ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಾಭಾಯಿ ಆತ್ಮಕಥನ ‘ಸಂಜು’

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ರಾಜಕುಮಾರ್‌ ಹಿರಾನಿ, ವಿಧು ವಿನೋದ್‌ ಚೋಪ್ರಾ ಹಾಗೂ ಸಂಜಯ್‌ ದತ್‌ ಅಂದ ಕೂಡಲೆ ನೆನಪಾಗುವುದು ಮುನ್ನಾಭಾಯಿ ಸರಣಿ ಚಿತ್ರಗಳು. ನಗುನಗುತ್ತಲೇ ಜೀವನವನ್ನು ತೀಕ್ಷ್ಣವಾಗಿ ಟೀಕಿಸುವ ಪಾತ್ರಗಳ ಮೂಲಕ ರಾಜಕುಮಾರ್ ಹಿರಾನಿ, ಮುನ್ನಾಭಾಯಿ ಸರಣಿಯಲ್ಲಿ ಗಂಭೀರ ಸಮಸ್ಯೆಗಳನ್ನೇ ಚಿತ್ರಕ್ಕೆ ತಂದಿದ್ದರು. ‘ಪೀಕೆ’ ಚಿತ್ರದಲ್ಲೂ ಸಂಜೂಬಾಬಾಗೆ ಒಂದು ಪಾತ್ರ ಇದ್ದೇ ಇತ್ತು.

ಹೀಗಿರಲು,  ಈ ಸರಣಿ ಚಿತ್ರಗಳ ನಿರ್ಮಾಪಕ ವಿಧು ವಿನೋದ್‌ ಚೋಪ್ರಾ ಬಳಿ ಹಿರಾನಿ ಹೋಗಿ, ಸಂಜುಬಾಬಾ ಬಯೋಪಿಕ್‌ ಮಾಡುವ ಪ್ರಸ್ತಾಪ ಇಟ್ಟರು. ಹಣೆಗಂಟಿಕ್ಕಿದ ವಿಧು, ಅರೆ ಮುನ್ನಾಭಾಯಿ ಆತ್ಮಕಥೆ ಮಾಡಿದ್ರೆ ಖುಷಿಯಿಂದ ನಿರ್ಮಿಸುವೆ. ಈ ಸಂಜೂಬಾಬಾನ ಆತ್ಮಕಥೆಯಲ್ಲೇನಿದೆ? ಮಾದಕ ದ್ರವ್ಯ, ಶಸ್ತ್ರಾಸ್ತ್ರ ಸಂಗ್ರಹ, ಜೈಲುವಾಸ... ಮತ್ತೇನಿದೆ..? ಇವುಗಳಲ್ಲಿ ಚಿತ್ರ ಮಾಡುವಂಥದ್ದೇನಿದೆ? ಅಪರಾಧಗಳನ್ನು ವಿಜೃಂಭಿಸುವುದು ಸರಿಯಲ್ಲ ಎಂದು ಸರಾಸಗಟಾಗಿ ನಿರಾಕರಿಸಿದ್ದರು.

ಸಂಜೂ ಬಾಬಾನ ಜೀವನವೇ ರೋಚಕವಾಗಿದೆ. ಎಷ್ಟೆಲ್ಲ ಏರಿಳಿತಗಳು, ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದ ಸಂಜಯ್‌ ದತ್‌ ಎಲ್ಲಿ, ಮೈ ಕೊಡವಿಕೊಂಡು, ನರನಾಡಿಗಳನ್ನೆಲ್ಲ ಹುರಿಗಟ್ಟಿದ ಖಳನಾಯಕನೆಲ್ಲಿ..?  ಜೀವನವನ್ನು ಗ್ರಾಫ್‌ ಪುಟದಲ್ಲಿ ಬರೆದಿಡಲಾರಂಭಿಸಿದರೆ ಏರಿಳಿತಗಳು ಹಾವು–ಏಣಿ  ಆಟದಂತೆ ಕಾಣಿಸುತ್ತದೆ. ಹೀಗೆಲ್ಲ, ಇಷ್ಟೆಲ್ಲ  ಹೇಳಿದಾಗ ವಿಧು ಸಿನಿಮಾ ಆಗಿಸಲು ಒಪ್ಪಿಕೊಂಡರು. ಆದರೆ ‘ರಾಕಿ’ ಚಿತ್ರದಲ್ಲಿದ್ದ ನವಯುವಕನೆಲ್ಲಿ? ಈಗ ‘ಭೂಮಿ’ ಚಿತ್ರದಲ್ಲಿ ತಂದೆಯ ಪಾತ್ರ ನಿರ್ವಹಿಸಿರುವ ಸಂಜಯ್‌ ದತ್‌ ಎಲ್ಲಿ? ನಾಲ್ಕು ದಶಕಗಳ ಏರಿಳಿತಗಳನ್ನು ತೋರಿಸಬಹುದಾದ ನಟನ ತಲಾಶು ಆರಂಭಿಸಬೇಕಲ್ಲ.. ಚಾಕ್ಲೇಟ್‌ ಹೀರೊ ಮತ್ತು ರಾಕ್‌ಲುಕ್‌ ಎರಡಕ್ಕೂ ಪಳಗಿಸಬೇಕಲ್ಲ ಅಂದ್ರು ವಿಧು.

ರಾಜಕುಮಾರ್ ಮಾತ್ರ ಎಲ್ಲಕ್ಕೂ ಸಜ್ಜಾಗಿಯೇ ಇದ್ದವರಂತೆ, ರಣಬೀರ್‌ ಕಪೂರ್‌ನ ಹೆಸರು ಪ್ರಸ್ತಾಪಿಸಿದರು. ಇಬ್ಬರಲ್ಲೂ ಸಾಕಷ್ಟು ಹೋಲಿಕೆಗಳಿವೆ ಎಂದವರೇ ‘ಸಂಜು’ ಚಿತ್ರ ತಯಾರಿಯ ಹಂತಕ್ಕೆ ತಲುಪಿತು.

ಇದೀಗ ಚಿತ್ರೀಕರಣ ಮುಗಿದಿದೆ. ರಣಬೀರ್‌ ಕಪೂರ್‌ ಸಂಜಯ್‌ ದತ್‌ ಜಿಮ್‌ನಲ್ಲಿ ಬೆವರಿಳಿಸುವುದು ಹೊಸತೇನಲ್ಲ. ಆದರೆ ಮುನ್ನಾಭಾಯಿ ಶೈಲಿಯಲ್ಲಿಯೇ ಒಮ್ಮೆ ಸಂಜಯ್‌ ದತ್‌ ರಣಬೀರ್‌ ಕಪೂರ್‌ಗೂ ಪ್ರಶ್ನಿಸಿದ್ದರಂತೆ.. ‘ತೀನ್‌ ಸಾಲ್‌ಸೆ ಆತಾ ಹೈ.. ಕರ್‌ಕ್ಯಾ ರಹಾ ಹೈ... ನ ಹಡ್ಡಿ ನಿಕ್ಲಿ ನ ಗೋಷ್‌’ (ಮೂರು ವರ್ಷಗಳಿಂದ ಜಿಮ್‌ಗೆ ಬರ್ತೀಯ.. ಏನ್‌ ಮಾಡ್ತೀಯಾ? ಒಂದಾದರೂ ಮೂಳೆ ಎದ್ದು ಕಾಣ್ತಿಲ್ಲ, ಮಾಂಸ ಕರಗಿದಂತಿಲ್ಲ) ‘ನಾನು ಪಿಳಿಪಿಳಿ ಕಣ್ಬಿಟ್ಟು ನೋಡುತ್ತಿದ್ದೆ. ಅವರ ಪಾತ್ರದಲ್ಲಿ ಅವರೇ ಆಗುವುದು ಬಲು ಕಷ್ಟ. ನಮಗೆಲ್ಲ ಒಂದೇ ಜನ್ಮ, ಒಂದೇ ಜೀವನ. ಸಂಜಯ್ ದತ್‌ರಿಗೆ ಒಂದೇ ಜನ್ಮ, ಹಲವು ಜೀವನ. ಇದು ಆತ್ಮಕಥನ ಎನ್ನುವುದಕ್ಕಿಂತಲೂ ಒಂದು ಕಾಲ್ಪನಿಕ ಕಥೆ ಇದ್ದಂತಿದೆ‌’ ಎಂದು ರಣಬೀರ್‌ ಹೇಳುತ್ತಾರೆ.

‘ಈ ಚಿತ್ರೀಕರಣ ಮಾಡುವಾಗಲೆಲ್ಲ, ಬಾಬಾ (ಸುನಿಲ್‌ ದತ್‌, ನರ್ಗಿಸ್‌ ದತ್‌) ಅವರನ್ನೆಲ್ಲ ನೆನಪಿಸಿಕೊಂಡೆ. ಕೆಲವೊಮ್ಮೆ ಮುಗ್ಧತನ, ಮೂರ್ಖತನ, ಸಾಹಸ, ಉಡಾಫೆ ಎಲ್ಲವುಗಳ ಪರಿಣಾಮ ನನ್ನ ಬದುಕು. ಈ ಚಿತ್ರ ಆಗಬೇಕಾದಾಗಲೆಲ್ಲ ಒಳಗೊಂದು ಆತಂಕ ಕಾಡ್ತಿತ್ತು. ನನ್ನಮ್ಮನಂತೆಯೇ ನನ್ನ ಬೆಂಬಲಕ್ಕೆ ನಿಲ್ಲುವ, ನನ್ನನ್ನು ಸಹಿಸಿಕೊಳ್ಳುವ ನನ್ನಕ್ಕ ಪ್ರಿಯಾ ಏನಂತಾಳೋ ಎನ್ನುವಂತೆ ಅನಿಸುತ್ತಿತ್ತು. ಸಿನೆಮಾ ನೋಡಿದೆ. ಮತ್ತೊಮ್ಮೆ ಎಲ್ಲ ಜೀವನಗಳಲ್ಲಿ ಬದುಕಿದಂತಾಗಿದೆ’ ಎನ್ನುತ್ತಾರೆ ಸಂಜಯ್‌ ದತ್‌.

ಏಪ್ರಿಲ್‌ 27ರಂದು ಸಂಜು ಟ್ರೇಲರ್‌ ಬಿಡುಗಡೆಯಾಗಿದೆ. ’ರಾಕಿ’ ಚಿತ್ರ ನೋಡಿದ ತಲೆಮಾರಿನಿಂದ, ಮುನ್ನಾಭಾಯಿ ಮೆಚ್ಚುವ ತಲೆಮಾರಿನವರೆಗೂ ಎಲ್ಲರೂ ಇಷ್ಟ ಪಟ್ಟಿದ್ದಾರೆ. ಸಂಜು ಇನ್ನೇನು ಜೂನ್ 23ರಂದು ತೆರೆಗೆ ಬರಲಿದೆ.  ಅವರ ವಿವಿಧ ಲುಕ್‌ಗಳಿರುವ ಪೋಸ್ಟರ್‌ ಜೊತೆಗೆ ರಣಬೀರ್‌ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT