ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಳ್ಳು ಸುದ್ದಿ’ಯ ನೆರಳಲ್ಲಿ ಕರ್ನಾಟಕ ಚುನಾವಣೆ

Last Updated 23 ಏಪ್ರಿಲ್ 2018, 20:16 IST
ಅಕ್ಷರ ಗಾತ್ರ

ಭಾರತದಲ್ಲಿ ಚುನಾವಣೆಗಳಿಗೆ ಸಂಬಂಧಿಸಿ ಅತ್ಯಂತ ಹಾಸ್ಯಾಸ್ಪದ ಸಂಗತಿಯೊಂದಿದೆ. ಅದನ್ನು ‘ಚುನಾವಣಾ ಆಯೋಗ ನಿಗದಿಪಡಿಸಿದ ಚುನಾವಣಾ ವೆಚ್ಚ’ ಎಂದು ಕರೆಯಲಾಗುತ್ತದೆ. ಆಯೋಗವು ನಿಗದಿಪಡಿಸಿರುವಂತೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 28 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬಹುದು. ಫಲಿತಾಂಶ ಬಂದ ಮೂವತ್ತು ದಿನಗಳ ಒಳಗೆ ಅಭ್ಯರ್ಥಿ ತನ್ನ ಖರ್ಚುವೆಚ್ಚದ ಸಂಪೂರ್ಣ ವಿವರಗಳನ್ನು ದಾಖಲೆಗಳ ಸಮೇತ ಆಯೋಗಕ್ಕೆ ಸಲ್ಲಿಸಬೇಕು. ಇಪ್ಪತ್ತು ಸಾವಿರ ರೂಪಾಯಿಗಳಿಗೆ ಮೇಲ್ಪಟ್ಟ ಎಲ್ಲಾ ಪಾವತಿಗಳನ್ನೂ ‘ಅಕೌಂಟ್ ಪೇಯಿ’ ಚೆಕ್‌ಗಳ ಮೂಲಕವೇ ಮಾಡಬೇಕು ಎಂಬುದಲ್ಲೆವೂ ಈ ಹಾಸ್ಯಾಸ್ಪದ ಸಂಗತಿಯ ವಿವರಗಳು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವೆಚ್ಚಕ್ಕಿದ್ದ ಮಿತಿ 16 ಲಕ್ಷ ರೂಪಾಯಿಗಳು. ಇದನ್ನು 2014ರಲ್ಲಿ 28 ಲಕ್ಷ ರೂಪಾಯಿಗಳಿಗೆ ಏರಿಸಲಾಯಿತು. ಈ ಸಂಬಂಧ ಆಂಗ್ಲ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ರಾಜಕಾರಣಿಯೊಬ್ಬರು ‘ಕನಿಷ್ಠ ಮೂರು ಕೋಟಿ ರೂಪಾಯಿಗಳಿಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಗರ ಕ್ಷೇತ್ರಗಳಲ್ಲಿ 20 ಕೋಟಿ ರೂಪಾಯಿಗಳ ತನಕ ಖರ್ಚು ಮಾಡಬೇಕಾಗುತ್ತದೆ’ ಎಂದಿದ್ದರು. ಜೆಡಿಎಸ್‌ಗೆ ಸೇರಿದ ರಾಜಕಾರಣಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘28 ಲಕ್ಷ ರೂಪಾಯಿಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೂ ಎದುರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದನ್ನೂ ಪತ್ರಿಕೆ ವರದಿ ಮಾಡಿತ್ತು.

ಜನಪ್ರಾತಿನಿಧ್ಯ ಕಾಯ್ದೆಯಲ್ಲಿರುವ ಈ ನಿಯಮ, ಚುನಾವಣೆಗಳಲ್ಲಿ ಹಣದ ಹರಿವನ್ನು ನಿಯಂತ್ರಿಸಬೇಕು ಎಂಬ ಸದುದ್ದೇಶದ ಸಾಂಕೇತಿಕ ಅಭಿವ್ಯಕ್ತಿಯೇ ಹೊರತು ಮತ್ತೇನೂ ಇಲ್ಲ. ಸಾಮಾಜಿಕ ಮಾಧ್ಯಮಗಳೆಂಬ ಹೊಸ ಕಾಲದ ಮಾಧ್ಯಮ ಜಗತ್ತೊಂದು ಅನಾವರಣಗೊಂಡ ಬಳಿಕ ಇಂಥದ್ದೇ ಒಂದು ಸಾಂಕೇತಿಕ ಅಭಿವ್ಯಕ್ತಿ ಸೇರ್ಪಡೆಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಪ್ರಚಾರದ ಮೇಲೆ ಚುನಾವಣಾ ಆಯೋಗ ನಿಗಾ ಇರಿಸುವುದು! ಈ ನಿಗಾವಣೆಗೆ ಬೇಕಿರುವ ಮೂಲಸೌಕರ್ಯಗಳು ಚುನಾವಣಾ ಆಯೋಗದ ಬಳಿ ಇವೆ ಎಂಬುದನ್ನು ಸಾಬೀತುಪಡಿಸುವ ಯಾವುದೂ ಇಲ್ಲ. ಮುಖ್ಯ ಚುನಾವಣಾ ಆಯುಕ್ತರಿಂದ ಆರಂಭಿಸಿ ಮುಖ್ಯಚುನಾವಣಾಧಿಕಾರಿಗಳ ತನಕದ ಎಲ್ಲರೂ
ಪತ್ರಿಕಾಗೋಷ್ಠಿಗಳಲ್ಲಿ ಇದನ್ನು ಪ್ರಕಟಿಸಿರುವುದಷ್ಟೇ ಈಗಿರುವ ಮಾಹಿತಿ.

ಎಷ್ಟೇ ಕಠಿಣವಾದ ನಿಯಮಗಳನ್ನು ರೂಪಿಸಿದರೂ ಅದನ್ನು ‘ನಿರ್ವಹಿಸುವ’ ತಾಕತ್ತು ಭಾರತೀಯರಿಗೆ ಇದೆ. ಪ್ರತೀ ಟ್ರಾಫಿಕ್ ಸಿಗ್ನಲ್‌ನಲ್ಲಿ ಕ್ಯಾಮೆರಾ ಅಳವಡಿಸಿದ ನಂತರವೂ ಶಿಸ್ತು ತರಲಾಗದಂಥ ಸ್ಥಿತಿ ಇದು. ಚುನಾವಣಾ ಖರ್ಚಿಗೆ ಮಿತಿ ಹೇರಿರುವುದನ್ನು ಅದರ ಮೇಲೆ ನಿಗಾ ಇರಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ‘ನಿರ್ವಹಿಸುತ್ತಾ’ ಬಂದಿರುವ ರಾಜಕೀಯ ಪಕ್ಷಗಳಿಗೆ ಸಾಮಾಜಿಕ ಜಾಲತಾಣದ ಪ್ರಚಾರ, ಸುಳ್ಳು ಸುದ್ದಿ ಸೃಷ್ಟಿಯನ್ನು ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚಿ ನಿರ್ವಹಿಸುವುದು ಇನ್ನಷ್ಟು ಸುಲಭ. ಈ ಕ್ಷೇತ್ರದಲ್ಲಿ ನಿಯಂತ್ರಣ ಪ್ರಕ್ರಿಯೆ ಎಂಬುದು ಬಹಳ ಕಠಿಣ. ಅದರಲ್ಲೂ ಸ್ಪಷ್ಟ ಕಾನೂನುಗಳು ಇಲ್ಲದೇ ಇರುವ ಸ್ಥಿತಿಯಲ್ಲಿ ಇನ್ನೂ ಕಷ್ಟ.

ಕರ್ನಾಟಕದ್ದೇ ಆದ ಎರಡು ಉದಾಹರಣೆಗಳನ್ನು ಚರ್ಚೆಗೆ ಎತ್ತಿಕೊಳ್ಳಬಹುದು ‘ಜೋಕರ್ಸ್ ಆಫ್ ಬಿಜೆಪಿ’ ಮತ್ತು ‘ನಿದ್ದರಾಮಯ್ಯ’ ಎಂಬ ಫೇಸ್‌ಪುಟಗಳು ಕೆಲಕಾಲದಿಂದ ಅಸ್ತಿತ್ವದಲ್ಲಿವೆ. ಇವೆರಡರ ರಾಜಕೀಯ ಒಲವುಗಳು ಬಹಳ ಸ್ಪಷ್ಟ. ಜೋಕರ್ಸ್ ಆಫ್ ಬಿಜೆಪಿಯು ಕಾಂಗ್ರೆಸ್ ಪರವಾದ ಪ್ರಚಾರಕ್ಕೆ ಇಳಿದಿದ್ದರೆ ‘ನಿದ್ದರಾಯಮ್ಯ’ ಪುಟ ಬಹಳ ಸ್ಪಷ್ಟವಾಗಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದೆ. ಇವೆರಡನ್ನೂ ಯಾರು ನಿರ್ವಹಿಸುತ್ತಿದ್ದಾರೆ ಎಂಬುದು ಎರಡೂ ಪುಟಗಳಲ್ಲಿಯೂ ಇಲ್ಲ. ‘ಜೋಕರ್ಸ್ ಆಫ್ ಬಿಜೆಪಿ’ ಪುಟ ತನ್ನನ್ನು ‘ಕಮೆಡಿಯನ್’ ಎಂಬ ವಿಭಾಗದಲ್ಲಿ ಗುರುತಿಸಿಕೊಂಡರೆ ‘ನಿದ್ದರಾಮಯ್ಯ’ ಪುಟ ‘ಪೊಲಿಟಿಕಲ್ ಐಡಿಯಾಲಜಿ’ ಎಂಬ ವಿಭಾಗದಲ್ಲಿ ಗುರುತಿಸಿಕೊಂಡಿದೆ. ‘ನಿದ್ದರಾಮಯ್ಯ’ ಪುಟ ಇತ್ತೀಚೆಗೆ ತನ್ನ ಪೋಸ್ಟ್‌ಗಳನ್ನು ಫೇಸ್‌ಬುಕ್‌ಗೆ ಹಣ ಕೊಟ್ಟು ಜಾಹೀರಾತಿನಂತೆಯೂ ಪ್ರಕಟಿಸುತ್ತಿದೆ. ಈ ಬೇನಾಮಿ ಪುಟಗಳಿಗೆ ಆಗುವ ಖರ್ಚನ್ನು ಯಾರು ಭರಿಸುತ್ತಾರೆ. ‘ನಿದ್ದರಾಮಯ್ಯ’ ಪುಟವಂತೂ ‘ಸುಳ್ಳು ಸುದ್ದಿ’ಯ ಪಟ್ಟಿಗೆ ಸೇರಿಸಬಹುದಾದ, ವೈಯಕ್ತಿಕ ನಿಂದನೆ ಎಂದು ಗುರುತಿಸಬಹುದಾದ ಅನೇಕ ಪೋಸ್ಟ್‌ಗಳನ್ನು ಹೊಂದಿದೆ. ಜೋಕರ್ಸ್ ಆಫ್ ಬಿಜೆಪಿಯೂ ಕಡಿಮೆಯೇನೂ ಅಲ್ಲ. ಆದರೆ ಭಾಷೆಯ ಬಳಕೆಯಲ್ಲಿ ಸ್ವಲ್ಪ ಮಟ್ಟಿಗಿನ ಗಾಂಭೀರ್ಯ ಕೆಲವೆಡೆಯಾದರೂ ಕಾಣಿಸುತ್ತದೆ.

ಈ ಎರಡೂ ಪುಟಗಳ ರಾಜಕೀಯ ಒಲವುಗಳನ್ನು ಗಮನಿಸಿದರೆ ಇವುಗಳ ನಿರ್ವಹಣೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಊಹಿಸುವುದು ಸುಲಭ. ಚುನಾವಣೆ ಘೋಷಣೆಗೆ ಮುಂಚಿನಿಂದಲೇ ಅಸ್ತಿತ್ವದಲ್ಲಿರುವ ಈ ಪುಟಗಳನ್ನು ಚುನಾವಣಾ ಆಯೋಗದ ಯಾವುದೇ ನಿಯಮಗಳು ನಿಯಂತ್ರಿಸಲು ಸಾಧ್ಯ ಎಂಬಂತೆ ಕಾಣಿಸುತ್ತಿಲ್ಲ. ಇಂಥ ಅನೇಕಾನೇಕ ಪುಟಗಳು ಫೇಸ್‌ಬುಕ್‌ನ ತುಂಬಾ ಇವೆ. ಒಂದೆರಡು ವರ್ಷಗಳಿಂದ ಹುಟ್ಟಿಕೊಂಡಿರುವ ಕೆಲವು ಜಾಲತಾಣಗಳೂ ಇಂಥದ್ದೇ ಕೆಲಸವನ್ನು ಮಾಡುತ್ತಿವೆ. ಟ್ವಿಟರ್‌ನಲ್ಲಂತೂ ಚಿತ್ರವಿಚಿತ್ರವಾದ ಖಾತೆಗಳು ಇವೇ ಕೆಲಸವನ್ನು ಮಾಡುತ್ತಿವೆ. ಇವೆಲ್ಲವನ್ನೂ ಯಾರೋ ಸ್ವಯಂ ಸ್ಫೂರ್ತಿಯಿಂದ ಮಾಡುತ್ತಿದ್ದಾರೆಂಬಂತೆ ಕಾಣಿಸುವುದಿಲ್ಲ. ಇವುಗಳಲ್ಲಿ ಪ್ರಕಟವಾಗುವ ಮಾಹಿತಿ, ಅದನ್ನು ಮಂಡಿಸುವ ಬಗೆ ಎಲ್ಲದಕ್ಕೂ ಖರ್ಚಿದೆ. ಅದನ್ನು ಯಾರೋ ನಿರ್ವಹಿಸುತ್ತಿದ್ದಾರೆ ಎಂಬುದಂತೂ ಸ್ಪಷ್ಟ. ಈ ಹಿಂದಿನ ಚುನಾವಣೆಗಳಲ್ಲಿ ಇಂಥವುಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಏನನ್ನೂ ಮಾಡಿಲ್ಲ. ಈಗಲೂ ಏನಾದರೂ ಮಾಡಬಹುದು ಎಂಬಂತೆ ಕಾಣಿಸುವುದಿಲ್ಲ.

ಇನ್ನು ವಾಟ್ಸ್ ಆ್ಯಪ್‌ನಂಥ ಮೆಸೆಂಜರ್‌ಗಳಲ್ಲಿ ಹರಡುವ ವೈಯಕ್ತಿಕ ನಿಂದನೆಯ ವ್ಯಾಪ್ತಿಗೆ ಬರುವಂಥ ವಿಷಯಗಳನ್ನು ಚುನಾವಣಾ ಆಯೋಗಕ್ಕೆ ನಿರ್ವಹಿಸುವುದು ಸಾಧ್ಯವೇ ಇಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಿಯುವ ಮಾಹಿತಿ. ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿರುವ ಮಾಹಿತಿಯಂತೆ ನಿಗಾ ಇರಿಸಲು ಸಾಧ್ಯವಾಗುವಂಥ ಸಾರ್ವಜನಿಕ ಮಾಹಿತಿಯಲ್ಲ. ಆದರೆ ಸಾರ್ವತ್ರಿಕವಾಗಿ ಇದು ತಲುಪುತ್ತದೆ. ಸಾಮಾಜಿಕ ಮಾಧ್ಯಮ ಪ್ರಚಾರದಲ್ಲಿ ಬಳಕೆಯಾಗುವ ಮತ್ತೊಂದು ತಂತ್ರ ‘ಸೋಷಿಯಲ್  ಇನ್ಫ್ಲುಯೆನ್ಸರ್’‌ಗಳನ್ನು ಬಳಸಿಕೊಳ್ಳುವುದು. ದೊಡ್ಡ ಸಂಖ್ಯೆಯ ಹಿಂಬಾಲಕರು, ಗೆಳೆಯರನ್ನು ಹೊಂದಿರುವ ಇವರಿಗೆ ಒಂದಷ್ಟು ಹಣ ಕೊಟ್ಟು ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮಾಡಲಾಗುತ್ತದೆ. ಆ ಮೂಲಕ ಅದು ಜನರನ್ನು ತಲುಪುತ್ತಿರುತ್ತದೆ. ಒಟ್ಟಂದದಲ್ಲಿ ನೋಡಿದರೆ ಈ ಎಲ್ಲಾ ವಿಷಯಗಳಲ್ಲಿ ಚುನಾವಣಾ ಆಯೋಗ ಮೂಕ ಪ್ರೇಕ್ಷಕನಿಗಿಂತ ಹೆಚ್ಚಿನ ಯಾವುದನ್ನೂ ಮಾಡಲು ಸಾಧ್ಯವಿಲ್ಲ.

ಸಾಮಾಜಿಕ ಜಾಲತಾಣಗಳು ಮತ್ತು ವಾಸ್ಟ್ ಆ್ಯಪ್‌ನಂಥ ಮೆಸೆಂಜರ್‌ಗಳಲ್ಲಿ ನಡೆಸುವ ಸಂವಹನದ ದೊಡ್ಡ ಶಕ್ತಿ ಎಂದರೆ ಅವು ಒದಗಿಸುವ ‘ವೈಯಕ್ತಿಕತೆ’. ಸಾಮಾಜಿಕ ಜಾಲತಾಣಗಳಲ್ಲೇ ಸುದ್ದಿಯನ್ನೂ ಮಾಹಿತಿಯನ್ನೂ ಪಡೆಯುವ ದೊಡ್ಡದೊಂದು ವರ್ಗ ಈಗ ಸೃಷ್ಟಿಯಾಗಿದೆ. ಈ ವರ್ಗವೇ ಸಾಮಾಜಿಕ ಜಾಲತಾಣ ಉದ್ದಿಮೆಯ ಬೆನ್ನೆಲುಬು. ಫೇಸ್‌ಬುಕ್, ಟ್ವಿಟರ್‌ನಂಥ ಕಂಪನಿಗಳು ‘ಸುಳ್ಳು ಸುದ್ದಿ’ಯ ಹರಡುವಿಕೆಯನ್ನು ತಡೆಯುವುದರ ಬಗ್ಗೆ ಅದೆಷ್ಟೇ ಹೇಳಿದರೂ ಅದು ಕೇವಲ ಬಾಯುಪಚಾರದ ಮಾತು. ಚುನಾವಣಾ ಆಯೋಗದ ಸಂಕಲ್ಪವೇನೋ ಶುದ್ಧವಾಗಿದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಬೇಕಿರುವ ಏನೂ ಅದರ ಬಳಿ ಇಲ್ಲ.

ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧ ಕಲ್ಪಿಸುವುದಕ್ಕೆ ಸಾಧ್ಯವಾದರೆ ಮಾತ್ರ ಚುನಾವಣಾ ಆಯೋಗಕ್ಕೆ ಏನಾದರೂ ಮಾಡಲು ಸಾಧ್ಯ. ಯುನೈಟೆಡ್ ಕಿಂಗ್‌ಡಂ (ಯು.ಕೆ.) ಮತ್ತು ಯುರೋಪಿನ ಹಲವು ದೇಶಗಳಲ್ಲಿ ರಾಜಕೀಯ ಪಕ್ಷಗಳಲ್ಲದ ಸಂಘಟನೆಗಳು ಮತ್ತು ಚುನಾವಣೆಗೆ ಸ್ಪರ್ಧಿಸದವರು ಮಾಡುವ ಪ್ರಚಾರವನ್ನೂ ನಿಯಂತ್ರಿಸುವ ಕಾನೂನುಗಳಿವೆ. ಯು.ಕೆ.ಯಲ್ಲಿರುವ ಕಾನೂನು, ಯಾವ ಅವಧಿಯಲ್ಲಿ ಇವರು ಪ್ರಚಾರ ಮಾಡಬಹುದು, ಅದಕ್ಕಾಗಿ ಎಷ್ಟು ಖರ್ಚು ಮಾಡಬಹುದು ಎಂಬುದನ್ನೂ ಸ್ಪಷ್ಟವಾಗಿ ನಿರ್ವಚಿಸಿದೆ. ಈ ಬಗೆಯ ನಿಯಮಗಳನ್ನು ರೂಪಿಸುವುದರ ಬಗ್ಗೆಯೂ ಚುನಾವಣಾ ಆಯೋಗ ಆಲೋಚಿಸ
ಲೇಬೇಕಾದ ಸಂದರ್ಭ ಬಂದಿದೆ.

ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ಮತ್ತು ಸಾಂಪ್ರದಾಯಿಕ ಜಾಹೀರಾತುಗಳ ಮೇಲಷ್ಟೇ ಸದ್ಯಕ್ಕೆ  ಚುನಾವಣಾ ಆಯೋಗಕ್ಕೆ ನಿಯಂತ್ರಣವಿದೆ. ಹೊಸ ತಲೆಮಾರಿನ ಪ್ರಚಾರ ತಂತ್ರಗಳ ಅರಿವೂ ಚುನಾವಣಾ ಆಯೋಗಕ್ಕೆ ಇರುವಂತೆ ಕಾಣಿಸುತ್ತಿಲ್ಲ. ಅಂದರೆ ಕರ್ನಾಟಕ ವಿಧಾನಸಭೆಗೆ ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಸಾಕ್ಷಾತ್ ಚುನಾವಣಾ ಆಯೋಗದ ನಿಗಾವಣೆಯಲ್ಲೇ ‘ಸುಳ್ಳುಸುದ್ದಿ’ ಹರಿದಾಡುತ್ತದೆ ಎಂದರ್ಥ. ಈಗಾಗಲೇ ಅವು ಉತ್ಕರ್ಷದ ಹಂತಕ್ಕೆ ಏರಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುತ್ತದೆ. ಹಣ ಮತ್ತು ತೋಳ್ಬಲದ ಜೊತೆಗೆ ಈ ಬಾರಿ ‘ಸುಳ್ಳುಸುದ್ದಿ’ಯ ಬಲವೂ ರಾಜಕೀಯ ಪಕ್ಷಗಳಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT