ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಚರ್ಚೆಗೆ ಬನ್ನಿ: ಮೋದಿ, ಬಿಜೆಪಿಗೆ ಖರ್ಗೆ ಪತ್ರ

Published 2 ಮೇ 2024, 11:17 IST
Last Updated 2 ಮೇ 2024, 11:17 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಪ್ರಣಾಳಿಕೆಯಲ್ಲಿ ತಾವು ನೀಡಲಾಗಿರುವ ಭರವಸೆಗಳನ್ನು ಪುನರುಚ್ಛರಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ಪ್ರಣಾಳಿಕೆ ಕುರಿತಂತೆ ಚರ್ಚೆಗೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ ಸವಾಲೆಸೆದು ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ನ ವಿಭಜನೆಯ ಅಜೆಂಡಾ ಕುರಿತಂತೆ ಜನರಿಗೆ ತಿಳುವಳಿಕೆ ನೀಡುವಂತೆ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಬರೆದಿರುವ ಪತ್ರದ ಬಗ್ಗೆ ಉಲ್ಲೇಖಿಸಿರುವ ಖರ್ಗೆ, ಪತ್ರದಲ್ಲಿರುವ ನಿಮ್ಮ ಧಾಟಿ ಮತ್ತು ವಿಷಯವನ್ನು ಗಮನಿಸಿದರೆ ನಿಮ್ಮಲ್ಲಿ ಬಹಳಷ್ಟು ಹತಾಶೆ ಮತ್ತು ಅಳುಕು ಇರುವುದನ್ನು ತೋರಿಸುತ್ತದೆ. ಅದು ಪ್ರಧಾನಿ ಕಚೇರಿಯ ಘನತೆಗೆ ತಕ್ಕುದಲ್ಲದ ಭಾಷೆ ಬಳಸುವಂತೆ ಮಾಡಿದೆ ಎಂದು ಟೀಕಿಸಿದ್ದಾರೆ.

ನಿಮ್ಮ ಪತ್ರವನ್ನು ಗಮನಿಸಿದರೆ, ನಿಮ್ಮ ಸುಳ್ಳುಗಳು ಜನರ ಮೇಲೆ ನೀವು ನಿರೀಕ್ಷಿಸಿದ ಪರಿಣಾಮ ಬೀರಿಲ್ಲ. ಹಾಗಾಗಿ, ನಿಮ್ಮ ಸುಳ್ಳುಗಳನ್ನು ಪ್ರತಿ‍ಪಾದಿಸಲು ನಿಮ್ಮ ಅಭ್ಯರ್ಥಿಗಳಿಗೆ ಸೂಚಿಸಿದ್ದೀರಿ. ಸಾವಿರ ಬಾರಿ ಸುಳ್ಳು ಹೇಳಿ ಅದನ್ನು ಸತ್ಯ ಮಾಡಲು ಸಾಧ್ಯವಿಲ್ಲ ಎಂದು ಖರ್ಗೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ ಕುರಿತಾದ ಭರವಸೆಗಳನ್ನು ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್ ಮೇಲೆ ತುಷ್ಠಿಕರಣದ ರಾಜಕೀಯ ವೃಥಾ ಆರೋಪ ಮಾಡುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನೀವು ಮತ್ತು ನಿಮ್ಮ ಸಚಿವರು ಚೀನಾವನ್ನು ತುಷ್ಟೀಕರಿಸುವ ರಾಜಕಾರಣ ಮಾಡುತ್ತಿರುವುದನ್ನು ಮಾತ್ರ ನಾವು ಕಂಡಿದ್ದೇವೆ ಎಂದು ಕುಟುಕಿದ್ದಾರೆ.

ಚೀನಾವನ್ನು ನುಸುಳುಕೋರ ದೇಶ ಎಂದು ಕರೆಯಲು ನಿರಾಕರಿಸಿದ ಕೇಂದ್ರದ ಬಗ್ಗೆ ಕಿಡಿಕಾರಿದ ಅವರು, ಗಾಲ್ವಾನ್ ಭಾರತದ 20 ಯೋಧರು ಮೃತಪಟ್ಟ ಬಳಿಕವೂ ಚೀನಾಗೆ ಕ್ಲೀನ್‌ಚಿಟ್ ನೀಡಿದ್ದು ಮಾತ್ರವಲ್ಲದೆ, ಕಳೆದ 5 ವರ್ಷಗಳಲ್ಲಿ ಚೀನಾದ ಆಮದನ್ನು ಶೇ 56.76ರಷ್ಟು ಹೆಚ್ಚಿಸಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಇರುವ ಸೌಲಭ್ಯಗಳನ್ನು ಕಾಂಗ್ರೆಸ್ ವೋಟ್‌ಬ್ಯಾಂಕ್‌ಗೆ ತಿರುಗಿಸುತ್ತದೆ ಎಂಬ ಮೋದಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ, ಸೌಲಭ್ಯ ವಂಚಿತರು, ಮಹಿಳೆಯರು, ದುಡಿಯುವ ವರ್ಗ, ದಲಿತರು, ಆದಿವಾಸಿಗಳು, ನಿರೀಕ್ಷೆ ಕಂಗಳಲ್ಲಿ ನೋಡುತ್ತಿರುವ ಯುವಕರು ಸೇರಿ ದೇಶದ ಪ್ರತಿಯೊಬ್ಬರೂ ನಮ್ಮ ವೋಟ್‌ ಬ್ಯಾಂಕ್ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT