ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶಕ ಗಿರಡ್ಡಿ ಶೂನ್ಯದಲ್ಲಿ ಲೀನ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಅಬ್ಬಿಗೇರಿ (ಗದಗ ಜಿಲ್ಲೆ): ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾದ ಕನ್ನಡದ ಶ್ರೇಷ್ಠ ವಿಮರ್ಶಕ ಗಿರಡ್ಡಿ ಗೋವಿಂದರಾಜ (79) ಅವರ ಅಂತ್ಯಕ್ರಿಯೆ ಸ್ವಗ್ರಾಮ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಶನಿವಾರ ಸಂಜೆ ನೆರವೇರಿತು.

ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿ, ಚವಡಿ ರಸ್ತೆಗೆ ಹೊಂದಿಕೊಂಡ ಅವರ ಜಮೀನಿನಲ್ಲಿ ಲಿಂಗಾಯತ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

ಇದಕ್ಕೂ ಮುನ್ನ ಮಧ್ಯಾಹ್ನ 3ರಿಂದ 6ರವರೆಗೆ ಗ್ರಾಮದಲ್ಲಿ ಅವರ ಕಿರಿಯ ಪುತ್ರ ಅನ್ನದಾನಪ್ಪ ಗಿರಡ್ಡಿ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಂಜೆಯ ವೇಳೆಗೆ ಜೋರು ಗಾಳಿ ಸಹಿತ ಮಳೆ ಪ್ರಾರಂಭವಾದ್ದರಿಂದ ಅಂತ್ಯಕ್ರಿಯೆ ತುಸು ವಿಳಂಬವಾಯಿತು. ಮತದಾನದ ದಿನವೂ ಆಗಿದ್ದರಿಂದ ಜನದಟ್ಟಣೆ ಕಡಿಮೆ ಇತ್ತು.

ಪತ್ನಿ ಸರೋಜಾ, ಹಳಿಯಾಳದಲ್ಲಿರುವ ಹಿರಿಯ ಮಗಳು ಮುಕ್ತಾ ಮತ್ತು ಅಳಿಯ ಹನುಮಂತಗೌಡ, ಬೆಂಗಳೂರಿನಲ್ಲಿ ನೆಲೆಸಿರುವ ಕಿರಿಯ ಮಗಳು ಅನಿತಾ ಮತ್ತು ಅಳಿಯ ಬಸವರಾಜ, ಹುಬ್ಬಳ್ಳಿಯ ನವನಗರದಲ್ಲಿ ನೆಲೆಸಿರುವ ಹಿರಿಯ ಮಗ ಸುನಿಲ್‌ ಗಿರಡ್ಡಿ ಮತ್ತು ಸೊಸೆ ಸುಜಾತಾ ಈ ಸಂದರ್ಭದಲ್ಲಿ ಹಾಜರಿದ್ದರು.

ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರೊ. ಚಂದ್ರಶೇಖರ ಪಾಟೀಲ, ಮಹೇಶ್‌ ತಿಪ್ಪಶೆಟ್ಟಿ, ಎಸ್‌.ಎಸ್‌. ಹರ್ಲಾಪುರ, ಡಾ.ಶಂಭು ಬಳಿಗಾರ, ಕೆ.ಎ ಬನಹಟ್ಟಿ, ಬಿ.ಎಸ್‌.ಶಿರೋಳ, ಡಾ. ಹ.ವೆಂ.ಕಾಖಂಡಕಿ, ಡಾ. ಬಾಳಣ್ಣ ಶೀಗಿಹಳ್ಳಿ, ಬಿ.ಎ. ಕೆಂಚರಡ್ಡಿ, ಶಂಕರ ಹಲಗತ್ತಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

1939ರಲ್ಲಿ ಅಬ್ಬಿಗೇರಿಯಲ್ಲಿ ಜನಿಸಿದ್ದ ಗಿರಡ್ಡಿ ಅವರು ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲೇ ಪೂರ್ಣಗೊಳಿಸಿದ್ದರು. ನರೇಗಲ್‌ನ ಅನ್ನದಾನ ವಿಜಯ ಪ್ರೌಢಶಾಲೆ ಮತ್ತು ರೋಣದ ವಿ.ಎಫ್‌. ಪಾಟೀಲ ಶಿಕ್ಷಣ ಸಂಸ್ಥೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು, ಧಾರವಾಡದಲ್ಲಿ ಪದವಿ, ಸ್ನಾತಕೋತ್ತರ ಶಿಕ್ಷಣ
ಮುಂದುವರಿಸಿದ್ದರು.

‘ಗಿರಡ್ಡಿ ಅವರು ಕೊನೆಯವರೆಗೂ ಅಬ್ಬಿಗೇರಿ ಗ್ರಾಮದ ಜತೆಗೆ ಅವಿನಾಭಾವ ನಂಟು ಹೊಂದಿದ್ದರು. ಅವರೆಂದೂ ಸಾಹಿತ್ಯದ ರಾಜಕೀಯ ಮಾಡಲಿಲ್ಲ. ದೊಡ್ಡ ವಿಮರ್ಶಕ ಎನ್ನುವ ಯಾವುದೇ ಹಮ್ಮು ಇಲ್ಲದೆ ಎಲ್ಲರೊಳಗೊಂದಾಗಿ ಬೆರೆಯುತ್ತಿದ್ದರು’ ಎಂದು ಅವರ ಒಡನಾಡಿಗಳಾದ ಮಹೇಶ್‌ ತಿಪ್ಪಶೆಟ್ಟಿ, ಎಸ್‌.ಎಸ್‌. ಹರ್ಲಾಪುರ ಅವರು ಸ್ಮರಿಸಿದರು.

ಬಹುದೊಡ್ಡ ವಿದ್ವಾಂಸ

‘ಗಿರಡ್ಡಿ ಅವರಿಂದ ನಾಡಿನ ಸಾಂಸ್ಕೃತಿಕ ಮಟ್ಟ ಹೆಚ್ಚಾಯಿತು. ಧಾರವಾಡವು ದೇಶದ ವಿದ್ವಾಂಸರ ಗಮನಕ್ಕೆ ಬರಲು ಅವರೇ ಕಾರಣ. ಬಹುದೊಡ್ಡ ಇಂಗ್ಲಿಷ್‌ ವಿದ್ವಾಂಸರಾಗಿದ್ದರು. ಕೀರ್ತಿನಾಥ ಕುರ್ತಕೋಟಿ ಅವರ ನಂತರ ವಿಮರ್ಶಾ ಕ್ಷೇತ್ರದಲ್ಲಿ ಗಟ್ಟಿಯಾಗಿ ಹೆಸರು ಮಾಡಿದರು. ಅವರ ಅಗಲಿಕೆ ತುಂಬಲಾರದ ನಷ್ಟ. ಕಾಲವೇ ಇದನ್ನು ತುಂಬಬೇಕು. ಗಿರಡ್ಡಿ, ಚಂದ್ರಶೇಖರ ಪಾಟೀಲ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿ ತ್ರಿವಳಿ ಇದ್ದ ಹಾಗೆ ಇದ್ದರು. ‘ಸಂಕ್ರಮಣ’ ಪತ್ರಿಕೆ ಮೂಲಕ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದ್ದರು’ ಎಂದು ತೋಂಟದ ಶ್ರೀಗಳು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT