ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಪ್ರವಾಹದ ಜತೆಗೆ ಈಜುತ್ತಿದ್ದೇವೆ

ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಅಭಿಮತ
Last Updated 23 ಏಪ್ರಿಲ್ 2018, 9:04 IST
ಅಕ್ಷರ ಗಾತ್ರ

ಗದಗ: ಬಂಡಾಯ ಹಾಗೂ ರೈತ ಚಳವಳಿ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ನರಗುಂದ ಮತ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಸಿ ಪಾಟೀಲ ಅವರು ಸತತ 4ನೇ ಬಾರಿ ಕಣಕ್ಕಿಳಿದಿದ್ದಾರೆ. ಎರಡು ಬಾರಿ ಗೆಲುವು ಸಾಧಿಸಿ, ಸಚಿವ ಸ್ಥಾನವನ್ನೂ ಅಲಂಕರಿಸಿದ್ದ ಅವರು 2013ರಲ್ಲಿ ಪರಾಭವಗೊಂಡಿದ್ದರು. ಸದ್ಯ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಯೂ ಅವರ ಹೆಗಲಿಗಿದೆ. ಕಳೆದ ಬಾರಿ ಗುಂಡೇಟು ಬಿದ್ದ ಪರಿಣಾಮ ಪ್ರಚಾರಕ್ಕೆ ಹಿನ್ನಡೆಯಾಯಿತು. ಇದರಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಪಡೆದರು ಎನ್ನುವ ಅವರು ಈ ಬಾರಿ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದರು.

ಜನರು ನಿಮಗೆ (ಬಿಜೆಪಿಗೆ) ಯಾಕೆ ವೋಟ್‌ ಹಾಕಬೇಕು? ಯಾವ ವಿಷಯ ಇಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತೀರಿ?

ಕಾಂಗ್ರೆಸ್‌ನ ದುರಾಡಳಿತದಿಂದ ಜನರು ಬೇಸೆತ್ತಿದ್ದಾರೆ. ಗದಗ ಜಿಲ್ಲೆಯ ವಿಚಾರಕ್ಕೆ ಬರುವುದಾದರೆ ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ.ಮರಳು ಅಕ್ರಮ ಸಾಗಾಟ ಅವ್ಯಾಹತವಾಗಿದೆ. ಬಡವರಿಗೆ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಆದರೆ, ಇಲ್ಲಿಂದ ಹುಬ್ಬಳ್ಳಿ, ಉಡುಪಿಗೆ ರಾಜಾರೋಷವಾಗಿ ಮರಳು ಸಾಗಾಣೆಯಾಗುತ್ತದೆ. ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಜನರು ರೋಸಿ ಹೋಗಿದ್ದಾರೆ. ಜಿಲ್ಲೆಯಾದ್ಯಂತ ಕುಡಿವ ನೀರಿನ ತೀವ್ರ ಬವಣೆ ಇದೆ. ಸಂಪೂರ್ಣ ಬಯಲು ಶೌಚಮುಕ್ತ ಜಿಲ್ಲೆ ಎನ್ನುತ್ತಾರೆ. ಆದರೆ, ಇದು ಅಂಕಿ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ಜನಸಾಮಾನ್ಯರನ್ನು ಒಳಗೊಂಡ ಯಾವುದೇ ಅಭಿವೃದ್ಧಿ ಜಿಲ್ಲೆಯಲ್ಲಿ ಆಗಿಲ್ಲ. ಕೇಂದ್ರದ ಅನುದಾನದ ಯೋಜನೆಗಳನ್ನೇ ಕಾಂಗ್ರೆಸ್‌ ತನ್ನದೆಂದು ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್‌ ವೈಫಲ್ಯವನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡುತ್ತೇವೆ. ಜನಪರವಾದ, ಅಭಿವೃದ್ಧಿ ಪರವಾದ ಸುಸ್ಥಿರ ಆಡಳಿತ ನೀಡಲು ಬಿಜೆಪಿಗೆ ಮತ ಹಾಕಿ ಎಂದು ಮನವಿ ಮಾಡುತ್ತೇವೆ.

ಈ ಚುನಾವಣೆ ನಿಮಗೆ ಯಾಕೆ ಮಹತ್ವದ್ದು? ಕ್ಷೇತ್ರದಲ್ಲಿ ನಿಮ್ಮ ಪಕ್ಷಕ್ಕೆ ಪೂರಕವಾಗಿರುವ ಅಂಶಗಳು ಯಾವುದು?

ಜಿಲ್ಲೆಯ ನಾಲ್ಕೂ ವಿಧಾಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿರೋಧಿ ಮತ್ತು ಬಿಜೆಪಿ ಪರವಾದ ಅಲೆ ಇದೆ. ಯುವಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಆಡಳಿತ ವೈಖರಿಗೆ ಮಾರುಹೋಗಿದ್ದಾರೆ. ಮೋದಿ ಅಲೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳೇ ನಮಗೆ ಶ್ರೀರಕ್ಷೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಭೇಟಿಯಿಂದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದ್ದು, ಇದು ದೊಡ್ಡ ಮಟ್ಟದಲ್ಲಿ ಬಲ ತಂದಿದೆ. ಕಳೆದ ಬಾರಿ ಕೆಜೆಪಿ, ಬಿಎಸ್‌ಆರ್‌ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಮತ ವಿಭಜನೆಯಾಗಿತ್ತು. ಗುಂಡೇಟಿನಿಂದಾಗಿ ವೈಯಕ್ತಿಕವಾಗಿ ನನ್ನ ಕ್ಷೇತ್ರದಲ್ಲಿ ಪ್ರಚಾರಕ್ಕೂ ಹಿನ್ನಡೆಯಾಗಿತ್ತು. ಒಟ್ಟಿನಲ್ಲಿ ಕಳೆದ ಬಾರಿ ನಾವು ಪ್ರವಾಹದ ವಿರುದ್ಧ ಈಜುತ್ತಿದ್ದೆವು. ಈ ಬಾರಿ ಪ್ರವಾಹದ ಜತೆಗೆ ಮುನ್ನುಗ್ಗುತ್ತಿದ್ದೇವೆ. ಈಗಾಗಲೇ ಪಕ್ಷವನ್ನು ಬೆಂಬಲಿಸಿ ನಾಲ್ಕೂ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಎರಡು ಮತ್ತು ಮೂರನೆಯ ಹಂತದ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದಲ್ಲದೆ 30 ವರ್ಷದೊಳಗಿನ ಯುವ ಮತದಾರರ ಸಂಪೂರ್ಣ ಬೆಂಬಲ ಬಿಜೆಪಿಗೆ ಇದೆ. ಎಲ್ಲ ಕಡೆ ಪೂರಕ ವಾತಾವರಣ ಕಂಡುಬರುತ್ತಿದೆ.

ನೀವು ಆಯ್ಕೆಯಾದರೆ ನಿಮ್ಮ ಆದ್ಯತೆ ಯಾವ ವಿಷಯಕ್ಕೆ?

ಆಯ್ಕೆಯಾದರೆ ಮೊದಲ ಆದ್ಯತೆ ಕಳಸಾ–ಬಂಡೂರಿ ಯೋಜನೆ ಜಾರಿಗೆ. ಕಳಸಾ–ಬಂಡೂರಿ ನಮ್ಮ ಭಾಗದ ಹಕ್ಕು. ಅದನ್ನು ಪಡೆಯಬೇಕು. ಅದನ್ನು ಜಾರಿಗೊಳಿಸುವ ವಿಶ್ವಾಸ ಇದೆ. ಇದರ ಜತಗೆ ಒಕ್ಕಲುತನಕ್ಕೆ ಬೇಕಾಗಿರುವ ಎಲ್ಲ ಕ್ರಮಗಳಿಗೆ ಉತ್ತೇಜನ ನೀಡುತ್ತೇನೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇನೆ. ಕಾನೂನು ಸುವ್ಯವಸ್ಥೆ ಸರಿದಾರಿಗೆ ತಂದು, ಕೋಮು ಸೌಹಾರ್ದ ಜೀವನಕ್ಕೆ ನಾಂದಿ ಹಾಡುತ್ತೇನೆ.

ಮಹದಾಯಿ ಹೋರಾಟ ನರಗುಂದ ಕ್ಷೇತ್ರದ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಮಹದಾಯಿ ಯೋಜನೆ ಜಾರಿಯಾಗಬೇಕು. ರಾಜಕೀಯ ವ್ಯಕ್ತಿಯಾಗಿ ಅಲ್ಲ, ಒಬ್ಬ ರೈತನ ಮಗನಾಗಿ ಈ ಜನಪರ ಹೋರಾಟವನ್ನು ಬೆಂಬಲಿಸುತ್ತೇನೆ. ಹಿಂದೆಯೂ ಹೋರಾಟಕ್ಕೆ ಬೆಂಬಲ ನೀಡಿದ್ದೇನೆ. ಕಳಸಾ–ಬಂಡೂರಿ ಜಾರಿಗೆ ನಮ್ಮ ಪಕ್ಷ ಸಾಕಷ್ಟು ಒತ್ತಡ ಹೇರಿದೆ. ಆದರೆ, ಕಾಂಗ್ರೆಸ್‌ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ.

ಕ್ಷೇತ್ರದ ಜನರು ನಿಮ್ಮಿಂದ ಏನು ನಿರೀಕ್ಷಿಸಬಹುದು?

ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಒಳ್ಳೆಯದು ಸ್ವಾಗತಿಸುತ್ತೇನೆ. ಆದರೆ, ಇದಕ್ಕೆ ನೀರಿನ ಮೂಲ ಎಲ್ಲಿದೆ, ಕೃಷಿಗೆ ನೀರು ಹರಿಸಿದರೆ, ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಕುಡಿಯುವ ನೀರು ಪೂರೈಸಿದರೆ ಕೃಷಿಗೆ ಕೊರತೆ ಬೀಳುತ್ತದೆ ಕಳಸಾ–ಬಂಡೂರಿ ಮಲಪ್ರಭೆಗೆ ನೀರು ಬರದಿದ್ದರೆ ಕುಡಿಯುವ ನೀರು ಎಲ್ಲಿಂದ ಬರುತ್ತದೆ. ಇದೊಂದು ರೀತಿಯಲ್ಲಿ ಕನ್ಯೆ ಹುಡುಕದೆ ಮದುವೆ ಮಾಡಲು ಸಿದ್ಧರಾದಂತೆ. ಜಿಲ್ಲೆಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೇ ಎಲ್ಲ ಕಾಮಗಾರಿಗಳು ಶರವೇಗ ಪಡೆದುಕೊಂಡವು. ಇದರ ಮರ್ಮ ಏನು? ಜಿಲ್ಲಾಡಳಿತದಿಂದಲೂ ಜನರನ್ನು ದಾರಿ ತಪ್ಪಿಸುವ ಕೆಲಸಗಳು ನಡೆಯುತ್ತಿವೆ. ಜನರು ಈಗಾಗಲೇ 5 ವರ್ಷ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ನೊಂದಿದ್ದಾರೆ. ಮತ್ತೆ ಆ ತಪ್ಪು ಮಾಡುವುದಿಲ್ಲ. ಸುಸ್ಥಿರವಾದ ಆಡಳಿತವನ್ನು ನಮ್ಮಿಂದ ನಿರೀಕ್ಷಿಸಬಹುದು.

ನೀವು ಆಯ್ಕೆಯಾದರೆ ನಿಮ್ಮ ಆದ್ಯತೆ ಯಾವ ವಿಷಯಕ್ಕೆ?

ಆಯ್ಕೆಯಾದರೆ ಮೊದಲ ಆದ್ಯತೆ ಕಳಸಾ–ಬಂಡೂರಿ ಯೋಜನೆ ಜಾರಿಗೆ. ಕಳಸಾ–ಬಂಡೂರಿ ನಮ್ಮ ಭಾಗದ ಹಕ್ಕು. ಅದನ್ನು ಪಡೆಯಬೇಕು. ಅದನ್ನು ಜಾರಿಗೊಳಿಸುವ ವಿಶ್ವಾಸ ಇದೆ. ಇದರ ಜತಗೆ ಒಕ್ಕಲುತನಕ್ಕೆ ಬೇಕಾಗಿರುವ ಎಲ್ಲ ಕ್ರಮಗಳಿಗೆ ಉತ್ತೇಜನ ನೀಡುತ್ತೇನೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇನೆ. ಕಾನೂನು ಸುವ್ಯವಸ್ಥೆ ಸರಿದಾರಿಗೆ ತಂದು, ಕೋಮು ಸೌಹಾರ್ದ ಜೀವನಕ್ಕೆ ನಾಂದಿ ಹಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT