ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ಜಾಮೀನು ಅರ್ಜಿ: 7ಕ್ಕೆ ವಿಚಾರಣೆ

Published 4 ಮೇ 2024, 0:19 IST
Last Updated 4 ಮೇ 2024, 0:19 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 7ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತಿಳಿಸಿತು.

ಲೋಕಸಭೆಯ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಕುರಿತ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ದೀಪಂಕರ್‌ ದತ್ತ ಅವರ ಪೀಠ ಹೇಳಿತು.

‘ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಮಂಗಳವಾರ ನಿಮ್ಮನ್ನು ನಾವು ಪ್ರಶ್ನಿಸಬಹುದು. ಆದ್ದರಿಂದ ಜಾಮೀನು ಷರತ್ತುಗಳನ್ನು ಸಿದ್ಧಪಡಿಸಿಕೊಂಡು ಬನ್ನಿ’ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರಿಗೆ ಸೂಚಿಸಿತು.

ಕೇಜ್ರಿವಾಲ್‌ ಅವರು ಹೊಂದಿರುವ ಸ್ಥಾನದ ಕಾರಣದಿಂದ, ಅವರು ಅಧಿಕೃತ ಕಡತಗಳಿಗೆ ಸಹಿ ಹಾಕಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನೂ ಇದೇ ವೇಳೆ ಪರಿಶೀಲಿಸಲಾಗುವುದು ಎಂದು ಪೀಠ ತಿಳಿಸಿತು. ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ವೇಳೆ ಎರಡೂ ಕಡೆಯವರ ವಾದ, ಪ್ರತಿವಾದಗಳನ್ನು ಪೂರ್ಣವಾಗಿ ಆಲಿಸುವುದಾಗಿ ಪೀಠ ಹೇಳಿತು.

ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ತಿಳಿಸಿತು. ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವುದನ್ನು ವಿರೋಧಿಸುವುದಾಗಿ ರಾಜು ಅವರು ವಾದಿಸಿದರು.

ಕೇಜ್ರಿವಾಲ್‌ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಆಗ ಪ್ರತಿಕ್ರಿಯಿಸಿದ ಪೀಠವು, ‘ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಈ ಕುರಿತು ಏನನ್ನೂ ಊಹಿಸಬೇಡಿ’ ಎಂದು ಹೇಳಿತು. 

ದೆಹಲಿ ಅಬಕಾರಿ ನೀತಿ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿಯನ್ನು ಜಾರಿ ನಿರ್ದೇಶನಾಲಯವು ಮಾರ್ಚ್‌ 21ರಂದು ಬಂಧಿಸಿತ್ತು. ಅವರು ಪ್ರಸ್ತುತ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮುಖ್ಯಾಂಶಗಳು

* ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ

* ಸಿದ್ಧರಾಗಿ ಬರಲು ಸಾಲಿಸಿಟರ್‌ ಜನರಲ್‌ಗೆ ಸೂಚನೆ

* ಎರಡೂ ಕಡೆಯ ವಾದ, ಪ್ರತಿವಾದ ಆಲಿಸಲಾಗುವುದು

ಕೇಜ್ರಿವಾಲ್‌ ಬಂಧನಕ್ಕೆ ಮೊದಲೇ ಸಂಚು: ಆತಿಶಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಸಂಚಿನಡಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ದೆಹಲಿ ಸಚಿವ ಆತಿಶಿ ಶುಕ್ರವಾರ ಹೇಳಿದರು.  ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ಗೆ ಮೊದಲ ಬಾರಿಗೆ ಸಮನ್ಸ್‌ ಕಳುಹಿಸಿದ್ದಾಗಲೇ ಅವರನ್ನು ಬಂಧಿಸಲು ಉದ್ದೇಶಿಸಿತ್ತು ಎಂದು ಗೃಹ ಸಚಿವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.  ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ನೀಡಲು ಆರಂಭಿಸಿದ ದಿನದಿಂದಲೇ ಅವರನ್ನು ಬಂಧಿಸಲು ಸಂಚು ನಡೆದಿದೆ ಎಂದು ಎಎಪಿ ಬಹಿರಂಗವಾಗಿ ಹೇಳುತ್ತಾ ಬಂದಿದೆ ಎಂದು ಆತಿಶಿ ಹೇಳಿದರು. ಅವು ಜಾರಿ ನಿರ್ದೇಶನಾಲಯದ ಸಮನ್ಸ್‌ಗಳಲ್ಲ ಬದಲಿಗೆ ಬಿಜೆಪಿ ಸಮನ್ಸ್‌ಗಳು ಎಂದು ಅವರು ದೂರಿದರು. ಕೇಜ್ರಿವಾಲ್‌ ಅವರು ಬಿಜೆಪಿಯ 10 ವರ್ಷಗಳ ದುರಾಡಳಿತವನ್ನು ಬಯಲಿಗೆಳೆಯುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಭಯವಿತ್ತು ಎಂದು ಸಚಿವೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT