ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ಬದುಕಿನಲ್ಲಿದ್ದ ನೆಮ್ಮದಿ ಈಗಿಲ್ಲ!

ಸಿಳ್ಳೇಕ್ಯಾತರ ಓಣಿಯಲ್ಲಿ ಹನಿ ನೀರಿಗೂ ಹಾಹಾಕಾರ
Last Updated 24 ಏಪ್ರಿಲ್ 2018, 12:57 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹೊರವಲಯದಲ್ಲಿರುವ ಅಲೆಮಾರಿಗಳ ಓಣಿಯಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದ್ದು, ಅಲೆಮಾರಿಗಳ ಕುಟುಂಬಗಳು ನೀರಿಗಾಗಿ ನಾಲ್ಕೈದು ಕಿಲೋ ಮೀಟರ್ ದೂರದ ರೈತರ ಹೊಲಗಳಲ್ಲಿನ ಕೊಳವೆ ಬಾವಿಗಳನ್ನೇ ಆಶ್ರಯಿಸಿವೆ.

ಸರ್ಕಾರ ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಿರುವ ಕಾರಣ ಸಿಳ್ಳೆಕ್ಯಾತರು, ಬುಡ್ಗಜಂಗಮರು ಹಾಗೂ ಮೀನುಗಾರರು ಈ ಓಣಿಯಲ್ಲಿ ನೆಲೆನಿಂತು ವಾಸಿಸುತ್ತಿದ್ದಾರೆ. ಸುಮಾರು 450ಕ್ಕೂ ಹೆಚ್ಚು ಜನಸಂಖ್ಯೆ ಇರುವ 200 ಕುಟುಂಬಗಳು ಇಲ್ಲಿವೆ. ಇವರಿಗೆ ಸರ್ಕಾರ ಒಂದು ಹ್ಯಾಂಡ್‌ಪಂಪ್‌ ಹಾಗೂ ಎರಡು ಕಿರುನೀರು ಸರಬರಾಜು ಯೋಜನೆಯಡಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಅವುಗಳಲ್ಲಿ ನೀರು ಬರುತ್ತಿಲ್ಲ. ಒಂದು ಹ್ಯಾಂಡ್‌ಪಂಪ್‌ ನೀರು ಪೂರೈಸುತ್ತಿದ್ದರೂ, 200 ಕುಟುಂಬಗಳಿಗೆ ಏಕಕಾಲದಲ್ಲಿ ನೀರು ಸಿಗುವುದು ದುಸ್ತರವಾಗಿದೆ.  ನೀರಿಗಾಗಿ ನಿತ್ಯ ಜಗಳ ಸಾಮಾನ್ಯ. ಇದರಿಂದ ಬೇಸತ್ತ ಕೆಲವರು ದೂರದ ರೈತರ ಹೊಲಗಳಲ್ಲಿನ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ.

‘ಅಲೆಮಾರಿಗಳು ನೆಲೆಸಿರುವ ಓಣಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸಮರ್ಪಕ ರಸ್ತೆ , ಚರಂಡಿ ನಿರ್ಮಾಣಗೊಂಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿಲ್ಲ. ಗುಡ್ಡ ಕಣಿವೆಗೆ ಹೊಂದಿಕೊಂಡಿರುವ ಕಾರಣ ಬಿಸಿಲಿನ ತಾಪದಿಂದ ಅಲೆಮಾರಿಗಳು ಸಂಕಷ್ಟಪಡುವಂತಾಗಿದೆ’ ಎಂದು ಅಲೆಮಾರಿ ಸಮುದಾಯದ ರಾಮಾಂಜನೇಯ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಅಲೆಮಾರಿಗಳೆಂದರೆ ಜಿಲ್ಲಾಡಳಿತ ಒಂದು ರೀತಿಯಲ್ಲಿ ಅಸಡ್ಡೆ ತೋರುತ್ತದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಸರ್ಕಾರ ಆದ್ಯತೆ ಮೇರೆಗೆ ಅನುದಾನ ಕೊಟ್ಟರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಅಲೆಮಾರಿಗಳ ಧ್ವನಿಗೆ ಕಿವಿಗೊಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಇಲ್ಲಿರುವ ಪರಿಸ್ಥಿತಿಯನ್ನು ವಿವರಿಸಿದರೂ, ಯಾವೊಬ್ಬ ಅಧಿಕಾರಿ ಇತ್ತ ತಿರುಗಿ ನೋಡಿಲ್ಲ’ ಎಂದು ಬುಡ್ಗ ಜಂಗಮ ಜಿಲ್ಲಾ ಘಟಕ ಅಧ್ಯಕ್ಷ ಮಾರುತಿ, ಉಪಾಧ್ಯಕ್ಷ ಶಂಕರ ಶಾಸ್ತ್ರಿ, ಸಿಳ್ಳೆಕ್ಯಾತರ ಸಂಘದ ಅಧ್ಯಕ್ಷ ಖಂಡಪ್ಪ ಆರೋಪಿಸಿದರು.

ಚುನಾವಣೆ ಬಹಿಷ್ಕಾರ ಎಚ್ಚರಿಕೆ

24 ಗಂಟೆಗಳಲ್ಲಿ ಅಲೆಮಾರಿ ಓಣಿಗೆ ಕುಡಿಯುವ ನೀರು ಪೂರೈಸಬೇಕು. ಸ್ಪಂದಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ನಗರದ ಹೊರವಲಯದಲ್ಲಿರುವ ಅಲೆಮಾರಿಗಳ ಸಮುದಾಯ ಮುಖಂಡರು ಜಿಲ್ಲಾಡಳಿತಕ್ಕೆ ಸೋಮವಾರ ಎಚ್ಚರಿಕೆ ನೀಡಿದರು.

‘ಅಲೆಮಾರಿ ಓಣಿಯಲ್ಲಿ 270ಕ್ಕೂ ಹೆಚ್ಚು ಮತದಾರರು ಇದ್ದಾರೆ. 450ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬೇಸಿಗೆ ಆರಂಭದಿಂದಲೂ ಇಲ್ಲಿನ ಕುಡಿಯುವ ನೀರಿನ ಬವಣೆ ಉಂಟಾಗಿದೆ. ಈ ಕುರಿತು ಸಂಬಂಧಿಸಿದ ವರ್ಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರಿಗೆ ಮನವಿ ಮಾಡಿದ್ದರೂ, ಇದುವರೆಗೂ ಕುಡಿಯುವ ನೀರು ಪೂರೈಕೆ ಮಾಡಿಲ್ಲ’ ಎಂದು ಟೋಕ್ರೆ ಕೋಳಿ ಸಮಾಜದ ಜಿಲ್ಲಾ ಅಧ್ಯಕ್ಷ ಉಮೇಶ್ ಮುದ್ನಾಳ ದೂರಿದರು.

‘ನೀತಿ ಸಂಹಿತೆ ಜಾರಿ ಇದ್ದರೂ ಅಲೆಮಾರಿ ಓಣಿಯಲ್ಲಿ ಮದ್ಯ ಪೂರೈಕೆ ಆಗುತ್ತಿದೆ. ಆದರೆ, ಸನಿಹದಲ್ಲಿ ಭೀಮಾನದಿ ಇದ್ದರೂ ಹನಿ ನೀರಿಗೂ ತತ್ವಾರ. 24 ಗಂಟೆಯಲ್ಲಿ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆ ಮಾಡದಿದ್ದರೆ ಚುನಾವಣೆ ಬಹಿಷ್ಕಾರ ಹಾಕಲಾಗುವುದು’ ಎಂದು ಅಲೆಮಾರಿ ನಿವಾಸಿಗಳಾದ ಮಲ್ಲೇಶ, ಶೇಖರ, ರಮೇಶ, ಅಶೋಕ, ನಾರಣಪ್ಪ, ಈರಣ್ಣ, ಹುಸೇನ್, ಹುಚ್ಚಪ್ಪ, ಮರೆಪ್ಪ, ಗಾಳೆಪ್ಪ, ಸಾಬಣ್ಣ, ಬಸವರಾಜ ಎಚ್ಚರಿಸಿದರು.

**
ಕುಡಿಯುವ ನೀರು ಪೂರೈಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸುತ್ತೇವೆ
– ಮಾರುತಿ ಅಧ್ಯಕ್ಷ, ಜಿಲ್ಲಾ ಬುಡ್ಗ ಜಂಗಮ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT