ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ಬಿಸಿಲಿಗೆ ಬಸವಳಿದ ಕಾರ್ಯಕರ್ತರು

ಸಂಜೆ ವೇಳೆ ಪ್ರಚಾರಕ್ಕಿಳಿದ ರಾಜಕೀಯ ಪಕ್ಷಗಳು, ತಂಪು ಪಾನೀಯ ಮೊರೆ ಹೋದ ಮುಖಂಡರು
Last Updated 23 ಏಪ್ರಿಲ್ 2018, 6:48 IST
ಅಕ್ಷರ ಗಾತ್ರ

ಬೀದರ್‌: ವಿಧಾನಸಭಾ ಚುನಾವಣೆ ಕಾವಿನ ಜತೆಗೆ ನೆತ್ತಿ ಸುಡುವ ಬಿಸಿಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರನ್ನು ಹೈರಾಣ ಮಾಡಿದೆ.

ಸೂರ್ಯ ಬಾನಿಗೆ ಏರುವ ಮೊದಲೇ ಕಾರ್ಯಕರ್ತರು ತಮ್ಮ ಮನೆಗಳಿಂದ ಹೊರಗೆ ಬಂದು ಪ್ರಚಾರ ನಡೆಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಮನೆ ಸೇರುತ್ತಿದ್ದಾರೆ. ಮತ್ತೆ ಸಂಜೆ ಪ್ರಚಾರ ಆರಂಭಿಸಿ ತಡ ರಾತ್ರಿಯ ವರೆಗೂ ಗ್ರಾಮಗಳಲ್ಲಿ ಸಂಚರಿಸಿ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ.

ಒಂದು ವಾರದಿಂದ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇದೆ. ಬೆಳಿಗ್ಗೆ 11 ಗಂಟೆಯ ನಂತರ ನಗರ, ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಅಷ್ಟಾಗಿ ಜನ ಕಾಣಿಸಿಕೊಳ್ಳುತ್ತಿಲ್ಲ. ಕಾರ್ಯಕರ್ತರು ರಾಜಕೀಯ ಮುಖಂಡರೊಂದಿಗೆ ಸುಡು ಬಿಸಿಲಲ್ಲಿ ಸುತ್ತಾಡಲು ಹಿಂಜರಿಯುತ್ತಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಾರ್ಯಕರ್ತರು ಮನೆಗಳಿಗೆ ತೆರಳದಂತೆ ಅಭ್ಯರ್ಥಿಗಳು ಹಾಗೂ ಅವರ ಆಪ್ತರು ನೀರು, ಮಜ್ಜಿಗೆ ಹಾಗೂ ತಂಪು ಪಾನೀಯ ಪೊಟ್ಟಣಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಕೈಚೀಲದಲ್ಲಿ ಇಟ್ಟುಕೊಂಡ ಪಾನೀಯ ಪೊಟ್ಟಣಗಳೂ ಬಿಸಿಯಾಗುತ್ತಿವೆ.
ಪ್ರಚಾರಕ್ಕೆ ತೆರಳುತ್ತಿರುವ ಮುಖಂಡರು ಹಾಗೂ ಕಾರ್ಯಕರ್ತರು ಬೆವರಿನಲ್ಲೇ ಸ್ನಾನ ಮಾಡುವಂತಾಗಿದೆ. ಪ್ರತಿಯೊಬ್ಬರ ಕೈಯಲ್ಲಿ ಟವೆಲ್‌, ನೀರಿನ ಬಾಟಲಿಗಳು ಕಾಣಿಸಿಕೊಳ್ಳುತ್ತಿವೆ. ಮತ ಕೇಳಲು ಗ್ರಾಮಗಳಿಗೆ ಹೋಗುತ್ತಿದ್ದರೂ ಅಲ್ಲಲ್ಲಿ ಮರಗಳ ಕೆಳಗೆ ನಿಂತ ಬಿಸಿಲಿನಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿದ್ದಾರೆ.

‘ತಲೆಯ ಮೇಲೆ ಪಕ್ಷದ ಟೊಪ್ಪಿಗೆ ಹಾಕಿಕೊಳ್ಳಬೇಕೆಂದರೆ ಚುನಾವಣಾ ನೀತಿ ಸಂಹಿತೆ ತೊಡಕಾಗಿದೆ. ಮುಕ್ತವಾಗಿ ಸಂಚರಿಸಿ ಮತಯಾಚನೆ ಮಾಡೋಣ ಅಂದರೆ ಸೂರ್ಯದೇವ ಬೆಂಕಿ ಉಗುಳುತ್ತಿದ್ದಾನೆ. ಸ್ವಲ್ಪಹೊತ್ತು ನೆರಳಿನಲ್ಲಿ ನಿಂತು ವಿಶ್ರಾಂತಿ ಪಡೆಯೋಣ ಅಂದರೆ ಕೆಲವು ಗ್ರಾಮಗಳಲ್ಲಿ ನೆರಳು ನೀಡುವ ಮರಗಳೂ ಇಲ್ಲ’ ಎಂದು ಔರಾದ್‌ ತಾಲ್ಲೂಕಿನ ಬರದಾಪುರದ ಸಂತೋಷ ಪಿ. ಗೋಳು ತೋಡಿಕೊಳ್ಳುತ್ತಾರೆ.

ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕೆಲವರು ಆಸ್ಪತ್ರೆ ಸೇರಿದ್ದಾರೆ. ಎಸಿ ಕೊಠಡಿ ಹಾಗೂ ಕಾರಿನಲ್ಲಿ ತಿರುಗಾಡಿಕೊಂಡಿದ್ದ ಕೆಲವು ಕಾರ್ಯಕರ್ತರಿಗೆ ಸನ್ ಸ್ಟ್ರೋಕ್ ಆಗಿದೆ. ಔರಾದ್‌ ತಾಲ್ಲೂಕಿನಲ್ಲೇ ಕಾರ್ಯಕರ್ತರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.

‘ಉಷ್ಣಾಂಶ ನಿಯಂತ್ರಣಕ್ಕೆ ದೇಹದಿಂದ ಬೆವರು ಸುರಿಯುತ್ತದೆ. ಅತಿಯಾದ ಬೆವರಿನಿಂದ ಉಪ್ಪು ಹಾಗೂ ನೀರಿನ ಅಂಶ ಕಡಿಮೆಯಾಗಿ ರಕ್ಷದಲ್ಲಿನ ಸೋಡಿಯಂ ಪ್ರಮಾಣ ಕುಸಿದು- ತಲೆ ಸುತ್ತುವುದು, ಕಣ್ಣು ಕತ್ತಲೆ ಬರುವುದು, ವಿಪರೀತ ಆಯಾಸ ಆಗುತ್ತದೆ. ಆದ್ದರಿಂದ ಹೆಚ್ಚು ಬಿಸಿಲಲ್ಲಿ ಸಂಚರಿಸುವುದು ಒಳ್ಳೆಯದಲ್ಲ’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಹೇಳುತ್ತಾರೆ.

‘ಅನಿವಾರ್ಯವಾಗಿ ಬಿಸಿಲಲ್ಲಿ ಮನೆಯಿಂದ ಹೊರಗೆ ಹೋಗಬೇಕಾದರೆ ತೆಳುವಾದ ಬಟ್ಟೆಗಳನ್ನು ಧರಿಸಬೇಕು. ನಿರಂತರವಾಗಿ ನೀರು ಹಾಗೂ ಹಣ್ಣಿನ ರಸ ಸೇವಿಸಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡುತ್ತಾರೆ.

**

ಸಮಯ ಕಡಿಮೆ ಇರುವ ಕಾರಣ ತ್ವರಿತವಾಗಿ ಎಲ್ಲ ಗ್ರಾಮಗಳಿಗೂ ತೆರಳಿ ಪ್ರಚಾರ ಮಾಡಬೇಕಾಗಿದೆ. ಆದರೆ, ಬಿಸಿಲಲ್ಲಿ ಸಂಚರಿಸುವುದು ಬಹಳ ಕಷ್ಟವಾಗುತ್ತಿದೆ - ಸುಭಾಷ ಪವಾರ್‌, ರಾಜಕೀಯ ಪಕ್ಷವೊಂದರ ಕಾರ್ಯಕರ್ತ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT