ಆಯ್ದ ಪ್ರಮುಖ ಕಂಪನಿಗಳ ಪ್ರಭಾವ

ಈ ವಾರದಲ್ಲಿ ಫಾರ್ಮಾ ವಲಯದ ಕಂಪನಿ ಸಿಪ್ಲಾ ₹550 ರ ಸಮೀಪದಿಂದ ₹600 ರ ಸಮೀಪಕ್ಕೆ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಎಫ್‌ಡಿಎ ನಡೆಸಿದ ತಪಾಸಣೆಯಲ್ಲಿ ಯಾವುದೇ ನಕಾರಾತ್ಮಕ ಅಂಶಗಳು ಕಂಡುಬಂದಿಲ್ಲದಿರುವುದು ಕಾರಣ.

ಆಯ್ದ ಪ್ರಮುಖ ಕಂಪನಿಗಳ ಪ್ರಭಾವ

ಸೋಮವಾರ ಪೇಟೆಯು ಅಂತರರಾಷ್ಟ್ರೀಯ ಬೆಳವಣಿಗೆಗಳಿಂದ ಭಾರಿ ಒತ್ತಡ ಎದುರಿಸಬಹುದು ಎನ್ನುವ ನಿರೀಕ್ಷೆ ಹೆಚ್ಚಿನವರಲ್ಲಿತ್ತು. ಆರಂಭದಲ್ಲಿ ಸುಮಾರು 250 ಅಂಶಗಳಷ್ಟು ಇಳಿಕೆ ಕಂಡು ನಂತರ ಚೇತರಿಸಿಕೊಂಡ ಸಂವೇದಿ ಸೂಚ್ಯಂಕವು ಅಂದು ಸುಮಾರು ನಾಲ್ಕು ನೂರು ಅಂಶಗಳಷ್ಟು ಏರಿಳಿತ ಪ್ರದರ್ಶಿಸಿ ಅಂತಿಮವಾಗಿ 112 ಅಂಶಗಳ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತ್ತು.

ಸಂವೇದಿ ಸೂಚ್ಯಂಕ ಈ ತಿಂಗಳ ಆರಂಭದಿಂದಲೂ ಸ್ವಲ್ಪಮಟ್ಟಿನ ಏರಿಕೆ ಪ್ರದರ್ಶಿಸಿದರೂ ಅದು ಕೇವಲ ಆಯ್ದ ಕಂಪನಿಗಳಲ್ಲಿ ಮೂಡಿ ಬಂದಿರುವ ಚಟವಟಿಕೆಯ ಪ್ರಭಾವವೇ ಹೊರತು ಎಲ್ಲಾ ವಲಯಗಳ ಷೇರುಗಳ ಭಾಗವಹಿಸುವಿಕೆಯಿಂದಲ್ಲ. ಪ್ರಮುಖ ಕಂಪನಿಗಳಾದ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟಿಸಿಎಸ್, ಮಾರುತಿ ಸುಜುಕಿ, ಎಲ್ ಆ್ಯಂಡ್‌ ಟಿ ಯಂತಹ ಷೇರುಗಳ ಕೊಡುಗೆಯೇ ಅಪಾರವಾಗಿದೆ. ಟಾಟಾ ಮೋಟರ್‌,  ಸನ್ ಫಾರ್ಮಾ, ಯೆಸ್ ಬ್ಯಾಂಕ್ ಹೆಚ್ಚಿನ ಚುರುಕು ಪ್ರದರ್ಶಿಸಲಾಗಲಿಲ್ಲ. ಶುಕ್ರವಾರ ಕೋಲ್ ಇಂಡಿಯಾ ಷೇರಿನ ಬೆಲೆಯು ಕೊನೆಯ ಅರ್ಧಗಂಟೆಯ ಸಮಯದಲ್ಲಿ ₹284 ರ ಸಮೀಪದಿಂದ ₹294 ರ ವರೆಗೂ ಜಿಗಿತ ಕಂಡಿತು.

ಐಟಿಸಿ ಷೇರಿನ ಬೆಲೆ ಸ್ವಲ್ಪಮಟ್ಟಿನ ಚುರುಕುತನ ಪ್ರದರ್ಶಿಸಿ ₹280 ರವರೆಗೂ ಏರಿಕೆ ಕಂಡು ₹276 ರ ಸಮೀಪ ವಾರಾಂತ್ಯ ಕಂಡಿತು.ಕೆಲವು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದ್ದ ಗೋವಾ ಕಾರ್ಬನ್, ಗ್ರಾಫೈಟ್ ಇಂಡಿಯಾ, ಎಚ್‌ಇಜಿಗಳ ಷೇರಿನ ಬೆಲೆಗಳು ಶುಕ್ರವಾರ ಕೊನೆಯ ಹಂತದಲ್ಲಿ ದಿಢೀರ್ ಏರಿಕೆಗೊಳಪಟ್ಟಿದ್ದು ವ್ಯಾಲ್ಯೂ ಪಿಕ್ ಚಟುವಟಿಕೆಯಾಗಿದೆ.  ಗುರುವಾರ ಟಾಟಾ ಸ್ಟೀಲ್, ಹಿಂಡಾಲ್ಕೊ,  ವೇದಾಂತ,  ಹಿಂದುಸ್ಥಾನ್ ಕಾಪರ್, ಎಂಎಂಟಿಸಿ,  ಜಿಂದಾಲ್ ಸ್ಟೀಲ್ ಅಂಡ್ ಪವರ್  ಮುಂತಾದವುಗಳು ಜಾಗತಿಕ ಮಟ್ಟದಲ್ಲಿ ಲೋಹಗಳ ಬೆಲೆ ಏರಿಕೆ ಕಂಡ ಕಾರಣ ಜಿಗಿತ ಕಂಡವು.  ಆದರೆ ನಂತರದ ದಿನ ಇಳಿಕೆಗೊಳಪಟ್ಟವು.

ಶುಕ್ರವಾರ ರೂಪಾಯಿಯ ಬೆಲೆಯು ಡಾಲರ್ ವಿರುದ್ಧ ಮಾರ್ಚ್ 2017 ರ ನಂತರ ಮತ್ತೊಮ್ಮೆ ₹66 ನ್ನು ದಾಟಿದೆ ಎಂಬ ಕಾರಣಕ್ಕಾಗಿ ತಂತ್ರಜ್ಞಾನ ವಲಯದ ಕಂಪನಿಗಳಾದ ಇನ್ಫೊಸಿಸ್‌, ಟಿಸಿಎಸ್, ಮೈಂಡ್ ಟ್ರೀ, ಟಾಟಾ ಎಲೆಕ್ಸಿ, ಟೆಕ್ ಮಹಿಂದ್ರಾ, ಎಚ್‌ಸಿಎಲ್‌ ಟೆಕ್ ಮುಂತಾದವು ಚುರುಕಾದ ಏರಿಕೆಗೊಳಪಟ್ಟವು. ಟಿಸಿಎಸ್ ಕಂಪನಿ ಪ್ರಕಟಿಸಿದ ಸಾಧನೆಯ ಅಂಕಿ ಅಂಶಗಳು,  ಬೋನಸ್ ಷೇರಿನ ಘೋಷಣೆಯು ಈ ಏರಿಕೆಗೆ ಪೂರಕವಾಗಿತ್ತು.

ಈ ವಾರದಲ್ಲಿ ಫಾರ್ಮಾ ವಲಯದ ಕಂಪನಿ ಸಿಪ್ಲಾ ₹550 ರ ಸಮೀಪದಿಂದ ₹600 ರ ಸಮೀಪಕ್ಕೆ ಏರಿಕೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಎಫ್‌ಡಿಎ ನಡೆಸಿದ ತಪಾಸಣೆಯಲ್ಲಿ ಯಾವುದೇ ನಕಾರಾತ್ಮಕ ಅಂಶಗಳು ಕಂಡುಬಂದಿಲ್ಲದಿರುವುದು ಕಾರಣ.

ಕಚ್ಚಾ ತೈಲಬೆಲೆ ಏರಿಕೆಯತ್ತ ಸಾಗಿದ್ದರಿಂದ ತೈಲ ಮಾರಾಟ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್‌, ಐಒಸಿಗಳು ಭಾರಿ ಕುಸಿತಕ್ಕೊಳಗಾದವು. ಇದೇ ಕಾರಣಕ್ಕಾಗಿ ಏಷ್ಯನ್ ಪೇಂಟ್ಸ್‌, ಬರ್ಜರ್ ಪೇಂಟ್ಸ್‌, ಕನ್ಸಾಯಿ ನೆರೊಲ್ಯಾಕ್ ಸಹ ಇಳಿಕೆ ಕಂಡವು.  ಈ ರೀತಿಯ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿಯ ಕುಸಿತವು ತಾತ್ಕಾಲಿಕವಾಗಿದ್ದು ಈ ಕಾರಣಗಳಿಗೆ ಉತ್ತಮ ಕಂಪನಿಗಳ ಷೇರುಗಳ ಬೆಲೆ ಕುಸಿತವು ದೀರ್ಘಕಾಲೀನ ಹೂಡಿಕೆಗೆ ಅತ್ಯುತ್ತಮ ಅವಕಾಶ ಒದಗಿಸಲಿವೆ.

ಎಂಎಫ್‌ ‘ಎಸ್‌ಐಪಿ’ಯಲ್ಲಿ ಹೂಡಿಕೆ ಸುರಕ್ಷಿತವೇ? ಮ್ಯೂಚುವಲ್‌ ಫಂಡ್ (ಎಂಎಫ್‌) ಹೂಡಿಕೆಯಲ್ಲಿಯೂ ಸಹ  ಷೇರುಪೇಟೆಯಂತೆ ಏರಿಳಿತಗಳ ಅಪಾಯಕ್ಕೆ ಒಳಪಡುತ್ತದೆ. ಹೂಡಿಕೆಗೆ ಆಯ್ಕೆಮಾಡಿಕೊಂಡ ಯೋಜನೆ 'ಡೆಟ್ ಫಂಡ್' ಆದರೆ ಗಳಿಕೆ ಸೀಮಿತವಾಗಿರುತ್ತದೆ. ಈಕ್ವಿಟಿ ಫಂಡ್ ಆದರೆ ಮೂಲ ಪೇಟೆಯಲ್ಲಾಗುವ ಷೇರಿನ ಏರುಪೇರು ಅದರ ಮೇಲೆ ಪ್ರಭಾವಿಯಾಗಿ ಅದಕ್ಕೆ ತಕ್ಕಂತೆ ಎಎನ್‌ಎವಿ ಬದಲಾಗುತ್ತಿರುತ್ತದೆ. ಇನ್ನು ಮಿಶ್ರಿತ ಯೋಜನೆ ಬ್ಯಾಲನ್ಸ್ ಫಂಡ್ ಸಹ ಅದೇ ಅನುಪಾತದಲ್ಲಿ ಅಪಾಯದ ಮಟ್ಟ ಹೊಂದಿರುತ್ತದೆ. ಮ್ಯೂಚುವಲ್ ಫಂಡ್‌ನ ಹೂಡಿಕೆಯನ್ನು ತಜ್ಞರು ನಿರ್ಧರಿಸುವುದರಿಂದ ಸ್ವಲ್ಪ ತಿಳುವಳಿಕೆಯಿಂದ ಹೂಡಿಕೆ ಮಾಡಿದಂತಾಗುತ್ತದೆ. ಆದರೆ ಯಾವುದೇ ಗ್ಯಾರಂಟಿ ಎಂಬುದಿಲ್ಲ. ಈಕ್ವಿಟಿಯಲ್ಲಿ ನೇರವಾಗಿ ಷೇರುಪೇಟೆ ವಹಿವಾಟು ನೆರವೇರಿಸಬಹುದು. ಮ್ಯೂಚುವಲ್‌ ಫಂಡ್‌ನಲ್ಲಿ ಹಣವನ್ನು ಆ ಸಂಸ್ಥೆಗೆ  ನೀಡಿ ನಮ್ಮ ಪರವಾಗಿ ಹೂಡಿಕೆ ನಿರ್ವಹಿಸಲು ಸಮ್ಮತಿಸುವುದಾಗಿದೆ.  ಮ್ಯೂಚುವಲ್‌ ಫಂಡ್‌ಗಳಲ್ಲಿದ್ದಂತೆ ನೇರವಾಗಿ ಪ್ರತಿ ತಿಂಗಳು ಷೇರುಪೇಟೆಯಲ್ಲಿ ಎಸ್‌ಐಪಿ ನಮೂನೆಯ ಹೂಡಿಕೆ ಮಾಡಲು ಸಾಧ್ಯವಿದೆ.

ಷೇರುಪೇಟೆ ಜೂಜಾಟವೇ? ಷೇರುಪೇಟೆಯು ಜೂಜಾಟದಂತೆ ಎಂಬ ಭಾವನೆಯಿಂದ ಅದರ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳದೆ ಇರುವವರು ಇಂದಿಗೂ ಹೆಚ್ಚಾಗಿದ್ದಾರೆ.  ಹೆಚ್ಚಿನ ಬಾರಿ ಕೇವಲ ಗಾಳಿ ಸುದ್ದಿಯೇ ಕಾರಣ.  ಜೂಜಾಟದಲ್ಲಿ ಕಟ್ಟಿದ ಹಣ ಸಂಪೂರ್ಣವಾಗಿ ಕಳೆದುಕೊಳ್ಳಬಹುದು ಅಥವಾ ಯಶಸ್ಸು ಗಳಿಸಿದರೆ ಹೆಚ್ಚಿನ ಲಾಭ ಬರಬಹುದು.  ಆದರೆ, ಷೇರುಪೇಟೆಯಲ್ಲಿ  ಉತ್ತಮ ಕಂಪನಿಗಳ ಷೇರುಗಳಲ್ಲಿ ಹೂಡಿಕೆ  ಮಾಡಿದ್ದಲ್ಲಿ ಅದರ ಪೇಟೆಯ ಮೌಲ್ಯಗಳು ಬದಲಾಗುತ್ತಿರಬಹುದಷ್ಟೆ. ಕೆಲವು ಬಾರಿ ಕಂಪನಿಗಳ ಮೇಲೆ ಷೇರು ವಿನಿಮಯ ಕೇಂದ್ರಗಳು ಕ್ರಮ ಜರುಗಿಸಿ ಅಮಾನತ್ತಿನಲ್ಲಿಟ್ಟಾಗ ಆ ಷೇರುಗಳು ವಹಿವಾಟಿನಿಂದ ದೂರವಿರುತ್ತವೆ. ನಂತರದ ವರ್ಷಗಳಲ್ಲಿ ಆ ಕಂಪನಿ ಷೇರು ನ್ಯೂನ್ಯತೆ ಸರಿಪಡಿಸಿಕೊಂಡು ಮರುಪ್ರವೇಶ ಮಾಡಿ ಷೇರುದಾರರಿಗೆ ಲಾಭವಾಗುವ ಸಾಧ್ಯತೆ ಇದೆ.‌

2006ರ ಸೆಪ್ಟೆಂಬರ್‌ನಲ್ಲಿ ಅಮಾನತಾಗಿದ್ದ  ಎಸ್ಐ  ಕ್ಯಾಪಿಟಲ್ ಅಂಡ್ ಫೈನಾನ್ಶಿಯಲ್ ಸರ್ವೀಸಸ್ ಕಂಪನಿ 12 ವರ್ಷಗಳಲ್ಲಿ ತನ್ನ ಮೇಲೆ ವಿಧಿಸಿದ್ದ ಅಮಾನತ್ತನ್ನು ತೆರವುಗೊಳಿಸಿಕೊಂಡು ಈ ತಿಂಗಳ 27 ರಿಂದ ‘ಪಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿರುವುದು, ಷೇರುಪೇಟೆ ಜೂಜಾಟವಲ್ಲ ಎಂಬುದನ್ನು ದೃಢಪಡಿಸುತ್ತದೆ.

ಬೋನಸ್ ಷೇರು:  ಎಂಎಂಟಿಸಿ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಮೇ 9 ನಿಗದಿತ ದಿನ. ಅವಂತಿ ಫೀಡ್ಸ್  ಕಂಪನಿ ಮೇ 9 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ:  ಅವಂತಿ ಫೀಡ್ಸ್ ಕಂಪನಿ  ಮೇ 9 ರಂದು  ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ಸದ್ಯಕ್ಕೆ ಅಮಾನತ್ತಿನಲ್ಲಿರುವ ಸಿಟರ್ಜಿಯಾ ಕೆಮಿಕಲ್ಸ್  ಕಂಪನಿ ಷೇರಿನ ಮುಖಬೆಲೆ ₹10 ರಿಂದ ₹ 2 ಕ್ಕೆ ಸೀಳಲು ಏ. 30 ನಿಗದಿತ ದಿನ.
**
ಪ್ರಮುಖ ಕಂಪನಿಗಳ ತ್ರೈಮಾಸಿಕದ ಆರ್ಥಿಕ ಸಾಧನೆ ಈ ವಾರ  ಷೇರುಪೇಟೆಯ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. ಸೋಮವಾರ  ಎಲ್‌ಐಸಿ ಹೌಸಿಂಗ್ ಫೈನಾನ್ಸ್, ರಿಲಯನ್ಸ್‌ ಇನ್ಫ್ರಾ, ಜಿಎನ್‌ಎಫ್‌ಸಿ, ಮಂಗಳವಾರ ಭಾರ್ತಿ ಏರ್‌ಟೆಲ್‌, ಬುಧವಾರ ಐಸಿಐಸಿಐ ಲೋಂಬಾರ್ಡ್‌,  ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಗಳು ತಮ್ಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಲಿದ್ದು, ಜೊತೆಗೆ ಅವುಗಳು ಘೋಷಿಸುವ ಕಾರ್ಪೊರೇಟ್ ಫಲಿತಾಂಶಗಳು ಹೆಚ್ಚು ಪ್ರಭಾವಿಯಾಗಿರುತ್ತವೆ.

ಈ ಕಂಪನಿಗಳು ಆಕರ್ಷಕ ಅಂಶಗಳನ್ನು ಪ್ರಕಟಿಸಿದಾಗ ಚಟುವಟಿಕೆದಾರರ ಆಸಕ್ತಿ ಅತ್ತ ತಿರುಗುವ ಸಾಧ್ಯತೆ  ಇರುತ್ತದೆ.  ಎಲ್ಲವು ತಾತ್ಕಾಲಿಕ ಪ್ರಭಾವವಾದರೂ,  ಕಾರಣಾಂತರಗಳಿಂದ  ಉತ್ತಮ ಕಂಪೆನಿಗಳಾದರೂ ಕುಸಿತಕ್ಕೊಳಗಾಗಿರುವ ಸಾರ್ವಜನಿಕ ವಲಯದ ಕಂಪನಿಗಳು, ಸಕ್ಕರೆ ವಲಯದ ಅಗ್ರಮಾನ್ಯ ಕಂಪನಿಗಳು,  ಭಾರಿ ಒತ್ತಡಕ್ಕೊಳಗಾಗಿ ಕುಸಿತಕ್ಕೊಳಗಾಗಿರುವ ಬ್ಯಾಂಕಿಂಗ್ ವಲಯದ ಅಗ್ರಮಾನ್ಯ ಕಂಪನಿಗಳು ಹೂಡಿಕೆಗೆ ಯೋಗ್ಯವೆನಿಸುತ್ತವೆ. ಈ ಮಧ್ಯೆ ರಾಜಕೀಯ ಬೆಳವಣಿಗೆಗಳು, ಅಂತರ ರಾಷ್ಟ್ರೀಯ ಬೆಳವಣಿಗೆಗಳನ್ನು ಗಮನಿಸಿ ಚಟುವಟಿಕೆ ನಡೆಸುವುದು ಒಳಿತು.  ಯಾವುದೇ ಶಿಫಾರಸುಗಳಿಗೆ ಆಕರ್ಷಿತರಾಗುವ ಮುನ್ನ, ಸಂದರ್ಭವನ್ನು ಅರಿತು ನಿರ್ಧರಿಸಿರಿ.
(ಮೊ: 98863 13380, 4.30 ರನಂತರ)

Comments
ಈ ವಿಭಾಗದಿಂದ ಇನ್ನಷ್ಟು
ಪ್ರಮುಖ ಕಂಪನಿಗಳ ನೀರಸ ವಹಿವಾಟು

ಷೇರು ಸಮಾಚಾರ
ಪ್ರಮುಖ ಕಂಪನಿಗಳ ನೀರಸ ವಹಿವಾಟು

21 May, 2018

ಷೇರು ಸಮಾಚಾರ
ಹಣಕಾಸು ಸಾಧನೆ ನಿರ್ಲಕ್ಷಿಸಿದ ಪೇಟೆ

ಷೇರಿನ ಬೆಲೆಯು ಮಂಗಳವಾರ ₹258 ರ ಸಮೀಪ ಆರಂಭವಾಗಿ ₹264 ನ್ನು ತಲುಪಿ ಅಲ್ಲಿಂದ ₹173 ರ ಸಮೀಪದವರೆಗೂ ಏಕಮುಖ ಕುಸಿತಕ್ಕೊಳಗಾಯಿತು. ಉತ್ತಮ ದರದಲ್ಲಿ...

14 May, 2018
ಪರಿಣಾಮ ಬೀರದ ಬದಲಾವಣೆ

ಷೇರು ಸಮಾಚಾರ
ಪರಿಣಾಮ ಬೀರದ ಬದಲಾವಣೆ

7 May, 2018
ಅವಕಾಶದ ಸದ್ಬಳಕೆಯೇ ಜಾಣ ನಡೆ

ಷೇರು ಸಮಾಚಾರ
ಅವಕಾಶದ ಸದ್ಬಳಕೆಯೇ ಜಾಣ ನಡೆ

30 Apr, 2018
ಉತ್ತಮ ಗಳಿಕೆಗೆ ಹೆಚ್ಚು ಅವಕಾಶ

ಷೇರು ಸಮಾಚಾರ
ಉತ್ತಮ ಗಳಿಕೆಗೆ ಹೆಚ್ಚು ಅವಕಾಶ

16 Apr, 2018