ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ದೂರವಾಗುತ್ತಿರುವ ದುಬಾರೆ!

ಕೆಲ ದಿನಗಳಿಂದ ಸಾಕಾನೆ ಶಿಬಿರದ ಚಟುವಟಿಕೆಗಳು ಸ್ಥಗಿತ, ಮೂಲಸೌಕರ್ಯದ ಕೊರತೆ
Last Updated 2 ಜೂನ್ 2018, 10:21 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಮೂಲ ಸೌಕರ್ಯದ ಕೊರತೆಯನ್ನು ಎದುರಿಸುತ್ತಿದೆ.

1897ನೇ ಇಸವಿಯಲ್ಲಿ ಬ್ರಿಟಿಷರು ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಕಾನೆ ಶಿಬಿರ ಆರಂಭಿಸಿದ್ದರು. ಈ ಶಿಬಿರ ಈಗ ವಿಶ್ವವಿಖ್ಯಾತಿ ಹೊಂದಿದೆ. ವಿವಿಧೆಡೆಗಳಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿದು ಇಲ್ಲಿ ಪಳಗಿಸಲಾಗುತ್ತದೆ. ಈಗಾಗಲೇ ಈ ಶಿಬಿರದಲ್ಲಿ 35 ಸಾಕಾನೆಗಳು ಹಾಗೂ ಎರಡು ಮರಿಯಾನೆಗಳಿವೆ. ಈ ಆನೆಗಳ ಚಟುವಟಿಕೆಯನ್ನು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೆಳಿಗ್ಗೆ ಆನೆಗಳಿಗೆ ಮಜ್ಜನ ಮಾಡಿಸುವುದರಿಂದ ಆರಂಭಗೊಂಡು ಅವುಗಳಿಗೆ ಆಹಾರ ನೀಡುವುದು, ಹತ್ತಿರದಿಂದ ನೋಡುವುದು, ಅವುಗಳನ್ನು ಮುಟ್ಟುವುದು ಮತ್ತು ಆನೆಗಳ ಮಾವುತರಿಂದ ಆನೆಗಳ ದಿನಚರಿ ತಿಳಿಯುವುದು ಸೇರಿದಂತೆ ಆನೆ ಸಫಾರಿ ಕೂಡ ನಡೆಯುತ್ತದೆ.

ಈ ಪ್ರವಾಸಿ ತಾಣದಲ್ಲಿನ ಸಾಕಾನೆ ಶಿಬಿರ, ಕಾವೇರಿ ನದಿಯಲ್ಲಿ ರಿವರ್ ರ್‍ಯಾಫ್ಟಿಂಗ್ ಸಾಹಸ ಜಲಕ್ರೀಡೆ ಹಾಗೂ ದೋಣಿ ವಿಹಾರ, ಕುದುರೆ ಸವಾರಿ, ಆದಿವಾಸಿಗಳ ಜೀವನ ಶೈಲಿ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರಗಳಾಗಿವೆ. ಆದರೆ ಕೆಲವು ದಿನಗಳಿಂದ ದುಬಾರೆಯಲ್ಲಿ ಸಾಹಸ ಜಲಕ್ರೀಡೆ, ದೋಣಿ ವಿಹಾರ, ಸಾಕಾನೆ ಶಿಬಿರದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಪ್ರವಾಸಿಗರು ಇಲ್ಲಿನ ವ್ಯವಸ್ಥೆ ನೋಡಿ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ. ಜೊತೆಗೆ ಇದರಿಂದ ಪ್ರವಾಸೋದ್ಯಮ ಬೆಳವಣಿಗೆಗೂ ಹಿನ್ನಡೆ ಉಂಟಾಗುತ್ತಿದೆ.

‘ದುಬಾರೆ ನೋಡಲು ಕುಟುಂಬ ಸಮೇತರಾಗಿ ಬಾಡಿಗೆ ವಾಹನ ಮಾಡಿಕೊಂಡು ಬಂದಿದ್ದೇವೆ. ಆದರೆ ಇಲ್ಲಿನ ವ್ಯವಸ್ಥೆ ನೋಡಿ ತುಂಬ ಬೇಸರವಾಗಿದೆ. ನಾವು ನಿರಾಸೆಯಿಂದ ಹಿಂತಿರುಗುತ್ತಿದ್ದೇವೆ’ ಎಂದು ಪ್ರವಾಸಿಗ ಬೆಂಗಳೂರಿನ ಗೋವಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾಧಿಕಾರಿಗಳು ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ರಿವರ್ ರ್‍ಯಾಫ್ಟಿಂಗ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ತಂಡೋಪತಂಡವಾಗಿ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ  ಕಡಿಮೆಯಾಗುತ್ತಿದೆ. 

‘ಕಾವೇರಿ ನದಿ ಹಾಗೂ ಇನ್ನಿತರ ನದಿಪಾತ್ರಗಳಲ್ಲಿ ನಡೆಸುತ್ತಿದ್ದ ರಿವರ್ ರ್‍ಯಾಫ್ಟಿಂಗ್ ನಿಷೇಧದ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ’ ಎಂದು ಮಾಲೀಕ ರತೀಶ್ ಹೇಳಿದರು.

ಮುಕ್ತವಾಗದ ರಸ್ತೆ: ಪ್ರವಾಸೋದ್ಯಮ ಇಲಾಖೆ ವತಿಯಿಂದ ದುಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ₹1 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. ಈಗಾಗಲೇ ರಸ್ತೆ ಕಾಮಗಾರಿ ಮುಗಿದು 15 ದಿನಗಳು ಕಳೆದರೂ  ಸಂಚಾರಕ್ಕೆ ರಸ್ತೆ ಮುಕ್ತವಾಗಿಲ್ಲ. ವಯೋವೃದ್ಧರು, ಮಕ್ಕಳಾದಿಯಾಗಿ ಮುಖ್ಯರಸ್ತೆಯಿಂದ ದುಬಾರೆವರೆಗೆ 1.5 ಕಿ.ಮೀ ನಡೆದುಕೊಂಡೇ ಹೋಗಬೇಕಾದ ದುಃಸ್ಥಿತಿ ಇದೆ. ಕಳಪೆ ಕಾಮಗಾರಿಯ ಆರೋಪಗಳೂ ಕೇಳಿ ಬಂದಿವೆ.

‘ರಸ್ತೆಯ ಅಂಚುಗಳಲ್ಲಿ ಹಾಕಿರುವ ಮಣ್ಣು ಕೂಡ ಈಚೆಗೆ ಬಿದ್ದ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆಯ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹನ ನಿಲುಗಡೆ ಸಮಸ್ಯೆ:  ಇಲ್ಲಿಗೆ ಬರುವ ನೂರಾರು ಪ್ರವಾಸಿಗರ ವಾಹನಗಳ ನಿಲುಗಡೆಗೆ ಸಮಸ್ಯೆ ಉಂಟಾಗಿದೆ. ರಸ್ತೆ ಪಕ್ಕದಲ್ಲಿರುವ ಖಾಸಗಿ ಜಾಗದಲ್ಲಿ ಮಾಲೀಕರು ಕೇಳಿದಷ್ಟು ಶುಲ್ಕ ನೀಡಿ ವಾಹನಗಳನ್ನು ನಿಲ್ಲಿಸುವಂತಹ ಸ್ಥಿತಿ ಉಂಟಾಗಿದೆ. ಅಲ್ಲದೆ ರಸ್ತೆಯ ಎರಡು ಕಡೆಗಳಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗುತ್ತಿದೆ.

ವಸೂಲಿ ದಂಧೆ: ನಿತ್ಯ ಆಗಮಿಸುವ ಪ್ರವಾಸಿಗರನ್ನು ರಸ್ತೆ ದುರಸ್ತಿಯ ಹೆಸರಿನಲ್ಲಿ ಕೆಲವು ಜೀಪು ಮಾಲೀಕರು ದುಬಾರೆಗೆ ಕರೆದುಕೊಂಡು ಹೋಗಲು ತಲಾ ₹50 ರಿಂದ ₹100 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ. ಯಾವುದೇ ಪರವಾನಗಿ ಇಲ್ಲದೆ ಹಗಲು ದಂಧೆಯಲ್ಲಿ ತೊಡಗಿದ್ದರೂ ಇತ್ತ ಗಮನ ಹರಿಸದ ಪಂಚಾಯಿತಿ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತೂಗು ಸೇತುವೆ ನಿರ್ಮಾಣಕ್ಕೆ ಒತ್ತಾಯ: ‘ದುಬಾರೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಅನೇಕ ವರ್ಷಗಳಿಂದ ಕೇಳಿ ಬಂದಿದೆ. ಸೇತುವೆ ನಿರ್ಮಾಣವಾದರೆ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರು ತೂಗು ಸೇತುವೆಯ ಮೂಲಕವೇ ಹೋಗಬಹುದು. ಜೊತೆಗೆ 40, 50 ಆದಿವಾಸಿ ಕುಟುಂಬಗಳು ದುಬಾರೆ ಸಾಕಾನೆ ಶಿಬಿರದ ದ್ವೀಪದಲ್ಲಿ ಬಹಳ ಕಾಲದಿಂದ ಇದ್ದಾರೆ. ಅವರು ಜೀವನೋಪಾಯಕ್ಕೆ ನಂಜರಾಯಪಟ್ಟಣ, ಹೊಸಪಟ್ಟಣ, ರಂಗಸಮುದ್ರ ಗ್ರಾಮಗಳನ್ನು ಅವಲಂಬಿಸಿದ್ದು, ಗಿರಿಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗಲು ಅನುಕೂಲವಾಗುತ್ತದೆ. ಮಳೆಗಾಲದಲ್ಲಿ ಪ್ರವಾಹ ಉಂಟಾದಾಗ ಅವಘಡಗಳು ಸಂಭವಿಸಿವೆ. ಆದ್ದರಿಂದ ಆದಿವಾಸಿಗಳು, ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ತೂಗು ಸೇತುವೆ ನಿರ್ಮಾಣ ತುಂಬ ಅಗತ್ಯವಾಗಿದೆ’ ಎಂದು ಗಿರಿಜನ ಮುಖಂಡ ಡೋಬಿ ಹೇಳಿದ್ದಾರೆ.
**
**
ಸಾಕಾನೆ ಶಿಬಿರ ನೋಡಲು ಕೆಲಸಕ್ಕೆರಜೆ ಹಾಕಿ ಬಂದಿದ್ದೇವೆ. ಇಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿರುವುದು ನಿರಾಸೆಯಾಗಿದೆ
ಅಲ್ ಪೆನ್ ಡಿಸೋಜ, ಪ್ರವಾಸಿಗ, ಗುಜರಾತ್‌ 
**
ಚುನಾವಣೆ ನೀತಿ ಸಂಹಿತೆ ಜಾರಿಯಿದ್ದ ಕಾರಣ ಕ್ರಮಕೈಗೊಳ್ಳಲಾಗಿರಲಿಲ್ಲ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು
ಕಲ್ಪನಾ, ಪಿಡಿಒ

ರಘುಹೆಬ್ಬಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT