ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಒಳಚರಂಡಿ ನೀರು!

Last Updated 21 ಮೇ 2018, 12:59 IST
ಅಕ್ಷರ ಗಾತ್ರ

ಹಿರೇಕೆರೂರ: ಕಳೆದ ಹತ್ತಾರು ವರ್ಷಗಳಿಂದ ಪಟ್ಟಣದ ಚರಂಡಿ ನೀರು ಸುಣ್ಣದ ಕಾಲುವೆ ಮೂಲಕ ಹರಿದು ದುರ್ಗಾದೇವಿ ಕೆರೆ ಸೇರುತ್ತಿದೆ. ಇದರಿಂದ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಪಕ್ಕದ ಶಿಕಾರಿಪುರ ತಾಲ್ಲೂಕಿನ ಕೆರೆಗಳು ಮಳೆಯಿಂದ ತುಂಬಿದ ನಂತರ, ಕಾಲ್ವಿಹಳ್ಳಿ ಗ್ರಾಮದ ರಾಮನಕೆರೆ ತುಂಬಲಿದೆ. ಬಳಿಕ ಸುಣ್ಣದ ಕಾಲುವೆ ಮೂಲಕ, ದುರ್ಗಾದೇವಿ ಕೆರೆಗೆ ಮಳೆ ನೀರು ಹರಿದು ಹೋಗಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಾಲುವೆ ನಿರ್ಮಿಸಿದೆ. ಆದರೆ, ಈ ಕಾಲುವೆಯಲ್ಲಿ ಪಟ್ಟಣದ ಶೌಚಾಲಯದ ನೀರು ಸೇರಿದಂತೆ, ತ್ಯಾಜ್ಯ ಹರಿದು ಹೋಗುತ್ತಿದೆ. ಇದರಿಂದ ಕಾಲುವೆ ಅಕ್ಕಪಕ್ಕದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

‘ಸುಣ್ಣದ ಕಾಲುವೆಯಲ್ಲಿ ಶೌಚಾಲಯ ಹಾಗೂ ಚರಂಡಿ ನೀರು ಹರಿದು ಹೋಗುತ್ತಿರುವುದರಿಂದ ಸಮೀಪದ ನಿವಾಸಿಗಳು ದುರ್ವಾಸನೆಯಲ್ಲಿ ಜೀವನ ಸಾಗಿಸಬೇಕಾದ ಸ್ಥಿತಿ ಬಂದಿದೆ. ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಈ ಕಾಲುವೆಯಲ್ಲಿ ಮಳೆಯ ನೀರು ಹರಿಯಲು ಮಾತ್ರ ಅವಕಾಶ ಕಲ್ಪಿಸಿ, ಚರಂಡಿ ನೀರು ಬೇರೆಡೆಗೆ ಹರಿಯಲು ವ್ಯವಸ್ಥೆ ಕಲ್ಪಿಸಬೇಕು’ ಎಂದು ಕಾಲುವೆ ಸಮೀಪದ ನಿವಾಸಿ ದುರಗಪ್ಪ ಬಾತವ್ವನವರ ಒತ್ತಾಯಿಸಿದರು.

ದುರಸ್ತಿ ಕಾಮಗಾರಿ:

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜಾರಾಂ ಪವಾರ, ‘ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಸುಣ್ಣದ ಕಾಲುವೆ ಅಭಿವೃದ್ಧಿ ಕಾಮಗಾರಿ ಇತ್ತೀಚೆಗೆ ನಡೆದಿದೆ. ಇದರಲ್ಲಿ ಚರಂಡಿ ನೀರು ಹರಿದು ಹೋಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.

‘ಪಟ್ಟಣದಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಆಗ ಚರಂಡಿಗೆ ಕೊಳಚೆ ನೀರು ಹರಿಯುವುದು ತಪ್ಪಲಿದೆ’ ಎಂದು ಹೇಳಿದರು.

– ಕೆ.ಎಚ್. ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT