ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಜಮೀನಿನಲ್ಲಿ ಎರಡನೇ ಮಹಾಯುದ್ಧ ಕಾಲದ ಜೀವಂತ ಬಾಂಬ್‌ ಪತ್ತೆ

Last Updated 26 ಏಪ್ರಿಲ್ 2018, 14:37 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಪಾಲ್ಗಾರ್‌ ಜಿಲ್ಲೆಯ ವಾಡಾ ತಾಲ್ಲೂಕಿನ ರೈತ ಮಹೇಂದ್ರ ಶಂಕರ್‌ ಪಾಟೀಲ್‌ ಎಂಬುವವರ ಹೊಲದಲ್ಲಿ ಎರಡನೇ ಮಹಾಯುದ್ಧ ಕಾಲದ ಜೀವಂತ ಬಾಂಬ್‌ ಪತ್ತೆಯಾಗಿದೆ. ಮುಂಗಾರು ಆರಂಭಕ್ಕೂ ಮುನ್ನ ಬಿತ್ತನೆಗೆ ಸಿದ್ಧತೆ ಆರಂಭಿಸಿದ್ದ ಪಾಟೀಲ್‌ ಬುಧವಾರ ಮಧ್ಯಾಹ್ನ ಉಳುಮೆ ಮಾಡುತ್ತಿದ್ದಾಗ ಬಾಂಬ್‌ ಪತ್ತೆಯಾಗಿದೆ.

ಈ ಕುರಿತು ಮಾತನಾಡಿರುವ ಅವರು, ‘ಭತ್ತ ಬೆಳೆಯುವುದಕ್ಕಾಗಿ ನನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ನೆಲದಲ್ಲಿ ಲೋಹದಂತ ವಸ್ತು ಬಡಿದು 'ಟಿಂಗ್‌’ ಎಂಬ ಶಬ್ದ ಬಂತು. ಬಾಂಬ್‌ನಂತಹ ವಸ್ತು ಕಂಡು ಭಯವಾಯಿತು. ಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ಕರೆದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ’ ಎಂದಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ವಾಡಾ ತಹಸಿಲ್ದಾರ್‌ ದಿನೇಶ್‌ ಕುರ್ಹಾಡೆ ದೇವಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತ್ತೆಯಾಗಿರುವ ವಸ್ತು ಬಾಂಬ್‌ ಎಂದು ಖಚಿತಪಡಿಸಿದ್ದಾರೆ. ಜತೆಗೆ ಇದು ಜೀವಂತ ಬಾಂಬ್‌ ಆಗಿದ್ದು, ನಿಷ್ಕ್ರಿಯಗೊಳಿಸಬೇಕಿದೆ ಎಂದೂ ಹೇಳಿದ್ದಾರೆ.

‘ಇದು ಬ್ರಿಟೀಷರ ಕಾಲದ ಬಾಂಬ್‌. ಈ ಕುರಿತು ಥಾಣೆಯ ಬಾಂಬ್‌ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದೆವು. ಅವರು ಬುಧವಾರ ಸಂಜೆ ಸ್ಥಳಕ್ಕೆ ಆಗಮಿಸಿದರಾದರೂ ಬಾಂಬ್‌ ನಿಷ್ಕ್ರಿಯಗೊಳಿಸಲು ಸಾಧ್ಯವಾಗಿಲ್ಲ. ಸದ್ಯ ಮುಂಬೈನಲ್ಲಿರುವ ಭಾರತೀಯ ಸೇನೆಗೆ ಪತ್ರ ಬರೆದಿದ್ದು, ಬಾಂಬ್‌ ನಿಷ್ಕ್ರಿಯ ತಜ್ಞರನ್ನೊಳಗೊಂಡ ಬಾಂಬ್‌ ನಿಷ್ಕ್ರಿಯ ಮತ್ತು ವಿಲೇವಾರಿ ದಳ ಕಳುಹಿಸಿಕೊಡುವಂತೆ ಕೋರಿದ್ದೇವೆ’ ಎಂದು ವಾಡಾದ ಉಪ ತಹಸೀಲ್ದಾರ್‌ ವಿಠಲ್‌ ಗೋಸ್ವಾಮಿ ಹೇಳಿದ್ದಾರೆ.

ಈ ಬಾಂಬ್‌ ಎರಡನೇ ಮಹಾಯುದ್ಧ ಕಾಲದ್ದಾಗಿರಬಹುದು. ಆ ಸಂದರ್ಭದಲ್ಲಿ ದೇವಿ ಗ್ರಾಮ ಸೇರಿದಂತೆ ವಾಡಾದ 13 ಹಳ್ಳಿಗಳನ್ನು ಸ್ಥಳಾಂತರಿಸಿದ್ದ ಬ್ರಿಟೀಷರು ಮದ್ದು – ಗುಂಡುಗಳ ತಾತ್ಕಾಲಿಕ ಸಂಗ್ರಹಗಾರ, ರವಾನೆ ಕೇಂದ್ರವಾಗಿ ಬದಲಾಯಿಸಿದ್ದರು ಎಂದು ಗೋಸ್ವಾಮಿ ಮಾಹಿತಿ ನೀಡಿದ್ದಾರೆ.

‘ಬಾಂಬ್‌ ಪರೀಕ್ಷೆ ನಡೆಸಿ, ಹೆಚ್ಚಿನ ಮಾಹಿತಿ ನೀಡಲು ಸೇನೆಯ ತಂಡದ ಆಗಮನಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ. 

ಯಾರೊಬ್ಬರೂ ಬಾಂಬ್‌ ಹತ್ತಿರ ಸುಳಿಯದಂತೆ ಎಚ್ಚರ ವಹಿಸಲಾಗಿದ್ದು, ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಇತ್ತೀಚೆಗೆ ಜರ್ಮನಿಯಲ್ಲಿಯೂ ಎರಡನೇ ಮಹಾಯುದ್ಧ ಕಾಲದ ಸುಮಾರು 250 ಕೆ.ಜಿ ತೂಕದ ಬಾಂಬ್‌ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT