ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರಿಗೂ ಮಣೆ ಹಾಕಿದ್ದ ಮತದಾರ

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಂದ 7 ಬಾರಿ ಸ್ವತಂತ್ರ ಅಭ್ಯರ್ಥಿಗಳ ಆಯ್ಕೆ
Last Updated 24 ಏಪ್ರಿಲ್ 2018, 8:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷೇತರರು ಆಯ್ಕೆಯಾಗಿದ್ದು, ‘ಮತದಾರರು ರಾಜಕೀಯ ಪಕ್ಷಗಳಿಗೆ ಮಾತ್ರ ಮತ ಹಾಕುತ್ತಾರೆ’ ಎಂಬ ಅಭಿಪ್ರಾಯವನ್ನು ಜಿಲ್ಲೆಯ ಮತದಾರರು ಸುಳ್ಳಾಗಿಸಿದ್ದಾರೆ.

ಗುಂಡ್ಲುಪೇಟೆಯಲ್ಲೇ 3 ಬಾರಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾ ಗಿದ್ದರೆ, ಚಾಮರಾಜನಗರ ದಲ್ಲಿ ಇಬ್ಬರು, ಕೊಳ್ಳೇಗಾಲ ಹಾಗೂ ಹನೂರು ಕ್ಷೇತ್ರದಲ್ಲಿ ತಲಾ ಒಬ್ಬರು ಪಕ್ಷೇತರರು ಇದುವರೆಗೆ ಶಾಸಕರಾಗಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ 7 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಕೆ.ಎಸ್.ನಾಗರತ್ನಮ್ಮ ಮೊದಲ ಎರಡು ಚುನಾವಣೆಗಳಲ್ಲಿ ಪಕ್ಷೇತರರಾಗಿಯೇ ಗೆಲುವು ಸಾಧಿಸಿದ್ದು ವಿಶೇಷ. 1957ರಲ್ಲಿ ಅವರು ಕಾಂಗ್ರೆಸ್‌ನ ಎಚ್.ಕೆ.ಶಿವರುದ್ರಪ್ಪ ಅವರನ್ನು 11,902 ಮತಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದರು. ನಂತರ, 1962ರಲ್ಲಿ ನಾಗರತ್ನಮ್ಮ ಅವರು ಶಿವರುದ್ರಪ್ಪ ಅವರನ್ನೇ ಮತ್ತೆ ಮಣಿಸಿದರಾದರೂ ಗೆಲುವಿನ ಅಂತರ ಕಡಿಮೆಯಾಯಿತು. ಕೇವಲ 2,755 ಮತಗಳಿಂದ ಮಾತ್ರ ಅವರು ಚುನಾಯಿತರಾಗಿದ್ದರು. ಇದರ ಜತೆಗೆ ಶಿವರುದ್ರಪ್ಪ ಹಿಂದಿನ ಚುನಾವಣೆಯಲ್ಲಿ 13,053 ಮತಗಳನ್ನಷ್ಟೇ ಪಡೆದಿದ್ದರು. ಆದರೆ, 1962ರಲ್ಲಿ 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಸೂಕ್ಷ್ಮತೆ ಗ್ರಹಿಸಿದ್ದ ನಾಗರತ್ನಮ್ಮ ರಾಜಕೀಯ ಪಕ್ಷಗಳ ಎದುರು ಒಬ್ಬಂಟಿಯಾಗಿ ಸೆಣಸುವುದು ಕಷ್ಟ ಎಂದು ಅರಿತು ಕಾಂಗ್ರೆಸ್ ಸೇರಿದರು.

ವಿಶೇಷ ಎಂದರೆ ಅವರ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಿದ್ದೂ ಪಕ್ಷೇತರ ಅಭ್ಯರ್ಥಿಯೇ! 1967 ಮತ್ತು 1972ರಲ್ಲಿ ಕಾಂಗ್ರೆಸ್‌ನಿಂದಲೇ ನಾಗರತ್ನಮ್ಮ ಆಯ್ಕೆಯಾಗಿದ್ದರು. ಇವರ ಕಾಂಗ್ರೆಸ್ ಸೇರ್ಪಡೆಯಿಂದ ಭಿನ್ನಮತ ಹೊಂದಿದ್ದ ಶಿವರುದ್ರಪ್ಪ ಇಷ್ಟೊತ್ತಿಗಾಗಲೇ ಪಕ್ಷ ತ್ಯಜಿಸಿದ್ದರು. 1978ರಲ್ಲಿ ಪಕ್ಷೇತರರಾಗಿ ಶಿವರುದ್ರಪ್ಪ ಕಣಕ್ಕಿಳಿದು ಅಜೇಯರಾಗಿದ್ದ ನಾಗರತ್ನಮ್ಮ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು. ಇದರ ನಂತರ ಪಕ್ಷೇತರರ‍್ಯಾರು ಗುಂಡ್ಲುಪೇಟೆಯಿಂದ ಆಯ್ಕೆಯಾಗಿಲ್ಲ. ಮಾತ್ರವಲ್ಲ ಗೆಲುವಿನ ಸಮೀಪಕ್ಕೂ ಹೋಗಿಲ್ಲ.

1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದ ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಬಿ.ರಾಚಯ್ಯ ಹಾಗೂ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಯು.ಎಂ.ಮಾದಪ‍್ಪ ಆಯ್ಕೆಯಾಗಿದ್ದರು. ನಂತರ, 1962ರಲ್ಲಿ ಕಾಂಗ್ರೆಸ್‌ನಿಂದ ಎಂ.ಸಿ.ಬಸಪ್ಪ ಆಯ್ಕೆಯಾದರು. ಆದರೆ, ಮುಂದಿನ ಚುನಾವಣೆಯಲ್ಲಿ ಇವರ ಗೆಲುವಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪುಟ್ಟಸ್ವಾಮಿ ಬ್ರೇಕ್ ಹಾಕಿದರು. ಗೆಲುವಿನ ಅಂತರ ಕೇವಲ 1,262 ಮಾತ್ರವೇ ಆಗಿದ್ದರೂ ಗೆಲುವು ಗೆಲುವೇ ಆಗಿತ್ತು.

ಇಲ್ಲೂ ಒಂದು ವಿಚಿತ್ರ ಎಂದರೆ ಪಕ್ಷೇತರರಾಗಿ ಆಯ್ಕೆಯಾದ ಪುಟ್ಟಸ್ವಾಮಿ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದು ಪಕ್ಷೇತರ ಅಭ್ಯರ್ಥಿಯೇ! ಮೊದಲು ಪಕ್ಷೇತರರಾಗಿ ಆಯ್ಕೆಯಾದ ಪುಟ್ಟಸ್ವಾಮಿ ನಂತರ ಕಾಂಗ್ರೆಸ್ ಸೇರಿ ಮತ್ತೆ ಆಯ್ಕೆಯಾದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ಸಿ.ಬಸಪ್ಪ ಅವರಿಂದ ಸೋಲು ಕಂಡರೂ ನಂತರದ 2 ಚುನಾವಣೆಗಳಲ್ಲಿ 1983 ಮತ್ತು 1985ರಲ್ಲಿ ಸತತ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಒಟ್ಟು 4 ಬಾರಿ ಶಾಸಕರಾದ ಹೆಗ್ಗಳಿಕೆಗೆ ಪಾತ್ರರಾದರು.

ಇವರ ಈ ಗೆಲುವಿನ ಪಯಣಕ್ಕೆ ಪಕ್ಷೇತರರಾಗಿ 1989ರಲ್ಲಿ ಸ್ಪರ್ಧಿಸಿದ್ದ ವಾಟಾಳ್ ನಾಗರಾಜ್ ತಡೆ ಹಾಕಿದರು. ಇಲ್ಲಿಂದ ಮುಂದೆ ಮತ್ತೆ ಯಾರೂ ಪಕ್ಷೇತರರಾಗಿ ಆಯ್ಕೆಯಾಗಿಲ್ಲ. ಮುಂದೆ ವಾಟಾಳ್ ನಾಗರಾಜ್ ಶಾಸಕರಾಗಿ ಆಯ್ಕೆ ಯಾದರಾದರೂ ಇವರು ಸ್ಪ‍ರ್ಧಿಸಿದ್ದು ಕನ್ನಡ ಚಳವಳಿ ವಾಟಾಳ್ ಪಕ್ಷದಡಿ.‌

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ದಲ್ಲಿ ಪಕ್ಷೇತರ ಅಭ್ಯರ್ಥಿ ಜಯ ಗಳಿಸಲು 2004ರವರೆಗೂ ಕಾಯಬೇಕಾಯಿತು. ನಂತರ, ಯಾವ ಪಕ್ಷೇತರ ಅಭ್ಯರ್ಥಿಗೂ ಗೆಲುವು ಒಲಿದಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ 1999ರಲ್ಲಿ ಕಣಕ್ಕಿಳಿದಿದ್ದ ಎಸ್.ಬಾಲರಾಜ್ ಸೋಲು ಕಂಡಿದ್ದರು. ಆದರೆ, 2004ರಲ್ಲಿ ಬಿಜೆಪಿ– ಜೆಡಿಯು ಹೊಂದಾಣಿಕೆಯಿಂದ ಟಿಕೆಟ್ ಜೆಡಿಯು ಪಾಲಾಯಿತು. ಇದರಿಂದ ಕೋಪಗೊಂಡು ಬಾಲರಾಜ್ ಪಕ್ಷೇತರರಾಗಿ ಸ್ಪರ್ಧೆಗೆ ಧುಮುಕಿದರು. 3,328 ಮತಗಳಿಂದ ಇವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್.ಜಯಣ್ಣ ಅವರನ್ನು ಸೋಲಿಸಿದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜಿ.ರಾಜೂಗೌಡ ಅವರು ಜನತಾ ಪಕ್ಷದ ಅಭ್ಯರ್ಥಿ ಹಾಗೂ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ನಾಗಪ್ಪ ಅವರನ್ನು 1985ರಲ್ಲಿ ಸೋಲಿಸಿದರು. ನಂತರ, ಇಲ್ಲಿಯೂ ಯಾವೊಬ್ಬ ಪಕ್ಷೇತರ ಅಭ್ಯರ್ಥಿಯೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ರಾಜೂಗೌಡ ಸಹ ಹಿಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ
ಸ್ಪರ್ಧಿಸಿ ಗೆಲುವಿನ ಸನಿಹದಲ್ಲಿ ಮುಗ್ಗರಿಸಿದ್ದರು. ಆದರೆ, ಶಾಸಕರಾದ ಬಳಿಕ ಇವರು 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ ಗಳಿಸಿದರು.

ಪಕ್ಷೇತರರಾಗಿ ಆಯ್ಕೆಯಾದ ಶಾಸಕರು

ಕೆ.ಎಸ್.ನಾಗರತ್ನಮ್ಮ– ಗುಂಡ್ಲುಪೇಟೆ ಕ್ಷೇತ್ರ– 2 ಬಾರಿ (1957 ಮತ್ತು 1962)

ಎಚ್.ಕೆ.ಶಿವರುದ್ರಪ್ಪ– ಗುಂಡ್ಲುಪೇಟೆ ಕ್ಷೇತ್ರ–1 ಬಾರಿ (1978)

ಎಸ್.ಪುಟ್ಟಸ್ವಾಮಿ– ಚಾಮರಾಜನಗರ ಕ್ಷೇತ್ರ– 1 ಬಾರಿ (1967)

ವಾಟಾಳ್ ನಾಗರಾಜ– ಚಾಮರಾಜನಗರ ಕ್ಷೇತ್ರ–1 ಬಾರಿ (1989)

ಜಿ.ರಾಜೂಗೌಡ– ಹನೂರು ಕ್ಷೇತ್ರ– 1 ಬಾರಿ (1985)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT