ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿ ಅಂಗಡಿಯಲ್ಲಿ ಹೊಸ ಪಾಪ್‌ಕಾರ್ನ್‌....

Last Updated 23 ಮೇ 2018, 14:03 IST
ಅಕ್ಷರ ಗಾತ್ರ

ಸೂರಿ, ಪಾಪ್‌ಕಾರ್ನ್‌, ಮಂಕಿ, ಟೈಗರ್...

ಏನಿದು ಅಸಂಬದ್ಧ ಶಬ್ದಗಳನ್ನೆಲ್ಲ ಪೇರಿಸ್ತಿದಾರೆ ಅಂದುಕೊಳ್ಳಬೇಡಿ. ಸುಮ್ಮನೆ ಇನ್ನೊಮ್ಮೆ ಓದಿಕೊಳ್ಳಿ, ಅವುಗಳ ನಡುವಿನ ಸೂಕ್ಷ್ಮ ಸಂಬಂಧವೊಂದು ನಿಮ್ಮ ಮನಸೊಳಗೆ ಬಿಚ್ಚಿಕೊಳ್ಳಬಹುದು.

ಮೇಲ್ನೋಟಕ್ಕೆ ಅಸಂಬದ್ಧವಾಗಿ ಕಾಣುವುದನ್ನು ಕಲಾತ್ಮಕವಾಗಿ ಹೆಣೆದು ಸುಸಂಬದ್ಧಗೊಳಿಸುವುದೇ ಸೂರಿ ಸ್ಟೈಲ್‌. ಕೆಲವೊಮ್ಮೆ ಅದು ಹುಚ್ಚಾಟವಾಗಿಯೂ ಕಾಣಬಹುದು. ‘ತಾವು ಸಿನಿಮಾ ಹುಚ್ಚ’ ಎನ್ನುವುದನ್ನು ಅವರೂ ಒಪ್ಪಿಕೊಳ್ಳುತ್ತಾರೆ ಬಿಡಿ. ಅವರದೇ ಶೈಲಿಯಲ್ಲಿ ಹೇಳಬೇಕು ಎಂದರೆ ಸೂರಿ ಅವರಿಗೆ ಇನ್ನೊಂದು ಸಿನಿಮಾ ಹುಚ್ಚು ನೆತ್ತಿಗೇರುತ್ತಿದೆ. ಆ ಹುಚ್ಚಿನ ಹೆಸರೇ ‘ಸೂರಿ ಪಾಪ್‌ಕಾರ್ನ್‌ ಮಂಕಿ ಟೈಗರ್’.

ಇದೇನು, ಶೀರ್ಷಿಕೆಯ ಜತೆಗೇ ಇರುವ ಸೂರಿ ಎಂಬ ಹೆಸರನ್ನು ನಿರ್ದೇಶಕರ ಹೆಸರು ಎಂದು ಓದಿಕೊಳ್ಳಬೇಕಾ ಅಥವಾ ಶೀರ್ಷಿಕೆಯ ಭಾಗ ಎಂದು ಪರಿಗಣಿಸಬೇಕಾ? ಎಂದು ಕೇಳಿದರೆ ‘ಅದು ಒಂಥರ ಸೂರಿ ಪಾಪ್‌ಕಾರ್ನ್‌ ಅಂತಾನೇ ಓದ್ಕೊಬೋದು... ಅಂದ್ರೆ ನಾನೊಂಥರ ವಿಚಿತ್ರ... ನಿಮಗೆ ಅರ್ಥ ಆಗ್ತದಲ್ವಾ?’ ಎಂದು ತಮ್ಮನ್ನು ತಾವೇ ಗೇಲಿಮಾಡಿಕೊಳ್ಳುವ ಹಾಗೆ ನಗುತ್ತಾರೆ ಅವರು.

ಒಂದು ಕಡೆ ಅವರ ನಿರ್ದೇಶನದ ‘ಟಗರು’ ಸಿನಿಮಾ ನೂರು ದಿನಗಳ ಗುರಿಯತ್ತ ಮುನ್ನುಗ್ಗುತ್ತಿದೆ. ಇತ್ತ ಸೂರಿ ಹೊಸದೊಂದು ಕಥೆಯ ಅಮಲೇರಿಸಿಕೊಂಡು ಹಗಲು ರಾತ್ರಿ ಲೇಖನಿ ಹಿಡಿದು ಒದ್ದಾಡುತ್ತಿದ್ದಾರೆ. ‘ಕಂಫರ್ಟ್‌ ಜೋನ್‌ನಿಂದ ಆಚೆ ಬರ್ತಾನೇ ಇರಬೇಕು. ಹೊಸದೇನೋ ಮಾಡ್ತಾನೇ ಇರ್ಬೇಕು. ಇದು ನನ್ನ ಮೊದಲನೇ ಸಿನಿಮಾ ಅಂದುಕೊಂಡೇ ಮಾಡ್ತೀನಿ’ ಎನ್ನುವುದು ಅವರ ಮನಸ್ಸಿನಲ್ಲಿರುವ ಮಂತ್ರ.

ಹಾಗಾದರೆ ಇದು ‘ಟಗರು’ ಗುಂಗಿನಿಂದ ಹೊರಬಂದು ಮಾಡಿದ ಸಿನಿಮಾವೇ? ಖಂಡಿತ ಹೌದು ಎನ್ನುತ್ತಾರೆ ಅವರು. ‘ಇದು ನೂರಕ್ಕೆ ನೂರು ಹೊಸ ಥರ ಸಿನಿಮಾ. ಟಗರು ಸಿನಿಮಾ ನೋಡಿದ ಜನರು ಈ ಥರದ ಪ್ರಯೋಗಗಳನ್ನು ಮಾಡು, ನಿನಗೆ ಒಳ್ಳೆಯದು ಯಾವುದು ಎಂದು ಗೊತ್ತಿದೆ. ನಾವು ನೋಡ್ತೇವೆ ಎಂದು ಹೇಳಿದ್ದಾರೆ. ಹಾಗಿರುವಾಗ ನಾನು ಹಿಂತಿರುಗಿ ನೋಡುವುದೇ ಇಲ್ಲ. ಅವರ ಆಶೀರ್ವಾದ ಬಲದಿಂದ ಮುಂದಕ್ಕೆ ಹೋಗುತ್ತಿರುತ್ತೇನೆ. ಹೊಸತೇನೋ ಮಾಡ್ತೇನೆ. ಅದರ ಪ್ರಯತ್ನ ಶುರುವಾಗಿದೆ. ಸೂರಿ ಸಿನಿಮಾ ಅನ್ನೋದೇ ಒಂದು ಹೊಸ ಅನುಭವ. ಆ ಹೊಸತನ ಕೊಡಬೇಕು ಎನ್ನುವ ಸವಾಲು ನನಗೇ ಇಲ್ಲ ಎಂದರೆ ನೋಡುಗ ಯಾಕೆ ನೋಡ್ತಾನೆ ಹೇಳಿ?’ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.

ಈ ಸಿನಿಮಾದ ಕಥೆಯ ಎಳೆ ಹುಟ್ಟಿಕೊಂಡಿದ್ದು ‘ಟಗರು’ ಸಿನಿಮಾ ಬರವಣಿಗೆಯ ಸಂದರ್ಭದಲ್ಲಿಯೇ. ‘ಟಗರು’ ಬರವಣಿಗೆಯ ಜತೆಗೇ ಒಂದಿಷ್ಟು ವಿಷಯಗಳು ಮನಸಲ್ಲಿ ಹುಟ್ಟಿಕೊಂಡಿದ್ದವು. ಅದರಲ್ಲಿ ಸಿಕ್ಕಿದ ಒಂದು ಕಥೆಯನ್ನು ನಾನು ಮತ್ತು ಸುರೇಂದ್ರನಾಥ್‌ ಒಟ್ಟಿಗೇ ಕುಳಿತುಕೊಂಡು ತಿದ್ದಿದೆವು’ ಎಂದು ಕಥೆ ಸಿದ್ಧಗೊಂಡ ಬಗೆಯನ್ನು ಹೇಳುತ್ತಾರೆ.

ಧನಂಜಯ್‌ ಈ ಚಿತ್ರದ ನಾಯಕ. ‘ಧನಂಜಯ್‌ ಇಟ್ಟುಕೊಂಡು ಇನ್ನೊಂದಿಷ್ಟು ಕೆಲಸ ಮಾಡುವ ಹಂಬಲ ನನಗಿತ್ತು. ಈ ಚಿತ್ರದಲ್ಲಿ ಅವನು ತುಂಬ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀನ ಎಂದು ಅವನ ಪಾತ್ರದ ಹೆಸರು. ನಾಯಕಿಯಾಗಿ ನಿವೇದಿತಾ ಅವರು ಇರುತ್ತಾರೆ. ಅವರು ದೇವಿಕಾ ಎನ್ನುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಾಗಿ ಪ್ರಚಾರಕ್ಕೆ ಬರದ ಪ್ರತಿಭಾವಂತ ನಟಿ ಆಕೆ’ ಎಂದು ಸೂರಿ ವಿವರಿಸುತ್ತಾರೆ.

ಇದೂ ಮತ್ತೊಂದು ಭೂಗತ ಜಗತ್ತು, ರೌಡಿಸಂ ಸಿನಿಮಾವೇ ಎಂದು ಕೇಳಿದರೆ ‘ಖಂಡಿತ ಅಲ್ಲ. ಹಿನ್ನೆಲೆ ಏನೇ ಇದ್ದರೂ ಇದು ಬದುಕಿನ ಕುರಿತ ಸಿನಿಮಾ. ಬದುಕನ್ನು ಪಾಸಿಟೀವ್ ಆಗಿ ತೋರಿಸುವ ಸಿನಿಮಾ. ಸಂಬಂಧಗಳ ಕುರಿತಾದ ಸಿನಿಮಾ’ ಎಂದಷ್ಟೇ ಹೇಳುತ್ತಾರೆ.

‘ಟಗರು’ ಚಿತ್ರದಲ್ಲಿ ಚುರುಕು ಸಂಭಾಷಣೆಗಳಿಂದ ಗಮನ ಸೆಳೆದಿದ್ದ ಮಾಸ್ತಿ ಅವರೇ ಈ ಚಿತ್ರಕ್ಕೂ ಸಂಭಾಷಣೆ ಬರೆಯಲಿದ್ದಾರೆ.

‘‘ಸೂರಿ ಅವರು ಈ ಸಿನಿಮಾ ಹೆಸರು ಹೇಳಿದ ತಕ್ಷಣ ಯಾವುದೋ ಪುಸ್ತಕದ ಹೆಸರು ಹೇಳ್ತಿದಾರೆ ಅನ್ನಿಸ್ತು. ಅವರ ಮುಖ ನೋಡಿದೆ. ‘ಸಿನಿಮಾಗೆ ಟೈಟಲ್ ಆಗಿ ಬುಕ್ ಮಾಡ್ಸಿದೀನಿ’ ಅಂದ್ರು. ನಾವಿಬ್ಬರೇ ಇದ್ದಾಗ ಟೈಟಲ್ ಬಗ್ಗೆ ಕೆದಕಿದೆ, ಅವರು ‘ನಾವು ಏನು ಮಾಡಿದ್ರೂ ಹಿಂದಿನ ಸಿನಿಮಾಗೆ ಹೋಲುಸ್ತಾರೆ. ಅದು ಇಲ್ಲಿ ಆಗಬಾರದು. ಆದಷ್ಟೂ ಟೈಟಲ್‌ನಿಂದಲೇ ಬೇರೆ ರೀತಿ ಟ್ರೈ ಮಾಡೋಣ’ ಎಂದರು. ನನಗೂ ಅದು  ಸರಿ ಅನಿಸಿತು. ಅವರ ಜೊತೆ ಕೆಲಸ ಮಾಡೋದು ಒಂದು ಬಗೆಯಲ್ಲಿ ‘ಮನರಂಜನಾ ಸ್ಪರ್ಧೆ’ಯಲ್ಲಿ ಪಾಲ್ಗೊಂಡ ಅನುಭವ ಕೊಡುತ್ತದೆ. ‘ಟಗರು’ ಸಿನಿಮಾದ ನೆರಳಿಲ್ಲದ ಹಾಗೆ ಗೆಲುವಿನ ಜವಾಬ್ದಾರಿ ಮುಂದುವರಿಸುತ್ತಿದ್ದೀವಿ’’ ಎನ್ನುತ್ತಾರೆ ಮಾಸ್ತಿ.

ಕೆ.ಪಿ. ಶ್ರೀಕಾಂತ್ ಅವರೇ ಈ ಚಿತ್ರಕ್ಕೂ ಹಣ ಹೂಡಲಿದ್ದಾರೆ. ಚರಣ್‌ರಾಜ್‌ ಸಂಗೀತ ಮೋಡಿ ಮುಂದುವರಿಯಲಿದೆ. ಇದುವರೆಗೆ ಸೂರಿ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶೇಖರ್ ಛಾಯಾಗ್ರಾಹಕರಾಗಿ ಪರಿಚಿತರಾಗುತ್ತಿದ್ದಾರೆ. 

ಚಿತ್ರದಲ್ಲಿ ಕನಿಷ್ಠ ಐವತ್ತು ಪಾತ್ರಗಳು ಇರಲಿವೆಯಂತೆ! ಆದರೆ ನಾಯಕ ನಾಯಕಿಯ ಹೊರತಾಗಿ ಯಾವ ಪಾತ್ರಗಳಿಗೂ ಕಲಾವಿದರು ಅಂತಿಮವಾಗಿಲ್ಲ. ಇನ್ನು ಇಪ್ಪತ್ತು ದಿನಗಳಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆ ಅವರಿಗಿದೆ. ಬೆಂಗಳೂರು ಮತ್ತು ಮುಂಬೈನಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗುತ್ತದೆ.

**

ನನ್ನ ಪಾತ್ರದ ಹೆಸರು ದೇವಿಕಾ. ಇದು ಸಂಬಂಧಗಳ ಕುರಿತಾದ ಸಿನಿಮಾ. ಸೂರಿ ಅವರ ಜತೆ ಕೆಲಸ ಮಾಡಬೇಕು ಎಂದು ತುಂಬ ದಿನದಿಂದ ಆಸೆ ಇತ್ತು. ಈಗ ಅದು ನೆರವೇರುತ್ತಿದೆ. ಕಥೆಯೂ ಚೆನ್ನಾಗಿರುವುದರಿಂದ ಸಿನಿಮಾ ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ.

–ನಿವೇದಿತಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT