ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾತಕ ಶಕ್ತಿಗಳಿಂದ ನಲುಗುತ್ತಿದೆ ಗ್ರಾಮೀಣ ಭಾರತ: ಸಾಯಿನಾಥ್‌

Last Updated 2 ಸೆಪ್ಟೆಂಬರ್ 2018, 20:38 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಮಾಜಿಕ–ಧಾರ್ಮಿಕ ಮೂಲಭೂತವಾದಿಗಳು ಹಾಗೂ ಆರ್ಥಿಕ–ಮಾರುಕಟ್ಟೆ ಮೂಲಭೂತವಾದಿಗಳು ಒಂದಾಗಿ ಆಡಳಿತ ನಡೆಸುತ್ತಿದ್ದಾರೆ. ಈ ಘಾತಕ ಸಂಬಂಧದಿಂದ ಗ್ರಾಮೀಣ ಭಾರತ ನಲುಗುತ್ತಿದೆ’ ಎಂದುಹಿರಿಯ ಪತ್ರಕರ್ತ ಪಿ. ಸಾಯಿನಾಥ್‌ ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಯು.ಆರ್‌.ಅನಂತಮೂರ್ತಿ ಸ್ಮರಣಾರ್ಥ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮಾಧ್ಯಮ ಮತ್ತು ಗ್ರಾಮೀಣ ಭಾರತ’ ಕುರಿತ ಸಂವಾದದಲ್ಲಿ ಮಾತನಾಡಿದರು.

‘ನಮ್ಮ ದೇಶದಲ್ಲಿ ಮಾತ್ರವಲ್ಲ ಆಫ್ಗಾನಿಸ್ತಾನ, ಅಮೆರಿಕ, ಪೂರ್ವ ಯುರೋಪ್‌ಗಳಲ್ಲೆಲ್ಲ ಇಂತಹ ಮೈತ್ರಿಗಳೇ ಆಡಳಿತ ನಡೆಸುತ್ತಿವೆ. ಅವು ರೂಪಿಸುವ ಎಲ್ಲಾ ನೀತಿಗಳು ಕಾರ್ಪೊರೇಟ್‌ ಕಂಪನಿಗಳ ಪರವಾಗಿರುತ್ತವೆ. ಶ್ರೀಮಂತರು ಮತ್ತಷ್ಟು ಹಣಗಳಿಸಲು ನೆರವಾಗುತ್ತವೆ. ಇದರಿಂದ ಅಸಮಾನತೆಯ ಗೆರೆ ಏರುತ್ತಲೇ ಇದೆ’ ಎಂದು ಅವರು ವಿವರಿಸಿದರು.

‘ಕೇವಲ 12 ತಿಂಗಳುಗಳಲ್ಲಿ ಮುಕೇಶ್‌ ಅಂಬಾನಿಯ ಆದಾಯ ₹96 ಸಾವಿರ ಕೋಟಿಯಷ್ಟು ಏರಿಕೆಯಾಗಿದೆ. 2000ದಲ್ಲಿ ನಮ್ಮ ದೇಶದಲ್ಲಿ 8 ಮಂದಿ ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದರು. 2018ರಲ್ಲಿ ಈ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಅದೇ, ಗ್ರಾಮೀಣ ಭಾರತದಲ್ಲಿ ಶೇ 75ರಷ್ಟು ಜನರ ತಿಂಗಳ ಆದಾಯ ₹5 ಸಾವಿರಕ್ಕಿಂತ ಕಡಿಮೆ ಇದೆ. ಬಹುಶಃ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಗೆ ಒಳಪಡುವ 1.8 ಕೋಟಿ ಮಂದಿ ವರ್ಷದಲ್ಲಿ 365 ದಿನಗಳೂ ಕೆಲಸ ಮಾಡಿದರೂ ಅಷ್ಟು ಆದಾಯ ಗಳಿಸಲು ಸಾಧ್ಯವಾಗುತ್ತದೆಯೊ ಇಲ್ಲವೊ’ ಎಂದರು.

‘1991 ರಿಂದ 2011ರ ನಡುವೆ ನಡೆದ ಮೂರು ಜನಗಣತಿಗಳ ಪ್ರಕಾರ ದೇಶದಲ್ಲಿ 1.5 ಕೋಟಿಯಷ್ಟು ಕೃಷಿಕರು ಕಡಿಮೆಯಾಗಿದ್ದಾರೆ. ಸಣ್ಣ ಹಿಡುವಳಿ ಹೊಂದಿದ್ದ ಕೃಷಿಕರೆಲ್ಲ, ಭೂಮಿ ಕಳೆದುಕೊಂಡು ಕೃಷಿ ಕಾರ್ಮಿಕರಾದರು. ಕೃಷಿಕರಷ್ಟೇ ಅಲ್ಲ, ಅದರ ಉಪ ಕಸುಬುಗಳೂ ಮರೆಯಾದವು. ಆ ಕಸುಬುಗಳನ್ನು ಅವಲಂಬಿಸಿದ್ದವರೆಲ್ಲ ಕಾರ್ಮಿಕರಾದರು’ ಎಂದು ವಿವರಿಸಿದರು.

‘ಕೃಷಿಗೆ ಸಾಲ ನೀಡಲೆಂದೇ ಇರುವ ನಬಾರ್ಡ್‌ ಕೃಷಿಗಿಂತ ಕೃಷಿ ಉದ್ಯಮಗಳಿಗೆ ಹೆಚ್ಚು ಸಾಲ ನೀಡುತ್ತಿವೆ. ಉದ್ಯಮಿಗಳಿಗೆ ಬ್ಯಾಂಕ್‌ಗಳು ನೀಡಿದ ಸಾಲ ವಸೂಲಾಗುತ್ತಿಲ್ಲ. ಅಂತಹ ವಸೂಲಾಗದ ಸಾಲದ ಪ್ರಮಾಣವನ್ನು ಸರಿದೂಗಿಸಲು ಬೆಳೆ ಸಾಲವನ್ನು ಅವಧಿ ಸಾಲವನ್ನಾಗಿ ಪರಿವರ್ತಿಸಿ, ರೈತರಿಂದ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುತ್ತಿವೆ. ಗ್ರಾಮೀಣ ಭಾರತಕ್ಕೆ ಪೆಟ್ಟು ಕೊಡುವ ಇಂತಹ ಕೆಲಸ ನಿರಂತರವಾಗಿದೆ’ ಎಂದರು.

‘ಮಾಧ್ಯಮಗಳು ಕಾರ್ಪೊರೇಟ್‌ಗಳ ಕಪಿಮುಷ್ಟಿಯಿಂದ ಜನಸಮುದಾಯದ (ಕಮ್ಯುನಿಟಿ) ತೆಕ್ಕೆಗೆ ಬರಬೇಕು. ವರಮಾನ ಬರುತ್ತದೆ ಎಂಬ ಕಾರಣಕ್ಕೆ ಸುದ್ದಿ ಮಾಡುವುದನ್ನು ಬಿಟ್ಟು, ತಕ್ಷಣದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT