್ನು ಸಾಕಾರಗೊಳಿಸಬೇಕು’ ಎಂದು ಸಲಹೆ ನೀಡಿದರು.

‘12ನೇ ಶತಮಾನದಲ್ಲಿ ಶರಣರು, ಕನಕದಾಸರು, ಸಂತರು ಜಾತ್ಯತೀತರಾಗಿ ಬಾಳಿದರು. ಬಸವಣ್ಣ ತಮ್ಮನ್ನು ಅಪವರ್ಗೀಕರಣ ಮಾಡಿಕೊಂಡು ತಾನು ಬ್ರಾಹ್ಮಣ ಅಲ್ಲ ಎಂದರು. ಆದರೆ, ಇಂದಿನವರ ಕಾಳಜಿ ಕೇವಲ ‘ಲಿಪ್ಸ್‌ ಸಿಂಪಥಿ’ಗೆ ಸೀಮಿತವಾಗಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಜಾತಿ ವೈಭವೀಕರಣ ನಡೆಯುತ್ತಿದೆ’ ಎಂದರು.

ವಿದ್ಯಾರ್ಥಿಗಳು ಶಾಲಾ– ಕಾಲೇಜಿಗೆ ಸೇರುವಾಗ ಜಾತಿ ಯಾವುದು ಎಂದು ಕೇಳಲಾಗುತ್ತದೆ. ಶಿಷ್ಯವೇತನ, ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳುವಾಗಲೂ ಇದೇ ಪ್ರಶ್ನೆ ಎದುರಾಗುತ್ತಿದೆ. ಒಂದು ಕಡೆ ಜಾತ್ಯತೀತ ಸಮಾಜ ನಿರ್ಮಾಣ ಮಾಡಬೇಕು ಎನ್ನುತ್ತೇವೆ. ಇನ್ನೊಂದೆಡೆ ಜಾತಿ ಇಲ್ಲದೇ ಬದುಕೇ ಇಲ್ಲ ಎಂಬಂತಹ ವಾತಾವರಣ ನಿರ್ಮಾಣ ಮಾಡುತ್ತಿದ್ದೇವೆ. ಈ ಅನಿಷ್ಟ ಪರಂಪರೆಗೆ ವಿದ್ಯಾರ್ಥಿಗಳು, ಸಾಹಿತಿಗಳು, ಸ್ವಾಮೀಜಿಗಳು ಕೊಡಲಿ ಪೆಟ್ಟು ಹಾಕಬೇಕು ಎಂದರು.

ಚಿಂತಕ ಸುಭಾಷ್‌ ಚಂದ್ರ ಮಾತನಾಡಿ, ‘ಜಾತ್ಯತೀತ ಪಕ್ಷದವರು ಎಂದು ಹೇಳಿಕೊಳ್ಳುವವರೇ ಇಂದು ವಿಧಾನಸೌಧದ ಗೋಡೆ ಒಡೆಯುತ್ತಿದ್ದಾರೆ. ರಾಜಕಾರಣಿಗಳಿಗೆ ದೇವಸ್ಥಾನ, ಮಸೀದಿಯನ್ನು ಸುತ್ತುವುದು ದೊಡ್ಡ ಚಟವಾಗಿದೆ. ಇಂದು ಜಾತೀಯತೆಯಷ್ಟೇ ದೊಡ್ಡ ಪಿಡುಗು ಭ್ರಷ್ಟಾಚಾರವೂ ಆಗಿದೆ. ಇವೆರಡೂ ರಾಜಕಾರಣಿಗಳ ಕಪಿಮುಷ್ಟಿಯಲ್ಲಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸದಸ್ಯೆ ಡಾ. ತಾರಿಣಿ ಶುಭದಾಯಿನಿ, ‘ಇಂದಿನ ಐಡೆಂಟಿಟಿ ಪಾಲಿಟಿಕ್ಸ್‌ನಲ್ಲಿ ಜಾತ್ಯತೀತ ಹೆಸರಿನಲ್ಲಿ ಜಾತೀಯತೆ ಹೇಗೆ ಪ್ರಚಲಿತದಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶರಣ ಹಾಗೂ ದಾಸ ಪರಂಪರೆಗಳು ಜಾತ್ಯತೀತ ನೆಲೆಯಲ್ಲಿ ರೂಪುಗೊಂಡ ಧಾರೆಗಳು. ಜಾತ್ಯತೀತಕ್ಕೆ ನಮ್ಮ ಪರಂಪರೆಯಲ್ಲಿ ಉತ್ತರ ಕಂಡುಕೊಳ್ಳಬೇಕಾಗಿದೆ’ ಎಂದರು.

ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ ಮಾತನಾಡಿದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳಸಿದ್ಧಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಜಿ. ಮಂಜುನಾಥ ಹಾಜರಿದ್ದರು.

ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಪಿ. ತಿಲಕ್‌ ಸ್ವಾಗತಿಸಿದರು. ಎನ್‌.ಎಸ್‌. ರಾಜು ನಿರೂಪಿಸಿದರು. ಎ.ಎನ್‌. ಅರುಣ್‌ಕುಮಾರ್‌ ತಂಡದವರು ಜಿ.ಎಸ್‌. ಶೀವರುದ್ರಪ್ಪನವರ ಭಾವಗೀತೆಗಳನ್ನು ಹಾಡಿದರು.

‘ಸಂವಿಧಾನವೇ ನಿಜವಾದ ಧರ್ಮ’
‘ಭಾರತವು ಬಹು ಸಂಸ್ಕೃತಿ, ಭಾಷೆ– ಪರಂಪರೆಯನ್ನು ಹೊಂದಿದೆಯೇ ಹೊರತು ಏಕ ಧರ್ಮ, ಭಾಷೆ, ಸಂಸ್ಕೃತಿಯನ್ನಲ್ಲ. ಭಾರತದ ನಿಜವಾದ ಧರ್ಮವೇ ಸಂವಿಧಾನ. ಅದರ ನೆಲೆಗಟ್ಟಿನಲ್ಲೇ ಜಾತಿ ವ್ಯವಸ್ಥೆಯನ್ನು ನೋಡಲಾಗುತ್ತಿದೆ’ ಎಂದು ಡಾ. ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅವರು, ‘ಶರಣರು, ಸಂತರು ಜಾತಿ ಚೌಕಟ್ಟನ್ನು ಮೀರಿ ಮಾನವೀಯತೆ ಮೈಗೂಡಿಸಿಕೊಂಡು ಸಮ–ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ನಮ್ಮ ಮಕ್ಕಳಿಗೆ ಯಾವುದು ಕಸ, ಯಾವುದು ರಸ; ಯಾವುದು ಮಾನವೀಯ– ಅಮಾನವೀಯ ಎಂಬುದನ್ನು ತೋರಿಸಿಕೊಡಬೇಕು’ ಎಂದರು.

‘ರಾಜ್ಯದ 42 ಅಲೆಮಾರಿ ಸಮುದಾಯಗಳಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ 100ಕ್ಕೂ ಹೆಚ್ಚಿರಲಿಕ್ಕಿಲ್ಲ. ಹಾವನೂರು ವರದಿಯೂ ಕೆಲವು ಸಮುದಾಯವನ್ನು ಯಾವ ವರ್ಗಕ್ಕೆ ಸೇರಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ವಿಫಲವಾಗಿದೆ. ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿಕೊಡಲು ಜಾತಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆಯೇ ಹೊರತು, ಬೇರೆ ಜಾತಿಯವರ ಹಕ್ಕನ್ನು ಕಿತ್ತುಕೊಳ್ಳುವುದಕ್ಕಾಗಿ ಅಲ್ಲ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT