ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಪ್ರತಿಪಾದನೆ ಕೇವಲ ರಾಜಕಾರಣವೇ?

Last Updated 24 ಏಪ್ರಿಲ್ 2018, 17:53 IST
ಅಕ್ಷರ ಗಾತ್ರ

ಬಸವ ತತ್ವ ಆಚರಣೆಯ ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಕಳಿಸಿರುವ ನಡೆ ವಿವಾದ ಎಬ್ಬಿಸಿದೆ. ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ವೀರಶೈವ- ಲಿಂಗಾಯತ ಧರ್ಮವನ್ನು ಒಡೆದು ಮತ ಸೆಳೆಯುವ ರಾಜಕೀಯ ತಂತ್ರವಿದು ಎಂಬ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸಿದ್ದಾರೆ. ಲಿಂಗಾಯತ ಸಮುದಾಯದ ಒಳಗಿನಿಂದಲೂ ಈ ಟೀಕೆ ದೊಡ್ಡ ಪ್ರಮಾಣದಲ್ಲಿ ಕೇಳಿಬಂದಿದೆ. ಲಿಂಗಾಯತ-ವೀರಶೈವದ ‘ರಾಜಕಾರಣ’ ನೆಲಮಟ್ಟದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರತೊಡಗಿದೆಯೇ ಇಲ್ಲವೇ, ಹೌದಾದರೆ ಅದರ ಪ್ರಮಾಣವೇನು, ಇಲ್ಲವಾದರೆ ಅದರ ಪ್ರತ್ಯಕ್ಷ ಪರೋಕ್ಷ ಕಾರಣಗಳೇನೆಂದು ತಿಳಿಯಲು ರಾಜ್ಯದ ಲಿಂಗಾಯತ ಸೀಮೆಯಲ್ಲಿ ‘ಪ್ರಜಾವಾಣಿ’ ಪಯಣ ಮಾಲಿಕೆಯ ಮೊದಲ ವರದಿ...

ಸಿದ್ದರಾಮಯ್ಯ ಒಡೆದು ಆಳುವ ನೀತಿಯತ್ತ ಒಲವು ತೋರಿದ್ದಾರೆ. ಶೇ 15ರಷ್ಟಿರುವ ಲಿಂಗಾಯತರನ್ನು ಒಡೆದು, ತಮ್ಮ ನಿಯಂತ್ರಣದಲ್ಲಿರುವ ಕುರುಬ ಜನಾಂಗದ ವೋಟ್‌ ಬ್ಯಾಂಕ್‌ಗೆ ಸೇರಿಸಿಕೊಳ್ಳುವುದು ಅವರ ಉದ್ದೇಶ. ಈ ದಿಸೆಯಲ್ಲಿ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಮತ್ತು ಜಾತ್ಯತೀತ ಜನತಾದಳದ ಬಸವರಾಜ ಹೊರಟ್ಟಿ ಅವರನ್ನೂ ಒಳಗೆ ಹಾಕಿಕೊಂಡಿದ್ದಾರೆ.

ಎರಡನೆಯದಾಗಿ, ಬಸವ ತತ್ವದ ಮುಖವಾಡ ಧರಿಸಿರುವ ನಾಲ್ಕಾರು ಸ್ವಾಮಿಗಳು ಸರ್ಕಾರಿ ಸವಲತ್ತುಗಳ ಲಾಲಸೆಗೆ ಒಳಪಟ್ಟು ತಮ್ಮದೇ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಬಸವಣ್ಣನವರ ವಚನಗಳನ್ನು ತಿದ್ದಿ ಬರೆದ ಮಾತೆ ಮಹಾದೇವಿ ಅವರೂ ಈ ಗುಂಪಿನಲ್ಲಿ ಸೇರಿದ್ದಾರೆ. ವೀರಶೈವ ವೈದಿಕ ಎನ್ನುವ ಇವರು ಕೊರಳಲ್ಲಿ ಕಟ್ಟಿಕೊಂಡ ಲಿಂಗವೂ ಮೂರ್ತಿಯೇ, ಅದರ ಪೂಜೆಯೂ ವೈದಿಕ ಸಂಪ್ರದಾಯದ ಮೂರ್ತಿ ಪೂಜೆಯೇ. ವಿಭೂತಿ ಗಂಧ ಧರಿಸುವುದು, ಬಿಲ್ವಪತ್ರೆ ಧೂಪ ದೀಪ ಎಲ್ಲವೂ ವೈದಿಕವೇ.

ಲಿಂಗದೊಳಗಿನ ಪೀಠ ಈಶ್ವರಾಕೃತಿಯ ಪೀಠವೇ. ಅದೂ ಸ್ಥಾವರ ಆಗಲಿಲ್ಲವೇ? ಸಿದ್ದರಾಮಯ್ಯ ಮತ್ತು ಎಂ.ಬಿ.ಪಾಟೀಲ ಮೊನ್ನೆ ಕೂಡಲಸಂಗಮದಲ್ಲಿ ಕೂಡಲ ಸಂಗಮನಾಥನ ಪೂಜೆ ಮಾಡಿದರು. ಆರತಿ ಧೂಪ ದೀಪ ಬೆಳಗಿದರು. ಇವೆಲ್ಲ ಆಗಮ- ವೈದಿಕ ಪರಂಪರೆಯ ಶಿಷ್ಟಾಚಾರಗಳಲ್ಲವೇನು? ಕೂಡಲಸಂಗಮ ಸ್ಥಾವರ ತಾನೇ?

ಮೂಲತಃ ಗುರುಪರಂಪರೆಯಲ್ಲಿ ಬಂದ ಜಂಗಮನೂ ಜಂಗಮನೇ, ವಿರಕ್ತ ಮಠದವರೂ ಜಂಗಮರೇ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಸೋದರರ ಪೈಕಿ ಒಬ್ಬ ಗುರುಮಠಕ್ಕಾದ ಬಲಗಣ್ಣು ಮತ್ತು ಇನ್ನೊಬ್ಬನು ವಿರಕ್ತ ಮಠಕ್ಕಾದ ಎಡಗಣ್ಣು. ಎರಡೂ ಕಣ್ಣು ಒಂದೇ. ಯಾವುದನ್ನೂ ಅಲ್ಲಗಳೆಯುವಂತಿಲ್ಲ.

l ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆಯಿಂದ ವೀರಶೈವ- ಲಿಂಗಾಯತ ಸಮಾಜ ಒಡೆದಿದೆಯೇ?

ಹೌದು, ಒಡೆಯುವ ಶಿಫಾರಸಿನ ಫಲ ಇನ್ನೂ ಸಿಕ್ಕಿಲ್ಲ. ಅದನ್ನೇ ಬಂಡವಾಳ ಆಗಿಸಿ ಲಿಂಗಾಯತರ ವೋಟು ಸೆಳೆಯಲು ಪ್ರಯತ್ನಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುವ ಕುತಂತ್ರವಿದು. ನೆಲಮಟ್ಟದಲ್ಲಿ ಧರ್ಮ ಒಡೆದಿಲ್ಲ.

ಐದು ಸಾವಿರ ವರ್ಷದಷ್ಟು ಹಳೆಯದಾದ ಈ ಧರ್ಮದ ತಳಹದಿ ಕದಲುವುದು ಉಂಟೇ? ನರನಿಂದ ಬಂದ ಧರ್ಮ ಅಲ್ಲ ಇದು, ಹರನಿಂದ ಬಂದದ್ದು. ತುಂಡು ಮಾಡುವುದು ಸಾಧ್ಯವಿಲ್ಲ. ಬಸವಣ್ಣನನ್ನು ನಾವೂ ಗೌರವಿಸುತ್ತೇವೆ. ಶ್ರೀಶೈಲ ಪೀಠಾಧೀಶರು ‘ಲೋಕಾರಾಧ್ಯ ಬಸವಣ್ಣ’ ಎಂದು ಮೂರು ಪುಸ್ತಕಗಳನ್ನು ಬರೆದಿದ್ದಾರೆ.

l ಕ್ರಾಂತಿಕಾರಿ ಬಸವಣ್ಣನನ್ನು ವೀರಶೈವವು ಅದುಮಿಟ್ಟು ಭಕ್ತಿ ಭಂಡಾರಿ ಬಸವಣ್ಣನನ್ನು ಮುಂದೆ ಮಾಡಿದ ಆಪಾದನೆ ನಿಜವೇ?

ಬಸವ ತತ್ವದ ಹೆಸರಿನ ಮುಖವಾಡ ಹಾಕಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರು ಅಪಪ್ರಚಾರ ನಡೆಸಿದ್ದಾರೆ ನಮ್ಮ ಬಗೆಗೆ. ಅಂದಿನ ಶರಣರ ಅಸಹನೆಯೇ ಕಲ್ಯಾಣ ಕ್ರಾಂತಿಗೆ ಕಾರಣ. ಶಂಕರ ನೀನು ಎಂದು ನಾವು ತಿಳಿದುಕೊಂಡರೆ ನಿನ್ನನ್ನು ನೀನು ಕಿಂಕರ ಎಂದು ಬಣ್ಣಿಸಿಕೊಳ್ಳುತ್ತಿದ್ದೀಯಲ್ಲ ಎಂದು ಅವರನ್ನು ಒಪ್ಪದ ಶರಣರೇ ಬಸವಣ್ಣನವರ ಜೀವಕ್ಕೆ ಕುತ್ತು ತಂದರು. ಈ ಸತ್ಯವನ್ನು ಇವರು (ಲಿಂಗಾಯತ ಪ್ರತಿಪಾದಕರು) ಒಪ್ಪಿಕೊಳ್ಳುತ್ತಿಲ್ಲ.

l ಪಂಚಾಚಾರ್ಯರು ವಿರಕ್ತರನ್ನು ಸಮಾನವೆಂದು ಯಾಕೆ ಪರಿಗಣಿಸುತ್ತಿಲ್ಲ?

ಭೌತಿಕ ವಿಚಾರಗಳಿಗೆ ಮಾರುಹೋಗಿ ಗುರು ಹಿರಿಮೆಯ ಮೂಲತತ್ವ ಸಿದ್ಧಾಂತವನ್ನು ಅಲ್ಲಗಳೆಯುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ಕಾರಣ ಪರಿಸ್ಥಿತಿ ವಿಷಮಗೊಂಡಿದೆ. ಧನಕನಕ ಆಸ್ತಿಗಳಿ ಸಿಶ್ರೀಮಂತವಾಗಿರುವ ವಿರಕ್ತ ಮಠಗಳು ಗುರುಗಳಿಗೆ ಸಮಾನವಾಗಿ ಕುಳಿತುಕೊಳ್ಳಬೇಕೆಂದು ವಾದಿಸಿವೆ. ಗುರುವು ಗುರುವೇ ಮತ್ತು ಜಂಗಮ ಜಂಗಮನೇ ಎಂಬ ಮಾತನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.

ದೇವಸ್ಥಾನ ಯಾಕೆ ಕಟ್ಟಿದಿರಿ, ಮೂರ್ತಿ ಯಾಕೆ ಪೂಜೆ ಮಾಡ್ತೀರಿ, ಮಾಡಬಾರದು, ಮೂರ್ತಿ ಕಿತ್ತು ಒಗೀರಿ, ದೇವಸ್ಥಾನ ಕೆಡವಿರಿ, ನಿಮ್ಮ ಅಂತರಂಗದಲ್ಲಿ ದೇವರನ್ನು ಸ್ಥಾಪನೆ ಮಾಡಿಕೊಳ್ಳಿರಿ ಅಂತ ಭಕ್ತರಿಗೆ ಉಪದೇಶ ಮಾಡುತ್ತಿದ್ದಾರೆ. ಅಂತರಂಗದಲ್ಲಿ ದೇವರನ್ನು ಕಂಡುಕೊಂಡು ಪೂಜಿಸುವ ‘ಸ್ಥಲ’ ಬರೋತನಕ ಕಣ್ಣಿಗೆ ಕಾಣುವ ದೇವರನ್ನು ಪೂಜಿಸಲು ಅನುವು ಮಾಡಿಕೊಡಬೇಕು.

l ಲಿಂಗಾಯತರಲ್ಲಿ ಎಷ್ಟು ಮಂದಿ ಕಾಂಗ್ರೆಸ್ಸಿಗೆ ಮತ ನೀಡಲಿದ್ದಾರೆ?

ವೀರಶೈವ-ಲಿಂಗಾಯತ ಅಖಂಡತೆಯನ್ನು ಕಾಪಾಡುವ ಅಭ್ಯರ್ಥಿಗಳಿಗೆ ಮಾತ್ರವೇ ನಮ್ಮವರು ವೋಟು ಹಾಕಬೇಕು. ತಮ್ಮನ್ನು ಪ್ರತ್ಯೇಕ ಧರ್ಮವೆಂದು ಶಿಫಾರಸು ಮಾಡಿದ ಕಾಂಗ್ರೆಸ್ಸಿನ ಋಣ ತೀರಿಸಲು ಮುಂದಾಗಿರುವವರು ನೂರಕ್ಕೆ ಕೇವಲ 10 ಮಂದಿ. ಆದರೆ ಕೆಲವೆಡೆ ಪಕ್ಷವನ್ನು ಪಕ್ಕ ಇರಿಸಿ ವ್ಯಕ್ತಿಗಳನ್ನು ಬೆಂಬಲಿಸಬೇಕಾಗುತ್ತದೆ. ಧರ್ಮವನ್ನು ಒಡೆಯುವುದರ ವಿರುದ್ಧ ದನಿ ಎತ್ತಿದ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಗ ಕಾಂಗ್ರೆಸ್ಸಿಗರಾದರೂ ಸಮುದಾಯ ಇವರನ್ನೇ ಬೆಂಬಲಿಸಲಿದೆ. ಈ ಸಂಬಂಧ ವೀರಶೈವ- ಲಿಂಗಾಯತರು ಪಕ್ಷದ ಚೌಕಟ್ಟು ಹಾಕುವುದಿಲ್ಲ. ರಾಜ್ಯದಲ್ಲಿ ಆರರಿಂದ ಹತ್ತು ಕ್ಷೇತ್ರಗಳಲ್ಲಿ ಈ ಬಗೆಯ ಮತದಾನ ನಡೆಯಲಿದೆ.

l ಎಂ.ಬಿ.ಪಾಟೀಲ ಮತ್ತು ವಿನಯ ಕುಲಕರ್ಣಿ ಅವರನ್ನು ನೀವು ಬೆಂಬಲಿಸುವುದಿಲ್ಲವೇ?

ಅವರ ಪರಿಸ್ಥಿತಿ ಬಹಳ ಗಂಭೀರವಾಗಲಿದೆ. ಅವರ ಸೋಲಿಗೆ ಅವರೇ ಕಾರಣರು. ಮುಳ್ಳನ್ನು ಮುಳ್ಳಿಂದ ತೆಗೆಯುವಂತೆ, ವೀರಶೈವ ಲಿಂಗಾಯತರನ್ನು ಒಡೆಯಲು ವೀರಶೈವ ಲಿಂಗಾಯತರನ್ನೇ ಬಳಸಿಕೊಂಡು ಸಿದ್ದರಾಮಯ್ಯ ಅವರ ಹುನ್ನಾರಕ್ಕೆ ಬಲಿಯಾದವರು ಇವರು.

***

ಮತಗಳು ಒಡೆಯಲಿವೆ: ಮೆಣಸಿನ ಸೀಮೆ ಮಾಲತೇಶ

ಬ್ಯಾಡಗಿ ಒಣಮೆಣಸಿನಕಾಯಿ ಮಾರುಕಟ್ಟೆಯ ದಲಾಲ, ಮಾಲತೇಶ ಹೊಸಮನಿ 30-35ರ ಹರೆಯದ ಲಿಂಗಾಯತ. ಕಾಂಗ್ರೆಸ್ ಪಕ್ಷದ ಕಟು ವಿಮರ್ಶಕ. ಲಿಂಗಾಯತ ಅಥವಾ ಬಸವ ತತ್ವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಲಿಂಗಾಯತರದೇ ಎಂದು ನಂಬಲು ಅವರು ತಯಾರಿಲ್ಲ. ಅವರ ಪ್ರಕಾರ, ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯಿದು. ಲಿಂಗಾಯತ ಮಂತ್ರಿಗಳಾದ ಎಂ.ಬಿ.ಪಾಟೀಲ ಮತ್ತು ವಿನಯ ಕುಲಕರ್ಣಿ ಅವರನ್ನು ಮುಂದೆ ಬಿಟ್ಟು ಧರ್ಮವನ್ನು ಒಡೆಯಲು ತೊಡಗಿದ್ದಾರೆ. ಎರಡೂ ಬಣಗಳ ನಡುವೆ ಜಗಳ ಹಚ್ಚಿದ್ದಾರೆ. ಸಿದ್ದರಾಮಯ್ಯ ತಮ್ಮ ಕುರುಬ ಜನಾಂಗಕ್ಕೆ ಎಸ್.ಸಿ. ಅಥವಾ ಎಸ್.ಟಿ. ಸ್ಥಾನಮಾನ ಕೊಟ್ಟುಕೊಳ್ಳಲಿ, ಲಿಂಗಾಯತರ ಗೊಡವೆ ಅವರಿಗೆ ಯಾಕೆ ಎಂಬುದು ಅವರ ಪ್ರಶ್ನೆ.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಆಂದೋಲನದ ಮುಂಚೂಣಿಯಲ್ಲಿರುವ ಮಾತೆ ಮಹಾದೇವಿ ಅವರನ್ನೂ ಮಾಲತೇಶ ಕ್ಷಮಿಸುವುದಿಲ್ಲ. ಅವರ ಇತಿಹಾಸವನ್ನು ಎಲ್ಲರೂ ಬಲ್ಲರು, ಅವರನ್ನು ಕೇಳಿ ನಾವು ವೋಟು ಹಾಕಬೇಕಾ ಎನ್ನುತ್ತಾರೆ. ಆದರೆ ಇಲ್ಲಿಯವರೆಗೆ ಸಾರಾಸಗಟಾಗಿ ಬಿಜೆಪಿಗೆ ಬೀಳುತ್ತಿದ್ದ ಲಿಂಗಾಯತ ಮತಗಳು ಈ ಚುನಾವಣೆಯಲ್ಲಿ ಒಡೆಯುತ್ತವೆ ಎಂದು ಅದೇ ಉಸಿರಲ್ಲಿ ಹೇಳುತ್ತಾರೆ. ಮತ್ತು ಹೀಗೆ ಒಡೆದು ಕಾಂಗ್ರೆಸ್ ಪಕ್ಷದ ಜೋಳಿಗೆಗೆ ಬೀಳಲಿರುವ ಮತಗಳ ಪ್ರಮಾಣ ನೂರಕ್ಕೆ ನಲವತ್ತು ಎಂಬುದು ಅವರ ಅಭಿಪ್ರಾಯ.

ಎಸ್.ಆರ್.ಪಾಟೀಲ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ವಿರೂಪಾಕ್ಷಪ್ಪ ಬಳ್ಳಾರಿ ಅವರು ಬಿಜೆಪಿ ಅಭ್ಯರ್ಥಿ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ತಮ್ಮ ಕಚೇರಿಯಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಮಾಲತೇಶ ಮತ್ತು ಅವರ ನೆರೆಹೊರೆಯ ದಲಾಲ ಮಿತ್ರರ ಪ್ರಕಾರ, ಕೆಂಪು ಮೆಣಸಿನ ಈ ಕ್ಷೇತ್ರದಲ್ಲಿ ಲಿಂಗಾಯತ ವೀರಶೈವ ಭೇದ ಭಾವ ಇಲ್ಲ. ಪಾಟೀಲ ಸ್ಥಳೀಯರು. ಮಿಗಿಲಾಗಿ ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಎಂಬ ಪ್ರಚಾರದಲ್ಲಿ ತೊಡಗಿಲ್ಲ. ಹೀಗಾಗಿ ಗೆಲ್ಲುವ ಅವಕಾಶ ಅವರಿಗೆ ದಟ್ಟವಾಗಿದೆ. ಒಂದು ವೇಳೆ ಅವರೂ ಧರ್ಮ (ಲಿಂಗಾಯತ-ವೀರಶೈವ) ಒಡೆಯುವ ಮಾತು ಆಡಿದ್ದರೆ ಅವರನ್ನೂ ಸೋಲಿಸುತ್ತಿದ್ದೆವು. ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸುತ್ತಿದ್ದೆವು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT