ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಲ್ಲದ 200ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಿದ ಶಿಕ್ಷಕಿ

Published 13 ಫೆಬ್ರುವರಿ 2024, 16:01 IST
Last Updated 13 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ತಿರುವನಂತಪುರ: ನಿವೃತ್ತಿಯಾಗುವ ಬಹುತೇಕ ಶಿಕ್ಷಕರಿಗೆ ತಾವು ನೂರಾರು ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ನೆರವಾದೆವು ಎಂಬ ತೃಪ್ತಿ ಇರುತ್ತದೆ. ಆದರೆ ಇಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಕ್ರೈಸ್ತ ಸನ್ಯಾಸಿನಿಯೊಬ್ಬರು 200ಕ್ಕೂ ಹೆಚ್ಚು ವಸತಿ ರಹಿತ ಕುಟುಂಬಗಳಿಗೆ ಮನೆ ಒದಗಿಸಿದ ಸಂತೃಪ್ತಿಯೊಂದಿಗೆ ತಮ್ಮ ಅಧಿಕೃತ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. 

ಕೊಚ್ಚಿಯ ತೋಪ್ಪುಂಪಾಡಿಯಲ್ಲಿರುವ ‘ಅವರ್‌ ಲೇಡಿಸ್‌ ಕಾನ್ವೆಂಟ್‌’ ಬಾಲಕಿಯರ ಶಾಲೆಯ ಪ್ರಾಂಶುಪಾಲರಾದ ಲಿಜ್ಜಿ ಚಕ್ಕಲಕ್ಕಲ್‌ ನಿವೃತ್ತಿಯಾಗುತ್ತಿರುವ ಶಿಕ್ಷಕಿ.

ಅವರು ಆರಂಭಿಸಿದ ‘ಹೋಮ್‌ ಚಾಲೆಂಜ್‌ ಮಿಷನ್‌’ನಿಂದಾಗಿ 200ಕ್ಕೂ ಹೆಚ್ಚು ವಸತಿಹೀನ ಕುಟುಂಬಗಳಿಗೆ ಮನೆ ದೊರೆತಂತಾಗಿದೆ. ಇದೊಂದು ‘ಕ್ರೌಡ್‌ ಫಂಡಿಂಗ್‌’ ಕಾರ್ಯಕ್ರಮ. ‘ನಮ್ಮ ಈ ಕಾರ್ಯಕ್ರಮದಿಂದ ಪ್ರೇರಿತವಾಗಿ ದೇಶ, ವಿದೇಶಗಳಲ್ಲಿನ ಕೆಲ ವೇದಿಕೆಗಳು ಈ ರೀತಿಯ ಮಾದರಿಯನ್ನು ಅಳವಡಿಸಿಕೊಂಡಿವೆ’ ಎಂದು ಚಕ್ಕಲಕ್ಕಲ್‌ ಹೆಮ್ಮೆಯಿಂದ ಪ್ರತಿಕ್ರಿಯಿಸಿದರು.

ಅತ್ಯಂತ ದಯನೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ 2011ರಲ್ಲಿ ಈ ಕಾರ್ಯಕ್ರಮ ಆರಂಭಿಸಿದೆ. ವಿವಿಧೆಡೆಯಿಂದ ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯಿತು. ಇದು, ಈ ಯೋಜನೆಯನ್ನು ವಿಸ್ತರಿಸುವಂತೆ ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವ ನಿರಾಶ್ರಿತ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವಂತೆ ನಮ್ಮನ್ನು ಪ್ರೇರೇಪಿಸಿತು ಎಂದು ಅವರು ವಿವರಿಸಿದರು.

ಹಣದ ಜತೆಗೆ, ನಿವೇಶನ, ನಿರ್ಮಾಣ ಸಾಮಗ್ರಿಗಳು ಮತ್ತು ಮಾನವ ಕೆಲಸಗಳ ರೂಪದಲ್ಲಿಯೂ ಕೊಡುಗೆಗಳು ಹರಿದು ಬಂದವು. ಇದರಿಂದ ಸುಮಾರು 600 ಚದರ ಅಡಿ ವಿಸ್ತೀರ್ಣದ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.

‘ಇಲ್ಲಿಯವರೆಗೆ 200 ಮನೆಗಳನ್ನು ನಿರ್ಮಿಸಲಾಗಿದ್ದು, ವಿವಿಧ ಬಗೆಯ ಅಂಗವಿಕಲತೆ ಹೊಂದಿರುವವರಿಗಾಗಿ 20ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸುಮಾರು 200 ಕುಟುಂಬಗಳಿಗೆ ಆಶ್ರಯ ಒದಗಿಸಲು ನಾನು ಕಾರಣನಾದೆನಲ್ಲ ಎಂಬುದರ ಬಗ್ಗೆ ನನಗೆ ಖುಷಿಯಿದೆ. ಅಲ್ಲದೆ ದೇಶದ ವಿವಿಧೆಡೆ ಮತ್ತು ಇಂಡೊನೇಷ್ಯಾದಂತಹ ದೇಶಗಳಲ್ಲಿಯೂ ಈ ಮಾದರಿ ಅಳವಡಿಕೆ ಆಗುತ್ತಿರುವುದು ಹೆಮ್ಮೆ ಅನಿಸುತ್ತದೆ. ಇದು ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡುವಂತಾಗಲಿ’ ಎಂದು ಅವರು ಹೇಳಿದರು.

‘ನಿವೃತ್ತಿಯ ನಂತರವೂ ಸಮಾಜ ಸೇವೆ ಮುಂದುವರಿಸಲು ಆದ್ಯತೆ ನೀಡುವುದಾಗಿ’ ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT