ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಭ್ರಮಾ’ಳ ಪ್ರತಿಭೆಗೆ ಅಪ್ಪನೇ ಮಾದರಿ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪ್ರತಿಭೆ, ಜ್ಞಾನ ಯಾರಪ್ಪನ ಸ್ವತ್ತು ಅಲ್ಲ. ಅದನ್ನು ಯಾರು ಬೇಕಾದರೂ ಪಡೆದುಕೊಳ್ಳಬಹುದು. ಜ್ಞಾನಾರ್ಜನೆಗೆ ವಯಸ್ಸಿನ ಅಂಗಿಲ್ಲ. ಅದಕ್ಕೆ ಬೇಕಿರುವುದು ಆಸಕ್ತಿ ಮಾತ್ರ. ಅಂತಹ ಆಸಕ್ತಿ ಮೈಗೂಡಿಸಿಕೊಂಡಾಕೆ ಸಂಭ್ರಮಾ. ತನ್ನ ಜ್ಞಾನ ಹಾಗೂ ಪ್ರತಿಭೆಯಿಂದಾಗಿ ಕಲರ್ಸ್‌ ಸೂಪರ್ಸ್‌ ವಾಹಿನಿಯ ‘ಸೂಪರ್ ಸ್ಟೇಜ್’ ಕಾರ್ಯಕ್ರಮಕ್ಕೂ ಆಯ್ಕೆಯಾಗಿದ್ದಾಳೆ.

ಮಾಗಡಿ ಮುಖ್ಯರಸ್ತೆ ಬಳಿ ವಾಸವಿರುವ ಶ್ರೀನಿವಾಸ್ ಹಾಗೂ ಜಾನಕಿ ದಂಪತಿಯ ಮುದ್ದಿನ ಮಗಳು ಈ ಸಂಭ್ರಮಾ. ದಿ ಗ್ರೇಟ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 3ನೇ ತರಗತಿ ಓದುತ್ತಿರುವ ಈಕೆ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಚಾತುರ್ಯ ಹೊಂದಿದ್ದಾಳೆ. ಅನೇಕ ವೇದಿಕೆಗಳಲ್ಲಿ ತನ್ನ ಜ್ಞಾನವನ್ನು ಪ್ರದರ್ಶಿಸಿರುವ ಈಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರಿಂದ ಪ್ರಶಂಸೆ ಗಿಟ್ಟಿಸಿದ್ದಾಳೆ.

8 ವರ್ಷದ ಈಕೆ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ ಪಟಪಟನೆ ಮಾತನಾಡುವಳು. ಸಂವಿಧಾನಶಿಲ್ಪಿಯ ಚರಿತ್ರೆಯನ್ನು ತಡಬಡಾಯಿಸದೆ ಹೇಳುವ ಈಕೆ ಸ್ವಾಮಿ ವಿವೇಕಾನಂದರ ಬಗ್ಗೆಯೂ ಮಾತನಾಡುತ್ತಾಳೆ.

ಒಂದು ಸಾವಿರ ಪ್ರಶ್ನೆಗಳಿಗೆ ಉತ್ತರವನ್ನು ಕಂಠಪಾಠ ಮಾಡಿರುವ ಆಕೆ ಯಾವುದೇ ಸಂದರ್ಭದಲ್ಲಾದರೂ ಅವುಗಳಿಗೆ ಉತ್ತರಿಸುವ ಕೌಶಲ ಹೊಂದಿದ್ದಾಳೆ. 35 ನಿಮಿಷದಲ್ಲಿ ಸಾವಿರ ಪ್ರಶ್ನೆಗಳಿಗೆ ಉತ್ತರಿಸುವ ಆಕೆಯ ಪ್ರತಿಭೆ ಎಂಥವರನ್ನು ಅಚ್ಚರಿಗೊಳಿಸುತ್ತದೆ.

ಈವರೆಗಿನ ರಾಷ್ಟ್ರಪತಿಗಳ, ಪ್ರಧಾನ ಮಂತ್ರಿಗಳ, ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರ ಹೆಸರನ್ನು ಹಾಗೂ ರಾಜ್ಯದ ತಾಲ್ಲೂಕುಗಳು ಹೆಸರನ್ನು ಹೇಳುವ ಈ ಪುಟಾಣಿಗೆ ನಟ ಪುನೀತ್ ರಾಜ್‌ಕುಮಾರ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಅವರ ಅಭಿನಯವನ್ನು ನೋಡಿಯೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಅವಕಾಶ ಸಿಕ್ಕಾಗ ಏಕಪಾತ್ರಾಭಿನಯ ಹಾಗೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾಳೆ. ಕೆಲ ವೇದಿಕೆಗಳಲ್ಲಿಯೂ ನಟಿಸಿ ಜನರಿಂದ ಮೆಚ್ಚುಗೆ ಪಡೆದಿದ್ದಾಳೆ.

‘ಓದುವುದು ಹಾಗೂ ಬರೆಯುವುದು ಎಂದರೆ ನನಗೆ ಇಷ್ಟ. ನಟನೆಯೂ ಅಚ್ಚುಮೆಚ್ಚು. ಪುನೀತ್ ರಾಜ್‌ಕುಮಾರ್ ಜತೆ ನಟಿಸಬೇಕು ಎಂಬ ಆಸೆ ಇದೆ. ಸೂಪರ್‌ ಸ್ಟೇಜ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಅಪ್ಪನ ಆಸೆ ಈಡೇರಿಸುವೆ’ ಎನ್ನುವ ಸಂಭ್ರಮಾ ಪುನೀತ್ ಅಭಿನಯದ ಎಲ್ಲ ಸಿನಿಮಾಗಳ ಹೆಸರನ್ನು ಕ್ರಮವಾಗಿ ಉಚ್ಛರಿಸುತ್ತಾಳೆ. ನನ್ನ ಈ ಪ್ರತಿಭೆಗೆ ಅಪ್ಪನೇ ಸ್ಪೂರ್ತಿ ಎಂದು ಮುದ್ದಾಗಿ ನುಡಿಯುತ್ತಾಳೆ.

‘ಸಂಭ್ರಮಾ ಎಲ್‌ಕೆಜಿಯಲ್ಲಿ ಓದುತ್ತಿದ್ದಳು. ಆಗ, ಜ್ಞಾನಪೀಠ ಪುರಸ್ಕೃತರ ಬಗ್ಗೆ ಮಾಹಿತಿಯುಳ್ಳ ಕೈಪಿಡಿಯನ್ನು ಮನೆಗೆ ತಂದಿದ್ದೆ. ಅದರಲ್ಲಿನ ಮಾಹಿತಿ ಬಗ್ಗೆ ಆಕೆಗೆ ಹೇಳಿಕೊಟ್ಟೆ. ಮರುದಿನ ಆ ಬಗ್ಗೆ ಕೇಳಿದಾಗ ಒಂದೂ ತಪ್ಪಿಲ್ಲದೆ ಚಾಚೂ ತಪ್ಪದೇ ಹೇಳಿದ್ದಳು. ಆಕೆಯಲ್ಲಿನ ಬುದ್ಧಿ ಶಕ್ತಿಯನ್ನು ಗುರುತಿಸಿ ಹಲವಾರು ವಿಚಾರಗಳ ಬಗ್ಗೆ ಹೇಳಿಕೊಟ್ಟೆ. ಆಕೆಯ ಕಲಿಕಾ ಸಾಮರ್ಥ್ಯ ಕಂಡು ಖುಷಿಯಾಗಿದೆ. ಓದಿನಲ್ಲೂ ಮುಂದಿದ್ದಾಳೆ’ ಎಂದು ಶ್ರೀನಿವಾಸ್ ಹೇಳುವರು.

ನನ್ನ ಮಗಳ ಶೈಕ್ಷಣಿಕ ವೆಚ್ಚವನ್ನು ಸಮಾಜ ಸೇವಕರಾದ ಶೇಷಾಚಲ ಹಾಗೂ ರಾಜೇಶ್ವರಿ ಅವರು ಭರಿಸುತ್ತಿದ್ದಾರೆ. ಮಗಳ ಬುದ್ಧಿಶಕ್ತಿ ಕಂಡು ಅವರು ಸಂತೋಷಗೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಭಾ ಪ್ರಶಸ್ತಿ ಪಡೆದಿದ್ದಾಳೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT