ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಾಗಿ ಘೋಷಣೆಯಾದರೂ ಇಲಾಖೆಗಳೇ ಇಲ್ಲ

ಕಾಪು: ನೂತನ ಶಾಸಕರಿಗೆ ನೂರಾರು ಸವಾಲು
Last Updated 27 ಮೇ 2018, 10:52 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಲ್ಲೂಕಿಗೆ ಮೂಲಸೌಕರ್ಯಗಳನ್ನು ಒದಗಿಸುವುದೂ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣ, ಬೀಚ್ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಲಾಲಾಜಿ ಆರ್.ಮೆಂಡನ್ ಅವರಿಗೆ ಇದೆ.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಪು ತಾಲ್ಲೂಕಾಗಿ ಘೋಷಣೆಯಾಗಿದೆ. ಆದರೆ ಇಲ್ಲಿನ ಜನರು ಕೇವಲ ಆರ್‌ಟಿಸಿ ಹೊರತುಪಡಿಸಿ ಬೇರೆ ಎಲ್ಲಾ ಕೆಲಸ ಕಾರ್ಯಗಳಿಗೆ ಉಡುಪಿಗೆ ಹೋಗ ಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಆದಷ್ಟು ಬೇಗ ತಾಲ್ಲೂಕಿಗೆ ಅಗತ್ಯವಿರುವ ವಿವಿಧ ಇಲಾಖೆಗಳು, ಸಿಬ್ಬಂದಿ ನೇಮಕ ಆಗಬೇಕಿದೆ. ಇವುಗಳ ಜತೆಗೆ ತಾಲ್ಲೂಕು ಕಚೇರಿಯನ್ನು ಕೂಡಲೇ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ತ್ವರಿತ ಯೋಜನೆಗಳನ್ನು ರೂಪಿಸಿ ಕಾಪು ತಾಲ್ಲೂಕಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸ್ಥಳೀಯರಿಗೆ ಉಪಯೋ ಗವಾಗಲಿ’ ಎನ್ನುತ್ತಾರೆ ಅನ್ವರ್ ಆಲಿ ಕಾಪು.

ಕನಸಾಗಿಯೇ ಉಳಿದ ಮೀನುಗಾರಿಕಾ ಬಂದರು: ‘ಮಲ್ಪೆ, ಮಂಗಳೂರು ಮೀನು ಗಾರಿಕಾ ಬಂದರಿ ನಲ್ಲಿ ಮೀನುಗಾರಿಕೆಯ ಒತ್ತಡ ಹೆಚ್ಚಾಗುತ್ತಿರುವುದರಿಂದ ಇದರ ಮಧ್ಯ ಭಾಗದ ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಮಾಡಬೇಕು ಎಂದು ನಾಲ್ಕು ದಶಕಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ ಬಂದರು ನಿರ್ಮಾಣಕ್ಕೆ ಜನಪ್ರತಿನಿಧಿಗಳು ಇದುವ ರೆಗೂ ಆಸಕ್ತಿ ತೋರಿಸಿಲ್ಲ. ಅನುದಾನ ಹಂಚಿಕೆ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಕೆಸರೆರಚಾಟದಿಂದ ಹೆಜಮಾಡಿ ಬಂದರು ನಿರ್ಮಾಣ ಬೇಡಿಕೆ ಇನ್ನೂ ಕೈಗೂಡಿಲ್ಲ’ ಎನ್ನುತ್ತಾರೆ ಬಂದರು ಹೋರಾಟಗಾರ ವಿಜಯ ಬಂಗೇರ.

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಬೇಕು: ‘ಇಲ್ಲಿನ ಕಡಲತಡಿಯ ನಿವಾಸಿಗಳಿಗೆ ಮಳೆಗಾಲ ಬಂತೆಂದರೆ ಜೀವಭಯ ಕಾಡುತ್ತದೆ. ಅದಕ್ಕೆ ಕಾರಣ ಪ್ರತೀ ವರ್ಷ ಬರುವ ಕಡಲ್ಕೊರೆತ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪು, ಕೈಪುಂಜಾಲು, ಪಡುಕೆರೆಗಳಲ್ಲಿ ಸಮುದ್ರ ಕೊರೆತ ಹೆಚ್ಚಾಗಿರುತ್ತದೆ. ಈ ಮೊದಲು ಕಡಲ್ಕೊರೆತ ತಡೆಗಾಗಿ ಹಾಕಿದ್ದ ಬೃಹತ್ ಗಾತ್ರದ ಕಲ್ಲುಗಳು ಈಗ ಸಮುದ್ರದ ಪಾಲಾಗಿವೆ. ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಬಹಳ ವರ್ಷಗಳಿಂದ ಹೇಳಿಕೊಂಡು ಬಂದಿದ್ದರೂ ಕೂಡ ಸಮಸ್ಯೆ ಇನ್ನೂ ಜೀವಂತವಾಗಿಯೇ ಇದೆ’ ಎಂದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ನಿಟ್ಟುಸಿರು ಬಿಡುತ್ತಾರೆ.

ಪ್ರವಾಸೋದ್ಯಮ ಅಭಿವೃದ್ಧಿ ಒತ್ತು ನೀಡಲಿ: ‘ಕಾಪು ಕ್ಷೇತ್ರದಲ್ಲಿ ಪ್ರವಾಸೋ ದ್ಯಮಕ್ಕೆ ವಿಪುಲ ಅವಕಾಶಗಳಿವೆ. ಹೆಜಮಾಡಿಯಿಂದ ಪಡುಕರೆವರೆಗೆ ಸುಂದರ ಕಡಲ ಕಿನಾರೆಗಳಿವೆ. ಕಾಪು ಸಮುದ್ರ ಕಿನಾರೆಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ವಾಗಿರುವ ದೀಪಸ್ತಂಭ ಪ್ರವಾಸಿಗರನ್ನು ಆಕರ್ಷಿ ಸುತ್ತಿದೆ. ಈ ಬೀಚ್‌ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿ ಸುವಂತೆ ಮಾಡಬಹುದು. ಪಡುಬಿದ್ರಿ ಬೀಚ್ ಅಭಿವೃದ್ಧಿ ಹೊಂದಿದ್ದು ಮುಂದಿನ ದಿನಗಳಲ್ಲಿ ಹೆಜ ಮಾಡಿ, ಎರ್ಮಾಳು ಬೀಚ್‌ಗಳನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಸೂರಿ ಶೆಟ್ಟಿ ಕಾಪು ಒತ್ತಾಯಿಸುತ್ತಾರೆ.

ಸ್ಥಳೀಯರಿಗೆ ಉದ್ಯೋಗ ನೀಡಲಿ: ‘ಕಾಪು ಕ್ಷೇತ್ರದ ಎಲ್ಲೂರಿನಲ್ಲಿ ಕಲ್ಲಿದ್ದಲು ಆಧಾರಿತ ಯುಪಿಸಿಎಲ್-ಅದಾನಿ ವಿದ್ಯುತ್ ಸ್ಥಾವರ, ಪಡುಬಿದ್ರಿಯಲ್ಲಿ ಪವನ ವಿದ್ಯುತ್ ಯೋಜನೆಯ ಬಿಡಿಭಾಗ ತಯಾರಿಕಾ ಘಟಕ ಸುಜ್ಲಾನ್, ಕಾಪುವಿನ ಪಾದೂರಿನಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಚಾತೈಲ ಸಂಗ್ರಹಣಾ ಘಟಕಗಳಿವೆ. ಆದರೆ, ಇಲ್ಲಿ ಸ್ಥಳೀಯರಿಗಿಂತ ಹೊರ ಜಿಲ್ಲೆ ಮತ್ತು ಹೊರರಾಜ್ಯಗಳ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಈ ಬೃಹತ್ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ನಂದಿಕೂರು ಮತ್ತು ಬೆಳಪುವಿನಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗಿದ್ದು, ಇಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಅನ್ವರ್.

ಬೇಡಿಕೆಗಳು: ಶಿರ್ವ ಸಮುದಾಯ ಆಸ್ಪತ್ರೆ ಸಮಸ್ಯೆಗೆ ಪರಿಹಾರ ಹುಡುಕಬೇಕು, ಪಡುಬಿದ್ರಿ, ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಡುಬಿದ್ರಿ ಹಾಗೂ ಶಿರ್ವ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿ ಸಬೇಕು, ಕುಡಿಯುವ ನೀರಿನ ಸಮಸ್ಯೆ ನೀಗಿಸಿ, ಉಪ್ಪು ನೀರಿನ ಸಮಸ್ಯೆ ಇರುವಲ್ಲಿ ಸಿಹಿನೀರಿನ ವ್ಯವಸ್ಥೆ ಕಲ್ಪಿಸಬೇಕು, ಕಾಪು ಪುರಸಭೆ ಹಾಗೂ ಕಾಪು ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ಮಾಡಲು ವೈಜ್ಞಾನಿಕ ಘಟಕ ಹಾಗೂ ಕೊಳಚೆ ನೀರಿನ ಸಮಸ್ಯೆಗೆ ಶುದ್ಧೀಕರಣ ಘಟಕ ನಿರ್ಮಾಣ ಮಾಡಬೇಕು, ಕಾಪುವಿನ ಪ್ರಮುಖ ಬೆಳೆಯಾದ ಮಲ್ಲಿಗೆ ಹಾಗೂ ಮಟ್ಟುಗುಳ್ಳಕ್ಕೆ ಪೂರಕ ಮಾರುಕಟ್ಟೆ ವ್ಯವಸ್ಥೆಯನ್ನು ಕಾಪುವಿನಲ್ಲೇ ಮಾಡಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ಹಕ್ಕುಪತ್ರ ಇಲ್ಲದಿರುವವರಿಗೆ ಕೂಡಲೇ ಹಕ್ಕು ಪತ್ರ ವಿತರಿಸಬೇಕು ಎಂಬುದು ಕಾಪು ಕ್ಷೇತ್ರದ ಜನರ ಪ್ರಮುಖ ಬೇಡಿಕೆಗಳಾಗಿವೆ.

‘ತಾಲ್ಲೂಕು ಆಸ್ಪತ್ರೆಯಾಗಲಿ’

ಕಾಪು ತಾಲ್ಲೂಕಾಗಿ ರಚನೆಯಾಗಿರುವುದರಿಂದ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಸುತ್ತಮುತ್ತಲಿನ ಗ್ರಾಮಗಳ ಜನರು ಆರೋಗ್ಯ ಕೆಟ್ಟಾಗ ಚಿಕಿತ್ಸೆಗೆಂದು ಇಲ್ಲಿಗೆ ಬರುತ್ತಾರೆ. ಆದರೆ, ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಆಸ್ಪತ್ರೆಯ ದುರಸ್ತಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಇಲ್ಲಿ ವೈದ್ಯರ ಕೊರತೆ ಇದ್ದು, ಸಮೀಪದ ಆರೋಗ್ಯ ಕೇಂದ್ರವಾದ ಪಡುಬಿದ್ರಿ ಮತ್ತು ಮುದರಂಗಡಿಯ ವೈದ್ಯರು ಇಲ್ಲಿಗೆ ಬಂದು ರೋಗಿಗಳನ್ನು ಉಪಚರಿಸುತ್ತಾರೆ. ಅಪಘಾತ ನಡೆದು ಗಾಯಾಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಉಡುಪಿಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಸಮಾಜಸೇವಕ ಸೂರಿ ಶೆಟ್ಟಿ.

24 ಗಂಟೆಯೂ ವಿದ್ಯುತ್ ನೀಡಲಿ

ಕಾಪು ಕ್ಷೇತ್ರದ ಬಹಳಷ್ಟು ಜನರು ಬೃಹತ್ ಯೋಜನೆಗಳಿಗಾಗಿ ತಮ್ಮ ಜಾಗವನ್ನು ನೀಡಿದ್ದಾರೆ. ಇದರಲ್ಲಿ ಪ್ರಮುಖವಾದದ್ದು ಯುಪಿಸಿಎಲ್ ಯೋಜನೆ. ಈ ಯೋಜನೆ ಇಲ್ಲೇ ಇರುವುದರಿಂದ ಕಾಪು ತಾಲ್ಲೂಕಿಗೆ ದಿನದ 24 ಗಂಟೆಗಳ ಕಾಲವೂ ವಿದ್ಯುತ್ ಸರಬರಾಜು ಮಾಡಲು ಶಾಸಕರು ಒತ್ತಡ ಹೇರಬೇಕು ಎನ್ನುತ್ತಾರೆ ಅನ್ವರ್ ಆಲಿ ಕಾಪು.

ಅಬ್ದುಲ್ ಹಮೀದ್, ಪಡುಬಿದ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT