ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ ನಡೆದುಕೊಂಡೇ ಹೋದ ಬ್ಯಾನರ್ಜಿ, ಕೇಜ್ರಿವಾಲ್

ರಾಜ್ಯಪಾಲರ ಸಂಚಾರಕ್ಕಾಗಿ ಮುಖ್ಯಮಂತ್ರಿಗಳ ವಾಹನ ತಡೆದ ಪೊಲೀಸರು * ವಿಚಾರಣೆ ನಡೆಸಲು ಸಿಎಂ ಕುಮಾರಸ್ವಾಮಿ ಸೂಚನೆ
Last Updated 24 ಮೇ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್‌, ಸಂಚಾರ ಪೊಲೀಸರ ಕರ್ತವ್ಯ ಲೋಪದಿಂದಾಗಿ ಬುಧವಾರ ರಸ್ತೆಯಲ್ಲಿ ನಡೆದುಕೊಂಡೇ ವಿಧಾನಸೌಧಕ್ಕೆ ಹೋದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ) ನೀಲಮಣಿ ರಾಜು ಅವರಿಗೆ ಗುರುವಾರ ಸೂಚನೆ ನೀಡಿದರು. ಅದರನ್ವಯ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್‌.ಹಿತೇಂದ್ರ ಹಾಗೂ ಡಿಸಿಪಿ ಅನುಪಮ್‌ ಅಗರ್‌ವಾಲ್‌ಗೆ ಡಿಜಿಪಿಯವರು ಕಾರಣ ಕೇಳಿ ನೋಟಿಸ್‌ ಸಹ ನೀಡಿದ್ದಾರೆ.

ಆಗಿದ್ದೇನು?: ಮಮತಾ ಬ್ಯಾನರ್ಜಿ ಹಾಗೂ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವಿಶೇಷ ವಿಮಾನದಲ್ಲಿ ಬುಧವಾರ ನಗರಕ್ಕೆ ಬಂದಿದ್ದ ಬ್ಯಾನರ್ಜಿ ಹಾಗೂ ಕೇಜ್ರಿವಾಲ್‌, ಹೋಟೆಲೊಂದರಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡು ಕೆಲ ನಿಮಿಷ ವಿಶ್ರಾಂತಿ ಪಡೆದರು. ನಂತರ, ಬಳ್ಳಾರಿ ರಸ್ತೆಯ ಮೂಲಕ ಮಧ್ಯಾಹ್ನ 4.10 ಗಂಟೆ ಸುಮಾರಿಗೆ ಬೆಂಗಾವಲು ಪಡೆ ವಾಹನಗಳ ಸಮೇತ ಕಾರಿನಲ್ಲಿ ಪ್ರತ್ಯೇಕವಾಗಿಯೇ ವಿಧಾನಸೌಧದತ್ತ ಹೊರಟರು.

ಕಾರುಗಳು ಚಾಲುಕ್ಯ ವೃತ್ತಕ್ಕೆ ಬರುತ್ತಿದ್ದಂತೆ, ದಟ್ಟಣೆಯಲ್ಲಿ ಸಿಲುಕಬೇಕಾಯಿತು. ಅದೇ ಮಾರ್ಗವಾಗಿ ವಿಧಾನಸೌಧದತ್ತ ಹೊರಟಿದ್ದ ರಾಜ್ಯಪಾಲರ ಕಾರಿಗೆ ದಾರಿ ಮಾಡಿಕೊಡುವಲ್ಲಿ ನಿರತರಾಗಿದ್ದ ಪೊಲೀಸರು, ಬ್ಯಾನರ್ಜಿ ಹಾಗೂ ಕೇಜ್ರಿವಾಲ್‌ ವಾಹನಗಳನ್ನು ಗಮನಿಸಲಿಲ್ಲ. ಅವರಿಬ್ಬರ ಬೆಂಗಾವಲು ಪಡೆಯ ಸಿಬ್ಬಂದಿ ವೈರ್‌ಲೆಸ್‌ನಲ್ಲಿ ಮಾಹಿತಿ ನೀಡಿದರೂ ಪ್ರತಿಕ್ರಿಯೆ ಸಿಗಲಿಲ್ಲ.

ಸ್ಥಳದಲ್ಲೇ ಇದ್ದ ಕೆಲ ಹಿರಿಯ ಪೊಲೀಸರು ಅಧಿಕಾರಿಗಳು, ಮುಖ್ಯಮಂತ್ರಿಗಳ ಕಾರು ಕಂಡು ಅವರತ್ತ ಹೋದರು. ‘ರಾಜ್ಯಪಾಲರ ಕಾರು ಹೋಗುತ್ತಿದ್ದಂತೆ, ನಿಮ್ಮ ವಾಹನಗಳನ್ನು ಬಿಡುತ್ತೇವೆ’ ಎಂದರು. ಅವಾಗಲೇ ಕಾರಿನಿಂದ ಕೆಳಗೆ ಇಳಿದ ಬ್ಯಾನರ್ಜಿ ಹಾಗೂ ಕೇಜ್ರಿವಾಲ್, ಬೆಂಗಾವಲು ಪಡೆಯ ಸಿಬ್ಬಂದಿ ಸಮೇತ ನಡೆದುಕೊಂಡೇ ವಿಧಾನಸೌಧದತ್ತ ಹೊರಟರು. ಅವರು ವಿಧಾನಸೌಧ ತಲುಪುವವರೆಗೂ ರಾಜ್ಯಪಾಲರು ಬರಲೇ ಇಲ್ಲ. ಇದೇ ವಿಷಯವನ್ನು ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಎದುರು ಪ್ರಸ್ತಾಪಿಸಿದ ಬ್ಯಾನರ್ಜಿ, ಪೊಲೀಸರ ವರ್ತನೆಯನ್ನು ಖಂಡಿಸಿದರು. ವೇದಿಕೆಯಲ್ಲಿದ್ದ ಡಿಜಿಪಿ ನೀಲಮಣಿ ಅವರನ್ನೂ ತರಾಟೆಗೆ ತೆಗೆದುಕೊಂಡರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ವಿಧಾನಸೌಧದೊಳಗೆ ಪ್ರವೇಶಿಸಲು 2,000 ಕಾರುಗಳಿಗೆ ಪಾಸ್‌ ನೀಡಲಾಗಿತ್ತು. ಗಣ್ಯ ವ್ಯಕ್ತಿಗಳು ಹಾಗೂ ಅವರ ಬೆಂಗಾವಲು ಪಡೆಯ ಸಿಬ್ಬಂದಿಯ ವಾಹನಗಳಿಗೆ ಪ್ರತ್ಯೇಕ ಪಾಸ್‌ ಇತ್ತು. ಆ ಎಲ್ಲ ವಾಹನಗಳು ಚಾಲುಕ್ಯ ವೃತ್ತ ಹಾಗೂ ಸಿಐಡಿ ಕಚೇರಿ ಎದುರಿನ ಸಿಗ್ನಲ್‌ ಮೂಲಕ ವಿಧಾನಸೌಧದತ್ತ ಹೋಗಿದ್ದರಿಂದ ದಟ್ಟಣೆ ಉಂಟಾಯಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಹಿರಿಯ ಅಧಿಕಾರಿಗಳ ಅಮಾನತು ಸಾಧ್ಯತೆ

‘ಬ್ಯಾನರ್ಜಿ ಹಾಗೂ ಕೇಜ್ರಿವಾಲ್ ಅವರ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದಾಗಲೂ ಸಂಚಾರ ಪೊಲೀಸರು ದಾರಿ ಮಾಡಿಕೊಟ್ಟಿಲ್ಲ. ಈ ವಿಷಯದಲ್ಲಿ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಡಿಜಿಪಿ ನೀಲಮಣಿ ರಾಜು, ಮಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಅದೇ ಮಾಹಿತಿ ಆಧರಿಸಿ ಮುಖ್ಯಮಂತ್ರಿಯವರು ಹಿರಿಯ ಅಧಿಕಾರಿಯನ್ನು ಅಮಾನತು ಮಾಡುವ ಸಾಧ್ಯತೆ ಇದೆ.

ಬ್ಯಾನರ್ಜಿ ವರ್ತನೆ ಖಂಡಿಸಿ ಪೋಸ್ಟ್‌

ವೇದಿಕೆಯಲ್ಲೇ ಡಿಜಿಪಿ ನೀಲಮಣಿ ರಾಜು ಅವರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ ಅವರ ವರ್ತನೆಯನ್ನು ಖಂಡಿಸಿ ಹಲವರು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

‘ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು. ಅವರು ಕನ್ನಡ ನಾಡಿನ ಹೆಮ್ಮೆ. ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕವಾಗಿ ಅವರನ್ನು ಹೀಯಾಳಿಸುವ ಮೂಲಕ ಬ್ಯಾನರ್ಜಿ ಅಹಂಕಾರ ತೋರಿಸಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಡಿಜಿಪಿ ಅವರಿಗೆ ಬೈಯ್ದು ಬ್ಯಾನರ್ಜಿ, ಇಡೀ ಕನ್ನಡಿಗರನ್ನು ಅವಮಾನಿಸಿದ್ದಾರೆ’ ಎಂದು ಹಲವರು ದೂರಿದ್ದಾರೆ.

ಡಿಜಿಪಿಯಿಂದ ವಿವರಣೆ ಪಡೆದ ಮುಖ್ಯಮಂತ್ರಿ

ಬೆಂಗಳೂರು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಟ್ಟಿಗೆದ್ದ ಘಟನೆಯ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಡಿಜಿಪಿ ನೀಲಮಣಿ ರಾಜು ಅವರನ್ನು ಕರೆಸಿಕೊಂಡು ವಿವರಣೆ ಪಡೆದಿದ್ದಾರೆ.

ಪ್ರಮಾಣ ವಚನಕ್ಕೆ ಮುನ್ನ ಭಾರಿ ಮಳೆ ಬಂದಿದ್ದರಿಂದ ಸಂಚಾರಿ ದಟ್ಟಣೆ ಸೃಷ್ಟಿ ಆಯಿತು. ಹೀಗಾಗಿ ಗಣ್ಯರಿಗೆ ಸಂಚಾರ ಮುಕ್ತಗೊಳಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನೀಲಮಣಿರಾಜು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ.

* ಭದ್ರತಾ ಲೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಡಿಜಿಪಿಯಿಂದ ಮಾಹಿತಿ ಪಡೆಯಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ

– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT