ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭೀತಿಯಿಂದ ಬಾದಾಮಿಯಲ್ಲಿ ಸ್ಪರ್ಧೆ

ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಟೀಕೆ
Last Updated 25 ಏಪ್ರಿಲ್ 2018, 9:01 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಬಳ್ಳಾರಿ ಜಿಲ್ಲೆಯಲ್ಲಿ ಸೋಲುತ್ತೇನೆ ಎಂದು ಮೊಳಕಾಲ್ಮುರು ಕ್ಷೇತ್ರಕ್ಕೆ ವಲಸೆ ಬಂದಿರುವ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಈಗ ಇಲ್ಲಿಯೂ ಸೋಲುತ್ತೇನೆ ಎಂಬ ಭೀತಿಯಿಂದ ಬಾದಾಮಿಯಿಂದ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯಲ್ಲಿನ ಏಳು ಕ್ಷೇತ್ರಗಳನ್ನು ಬಿಟ್ಟು ಮೊಳಕಾಲ್ಮುರು ಕ್ಷೇತ್ರಕ್ಕೆ ಶ್ರೀರಾಮುಲು ಕಾಲಿಟ್ಟರು. ಈಗ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುತ್ತಾರಂತೆ. ಇವರ ಕಣ್ಣಿಗೆ ಕ್ಷೇತ್ರಗಳು ‘ಸಿನೆಮಾ ಶೂಟಿಂಗ್’ ಸ್ಥಳ ಅಥವಾ ‘ಟೂರಿಂಗ್‌ ಟಾಕೀಸ್‌’ ತರ ಕಾಣುತ್ತಿವೆಯೇ? ಜಾತಿ ಲೆಕ್ಕಾಚಾರದಲ್ಲಿ ಬಾದಾಮಿಗೆ ಹೋಗಿರುವ ಶ್ರೀರಾಮುಲುಗೆ ಎರಡೂ ಕ್ಷೇತ್ರದಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕ್ಷೇತ್ರಕ್ಕೆ ರಾಮುಲು ಹೆಸರು ಅಂತಿಮವಾದ ನಂತರ ರಾಹುಲ್‌ ಗಾಂಧಿ ಸೂಚನೆಯಂತೆ ಯುವಕ ಯೋಗೇಶ್‌ ಬಾಬುಗೆ ಟಿಕೆಟ್‌ ನೀಡಲಾಗಿದೆ. ಹಲವು ಜ್ವಲಂತ ಸಮಸ್ಯೆಯಿರುವ ಮೊಳಕಾಲ್ಮುರು ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣಿ ಅಗತ್ಯವಿದೆ. ಇದನ್ನು ಮನಗಂಡು ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಇಲ್ಲಿನ ಕಾಂಗ್ರೆಸ್ ಗೆಲುವು ರಾಹುಲ್‌ಗಾಂಧಿ ಗೆಲುವಾಗಲಿದೆ ಎಂದರು.

20 ವರ್ಷಗಳಿಂದ ಇಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಎನ್‌.ವೈ. ಗೋಪಾಲಕೃಷ್ಣಗೆ ಕಾಂಗ್ರೆಸ್‌ ಅಧಿಕಾರ ಕೊಟ್ಟಿದೆ. ಅವರು ಸೋತಾಗ ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲ್ಲಿಸಲಾಯಿತು. ಈ ಬಾರಿ ಟಿಕೆಟ್‌ ತಪ್ಪಿದೆ ಎಂದು ಎರಡೂ ಕ್ಷೇತ್ರದ ಜನರನ್ನು ಬೀದಿಯಲ್ಲಿ ಬಿಟ್ಟು ಅಧಿಕಾರದ ಆಸೆಗೆ ಕೂಡ್ಲೀಗಿಗೆ ಹೋಗಿರುವ ಅವರಿಗೆ ನಮ್ಮನ್ನು ಪ್ರಶ್ನೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.

ಅಭ್ಯರ್ಥಿ ಬಿ. ಯೋಗೇಶ್‌ಬಾಬು ಮಾತನಾಡಿ, ‘ಬಳ್ಳಾರಿಯಲ್ಲಿ ಭೂಮಿಯನ್ನು ಬಗೆದು ಲೂಟಿ ಮಾಡಿರುವ ಗಣಿ ದೊರೆಗಳು ಈಗ ಮೊಳಕಾಲ್ಮುರಿಗೆ ಕಾಲಿಟ್ಟಿದ್ದಾರೆ. ಕಳಂಕಿತ ಜನಾರ್ಧನ ರೆಡ್ಡಿ ಇದರ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇಲ್ಲಿ ಅವರನ್ನು ಸೋಲಿಸುವುದು ಮತದಾರರ ಅಸ್ತಿತ್ವ ಹಾಗೂ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅತ್ಯಂತ ಹಿಂದುಳಿದ ಈ ಕ್ಷೇತ್ರದ ಜನರು ಶಾಂತಿಯಿಂದ ಬದುಕುಲು ಬಿಜೆಪಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಚ್‌. ಮಂಜುನಾಥ್‌, ‘ಐದಾರು ವರ್ಷಗಳ ಹಿಂದೆ ಬಸ್‌ನಿಲ್ದಾಣದಲ್ಲಿ ಬಸ್‌ ಏಜೆಂಟ್‌ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಯೋಗೇಶ್‌ಬಾಬುಗೆ ಈ ಬಾರಿ ಪ್ರತಿಷ್ಠಿತ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಯುವಶಕ್ತಿ ಹಾಗೂ ಸರಳತೆ ಮೇಲೆ ರಾಹುಲ್‌ಗಾಂಧಿ ಇಟ್ಟಿರುವ ನಂಬಿಕೆಗೆ ಇದು ಸಾಕ್ಷಿಯಾಗಿದೆ. ಇದನ್ನು ಕ್ಷೇತ್ರದ ಜನರು ಯಾವುದೇ ಕಾರಣಕ್ಕೂ ಹುಸಿ ಮಾಡಬಾರದು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಟಿ. ತಿಮ್ಮಪ್ಪ ಮಾತನಾಡಿದರು.

ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ, ಉಸ್ತುವಾರಿ ಶಾಸಕ ಶಫೀ, ಜಲಜಾ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮುಂಡ್ರಗಿ ನಾಗರಾಜ್‌, ಓಬಳೇಶ್‌, ಶಶಿಕಲಾ ಸುರೇಶ್‌ಬಾಬು, ಬ್ಲಾಕ್‌ ಅಧ್ಯಕ್ಷರಾದ ಪಟೇಲ್‌ ಪಾಪನಾಯಕ, ನಾಗೇಶ್‌ರೆಡ್ಡಿ, ಜಿ. ಪ್ರಕಾಶ್‌, ಮಹದೇವಪುರ ತಿಪ್ಪೇಸ್ವಾಮಿ, ಜಗಳೂರಯ್ಯ, ಎಂ.ಎಸ್‌.ಮಾರ್ಕಾಂಡೇಯ, ಎಸ್‌. ಖಾದರ್, ಅಬ್ದುಲ್‌ ಸುಬಾನ್‌, ಟಿ. ಚಂದ್ರಣ್ಣ, ಮೊಗಲಹಳ್ಳಿ ಜಯಣ್ಣ, ನಾಗಭೂಷಣ, ನಾಗರಾಜ ಕಟ್ಟೆ, ಸಮೀವುಲ್ಲಾ, ದಡಗೂರು ಮಂಜುನಾಥ್‌ ಉಪಸ್ಥಿತರಿದ್ದರು.

ಎನ್‌ವೈಜಿಗೆ ಛಾಟಿ

ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿರುವ ಎನ್‌.ವೈ. ಗೋಪಾಲಕೃಷ್ಣ ಅವರನ್ನು ಡಿಕೆಶಿ ಭಾಷಣದುದ್ದಕ್ಕೂ ತೀಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ಅನ್ನು ಟೀಕಿಸುವ ಮೊದಲು, ಎನ್‌ವೈಜಿ ಹಾಗೂ ಶ್ರೀರಾಮುಲು ಸಾಧನೆ ಏನೆಂದು ಸಾಬೀತು ಮಾಡಲಿ ಎಂದು ಹೇಳಿದರು.

ಮತ್ತೆ ಸ್ಪರ್ಧೆ ಮಾಡುವುದಿಲ್ಲ

‘ಮೊಳಕಾಲ್ಮುರು ಕ್ಷೇತ್ರಕ್ಕೆ ಯೋಜನೆಗಳನ್ನು ತರಲು ಶಕ್ತಿಮೀರಿ ಶ್ರಮಿಸುತ್ತೇನೆ. ಮಾದರಿ ಕ್ಷೇತ್ರವಾಗಿಸುವ ಪಣ ತೊಟ್ಟಿದ್ದೇನೆ. ಭರವಸೆ ಈಡೇರಿಸಲು ಆಗದಿದ್ದರೆ ಮತ್ತೆ ಸ್ಪರ್ಧೆ ಮಾಡುವುದಿಲ್ಲ’ ಎಂದು ಯೋಗೇಶ್‌ಬಾಬು ಪ್ರಮಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT