ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ದಿನದಂದು ಬುಟ್ಟಿ ಹೆಣೆದರು

ಪರಿಸರ ಸ್ನೇಹಿ ಉತ್ಪನ್ನಗಳ ಪರಿಚಯ,ಬಳಕೆಗೆ ಉತ್ತೇಜನ
Last Updated 22 ಏಪ್ರಿಲ್ 2018, 18:57 IST
ಅಕ್ಷರ ಗಾತ್ರ

ಬೆಂಗಳೂರು: ಬಾಳೆ ನಾರು, ಜೊಂಡು ಹುಲ್ಲುಗಳನ್ನು ರಾಶಿ ಹಾಕಿಕೊಂಡಿದ್ದ ಮಹಿಳೆಯ ಸುತ್ತಲೂ ಹತ್ತಾರು ಮಂದಿ. ಮಡಚಿ ಕೊಂಡಿ ಮಾಡಿದ ಹುಲ್ಲಿನ ಮೇಲೆ ಬಾಟಲಿ ಇಟ್ಟು ನೇಯಲು ಶುರುಮಾಡಿದರು. ನೋಡ ನೋಡುತ್ತಿದ್ದಂತೆ ಬಾಟಲಿಯಾಕಾರದ ಚೀಲವೇ ತಯಾರಾಯಿತು.

ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ‘ದ ಆರ್ಟ್‌ ವಿಲೇಜ್‌’ನಲ್ಲಿ ಭೂದಿನದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ ಇದು. ದೊಡ್ಡವರು ಚಿಕ್ಕವರು ಎನ್ನದೆ ಹುಲ್ಲಿನಿಂದ ಚೀಲ, ಬುಟ್ಟಿ, ಬಾಕ್ಸ್‌ ಮಾಡುವ ಉಮೇದಿನಲ್ಲಿದ್ದರು. ಹುಲ್ಲನ್ನು ಹೆಣೆಯುವ ರೀತಿ ಅವರ ಮೊಗದಲ್ಲಿ ಕುತೂಹಲದ ಜೊತೆ ಹೊಸತನ್ನು ಕಲಿತ ಸಂತೋಷ ಮೂಡಿಸುತ್ತಿತ್ತು. ತುಮಕೂರಿನಿಂದ ಬಂದ ಮಹಿಳೆ ಆಸಕ್ತರಿಗೆ ನೇಯ್ಗೆ ಪಟ್ಟುಗಳನ್ನು ಕಲಿಸಿದರು.

ಬೆಂಗಳೂರು ಮೂಲದವರೇ ಆದ ‘ಸ್ಪೀಡ್‌ ಪೇಪರ್‌ ಇಂಡಿಯಾ’ ಬಗ್ಗೂ ಜನರಿಗೆ ಕುತೂಹಲ. ಆಮಂತ್ರಣ ಪತ್ರಿಕೆ, ಗ್ರೀಟಿಂಗ್‌ ಕಾರ್ಡ್‌ ಎಲ್ಲವೂ ಮರುಬಳಕೆ ಮಾಡಿದ ಪೇಪರ್‌ನದ್ದು. ಅದಕ್ಕಿಂತ ವಿಶೇಷ ಎಂದರೆ ಎಲ್ಲಾ ಹಾಳೆಯಲ್ಲೂ ಹತ್ತಾರು ಬೀಜಗಳು. ಬಳಸಿ ಎಸೆದ ಮೇಲೆ ಅಲ್ಲೊಂದು ಗಿಡ ಬೆಳೆಯಲಿ ಎನ್ನುವುದು ಇವರ ಆಶಯ. ಅಲ್ಲಿದ್ದ ಪೆನ್ಸಿಲ್‌ನ ಮೇಲು ಹೊದಿಕೆಯೂ ಪೇಪರ್‌ನಿಂದ ಮಾಡಿದ್ದು. ಅದರ ತುದಿಯಲ್ಲಿ ನಾಲ್ಕಾರು ಬೀಜಗಳು.

ಬಿದಿರಿನಿಂದ ಮಾಡಿದ ಬ್ರಶ್‌, ಸ್ಟ್ರಾ, ಸ್ಟೀಲ್‌ ಸ್ಟ್ರಾಗಳು, ಪರಿಸರ ಸ್ನೇಹಿ ಸೌಂದರ್ಯ ವರ್ಧಕ ಉತ್ಪನ್ನಗಳು, ನೈಜ ಬಣ್ಣದಿಂದ ತಯಾರಿಸಿದ ಹತ್ತಿ ದಿರಿಸುಗಳು, ಬ್ಯಾಗ್‌ಗಳು, ಕಾಂಪೋಸ್ಟಿಂಗ್‌ ಉತ್ಪನ್ನಗಳು, ಸಾವಯವ ಉತ್ಪನ್ನ, ತರಕಾರಿಗಳು, ಹರಳಿನಿಂದ ಮಾಡಿದ ವಿವಿಧ ಆಭರಣಗಳು ಅಲ್ಲಿದ್ದವು. ವೇಗನ್‌ ಆಹಾರ ಪದ್ಧತಿಯ ಬಗ್ಗೆಯೂ ಅಲ್ಲಿ ಮಾಹಿತಿ ನೀಡಲಾಯಿತು. ಎಲೆಕ್ಟ್ರಿಕ್‌ ವಾಹನಗಳ ಬಳಕೆ, ಸೋಲಾರ್‌ ರೂಫ್‌ ಟಾಪ್‌ ಮಳಿಗೆಗಳು ಅಲ್ಲಿದ್ದವು.

ಭೂ ದಿನದ ಅಂಗವಾಗಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ಪರಿಚಯಿಸಿ, ಇಂಥ ವಸ್ತುಗಳನ್ನೇ ಹೆಚ್ಚೆಚ್ಚು ಬಳಸುವಂತೆ ಉತ್ತೇಜಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್‌ ಬಳಸದೆ ಇರುವುದು ಹೇಗೆ, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ ಮೂಲಕ ಹೇಗೆಲ್ಲಾ ಪ್ರಕೃತಿಯ ಮಡಿಲನ್ನು ಸಮೃದ್ಧವಾಗಿಸಬಹುದು ಕುರಿತ ಕಾರ್ಯಾಗಾರಗಳೂ ಇಲ್ಲಿ ನಡೆದವು.

ಚಿಕ್ಕವಯಸ್ಸಿನಿಂದಲೇ ಸ್ನೇಹಿತೆಯರಾಗಿದ್ದ ಪದ್ಮಿನಿ, ದೇವಿನಾ, ಸಾನ್ಯಾ, ಆಶ್ನಾ ಹಾಗೂ ನಮಿತಾ ಈ ಕಾರ್ಯಕ್ರಮದ ರೂಪರೇಷೆ ಹೆಣೆದವರು.

‘ಪ್ರದರ್ಶನದಲ್ಲಿ ಭಾಗವಹಿಸುವವರಿಗೆ ₹300 ಟಿಕೆಟ್‌ ದರ ಇಟ್ಟಿದ್ದೇವೆ. ಇಲ್ಲಿ ಸಂಗ್ರಹವಾದ ಹಣವನ್ನು ಗ್ರೀನ್‌ ವೇನ್‌ ಎನ್ನುವ ಸಂಸ್ಥೆಗೆ ನೀಡಲಿದ್ದೇವೆ. 100 ಕೋಟಿ ಗಿಡ ನೆಡುವ ಅವರ ಯೋಜನೆಗೆ ಹಣ ಬಳಕೆಯಾಗುತ್ತದೆ. ಒಬ್ಬ ವ್ಯಕ್ತಿ ನೀಡುವ ₹300 ಹಣದಿಂದ 50 ಗಿಡಗಳನ್ನು ನೆಟ್ಟು 3 ವರ್ಷಗಳ ಕಾಲ ಪಾಲನೆ ಪೋಷಣೆ ಮಾಡಲಾಗುತ್ತದೆ. ನಂತರ ಅದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುತ್ತಾರೆ’ ಎಂದು ಗೆಳತಿಯರು ವಿವರಿಸಿದರು.

ಈ ಪ್ರದರ್ಶನದಲ್ಲಿ ಭಾಗವಹಿಸಿದ್ದ ಫಾಂಟಂ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶ್ವೇತಾ, ‘ಬಿದಿರಿನಿಂದ ಮಾಡಿದ ಬ್ರಶ್‌, ಸ್ಟ್ರಾಗಳನ್ನು ಖರೀದಿಸಿದ್ದೇನೆ. ಹುಲ್ಲಿನಿಂದ ಬುಟ್ಟಿ ಹೆಣೆಯುವುದನ್ನು ಪ್ರಯತ್ನಿಸಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮಹತ್ವ ಅರಿತುಕೊಂಡೆ’ ಎಂದರು.
**
‘ಆಹಾರ ಮನರಂಜನೆಯಲ್ಲ’ 
ರೆಸ್ಟೊರೆಂಟ್‌ ಗ್ರೀನ್‌ಪಾಥ್‌ ಆರ್ಗಾನಿಕ್‌ ಸ್ಟೇಟ್‌ ಭಾನುವಾರ ವಿಶ್ವ ಭೂ ದಿನವನ್ನು ಆಚರಿಸಿತು. ಇದರ ಭಾಗವಾಗಿ ಅತಿಥಿಗಳಾದ ಗಾಯಕಿ ಕೆ.ಎಸ್‌.ವೈಶಾಲಿ, ನಟ ಸಂಜೀವ್‌ ಕುಲಕರ್ಣಿ, ಗ್ಲೋಬಲ್ಸ್ ಇಂಕ್‌ ಕಂಪನಿಯ ಸಿಇಒ ಸುಹಾಸ್‌ ಗೋಪಿನಾಥ್‌ ರಾಗಿ ರಾಶಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿದರು.

‘ಇತ್ತೀಚೆಗೆ ಆಹಾರ ಪದ್ಧತಿ ಮನರಂಜನೆಯ ವಿಷಯವಾಗುತ್ತಿದೆ. ಹೊಸ ರುಚಿಯನ್ನು ಸವಿಯುವುದಕ್ಕಿಂತ ಮೊದಲು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಳ್ಳುವುದರ ಬಗೆಗೇ ಎಲ್ಲರ ಚಿಂತನೆ ಇರುತ್ತದೆ. ಆಹಾರದೊಂದಿಗೆ ತಂತ್ರಜ್ಞಾನವನ್ನು ಸೇರಿಸಬೇಡಿ. ಸಾಧ್ಯವಾದಷ್ಟು ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ. ಪ್ಲಾಸ್ಟಿಕ್‌ ಬಳಕೆ ತ್ಯಜಿಸಿ’ ಎಂದು ಸುಹಾಸ್‌ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT