ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಬಗ್ಗೆ ಹಗಲುಗನಸು ಕಾಣುತ್ತಿರುವ ಯಡಿಯೂರಪ್ಪ: ಸಿದ್ದರಾಮಯ್ಯ ಟೀಕೆ

Last Updated 29 ಏಪ್ರಿಲ್ 2018, 5:28 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ ಮತ್ತು ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗಲೇ ಜೈಲಿಗೆ ಹೋಗಿ ಬಂದಿರುವ ಕಳಂಕಿತ ವ್ಯಕ್ತಿ ಯಡಿಯೂರಪ್ಪ. ಈಗ ರೆಡ್ಡಿ ಸಹೋದರರ ಜೊತೆ ಸಖ್ಯ ಬೆಳೆಸಿದ್ದಾರೆ. ಅವರನ್ನೆಲ್ಲಾ ಈ ರಾಜ್ಯದ ಜನರು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಿದ್ದರಾಮಯ್ಯನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಬಳಿ ನನ್ನ ವಿರುದ್ಧ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ಹೋಗಲಿ,. ಎಸಿಬಿಗೋ ಅಥವಾ ನ್ಯಾಯಾಲಯಕ್ಕೋ ದೂರು ನೀಡಲಿ ಎಂದು ಸವಾಲು ಹಾಕಿದರು.

ಹಿರಿಯರಾದ ಅವರಿಗೆ ಸಂಸದೀಯ ಪದಗಳನ್ನು ಬಳಸಬೇಕು ಎನ್ನುವುದೇ ಗೊತ್ತಿಲ್ಲ. ಏಕವಚನದಲ್ಲಿ ಮಾತನಾಡುತ್ತಾರೆ. ನನಗೂ ಅವರಿಗಿಂತ ಹೆಚ್ಚಾಗಿ ಮಾತ‌ನಾಡಲು ಬರುತ್ತದೆ. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.

ಜೀವನದಲ್ಲಿ ಸತ್ಯ ಹೇಳಿಯೇ ಗೊತ್ತಿಲ್ಲ ಅವರಿಗೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತಿಗಾಗಲೀ,‌ ಯಡಿಯೂರಪ್ಪ ಮಾತಿಗಾಗಲೀ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಕುಟುಕಿದರು.

ಅಮಿತ್ ಶಾ ಹಾಗೂ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೆಹಲಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅದಕ್ಕೆ ಫೋಟೊ ಬೇಕಿದ್ದರೆ ಕೊಡಬಹುದು. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್. ಎರಡಕ್ಕೂ ಜನರ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ದೂರಿದರು.

ಹೋದಲ್ಲೆಲ್ಲ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕಾಂಗ್ರೆಸ್ ಪರವಾದ ಅಲೆ ಇದೆ ಎಂದರು. ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್, ಮುಖಂಡ ಸಿ.ಎಂ. ಇಬ್ರಾಹಿಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT