ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಆಗಬಹುದೇ ಪ್ಲಾಸ್ಟಿಕ್‌ಮುಕ್ತ?

ನಗರದಲ್ಲಿ ಇಂದಿನಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧ
Last Updated 5 ಜೂನ್ 2018, 11:13 IST
ಅಕ್ಷರ ಗಾತ್ರ

ಕೊಪ್ಪಳ: ಕಳೆದ ಬಾರಿ ಆರಂಭದಲ್ಲಿ ಪ್ಲಾಸ್ಲಿಕ್‌ ಬಳಕೆ ನಿಷೇಧ ಮಾಡಲು ಅಂಗಡಿ ಮುಂಗಟ್ಟುಗಳ ಮೇಲೆ ಹೆಚ್ಚು ದಾಳಿಗಳನ್ನು ಮಾಡಲಾಯಿತು. ಬಳಿಕ ನಗರಸಭೆ ನಿರ್ಲಕ್ಷ್ಯ ವಹಿಸಿತು. ಆದರೆ, ಈ ಬಾರಿಯಾದರೂ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರವನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಹೌದು ನಗರದಲ್ಲಿ ಕಳೆದ ಬಾರಿ ನಗರಸಭೆ ಹಾಗೂ ಪರಿಸರ ಅಧಿಕಾರಿಗಳ ಆಶ್ರಯದಲ್ಲಿ ಪ್ಲಾಸ್ಟಿಕ್‌ ನಿಷೇಧ ದಾಳಿಗಳು ನಡೆಸಲಾಯಿತು.

ಹೋಟೆಲ್‌, ಬಾರ್ ಅಂಡ್ ರೆಸ್ಟೊರೆಂಟ್‌, ಕಿರಾಣಿ ಅಂಗಡಿ, ಮೆಟಲ್‌ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ಅನ್ನು ವಶಕ್ಕೆ ಪಡೆಯಲಾಯಿತು. ಇದರಿಂದ ನಗರದಲ್ಲಿ ಕೆಲ ದಿನಗಳ ಕಾಲ ಪ್ಲಾಸ್ಟಿಕ್‌ ಬಳಕೆ ನಿಂತಿತ್ತು. ವರ್ತಕರಲ್ಲಿಯೂ ಕೆಲ ದಿನಗಳ ಕಾಲ ದಂಡ, ಶಿಕ್ಷೆಯ ಭಯ ನಿರ್ಮಾಣವಾಗಿತ್ತು. ಆದರೆ ಇದು ಬಹಳಷ್ಟು ದಿನಗಳ ಕಾಲ ಮುಂದುವರಿಯಲಿಲ್ಲ. ನಗರಸಭೆ ಕೂಡ ಈ ಬಗ್ಗೆ ಗಮನಹರಿಸಲಿಲ್ಲ. ಇದರಿಂದ ಪ್ಲಾಸ್ಟಿಕ್‌ ಬಳಕೆ ಮೊದಲಿನಂತೆಯೇ ಬಹಿರಂಗವಾಗಿಯೇ ನಡೆಯುತ್ತಿದೆ.

ಕಳೆದ ಬಾರಿ ನಗರದಲ್ಲಿ 10ರಿಂದ 12 ದಾಳಿಗಳನ್ನು ನಡೆಸಲಾಗಿದೆ. ಇದರಿಂದಾಗಿ ಸುಮಾರು 1 ಟನ್‌ನಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕ್ರಿಯೆ 6 ತಿಂಗಳ ಕಾಲ ನಡೆಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸುನೀಲ್‌ ಪಾಟೀಲ್‌ ಹೇಳುತ್ತಾರೆ.

ಭಾರತವು ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯ ವಹಿಸಿಕೊಂಡಿದೆ. ಅದಕ್ಕಾಗಿ ಪ್ಲಾಸ್ಟಿಕ್‌ ಮಾಲಿನ್ಯ ಸೋಲಿಸಿ ಎಂಬ ಘೋಷವಾಕ್ಯವನ್ನು ಮೊಳಗಿಸಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಗರದಲ್ಲಿಯೂ ಈ ಬಾರಿಯೂ ಪ್ಲಾಸ್ಟಿಕ್‌ ನಿಷೇಧಕ್ಕೆ ನಗರಸಭೆ ತನ್ನದೇ ಯಾದ ಕ್ರಮ ಕೈಗೊಂಡಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ಈ ಬಾರಿ ವಾರಕೊಮ್ಮೆ ದಾಳಿ ನಡೆಸುತ್ತೇವೆ. ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡಂತೆ 4 ತಂಡಗಳನ್ನು ರಚಿಸಲಾಗುತ್ತಿದೆ. ಈಗಾಗಲೇ 8 ಬಾರಿ ವರ್ತಕರ ಸಭೆ ನಡೆಸಿದ್ದೇವೆ. ಅವರಿಗೂ ಸಹಕರಿಸಲು ಮನವಿ ಮಾಡಿದ್ದೇವೆ. ಅಲ್ಲದೇ ವರ್ತರಿಂದಲೇ ಜಾಗೃತಿ ಮೂಡಿಸಲಾಗುತ್ತದೆ. ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಪೌರಾಯುಕ್ತ ಸುನೀಲ್‌ ಪಾಟೀಲ್‌ ಹೇಳಿದರು.

ಪರಿಸರ ರಕ್ಷಣೆಗೆ ವಿವಿಧ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ನಗರದಲ್ಲಿ ಪರಿಸರ ರಕ್ಷಣೆಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಗರದಲ್ಲಿ 400ರಿಂದ 500 ಸಸಿಗಳನ್ನು ನೆಡಲಾಗಿದೆ. ಈ ಪ್ರಕ್ರಿಯೆ ಸತತ ಒಂದು ತಿಂಗಳು ಕಾಲ ನಡೆಯುತ್ತದೆ. ಅಲ್ಲದೇ ಟೀ ಶರ್ಟ್‌ ವಿತರಣೆ, ಬಿತ್ತಿ ಪತ್ರ ವಿತರಣೆ, ಮ್ಯಾರಾಥಾನ್‌, ಜಾಥಾ ಹಮ್ಮಿಕೊಳ್ಳಲಾಗಿದೆ.

ಇಂದು ಮ್ಯಾರಾಥಾನ್

ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರಸಭೆ ವತಿಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಗೌರಿ ಶಂಕರ ದೇವಸ್ಥಾನದಿಂದ ಅಶೋಕ ವೃತ್ತದ ಮಾರ್ಗವಾಗಿ ಗವಿಮಠ ದವರೆಗೆ ಬೆಳಿಗ್ಗೆ ಮ್ಯಾರಾಥಾನ್‌, ನಂತರ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ, ಸಿಇಒ ಈ ಕಾರ್ಯಕ್ರಮಕ್ಕೆ ಭಾಗವಹಿಸುತ್ತಾರೆ ಎಂದು ಪೌರಾಯುಕ್ತ ಸುನೀಲ್‌ ಪಾಟೀಲ್‌ ತಿಳಿಸಿದರು.

**
‌ಪ್ಲಾಸ್ಟಿಕ್‌ ಬಳಕೆ ಮಾಡಿದರೆ ಪ್ರತಿ ಕೆ.ಜಿಗೆ ₹ 300 ದಂಡ ನಿಗದಿ ಪಡಿಸಲು ಚಿಂತನೆ ನಡೆದಿದೆ. ಸಭೆ ನಡೆಸಿ 15 ದಿನಗಳ ನಂತರ ನಿರ್ಣಯ ಕೈಗೊಳ್ಳಲಾಗುತ್ತದೆ
ಸುನೀಲ್‌ ಪಾಟೀಲ್‌, ಪೌರಾಯುಕ್ತ, ನಗರಸಭೆ

ಅನಿಲ್‌ ಬಾಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT